ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Team Udayavani, Dec 24, 2024, 6:00 AM IST
ಗಂಡುಮೆಟ್ಟಿದ, ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದು ರವಿವಾರ ಸಮಾಪನಗೊಂಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಕನ್ನಡಿಗರ ಹಿತರಕ್ಷಣೆಗಾಗಿ ಐದು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ರಾಷ್ಟ್ರಕವಿ ಘೋಷಣೆ ಮಾಡಬೇಕು, ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು, ಭಾಷಾ ಅಭಿವೃದ್ಧಿ ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇಮಕ ಮಾಡುವುದು, ಶೀಘ್ರವಾಗಿ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ, ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕಾಗಿ ಸರಕಾರಕ್ಕೆ ಆಗ್ರಹ- ಇವೇ ಆ ಐದು ನಿರ್ಣಯಗಳು. ಇನ್ನೀಗ ಈ ನಿರ್ಣಯಗಳು ಆದಷ್ಟು ಬೇಗನೆ, ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಸಂಬಂಧಿತ ಎಲ್ಲರೂ ಜತೆಗೂಡಿ ನೋಡಿಕೊಳ್ಳಬೇಕಿದೆ.
ಈ ಐದು ನಿರ್ಣಯಗಳನ್ನು ಕನ್ನಡ ಮತ್ತು ಕನ್ನಡಿಗರ ಹಿತರಕ್ಷಣೆ, ಕನ್ನಡ ನುಡಿಯ ಅಭಿವೃದ್ಧಿಗಳನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ತೆಗೆದುಕೊಳ್ಳಲಾಗಿದೆ ಎಂಬುದು ಸರ್ವವಿದಿತ. ಕಾಲಘಟ್ಟ ಬದಲಾಗುತ್ತಿದ್ದಂತೆ ಯಾವುದೇ ಭಾಷೆ ಎದುರಿಸುವ ಸವಾಲುಗಳು ಕೂಡ ಬದಲಾಗುತ್ತವೆ. ಕನ್ನಡದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಕನ್ನಡ, ಕನ್ನಡತನ, ಕನ್ನಡದ ಅಸ್ಮಿತೆಯನ್ನು ಗಟ್ಟಿ ಧ್ವನಿಯಲ್ಲಿ ಕೂಗಿ ಹೇಳಬೇಕಾದ ಅನಿವಾರ್ಯ ಇದೆ.
ಈ ಹಿನ್ನೆಲೆಯಲ್ಲಿ ಸ್ವೀಕರಿಸಲಾಗಿರುವ ಐದು ನಿರ್ಣಯಗಳು ಯುಕ್ತವಾಗಿದ್ದು, ಶ್ಲಾಘವೇ ಆಗಿವೆ. 2006ರಲ್ಲಿ ಜಿ.ಎಸ್. ಶಿವರುದ್ರಪ್ಪ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಿದ ಬಳಿಕ ದೀರ್ಘಕಾಲದಿಂದ ರಾಷ್ಟ್ರಕವಿ ಎಂದು ಯಾರನ್ನೂ ಸ್ವೀಕರಿಸಿಲ್ಲ. ಹಾಗೆಯೇ ಕನ್ನಡದ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರಕ ಬೇಕಾದರೆ ಶಿಕ್ಷಕರ ನೇಮಕಾತಿ ಜರೂರಾಗಿ ಆಗಬೇಕಾಗಿದೆ. ಭಾಷಾ ಅಭಿವೃದ್ಧಿ ಸಮಿತಿ ಸಕ್ರಿಯವಾಗಿ ಕೆಲಸ ಮಾಡಬೇಕಿದ್ದರೆ ಅದಕ್ಕೆ ನೇಮಕಾತಿ ಆಗಬೇಕು. ರಾಜ್ಯ ಸರಕಾರಿ ನೇಮಕಾತಿಗಳಲ್ಲಿ ಶತ ಪ್ರತಿಶತ ಕನ್ನಡಿಗರಿಗೆ ಮೀಸಲಾತಿ ಸಹಿತ ಸರೋಜಿನಿ ಮಹಿಷಿ ವರದಿಯ ಅನುಷ್ಠಾನ ಆಗಬೇಕಾಗಿದೆ. ಇವೆಲ್ಲವೂ ಕನ್ನಡ ಮತ್ತು ಕನ್ನಡಿಗರ ಹಿತಕ್ಕಾಗಿ ಆಗಬೇಕಾದವೇ.
ಪ್ರತೀ ವರ್ಷವೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಕೊನೆಯ ದಿನ ಬಹಿರಂಗ ಅಧಿವೇಶನ ನಡೆದು ಇಂತಹ ನಿರ್ಣಯಗಳನ್ನು ಕೈಗೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕ್ರಮ. ಆದರೆ ಈ ನಿರ್ಣಯಗಳು ಪೂರ್ಣವಾಗಿ ಅನುಷ್ಠಾನಗೊಳ್ಳುತ್ತವೆಯೇ ಎಂದು ಪ್ರಶ್ನಿಸಿಕೊಂಡರೆ ನೂರಕ್ಕೆ ನೂರು ಅನುಷ್ಠಾನ ಆಗುತ್ತಿಲ್ಲ ಎಂಬ ಉತ್ತರ ಲಭ್ಯವಾಗುತ್ತದೆ.
ಉದಾಹರಣೆಗೆ ಹೇಳುವುದಾದರೆ ಕಳೆದ ಬಾರಿ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭ ತೆಗೆದುಕೊಳ್ಳಲಾಗಿದ್ದ ಆರು ನಿರ್ಣಯಗಳ ಪೈಕಿ ಕೇವಲ ಎರಡು ಮಾತ್ರ ಸಾಕಾರಗೊಂಡಿವೆ. ಆಗಲೂ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆದಷ್ಟು ಬೇಗನೆ ಆಯೋಜಿಸಬೇಕು ಎಂಬುದಾಗಿ ನಿರ್ಣಯಿಸಲಾಗಿತ್ತು. ಆದರೆ ಅದಿನ್ನೂ ಸಾಕಾರಗೊಂಡಿಲ್ಲ. ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾಜನ ವರದಿಯ ಕುರಿತು ನ್ಯಾಯಾಲಯದ ತೀರ್ಪಿನಂತೆ ಕ್ರಮ ಮತ್ತಿತರ ನಿರ್ಣಯಗಳೂ ಹಾಗೆಯೇ ಉಳಿದುಕೊಂಡಿರುವುದು ವಿಷಾದನೀಯ.
ಈ ಬಾರಿಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳಿಗೆ ಇಂತಹ ಸ್ಥಿತಿ ಉಂಟಾಗಬಾರದು. ಸರಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಾಭಿಮಾನಿಗಳಾದ ರಾಜ್ಯದ ಜನತೆ ಪರಸ್ಪರ ಕೈಗೂಡಿಸಿ ತೆಗೆದುಕೊಳ್ಳಲಾಗಿರುವ ಐದು ನಿರ್ಣಯಗಳು ಆದಷ್ಟು ಶೀಘ್ರವಾಗಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕಾಗಿದೆ. ಕನ್ನಡ ಎಂಬುದು ನಮ್ಮ ಮಾತೃಭಾಷೆ, ಅದರ ಹಿತರಕ್ಷಣೆ ಸ್ವತಃ ನಮ್ಮದೇ ರಕ್ಷಣೆ ಎಂಬ ಅರಿವು ಎಲ್ಲರಲ್ಲೂ ಇರಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.