ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
ಬ್ರಹ್ಮ ಜಿನಾಲಯ ಪೂರ್ವಾಬಿಮುಖವಾಗಿ ನಿರ್ಮಾಣಗೊಂಡಿದೆ.
Team Udayavani, Dec 24, 2024, 5:10 PM IST
ಗದಗ: ದೆಹಲಿಯಲ್ಲಿ 2025ರ ಜನವರಿ 26ರಂದು ಆಚರಿಸುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಗದಗ ಜಿಲ್ಲೆಯ ಲಕ್ಕುಂಡಿ (ಲೊಕ್ಕಿಗುಂಡಿ)ಯ ಕ್ರಿ.ಶ. 11ನೇ ಶತಮಾನದ ಕಪ್ಪುಶಿಲೆಗೆ ಅವಕಾಶ ಒಲಿದು ಬಂದಿದೆ. ಐತಿಹಾಸಿಕ ಬ್ರಹ್ಮ ಜಿನಾಲಯ (ಅತ್ತಿಮಬ್ಬೆ ಜಿನಾಲಯ) ಸ್ತಬ್ಧಚಿತ್ರವು ದೇಶದ ಜನತೆಗೆ ಲಕ್ಕುಂಡಿ ಗತವೈಭವ ಸಾರಲಿದೆ.
ಜಿಲ್ಲೆಯ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿರುವ ಬ್ರಹ್ಮ ಜಿನಾಲಯ ಕ್ರಿ.ಶ. 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಪ್ಪುಶಿಲೆಯಿಂದ ನಿರ್ಮಿಸಲಾಗಿದೆ. ದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ ಪಥಸಂಚಲನದಲ್ಲಿ ರಾಜ್ಯ, ರಾಷ್ಟ್ರದ ಗಮನ ಸೆಳೆಯಲಿದೆ ಬ್ರಹ್ಮ ಜಿನಾಲಯದ ಮಾದರಿ.
ಬ್ರಹ್ಮ ಜಿನಾಲಯ ಪೂರ್ವಾಬಿಮುಖವಾಗಿ ನಿರ್ಮಾಣಗೊಂಡಿದೆ. ಗರ್ಭಗೃಹ, ಅಂತರಾಳ, ಗೂಢಮಂಟಪ, ಅಗಮಂಟಪದಂತಹ ವಿನ್ಯಾಸದಿಂದ ಕೂಡಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ. ಇಕ್ಕೆಲಗಳಲ್ಲಿ ಇಬ್ಬರು ಚಾಮರಧಾರಿಗಳಿದ್ದಾರೆ. ಪೀಠದ ಸುತ್ತಲೂ ಮಕರ ತೋರಣದ ಅಲಂಕಾರವಿದ್ದು, ಮೇಲ್ಭಾಗದಲ್ಲಿ ರತ್ನತ್ರಯರ ಪ್ರತೀಕವಾದ ಮುಕ್ಕೊಡೆಯಿದೆ. ತೀರ್ಥಂಕರನನ್ನು ಸದ್ಯದಲ್ಲಿ ನೇಮಿನಾಥ ಎಂದು ಕರೆಯಲಾಗುತ್ತಿದೆ.
ಗರ್ಭಗೃಹಕ್ಕೆ ಹೊಂದಿಕೊಂಡು ಅಂತರಾಳವಿದ್ದು, ಮೂಲೆಗಳಲ್ಲಿ ಅರ್ಧಗಂಬಗಳಿವೆ. ಮುಂಭಾಗದಲ್ಲಿ ಎರಡು ಭದ್ರಕ ರೀತಿಯ ಸ್ತಂಭಗಳಿವೆ. ವಿತಾನವು ಸಮತಲವಾಗಿದೆ. ಅಂತರಾಳಕ್ಕೆ ಹೊಂದಿಕೊಂಡಂತೆ ಗೂಢಮಂಟಪವಿದೆ. ಮಧ್ಯದಲ್ಲಿ ನಾಲ್ಕು ಸ್ವತಂತ್ರ ಶ್ರೀಕಾರ ಸ್ತಂಭಗಳಿದ್ದು, ಪೀಠ, ಓಮ, ಕಾಂಡ ಮಾಲಾಸ್ಥಾನ, ಕುಂಭ, ಕಲಶ, ಫಲಕ ಮತ್ತು ಬೋದಿಗೆ ಭಾಗಗಳನ್ನು ಹೊಂದಿವೆ. ಇಕ್ಕೆಲಗಳಲ್ಲಿ ಚತುರ್ಮುಖ ಬ್ರಹ್ಮ ಮತ್ತು ಪದ್ಮಾವತಿ ಯಕ್ಷಿಯ ಶಿಲ್ಪಗಳಿವೆ. ಸಮತಲ ವಿತಾನದ ಮಧ್ಯದಲ್ಲಿ ಪದ್ಮದ ಉಬ್ಬು ಅಲಂಕಾರವಿದೆ.
ಸ್ತಂಭಗಳ ಪೀಠ ಭಾಗದಲ್ಲಿ ದರ್ಪಣ ಸುಂದರಿ, ನರ್ತಕಿ, ತಾಯಿ ಮತ್ತು ಮಗು, ಕೊಳಲು ನುಡಿಸುವ ಸ್ತ್ರೀಯ ಉಬ್ಬು ಶಿಲ್ಪಗಳನ್ನು ಕಂಡರಿಸಲಾಗಿದೆ. ಗೂಢಮಂಟಪಕ್ಕೆ ಹೊಂದಿಕೊಂಡು ಅಗ್ರಮಂಟಪವಿದೆ. ಇಲ್ಲಿ ಒಟ್ಟು ಇಪ್ಪತ್ತೆಂಟು ಸ್ತಂಭಗಳಿವೆ. ಅಗ್ರಮಂಟಪದ ಸುತ್ತಲೂ ಕಕ್ಷಾಸನವಿದ್ದು, ಕಕ್ಷಾಸನದ ಮೇಲ್ಭಾಗದಲ್ಲಿ ಇಳಿಜಾರದ ಚಜ್ಜುಭಾಗ ಇದೆ . ಕಕ್ಷಾಸನ ಸುತ್ತಲೂ ಚಿಕ್ಕ ಚಿಕ್ಕ ಭದ್ರಕ ರೀತಿಯ ಸ್ತಂಭಗಳಿವೆ. ಮಧ್ಯದಲ್ಲಿರುವ ನಾಲ್ಕು ಶ್ರೀಕರ ಸ್ತಂಭಗಳು. ಪೀಠ, ಓಮ, ಕಾಂಡ, ಮಾಲಾಸ್ಥಾನ,
ಕಲಶ, ಫಲಕ ಮತ್ತು ಬೋದಿಗೆ ಭಾಗಗಳನ್ನು ಹೊಂದಿವೆ. ಅಗ್ರಮಂಟಪವನ್ನು ಪ್ರವೇಶಿಸಲು ಸೋಪಾನಗಳಿದ್ದು, ಪಕ್ಕದಲ್ಲಿ ಯಾಳಿ ರೀತಿಯ ಹಸ್ತಿಹಸ್ತವಿದೆ.
ಬ್ರಹ್ಮ ಜಿನಾಲಯದ ಬಾಹ್ಯ ವಾಸ್ತು: ಈ ಬಸದಿಯ ಕಪೋತಬಂಧ, ಅಧಿಷ್ಠಾನವನ್ನು ಹೊಂದಿದ್ದು, ಅದಕ್ಕೆ ಕ್ರಮವಾಗಿ ಖುರಕ, ಪದ್ಮ, ಅಂತರೀತ, ತ್ರಿಪಟ್ಟ ಕುಮುದ, ಅಂತರೀತ, ಕಪೋತ ಮತ್ತು ಮಕರಪಟ್ಟಿಕೆ ಭಾಗಗಳಿವೆ. ಮಕರ ಪಟ್ಟಿಕೆಯಲ್ಲಿ ಪ್ರಾಣಿಗಳ ಮತ್ತು ಕೀರ್ತಿಮುಖಗಳ ಅಲಂಕಾರವಿದೆ ಹಾಗೂ ಕಪೋತದ ಮೇಲೆ ನಾಸಿಗಳ ಅಲಂಕಾರವಿದೆ.
ಭಿತ್ತಿಯು ಕುಡ್ಯ ಸ್ತಂಭ ಪಂಜರ ಮತ್ತು ಕೋಷ್ಠ ಪಂಜರಗಳನ್ನು ಹೊಂದಿದೆ. ಸಲಿಲಾಂತರಗಳಲ್ಲಿ ಸ್ತಂಭ ಪಂಜರಗಳಿದ್ದು, ಅವುಗಳ ಮೇಲೆ ದ್ರಾವಿಡ ಮಾದರಿಯ ಶಿಖರದ ಪ್ರತಿಕೃತಿಗಳಿವೆ. ಅದರ ಮೇಲೆ ಮಕರತೋರಣವಿದೆ. ಕೂಟ (ಮೂಲೆ)ದಲ್ಲಿ ಕೋಷ್ಠ ಪಂಜರಗಳಿದ್ದು, ಅವುಗಳ ಮೇಲೆ ದ್ರಾವಿಡ ಶಿಖರದ ಪ್ರತಿಕೃತಿಗಳಿವೆ. ಭಿತ್ತಿಯ ಮೇಲ್ಭಾಗದಲ್ಲಿ ಕಪೋತವಿದ್ದು ಅದರ ಮೇಲೆ ನಾಸಿಗಳ ಅಲಂಕಾರವಿದೆ.
ಗರ್ಭಗೃಹದ ಮೇಲಿನ ಶಿಖರವು ಚತುಸ್ಥಲ (ನಾಲ್ಕು) ದ್ರಾವಿಡ ಮಾದರಿಯದಾಗಿದೆ. ಮೊದಲನೇ ಮಹಡಿಯಲ್ಲಿ ಹಾರವು ಕೂಟ, ಪಂಜರ, ಶಾಲಾಗಳಿಂದ ಕೂಡಿದೆ. ಕಪೋತದ ಮೇಲೆ ವೇದಿಕಾ ಇದೆ. ಕೂಟ ಮತ್ತು ಪಂಜರಗಳಲ್ಲಿ ಕೀರ್ತಿಮುಖಗಳ ಅಲಂಕಾರವಿದೆ. ಶಾಲಾದಲ್ಲಿ ಜಿನಬಿಂಬಗಳನ್ನು ಮತ್ತು ಶಿವ, ಸೂರ್ಯನ ಶಿಲ್ಪಗಳನ್ನು ಕಂಡರಿಸಲಾಗಿದೆ. ಎರಡು ಮತ್ತು ಮೂರನೇ ಮಹಡಿಗಳಲ್ಲಿಯೂ ಇದೇ ರೀತಿಯ ಹಾರದ ಅಲಂಕಾರವಿದೆ. ಅದರ ಮೇಲೆ ಕಪೋತವಿದೆ. ಮೇಲ್ಭಾಗದಲ್ಲಿ ಘಂಟಾ, ಕಲಶವಿದೆ. ಶಿಖರದ ಮುಂಭಾಗದಲ್ಲಿಯ ಶುಕನಾಸಿಯು ಗವಾಕ್ಷದ ಅಲಂಕಾರದಿಂದ ಕೂಡಿದ್ದು ಮಧ್ಯದಲ್ಲಿ ಶಿಲ್ಪವಿಲ್ಲ. ಅದರ ಮೇಲೆ ಕೀರ್ತಿ ಮುಖವಿದೆ.
ಸಚಿವ ಎಚ್ಕೆ ಪಾಟೀಲ ವಿಶೇಷ ಆಸಕ್ತಿ
ಐತಿಹಾಸಿಕ ಲಕ್ಕುಂಡಿ ಇತಿಹಾಸವನ್ನು ದೇಶಕ್ಕೆ ಪರಿಚಯಿಸಬೇಕೆಂಬ ಮಹದಾಸೆಯೊಂದಿಗೆ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿ ವಿಶೇಷ 5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದ 13 ಆರಕ್ಷಿತ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿ ಹಾಗೂ ಪ್ರಾಚ್ಯಾವಶೇಷಗಳ ಅನ್ವೇಷಣೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾಗಿರುವ ಸಿದ್ಧಲಿಂಗೇಶ್ವರ ಪಾಟೀಲ. ಅ.ದ. ಕಟ್ಟಿಮನಿ ಹಾಗೂ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಅವರು ಸ್ಥಳದಲ್ಲೇ ಇದ್ದು ನಿರ್ವಹಣೆ ಮಾಡುತ್ತಿದ್ದಾರೆ.
ಲಕ್ಕುಂಡಿ ಗ್ರಾಮದಲ್ಲಿ 16 ಜೈನ ಬಸದಿಗಳು, 5 ವೈಷ್ಣವ ದೇವಾಲಯಗಳು, 1 ಬೌದ್ಧ ಮಂದಿರ, 101 ದೇವಸ್ಥಾನ, 101 ಈಶ್ವರ ಲಿಂಗಗಳು, 101 ಬಾವಿಗಳು ಹಾಗೂ 22 ವೀರಶೈವ ಲಿಂಗಾಯತ ಮಠಗಳಿದ್ದವು ಎಂಬುದಾಗಿ ಶಿಲಾಶಾಸನಗಳಿಂದ ತಿಳಿದು ಬಂದಿದೆ. ಇತಿಹಾಸ ತಜ್ಞರು ಅವುಗಳ ಪತ್ತೆಗೆ ವಿಶೇಷ ಯೋಜನೆ ರೂಪಿಸುವಲ್ಲಿ ನಿರತರಾಗಿದ್ದಾರೆ. ಈ ನಡುವೆ ದೆಹಲಿಯ ಗಣರಾಜ್ಯೋತ್ಸವ ಪರೇಡ್ ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ ಆಯ್ಕೆಯಾಗಿರುವುದು ಲಕ್ಕುಂಡಿ ಹಿರಿಮೆಗೆ ಗರಿ ಬಂದಂತಾಗಿದೆ.
2025ರ ದೆಹಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯದ ಪರವಾಗಿ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಟ್ಯಾಬ್ಲೋ ಆಯ್ಕೆಯಾಗಿ ಲಕ್ಕುಂಡಿಯ ಐತಿಹಾಸಿಕ ಶ್ರೀಮಂತಿಕೆ ಅನಾವರಣಕ್ಕೆ ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ವಾರ್ತಾ ಇಲಾಖೆ, ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ. ಪಾಟೀಲ ಹಾಗೂ ಜಿಲ್ಲಾಡಳಿಕ್ಕೆ ಹಾರ್ದಿಕ ಅಭಿನಂದನೆಗಳು.
ಡಾ| ಶರಣು ಗೋಗೇರಿ, ಆಯುಕ್ತರು, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ
*ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.