A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಜನ್ಮ ಶತಮಾನೋತ್ಸವ- ವಾಜಪೇಯಿ ಜತೆಗಿನ ಒಡನಾಟ ಹಚ್ಚ ಹಸುರು, ಅವರ ಮೌಲ್ಯಗಳು ಇಂದಿಗೂ ಆದರ್ಶಪ್ರಾಯ- ಡಿ.ಎಚ್. ಶಂಕರಮೂರ್ತಿ ವಿಶೇಷ ಬರಹ
Team Udayavani, Dec 25, 2024, 7:25 AM IST
ಅಟಲ್ ಜೀ ಇದ್ದಿದ್ದರೆ ಅವರಿಗೀಗ ನೂರು ವರ್ಷ ಆಗಿರುತ್ತಿತ್ತು. ಅವರದ್ದೊಂದು ಅದ್ಭುತವಾದ ವ್ಯಕ್ತಿತ್ವ. ಜನ್ಮತಃ ಅವರೊಬ್ಬ ಕವಿ. ಭಾವನಾ ಜೀವಿ ಕೂಡ. ಅವರಿಗಿದ್ದ ದೂರದರ್ಶಿತ್ವ, ಪ್ರಾಮಾಣಿಕತೆ, ಬಳಸುತ್ತಿದ್ದ ಭಾಷೆ, ನಡೆ-ನುಡಿ ಎಲ್ಲವನ್ನೂ ಕಲಿಯಬೇಕು. ನಮ್ಮ ದೇಶದೊಳಗಾಗಲೀ, ವಿದೇಶಗಳಿಗೆ ಹೋದಾಗಲಾಗಲೀ ಭಾರತೀಯತೆಯನ್ನು ಎತ್ತಿ ಹಿಡಿದ ಅವರು, ದೇಶದ ಸಾಮಾನ್ಯ ಜನರನ್ನಾಗಲೀ, ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನಾಗಲೀ ಎಲ್ಲಿಯೂ ಬಿಟ್ಟುಕೊಟ್ಟವರಲ್ಲ. ಬದಲಿಗೆ ಹಿಡಿ ಪ್ರೀತಿಯನ್ನು ಹೆಚ್ಚಾಗಿಯೇ ಕೊಟ್ಟವರು. ಹಾಗಾಗಿಯೇ ಅವರ ಮೌಲ್ಯಗಳು ಇಂದಿಗೂ ನಮಗೆ ಆದರ್ಶಪ್ರಾಯ.
ಅವರ ಜತೆಗಿನ ಒಡನಾಟವನ್ನು ನಾನೆಂದು ಮರೆಯಲಾರೆ. ಬಹಳ ಸಂದರ್ಭಗಳಲ್ಲಿ ಅವರೊಂದಿಗೆ ಕರ್ನಾಟಕದಲ್ಲಿ ಸುತ್ತಿದ್ದೇನೆ. ಅವರ ಬಹುತೇಕ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದವನೇ ನಾನು. ವಿಪಕ್ಷದಲ್ಲಿದ್ದರೂ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ವಿರೋಧಿಸುವಾಗ ಗಟ್ಟಿಯಾಗಿ ವಿರೋಧಿಸುತ್ತಿದ್ದರು, ಹೊಗಳುವಾಗ ಮುಕ್ತಕಂಠದಿಂದ ಹೊಗಳುತ್ತಿದ್ದರು. ವಾಜಪೇಯಿ ವ್ಯಕ್ತಿತ್ವ, ಸರಳತೆ, ಪ್ರಾಮಾಣಿಕತೆ ಹೇಗಿತ್ತು ಎಂಬುದಕ್ಕೆ ನನ್ನದೇ ಒಂದಿಷ್ಟು ನಿದರ್ಶನಗಳನ್ನು ಕೊಡಬೇಕು ಎನ್ನಿಸುತ್ತದೆ.
ಜೋಗ್‌ಫಾಲ್ಸ್ ಭೇಟಿ:
ಅಟಲ್ ಅವರು 1966ರಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಜೋಗ್ ಫಾಲ್ಸ್‌ಗೆ ಹೋಗಬೇಕು ಎಂದು ಆಸೆಪಟ್ಟಿದ್ದರು. ಕಡಿದಾದ ರಸ್ತೆ, ಸರಿಯಾದ ವಾಹನ ವ್ಯವಸ್ಥೆ ಇರಲಿಲ್ಲ. ಆದರೂ ಸಾಹಸಪಟ್ಟು ಪೂರ್ತಿ ಕೆಳಗಿಳಿದು ಬಂಡೆಯ ಮೇಲೆ ಹೋಗಿ ಮಲಗಿ ಬಿಟ್ಟಿದ್ದರು.
ನಮ್ಮ ಮನೆಯಲ್ಲೇ ವಾಸ್ತವ್ಯ:
ಅದು 1978ರ ಘಟನೆ. ಅವರಾಗ ಮೊರಾರ್ಜಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಶಿವಮೊಗ್ಗದಲ್ಲಿ ಪತ್ರಕರ್ತರ ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ನೀವೀಗ ಸಚಿವರಾಗಿದ್ದೀರಿ. ನಿಮಗೆ ಸರಕಾರಿ ವ್ಯವಸ್ಥೆಗಳು, ಶಿಷ್ಟಾಚಾರಗಳು ಇರುತ್ತವೆ. ಶಿವಮೊಗ್ಗದಲ್ಲಿ ಎಲ್ಲಿರುತ್ತೀರಿ ಎಂದು ಅವರನ್ನು ಕೇಳಿದೆ. “ಅರೆ… ಶಂಕರಮೂರ್ತಿ ಶಿವಮೊಗ್ಗದಲ್ಲಿ ನಿಮ್ಮದೊಂದು ದೊಡ್ಡ ಮನೆ ಇತ್ತಲಾ ಏನಾ ಯಿತದು’ ಎಂದು ಬೆನ್ನಿಗೊಂದು ಗುದ್ದು ಕೊಟ್ಟರು.
ಅವರು ಅಷ್ಟು ಹೇಳುತ್ತಿದ್ದಂತೆ ಶಿವಮೊಗ್ಗಕ್ಕೆ ಬಂದು ರೈಲ್ವೇ ನಿಲ್ದಾಣದಲ್ಲಿ ಕಾದು ನಿಂತೆ. ನಿಲ್ದಾಣದ ಹತ್ತಿರ ನನ್ನ ಅಂಬಾಸಿಡರ್ ಕಾರ್ ನಿಲ್ಲಿಸಲು ಪೊಲೀಸರು ಬಿಟ್ಟಿರಲಿಲ್ಲ. ದೂರ ನಿಲ್ಲಿಸಿಕೊಂಡು ನಿಂತಿದ್ದೆ. ಅಟಲ್‌ಜೀ ಇಳಿದು ಶಿಷ್ಟಾಚಾರದ ಸ್ವಾಗತ ಮುಗಿದ ಕೂಡಲೇ ವೆಹಿಕಲ್ ಈಸ್ ರೆಡಿ ಸರ್ ಎಂದು ಅಧಿಕಾರಿಗಳು ಹೇಳಿದರು. “ವೇರ್ ಈಸ್ ಶಂಕರಮೂರ್ತಿ’ ಎಂಬ ಅವರ ಧ್ವನಿ ಕೇಳಿ ಹತ್ತಿರ ಹೋದೆ. ನನ್ನ ಕಾರ್ ಹತ್ತಿದರು. ಮನೆಗೆ ಕರೆದುಕೊಂಡು ಹೋದೆ.
ಎಂತಹ ವ್ಯಕ್ತಿತ್ವ ನೋಡಿ!:
ಇನ್ನೊಂದು ಘಟನೆ ಎಂದರೆ, 1983ರ ಚುನಾವಣೆ ಸಂದರ್ಭ. ಕರ್ನಾಟಕದ 18 ಕಡೆ ಅವರ ಭಾಷಣ ಇತ್ತು. ಆಗ ನನ್ನ ಅಂಬಾಸಿಡರ್ ಕಾರಿನಲ್ಲೇ ದಾವಣಗೆರೆಗೆ ಹೋದೆವು. ಪ್ರಚಾರ ಸಭೆಯಲ್ಲಿ ಅಭ್ಯರ್ಥಿಗಳಾದ ಹನುಮಂತಪ್ಪ , ರವೀಂದ್ರನಾಥ್ ಇಬ್ಬರೂ ಇಂದಿರಾ ಗಾಂಧಿ ವಿರುದ್ಧ ಮಾತು ಶುರು ಮಾಡುತ್ತಿದ್ದಂತೆ, ನಿಧಾನವಾಗಿ ಅವರ ಜುಬ್ಟಾ ಜಗ್ಗಿ ತಾವೇ ಮಾತಿಗಿಳಿದರು. ಅವರ ಮಾತು ಮುಗಿದ ಅನಂತರ ಅದೇ ಮೈಕ್ ಪಡೆದು ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳುತ್ತಿದ್ದೆ. ಭಾಷಣ ಮುಗಿಸಿ ಕಾರು ಹತ್ತಿ ಹೊರಡುವಾಗ ಆ ಇಬ್ಬರೂ ಆಭ್ಯರ್ಥಿಗಳ ಹೆಗಲ ಮೇಲೂ ಕೈಯಿಟ್ಟು, ನಿಮಗೆ ಅವಮಾನ ಮಾಡಬೇಕೆಂದು ಮಾಡಿಲ್ಲ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ. ನೀವು ಅಭ್ಯರ್ಥಿಗಳು. ಕ್ಷೇತ್ರ, ಜನತೆ, ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ತಿದ್ದಿದ್ದರು.
ಈ ವ್ಯಕ್ತಿತ್ವಕ್ಕೆ ಏನೆಂದು ಹೆಸರಿಡೋಣ ?:
ಅವರೆಷ್ಟು ಭಾವನಾಜೀವಿ, ಪ್ರಾಮಾಣಿಕ ವ್ಯಕ್ತಿತ್ವ ಎಂದರೆ… 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಅನಂತರ ಸಂಸತ್‌ಗೆ ಚುನಾವಣೆ ನಡೆಯಿತು. ಸ್ವತಃ ವಾಜಪೇಯಿ ಅವರೂ ಸೋತಿದ್ದರು. ಆ ಸಂದರ್ಭದಲ್ಲಿ ಭದ್ರಾವತಿಯ ಲಕ್ಷ್ಮೀನಾರಾಯಣ ಎಂಬ ಕಾರ್ಯಕರ್ತ “ಅಟಲ್ ಜೀ ಅಂತಹವರನ್ನು ಸೋಲಿಸಿದ ದೇಶದಲ್ಲಿ ನಾನಿರಲು ಇಷ್ಟಪಡಲ್ಲ’ ಎಂದು ಚೀಟಿ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟಿದ್ದ. ಇದನ್ನು ಅಟಲ್‌ಜೀಗೆ ತಿಳಿಸಿದ ಎರಡೇ ದಿನಕ್ಕೆ ಅವರು ಶಿವಮೊಗ್ಗಕ್ಕೆ ದೌಡಾಯಿಸಿದರು. ಸಣ್ಣ ಗುಡಿಸಲಲ್ಲಿ ವಾಸವಿದ್ದ ಲಕ್ಷ್ಮೀನಾರಾಯಣನ ಕುಟುಂಬ ಭೇಟಿ ಮಾಡಿ, ಸಾಂತ್ವನ ಹೇಳಿದರು. ಯಾರಿಗೂ ತಿಳಿಯದಂತೆ ನನ್ನ ಕೈಗೆ 25 ಸಾವಿರ ರೂ. ಕೊಟ್ಟು ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡಿಸಿದ್ದರು.
ಭದ್ರಾವತಿಯಿಂದ ದಿಲ್ಲಿಗೆ ವಾಪಸ್ ಆಗಬೇಕಿತ್ತು. ಬೆಂಗಳೂರಿನಿಂದ ವಿಮಾನ ಹತ್ತಬೇಕಿತ್ತು. ಕಾರ್ಯಕರ್ತರು ಸೇರಿದ್ದ ಬಸವನಗುಡಿಯ ಗಾಯನ ಸಮಾಜಕ್ಕೆ ಹೋದರೆ, ಅಟಲ್‌ಜೀ ಅವರನ್ನು ಅಪ್ಪಿ ಅಳುವವರು, ಕಾಲಿಗೆ ಬೀಳುವವರು ಒಬ್ಬರಾ ಇಬ್ಬರಾ? ನಾವು ಹೆದರಬಾರದು ಎಂದಿದ್ದ ವಾಜಪೇಯಿ, ನನಗೆ ನಿಮ್ಮ ದೈನ್ಯತೆಯೂ ಬೇಡ. ನಾನು ಪಲಾಯನವನ್ನೂ ಮಾಡಲ್ಲ. ಸಹಕಾರ ಕೊಟ್ಟರೆ ಸಂಘಟನೆ ಕಟ್ಟುತ್ತೇನೆ ಎಂದಿದ್ದರು. (ನ ದೈನ್ಯಂ, ನ ಪಲಾಯನಂ) ಯೋಗಾಯೋಗ ಎಂಬಂತೆ 12 ವರ್ಷದಲ್ಲಿ ಪ್ರಧಾನಿ ಆದರು. ಇಂಥಾ ವ್ಯಕ್ತಿತ್ವಕ್ಕೆ ಏನೆಂದು ಹೆಸರಿಡೋಣ? ನೀವೇ ಹೇಳಿ.
ಡಿ.ಎಚ್. ಶಂಕರಮೂರ್ತಿ, ಬಿಜೆಪಿ ಹಿರಿಯ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Sushasana Day: ಕಾಂಗ್ರೆಸ್ ಆಡಳಿತದಲ್ಲಿ ಜಂಗಲ್ ರಾಜ್ ಸೃಷ್ಟಿ: ಬಿ.ಎಲ್.ಸಂತೋಷ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.