Liver cancer: ಯಕೃತ್ತಿನ ಕ್ಯಾನ್ಸರ್
Team Udayavani, Dec 29, 2024, 3:19 PM IST
ಲಿವರ್ ಅಥವಾ ಯಕೃತ್ತಿನ ಕ್ಯಾನ್ಸರ್ ಜಾಗತಿಕವಾಗಿ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಚಿಕಿತ್ಸೆಯ ಫಲಿತಾಂಶ ಉತ್ತಮಗೊಳ್ಳುವುದರಲ್ಲಿ ಶೀಘ್ರ ಪತ್ತೆ ಬಹಳ ನಿರ್ಣಾಯಕವಾಗಿದೆ. ಯಕೃತ್ ಕ್ಯಾನ್ಸರ್ ಅದರಲ್ಲೂ ಹೆಚ್ಚು ಸಾಮಾನ್ಯವಾಗಿರುವ ವಿಧವಾದ ಹೆಪಟೊಸೆಲ್ಯುಲಾರ್ ಕಾರ್ಸಿನೋಮಾ (ಎಚ್ ಸಿಸಿ)ವನ್ನು ಬೇಗನೆ ಪತ್ತೆ ಮಾಡಿದರೆ ರೋಗಿ ಬದುಕುಳಿಯುವ ಸಾಧ್ಯತೆಗಳು ಹೆಚ್ಚುತ್ತವೆ. ದುರದೃಷ್ಟವಶಾತ್ ಯಕೃತ್ ಕ್ಯಾನ್ಸರ್ ತನ್ನ ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ; ಲಕ್ಷಣಗಳು ಪ್ರಕಟಗೊಳ್ಳುವ ವೇಳೆಗೆ ರೋಗ ಬಹಳ ಮುಂದುವರಿದ ಹಂತವನ್ನು ತಲುಪಿ ಚಿಕಿತ್ಸೆಯ ಆಯ್ಕೆಗಳು ತೀರಾ ಸೀಮಿತವಾಗಿರುತ್ತವೆ. ಹೀಗಾಗಿಯೇ ಯಕೃತ್ ಕ್ಯಾನ್ಸರ್ ಉಂಟಾಗುವ ಅಪಾಯ ಹೊಂದಿರುವ ಜನರಿಗೆ ನಿಯಮಿತವಾದ ತಪಾಸಣೆ ಮತ್ತು ಶೀಘ್ರ ಪತ್ತೆ ಅತ್ಯಂತ ಮುಖ್ಯವಾಗಿದೆ.
ತಪಾಸಣೆಯ ಪ್ರಾಮುಖ್ಯ
ಯಕೃತ್ ಕ್ಯಾನ್ಸರ್‌ನ ಲಕ್ಷಣಗಳು ಪ್ರಕಟಗೊಳ್ಳುವುದಕ್ಕೆ ಮುನ್ನವೇ ಅದನ್ನು ಪತ್ತೆ ಮಾಡಿ ಬೇಗನೆ ಚಿಕಿತ್ಸೆ ಒದಗಿಸುವುದಕ್ಕಾಗಿ ಯಕೃತ್ ಕ್ಯಾನ್ಸರ್ ತಪಾಸಣೆ ಅತೀ ಮುಖ್ಯವಾಗಿದೆ. ದೀರ್ಘಕಾಲೀನ ಯಕೃತ್ ಕಾಯಿಲೆಗಳಾದ ಸಿರೋಸಿಸ್, ಹೆಪಟೈಟಿಸ್ ಬಿ ಅಥವಾ ಸಿ ಸೋಂಕು ಹೊಂದಿರುವವರು, ನಾನ್ ಅಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್‌ಗೆ ತುತ್ತಾಗಿರುವವರು ಮತ್ತು ಮದ್ಯಪಾನ ಸಂಬಂಧಿ ಯಕೃತ್ ಹಾನಿಗೆ ಒಳಗಾಗಿರುವವರಂತಹ ಯಕೃತ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಜನರಿಗೆ ಯಕೃತ್ ಕ್ಯಾನ್ಸರ್ ತಪಾಸಣೆ ಅತ್ಯಂತ ಮುಖ್ಯವಾಗಿರುತ್ತದೆ. ಈ ಅನಾರೋಗ್ಯಗಳನ್ನು ಹೊಂದಿರುವವರು ಯಕೃತ್ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಗಳು ಅತೀ ಹೆಚ್ಚು ಇರುವುದರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುವ ಮೂಲಕ ಗಡ್ಡೆಗಳು ಇನ್ನೂ ಸಣ್ಣ ಗಾತ್ರದಲ್ಲಿದ್ದು, ಮಿತ ಪ್ರದೇಶದಲ್ಲಿ ಇರುವಾಗಲೇ ತಪಾಸಣೆಯ ಮೂಲಕ ಪತ್ತೆ ಹಚ್ಚಿ ಮರಣ ಸಾಧ್ಯತೆಯನ್ನು ಕಡಿಮೆ ಮಾಡಬಹುದಾಗಿದೆ.
ಅಪಾಯ ಹೆಚ್ಚು ಇರುವ ಜನರಿಗೆ ತಪಾಸಣೆಯನ್ನು ಅಲ್ಟ್ರಾಸೌಂಡ್ ನಂತಹ ಚಿತ್ರಣ ತಂತ್ರಜ್ಞಾನದ ಜತೆಗೆ ಅಲ್ಫಾ-ಫೀಟೊಪ್ರೊಟೀನ್ (ಎಎಫ್ ಪಿ)ಯ ಪ್ರಮಾಣವನ್ನು ಅಳೆಯುವ ರಕ್ತಪರೀಕ್ಷೆಯೊಂದಿಗೆ ನಡೆಸಲಾಗುತ್ತದೆ. ಅಲ್ಟ್ರಾಸೌಂಡ್ ಗಾಯವನ್ನು ಉಂಟುಮಾಡದ, ಸಾಮಾನ್ಯವಾಗಿ ಎಲ್ಲೆಡೆಯೂ ಲಭ್ಯವಿರುವ ಮತ್ತು ಮಿತವ್ಯಯದ ಪರೀಕ್ಷೆಯಾಗಿದ್ದು, ಯಕೃತ್ ಕ್ಯಾನ್ಸರ್ ತಪಾಸಣೆಗೆ ಹೆಚ್ಚಾಗಿ ಉಪಯೋಗವಾಗುತ್ತದೆ. ಎಎಫ್ಪಿ ರಕ್ತಪರೀಕ್ಷೆಯೊಂದೇ ಯಕೃತ್ ಕ್ಯಾನ್ಸರ್ ಇದೆ ಎಂಬುದನ್ನು ಖಚಿತವಾಗಿ ಹೇಳಬಲ್ಲ ಪರೀಕ್ಷೆಯಲ್ಲ; ಆದರೆ ಚಿತ್ರಣ ತಂತ್ರಜ್ಞಾನದ ಜತೆಗೂಡಿದಾಗ ಇದು ಎಚ್‌ಸಿಸಿಯನ್ನು ಅದರ ಆರಂಭಿಕ ಹಂತಗಳಲ್ಲಿಯೇ ಪತ್ತೆಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಶೀಘ್ರ ಪತ್ತೆ ಮತ್ತು ಚಿಕಿತ್ಸೆ
ಯಕೃತ್ ಕ್ಯಾನ್ಸರ್‌ನ ಶೀಘ್ರ ಪತ್ತೆಯಿಂದ ಹಲವಾರು ಪ್ರಯೋಜನಗಳಿವೆ. ಯಕೃತ್ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಾಗ ಹೆಚ್ಚು ಚಿಕಿತ್ಸೆಯ ಆಯ್ಕೆಗಳು ಲಭ್ಯವಿರುತ್ತವೆ ಮತ್ತು ಈ ಚಿಕಿತ್ಸೆಗಳು ಪರಿಣಾಮಕಾರಿಯಾಗುವ ಅವಕಾಶವೂ ಹೆಚ್ಚು ಇರುತ್ತದೆ. ಆರಂಭಿಕ ಹಂತದಲ್ಲಿರುವ ಯಕೃತ್ ಕ್ಯಾನ್ಸರನ್ನು ಗುಣಪಡಿಸುವ ಗುರಿಯೊಂದಿಗೆ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆದುಹಾಕುವುದು, ಯಕೃತ್ ಕಸಿ ಅಥವಾ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ (ಆರ್‌ಎಫ್ಎ)ಯಂತಹ ರೋಗಬಾಧಿತ ಪ್ರದೇಶದ ಸ್ಥಳೀಯ ನಾಶನ ತಂತ್ರಗಳ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ.
ಉದಾಹರಣೆಗೆ, ಯಕೃತ್ ಕಸಿಯಿಂದ ಗಡ್ಡೆಯನ್ನು ತೆಗೆದುಹಾಕುವುದಷ್ಟೇ ಅಲ್ಲದೆ ಅಂತರ್ಗತ ಯಕೃತ್ ಕಾಯಿಲೆಯನ್ನೂ ನಿವಾರಿಸುವುದಕ್ಕೆ ಸಾಧ್ಯವಿದ್ದು, ಆ ಮೂಲಕ ಯಕೃತ್ ಕಸಿ ಚಿಕಿತ್ಸೆಗೆ ಜಾಗರೂಕವಾಗಿ ಆಯ್ದುಕೊಳ್ಳಲಾಗಿರುವ ರೋಗಿಗಳಿಗೆ ದೀರ್ಘಕಾಲ ಬದುಕುಳಿಯುವ ಅವಕಾಶವನ್ನು ಒದಗಿಸಬಹುದಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಮುಂದುವರಿದ ಹಂತಕ್ಕೆ ತಲುಪಿರುವ ಯಕೃತ್ ಕ್ಯಾನ್ಸರ್‌ಗೆ ಚಿಕಿತ್ಸೆಯ ಆಯ್ಕೆಗಳು ಸಾಮಾನ್ಯವಾಗಿ ಶಮನಕಾರಿ ಆರೈಕೆಗಷ್ಟೇ ಸೀಮಿತವಾಗಿದ್ದು, ರೋಗವನ್ನು ಗುಣಪಡಿಸುವುದಕ್ಕಿಂತ ರೋಗಿಯ ಸಾವನ್ನು ಮುಂದೂಡುವುದು ಹಾಗೂ ರೋಗಲಕ್ಷಣಗಳು ಮತ್ತು ನೋವನ್ನು ನಿಭಾಯಿಸುವುದು ಗುರಿಯಾಗಿರುತ್ತದೆ.
ತಪಾಸಣೆ ಮತ್ತು ರೋಗಪತ್ತೆಯ ಸವಾಲುಗಳು
ಯಕೃತ್ ಕ್ಯಾನ್ಸರ್ ತಪಾಸಣೆಯು ಬಹಳ ಮುಖ್ಯವಾಗಿದ್ದರೂ ಇದರಲ್ಲಿ ಸವಾಲುಗಳು ಇದ್ದೇ ಇವೆ. ಇಲ್ಲಿ ಒಂದು ಮುಖ್ಯ ವಿಷಯ ಎಂದರೆ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳದೆ ಇರುವುದು. ಯಕೃತ್ ಸಿರೋಸಿಸ್‌ಗೆ ತುತ್ತಾಗಿರುವವರ ಸಹಿತ ಯಕೃತ್ ಕ್ಯಾನ್ಸರ್‌ಗೆ ತುತ್ತಾಗಬಲ್ಲ ಅಪಾಯ ಹೆಚ್ಚು ಇರುವ ಬಹುತೇಕ ಜನರು ತಿಳಿವಳಿಕೆಯ ಕೊರತೆ, ಆರೋಗ್ಯ ಸೇವಾ ಸೌಲಭ್ಯದ ಅಲಭ್ಯತೆ ಅಥವಾ ಫಾಲೊಅಪ್ ಭೇಟಿಯಿಂದ ತಪ್ಪಿಸಿಕೊಳ್ಳುವಂತಹ ವಿಷಯಗಳಿಂದಾಗಿ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದಿಲ್ಲ. ಇದರಿಂದ ರೋಗವನ್ನು ಆರಂಭಿಕ ಹಂತಗಳಲ್ಲಿಯೇ ಪತ್ತೆಹಚ್ಚುವ ಸುವರ್ಣಾವಕಾಶ ತಪ್ಪಿಹೋಗುತ್ತದೆ.
ಅಲ್ಲದೆ, ಯಕೃತ್ ಕ್ಯಾನ್ಸರನ್ನು ಇನ್ನಷ್ಟು ನಿಖರವಾಗಿ ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವ ಬಯೋಮಾರ್ಕರ್‌ಗಳು ಮತ್ತು ಉನ್ನತೀಕರಿಸಿದ ಚಿತ್ರಣ ತಂತ್ರಜ್ಞಾನಗಳ ಅಗತ್ಯವಿದೆ. ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆಯಾದರೂ ಅದರ ಫಲಿತಾಂಶವು ಅದನ್ನು ನಿರ್ವಹಿಸುವ ಆಪರೇಟರ್ ನ ಪರಿಣತಿಯನ್ನು ಅವಲಂಬಿಸಿದ್ದು, ಸಣ್ಣ ಗಾತ್ರದ ಗಡ್ಡೆಗಳು ಗಮನದಿಂದ ತಪ್ಪಿಹೋಗುವ ಸಾಧ್ಯತೆಗಳು ಇರುತ್ತವೆ. ಅತ್ಯಾಧುನಿಕ ಚಿತ್ರಣ ತಂತ್ರಜ್ಞಾನಗಳಾದ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ಹೆಚ್ಚು ಸೂಕ್ಷ್ಮಸಂವೇದಿಯಾಗಿದ್ದರೂ ದುಬಾರಿ ಮತ್ತು ಎಲ್ಲೆಡೆಯೂ ಲಭ್ಯವಿರುವುದಿಲ್ಲ.
ವಿವಿಧ ಪ್ರದೇಶಗಳು ಮತ್ತು ಆರೋಗ್ಯ ಸೇವಾ ವ್ಯವಸ್ಥೆಗಳಲ್ಲಿ ತಪಾಸಣೆಯ ಮಾರ್ಗದರ್ಶಿ ಸೂತ್ರಗಳಲ್ಲಿ ವ್ಯತ್ಯಯ ಇರುವುದು ಇನ್ನೊಂದು ಸವಾಲಾಗಿದೆ. ಕೆಲವು ಮಾರ್ಗದರ್ಶಿ ಸೂತ್ರಗಳು ಅಪಾಯ ಹೆಚ್ಚು ಇರುವ ಜನರಿಗೆ ಪ್ರತೀ ಆರು ತಿಂಗಳಿಗೆ ಒಮ್ಮೆ ತಪಾಸಣೆ ಮಾಡಲು ಶಿಫಾರಸು ಮಾಡುತ್ತವೆ, ಇದರ ಪಾಲನೆ ಸರಿಯಾಗಿ ನಡೆಯುವುದಿಲ್ಲ. ಅಲ್ಲದೆ, ಕೆಲವು ಸಮುದಾಯಗಳಲ್ಲಿ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರು ಆ ಕಾರಣಕ್ಕಾಗಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹಿಂದುಳಿಯಬಹುದು.
ಕೊನೆಯದಾಗಿ
ಒಟ್ಟಾರೆಯಾಗಿ ಹೇಳಬೇಕೆಂದರೆ, ಯಕೃತ್ ಕಾಯಿಲೆಯನ್ನು ಆದಷ್ಟು ಬೇಗನೆ ಪತ್ತೆಹಚ್ಚು ವುದು ಮತ್ತು ಚಿಕಿತ್ಸೆಗೆ ಒಳಪಡಿಸುವುದು ವಿಶೇಷವಾಗಿ ಹೆಚ್ಚು ಅಪಾಯ ಹೊಂದಿರುವ ವರಲ್ಲಿ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುವುದಕ್ಕೆ ನಿರ್ಣಾಯಕವಾಗಿವೆ. ಆರೋಗ್ಯ ಸೇವಾ ಲಭ್ಯತೆ, ತಿಳಿವಳಿಕೆ ಮತ್ತು ತಾಂತ್ರಿಕ ಮಿತಿಗಳಂತಹ ಸವಾಲುಗಳು ಇದ್ದರೂ ಶೀಘ್ರ ರೋಗಪತ್ತೆ ಮತ್ತು ಆದಷ್ಟು ಬೇಗನೆ ಚಿಕಿತ್ಸೆ ಒದಗಿಸುವುದರಿಂದ ಬಹಳ ಪ್ರಯೋಜನ ಇದೆ ಎಂಬುದನ್ನು ಅಲ್ಲಗಳೆಯಲಾಗದು.
ಯಕೃತ್ ಕ್ಯಾನ್ಸರನ್ನು ಅದರ ಆರಂಭಿಕ, ಚಿಕಿತ್ಸೆ ನೀಡಬಹುದಾದ ಹಂತದಲ್ಲಿಯೇ ಪತ್ತೆ ಹಚ್ಚುವ ಮೂಲಕ ರೋಗ ತಪಾಸಣೆಯು ಈ ಕ್ಯಾನ್ಸರ್ ಪೀಡಿತರು ಬದುಕುಳಿಯುವ ಸಾಧ್ಯತೆ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಬಲ್ಲುದು. ತಪಾಸಣೆ ಕಾರ್ಯಕ್ರಮಗಳನ್ನು ವೃದ್ಧಿಸುವುದು, ಹೆಚ್ಚು ಅಪಾಯ ಹೊಂದಿರುವ ಸಮುದಾಯಗಳಲ್ಲಿ ತಿಳಿವಳಿಕೆಯನ್ನು ಹೆಚ್ಚಿಸವುದು ಮತ್ತು ಹೆಚ್ಚು ಸೂಕ್ಷ್ಮ ಸಂವೇದಿಯಾಗಿರುವ ರೋಗ ತಪಾಸಣೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶ ಚೆನ್ನಾಗಿರುವುದಕ್ಕೆ ನಿರ್ಣಾಯಕ ಹೆಜ್ಜೆಗಳಾಗಿವೆ.
-ಡಾ| ಹರೀಶ್ ಇ.
ಸರ್ಜಿಕಲ್ ಆಂಕಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕನಿಷ್ಠ ಮಟ್ಟಕ್ಕಿಳಿದ ತೀವ್ರ ಬಡತನ: ಎಸ್‌ಬಿಐ ವರದಿ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.