Yearender 2024: ಬಿಲ್ಕೀಸ್ To ಜೈಲುಗಳಲ್ಲಿ ಜಾತಿ ತಾರತಮ್ಯ: ಸುಪ್ರೀಂನ Top 10 ತೀರ್ಪುಗಳು
ಈ ತೀರ್ಪು ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು...
Team Udayavani, Dec 30, 2024, 3:08 PM IST
Yearender 2024: ಭಾರತೀಯ ನ್ಯಾಯಾಂಗಕ್ಕೆ 2024 ಐತಿಹಾಸಿಕ ವರ್ಷವಾಗಿದೆ. ಹೌದು 2024ರಲ್ಲಿ ಸುಪ್ರೀಂಕೋರ್ಟ್, ಸಾಮಾಜಿಕ, ರಾಜಕೀಯ ಹಾಗೂ ಕಾನೂನಾತ್ಮಕ ಮೈಲಿಗಲ್ಲು ಸ್ಥಾಪಿಸುವಂತಹ ಹಲವಾರು ನಿರ್ಣಾಯಕ ತೀರ್ಪನ್ನು ನೀಡಿದೆ. ಬಿಲ್ಕೀಸ್ ಬಾನೊ ಸಾಮೂಹಿಕ ಅ*ತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕ್ಷಮೆ ನೀಡುವ ಮನವಿ ತಿರಸ್ಕರಿಸುವುದರಿಂದ ಹಿಡಿದು ಚುನಾವಣ ಬಾಂಡ್ ಯೋಜನೆಯನ್ನು ರದ್ದುಪಡಿಸುವಂತಹ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತ್ತು. ಚುನಾವಣ ಬಾಂಡ್ ಯೋಜನೆ ರದ್ದು ತೀರ್ಪು ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. 2024 ಕೊನೆಗೊಳ್ಳಲು ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಹತ್ವದ 10 ತೀರ್ಪುಗಳ ಮಾಹಿತಿ ಇಲ್ಲಿದೆ…
1)ಬಿಲ್ಕೀಸ್ ಬಾನು ಪ್ರಕರಣ:
2002ರಲ್ಲಿ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕೀಸ್ ಬಾನು ಸಾಮೂಹಿಕ ಅ*ತ್ಯಾಚಾರ ಪ್ರಕರಣದ 11 ದೋಷಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ 2024ರ ಜನವರಿ 8ರಂದು ರದ್ದುಪಡಿಸಿ, ಅಪರಾಧಿಗಳು ಎರಡು ವಾರದೊಳಗೆ ಜೈಲಿಗೆ ಮರಳಬೇಕೆಂದು ಮಹತ್ವದ ತೀರ್ಪನ್ನು ನೀಡಿತ್ತು.
ಬಿಲ್ಕೀಸ್ ಬಾನು ಪ್ರಕರಣದ 11 ದೋಷಿಗಳಿಗೆ ಕ್ಷಮೆ ನೀಡಿ 2022ರ ಆಗಸ್ಟ್ 15ರಂದು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿತ್ತು. ನಂತರ ಗುಜರಾತ್ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಗೆ ಬಾನು ಮೇಲ್ಮನವಿ ಸಲ್ಲಿಸಿದ್ದರು.
2)ಚುನಾವಣ ಬಾಂಡ್ಸ್ ಯೋಜನೆ:
ರಾಜಕೀಯ ಪಕ್ಷಗಳಿಗೆ ಅನಾಮಧೇಯರು ನೀಡುವ ದೇಣಿಗೆಯ ಕಾನೂನು ವ್ಯಾಪ್ತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ(ಫೆ.15) ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ, ಚುನಾವಣ ಬಾಂಡ್ಸ್ ಯೋಜನೆ ಅಸಾಂವಿಧಾನಿಕ ಎಂದು ಸರ್ವಾನುಮತದ ಐತಿಹಾಸಿಕ ತೀರ್ಪು ನೀಡಿತ್ತು.
ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರ ಸಾಂವಿಧಾನಿಕ ಪೀಠವು, ಚುನಾವಣ ಬಾಂಡ್ಸ್ ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಗೆ ಎಲೆಕ್ಟ್ರೊರಲ್ ಬಾಂಡ್ ಗಳ ಮೂಲಕ ಹರಿದು ಬಂದ ದೇಣಿಗೆಯ ವಿವರವನ್ನು ಬಹಿರಂಗಗೊಳಿಸುವಂತೆ ಎಸ್ ಬಿಐಗೆ ನಿರ್ದೇಶನ ನೀಡಿತ್ತು.
3)1998ರ ಪಿ.ವಿ.ನರಸಿಂಹ ರಾವ್ ತೀರ್ಪು:
ಸಂಸದರು ಹಾಗೂ ಶಾಸಕರುಗಳು ವಿಧಾನಸಭೆ, ಲೋಕಸಭೆಯಲ್ಲಿ ಮತಚಲಾಯಿಸಲು ಅಥವಾ ಭಾಷಣ ಮಾಡಲು ಲಂಚ ಸ್ವೀಕರಿಸಿದ ಪ್ರಕರಣಗಳ್ಲಿ ಪ್ರಾಸಿಕ್ಯೂಷನ್ ನಿಂದ ವಿನಾಯ್ತಿ ಇಲ್ಲ ಎಂದು ಸುಪ್ರೀಂಕೋರ್ಟ್ ಮಾರ್ಚ್ 24ರಂದು ಮಹತ್ವದ ತೀರ್ಪನ್ನು ಪ್ರಕಟಿಸಿತ್ತು.
ಪಿ.ವಿ.ನರಸಿಂಹ ರಾವ್ ಕುರಿತ ತೀರ್ಪನ್ನು ಒಪ್ಪುವುದಿಲ್ಲ ಎಂದು ಸುಪ್ರೀಂ ಪೀಠ ತಿಳಿಸಿದ್ದು, ಮತ ಚಲಾಯಿಸಲು ಶಾಸಕರಿಗೆ ಕಾನೂನಿನಿಂದ ವಿನಾಯ್ತಿ ನೀಡುವ ಪಿ.ವಿ.ನರಸಿಂಹ ರಾವ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ರದ್ದುಪಡಿಸಿರುವುದಾಗಿ ಸುಪ್ರೀಂಕೋರ್ಟ್ ತಿಳಿಸಿತ್ತು.
1993ರಲ್ಲಿ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಪಿ.ವಿ.ನರಸಿಂಹರಾವ್ ವರ್ಷಸ್ ಸಿಬಿಐ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1998ರಲ್ಲಿ ಸದನದ ಒಳಗೆ ಯಾವುದೇ ಭಾಷಣ ಮತ್ತು ಮತ ಚಲಾಯಿಸಲು (ಜೆಎಂಎಂ ಲಂಚ ಪ್ರಕರಣ) ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ಸಂಸದರಿಗೆ ಕ್ರಿಮಿನಲ್ ಮೊಕದ್ದಮೆಯಿಂದ ವಿನಾಯ್ತಿ ಇದೆ ಎಂದು ತೀರ್ಪು ಪ್ರಕಟಿಸಿತ್ತು.
4)ಎಸ್ ಸಿ, ಎಸ್ ಟಿ ಕೋಟಾದ ಒಳಮೀಸಲಾತಿ:
ಉದ್ಯೋಗ ಮತ್ತು ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಮೀಸಲು ಸೌಲಭ್ಯ ಲಭಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಟಗರಿಯಡಿ ಒಳಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿ ಐತಿಹಾಸಿಕ ತೀರ್ಪು ನೀಡಿತ್ತು.
ಸುಪ್ರೀಂಕೋರ್ಟ್ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ, 6:1ರ ಅನುಪಾತದಲ್ಲಿ ಈ ಐತಿಹಾಸಿಕ ತೀರ್ಪನ್ನು ನೀಡಿತ್ತು. ಆದರೆ ಜಸ್ಟೀಸ್ ಬೇಲಾ ತ್ರಿವೇದಿ ಮಾತ್ರ ಭಿನ್ನ ತೀರ್ಪು ನೀಡಿದ್ದರು.
ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ಸರ್ಕಾರದ ಪ್ರಕರಣದಲ್ಲಿ 2004ರಲ್ಲಿ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ರದ್ದುಪಡಿಸಿ, ಈ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಿತ್ತು.
5) ಮಕ್ಕಳ ಅಶ್ಲೀ*ಲ ವಿಡಿಯೋ ವೀಕ್ಷಣೆ ಅಪರಾಧ:
ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಪೋಕ್ಸೋ ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂಕೋರ್ಟ್ ಸೆಪ್ಟೆಂಬರ್ 23ರಂದು ಮಹತ್ವದ ತೀರ್ಪನ್ನು ಘೋಷಿಸಿತ್ತು. ಮಕ್ಕಳ ಅಶ್ಲೀಲ ವಿಡಿಯೋ ಕುರಿತು ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸಿಜೆಐ ಚಂದ್ರಚೂಡ್ ಮತ್ತು ಜಸ್ಟೀಸ್ ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ಪೀಠ ರದ್ದುಪಡಿಸಿ, ಈ ಮಹತ್ವದ ತೀರ್ಪನ್ನು ನೀಡಿದೆ.
ಮಕ್ಕಳ ಅಶ್ಲೀಲ ವಿಡಿಯೋ ವಿಚಾರದಲ್ಲಿ ಸಂಸತ್ ಕೂಡಾ ಆ ಪದಕ್ಕೆ ತಿದ್ದುಪಡಿ ತರಬೇಕೆಂದು ಸುಪ್ರೀಂಕೋರ್ಟ್ ಸಲಹೆ ನೀಡಿತ್ತು. Child Por*nography ಪದವನ್ನು ಬಳಸಬಾರದು ಎಂಬುದಾಗಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
6) ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಾಂವಿಧಾನಿಕ ಸಿಂಧುತ್ವ:
ಅಸ್ಸಾಂನ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಇದರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಪೀಠ ಅಕ್ಟೋಬರ್ 17ರಂದು 4:1ರ ಅನುಪಾತದಲ್ಲಿ ಎತ್ತಿಹಿಡಿದು ಮಹತ್ವದ ತೀರ್ಪನ್ನು ಪ್ರಕಟಿಸಿತ್ತು.
ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಐವರು ಜಡ್ಜ್ ಗಳ ಸಾಂವಿಧಾನಿಕ ಪೀಠ ಈ ತೀರ್ಪನ್ನು ಪ್ರಕಟಿಸಿತ್ತು. ಸೆಕ್ಷನ್ 6ಎ ಪ್ರಮುಖವಾಗಿ 1966ರ ಜನವರಿ 1ರಿಂದ 1971ರ ಮಾರ್ಚ್ 25ರ ನಡುವೆ ಅಸ್ಸಾಂ ಪ್ರವೇಶಿಸಿದ್ದ ಬಾಂಗ್ಲಾದೇಶಿ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ಅನುಮತಿ ನೀಡಿದ್ದು, ನಮೂದಿತ ವರ್ಷದ ನಂತರ ಬಂದವರು ಪೌರತ್ವ ಪಡೆಯಲು ಅನರ್ಹರು ಎಂಬುದಾಗಿ ತೀರ್ಪು ಸುಪ್ರೀಂ ತೀರ್ಪು ನೀಡಿತ್ತು.
7) 2004ರ ಉತ್ತರಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ Act 2024:
2004ರ ಉತ್ತರಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ Act 2024 ಸಾಂವಿಧಾನಿಕವಾದದ್ದು ಎಂದು ಸುಪ್ರೀಂಕೋರ್ಟ್ ನವೆಂಬರ್ 5ರಂದು ಘೋಷಿಸಿತ್ತು. ಉತ್ತರಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ Act 2024ಅನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಈ ಕಾಯ್ದೆ ಅಸಾಂವಿಧಾನಿಕ ಮತ್ತು ಜಾತ್ಯತೀತ ಸಾಂವಿಧಾನಿಕ ತತ್ವದ ಉಲ್ಲಂಘನೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತ್ತು. ಈ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಪೀಠ, ಉತ್ತರಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ Act 2024ರ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದು, ಶಿಕ್ಷಣದ ಗುಣಮಟ್ಟ ನಿಗದಿಪಡಿಸುವುದು ಸರ್ಕಾರದ ಹಕ್ಕು ಎಂದು ಪ್ರತಿಪಾದಿಸಿತ್ತು.
8) ಅಲಿಗಢ್ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನ:
ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ (Aligarh Muslim University) ಅಲ್ಪಸಂಖ್ಯಾಕ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ ಎಂಬ ತನ್ನ 1967ರ ತೀರ್ಪನ್ನು ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ (ನ.08) 4:3ರ ಬಹುಮತದಲ್ಲಿ ತಳ್ಳಿಹಾಕಿತ್ತು. ಅಲ್ಲದೇ ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ ಅಲ್ಪಸಂಖ್ಯಾಕ ಸಂಸ್ಥೆಯೇ ಎಂಬುದನ್ನು ಸುಪ್ರೀಂಕೋರ್ಟ್ ನ ಪ್ರತ್ಯೇಕ ತ್ರಿಸದಸ್ಯ ಪೀಠ ನಿರ್ಧರಿಸಲಿದೆ ಎಂದು ಆದೇಶ ನೀಡಿತ್ತು.
ಅಝೀಜ್ ಬಾಷಾ V/s ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1967ರಲ್ಲಿ, ನೀಡಿರುವ ತೀರ್ಪಿನಲ್ಲಿ, ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ ಶಾಸನಬದ್ಧ ಕಾಯಿದೆಗೆ ಒಳಪಟ್ಟಿದ್ದರಿಂದ ಅಲ್ಪಸಂಖ್ಯಾಕ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿದೆ ಅಂದ ಮಾತ್ರಕ್ಕೆ ಇದು ಅಲ್ಪಸಂಖ್ಯಾತರಿಂದ ಸ್ಥಾಪನೆಯಾಗಿಲ್ಲ ಎಂಬ ಅರ್ಥವಲ್ಲ. ಅದೇ ರೀತಿ ಈ ವಿವಿ ಸ್ಥಾಪಿಸಲು ಶಾಸನಬದ್ಧ ನಿರ್ಣಯ ಅಂಗೀಕರಿಸಲಾಗಿದೆ ಎಂಬ ಕಾರಣಕ್ಕಾಗಿ ಅದನ್ನು ಸಂಸತ್ ಸ್ಥಾಪಿಸಿದೆ ಎಂದು ವಾದಿಸಲು ಸಾಧ್ಯವಿಲ್ಲ ಎಂದು ಬಹುಮತದ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಈ ಸಂಸ್ಥೆಯ ಪ್ರಾರಂಭವನ್ನು ಪರಿಗಣಿಸಬೇಕಾಗಿದೆ. ಸಂಸ್ಥೆಯ ಸ್ಥಾಪನೆಯ ಹಿಂದಿನ ರೂವಾರಿ ಯಾರು ಎಂಬುದನ್ನು ನೋಡಬೇಕು. ಭೂಮಿಯ ಹಣವನ್ನು ಯಾರು ಪಡೆದಿದ್ದಾರೆ ಮತ್ತು ಒಂದು ವೇಳೆ ಅಲ್ಪಸಂಖ್ಯಾಕ ಸಮುದಾಯ ನೆರವು ನೀಡಿದೆಯೇ ಎಂಬುದನ್ನು ಕೋರ್ಟ್ ಆದಶದಲ್ಲಿ ತಿಳಿಸಿತ್ತು.
ಆದ್ಯಾಗ್ಯೂ ಸಂಸ್ಥೆಯ ಅಲ್ಪಸಂಖ್ಯಾಕರೇತರ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಅಲ್ಪಸಂಖ್ಯಾಕ ಚಾರಿತ್ರ್ಯ ಕಸಿಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬಹುಮತದ ಆದೇಶದಲ್ಲಿ ತೀರ್ಪು ನೀಡಿತ್ತು.
9)ಬುಲ್ಡೋಜರ್ ಜಸ್ಟೀಸ್:
ದೇಶದಲ್ಲಿ ಕಟ್ಟಡವನ್ನು ಅನಿಯಂತ್ರಿವಾಗಿ ಧ್ವಂಸಗೊಳಿಸುವ “ಬುಲ್ಡೋಜರ್ ಕ್ರಮವನ್ನು” ಬಲವಾಗಿ ಖಂಡಿಸಿದ್ದ ಸುಪ್ರೀಂಕೋರ್ಟ್, ನವೆಂಬರ್ 13ರಂದು ಮಹತ್ವದ ತೀರ್ಪು ನೀಡಿತ್ತು. ಆರೋಪಿಯ ಮನೆ ಅಥವಾ ಕಟ್ಟಡವನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವ ಕ್ರಮ ಸಾಂವಿಧಾನಿಕ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಪೀಠ, ಕೇವಲ ಆರೋಪಿ ಅಥವಾ ಆರೋಪಿ ಎಂದು ನಿರ್ಣಯಿಸುವ ಮೊದಲೇ ಜನರ ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವುದು ಸಂಪೂರ್ಣವಾಗಿ ಸಂವಿಧಾನ ಬಾಹಿರ ಕ್ರಮ ಎಂದು ತಿಳಿಸಿತ್ತು.
ಕಾರ್ಯಾಂಗ ನ್ಯಾಯಾಧೀಶರಂತೆ ವರ್ತಿಸಬಾರದು. ಒಬ್ಬ ವ್ಯಕ್ತಿ ಆರೋಪಿ ಎಂದು ಸಾಬೀತಾದಲ್ಲಿ ಅಂತಹ ವ್ಯಕ್ತಿಯ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸುವುದು ಕಾನೂನು ಬಾಹಿರ ಕ್ರಮ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
10) ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ:
ದೇಶದ ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 13ರಂದು ನೀಡಿತ್ತು. ವಿವಿಧ ರಾಜ್ಯಗಳ ಜೈಲು ಕೈಪಿಡಿಗಳಲ್ಲಿನ ಜಾತಿ ಆಧಾರಿತ ತಾರತಮ್ಯ ನಿಲ್ಲಿಸಬೇಕೆಂದು ಸುಪ್ರೀಂ ಪೀಠ ತಿಳಿಸಿದ್ದು, ಎಲ್ಲಾ ಜಾತಿಗಳ ಕೈದಿಗಳನ್ನು ಮಾನವೀಯ ನೆಲೆಯಲ್ಲಿ ಮತ್ತು ಸಮಾನವಾಗಿ ಪರಿಗಣಿಸಬೇಕೆಂದು ಸೂಚನೆ ನೀಡಿತ್ತು.
ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ಜಸ್ಟೀಸ್ ಜೆ.ಬಿ.ಪರ್ದಿವಾಲಾ, ಜಸ್ಟೀಸ್ ಮನೋಜ್ ಮಿಶ್ರ ಅವರನ್ನೊಳಗೊಂಡ ಪೀಠ, ವಸಾಹತುಶಾಹಿ ಕಾಲದ ಕ್ರಿಮಿನಲ್ ಕಾಯ್ದೆಗಳು ಮುಂದುವರಿದಿದ್ದು, ವಸಾಹತುಶಾಹಿ ಕಾಲದ ನಂತರವೂ ಅದರ ಪರಿಣಾಮ ಎದುರಿಸುವಂತಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rewind 2024: ಸರಿದ 2024ರ ಪ್ರಮುಖ 24 ಹೆಜ್ಜೆ ಗುರುತು
Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್ ಸ್ಟಾರ್ ಗಳಿವರು
Yearender 2024: ಅಮೆರಿಕ To ಉಕ್ರೈನ್- ಪ್ರಧಾನಿ ಮೋದಿ ಅವರ ಟಾಪ್ 5 ವಿದೇಶ ಪ್ರವಾಸ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.