Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Team Udayavani, Jan 3, 2025, 3:25 PM IST
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ ಬಹು ನಿರೀಕ್ಷಿತ “ಸಂಜು ವೆಡ್ಸ್ ಗೀತಾ 2′ ಸಿನಿಮಾ ಜನವರಿ 10ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ “ಅವನು ಸಂಜು ಅವಳು ಗೀತಾ’ ಎಂಬ ಚಿತ್ರದ ಹಾಡು ಬಿಡುಗಡೆಗೊಂಡು ಮೆಚ್ಚುಗೆ ಗಳಿಸಿತ್ತು. ಇದರ ಬೆನ್ನಲ್ಲೆ ಚಿತ್ರತಂಡ ಇನ್ನೊಂದು “ಮಳೆಯಂತೆ ಬಾ ಬೆಳಕಂತೆ ಬಾ’ ಎಂಬ ಹಾಡನ್ನು ಬಿಡುಗಡೆಗೊಳಿಸಿದೆ.
ಕಿಚ್ಚ ಸುದೀಪ್ ಈ ಹಾಡನ್ನು ಬಿಡುಗಡೆಗೊಳಿಸಿ, “ಸಂಜು ವೆಡ್ಸ್ ಗೀತಾ ಚಿತ್ರ ಯಶಸ್ಸು ಕಂಡ ಹಾಗೆ, ಈ ಚಿತ್ರವೂ ಸಕ್ಸಸ್ ಆಗಲಿ. ಕವಿರಾಜ್ ಬರೆದಿರುವ ಮಳೆಯಂತೆ ಹಾಡು ಚೆನ್ನಾಗಿದೆ’ ಎಂದು ಹೇಳಿ ಚಿತ್ರತಂಡಕ್ಕೆ ಶುಭಕೋರಿದರು.
ಚಿತ್ರದ ನಿರ್ದೇಶಕ ನಾಗಶೇಖರ್ ಮಾತನಾಡಿ, “ರೇಶೆ¾ ಬೆಳೆಗಾರರ ಕಥೆಯ ಜತೆಗೆ ನವೀರಾದ ಪ್ರೇಮಕಥೆಯನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ. ಈ ಚಿತ್ರದ ಎಳೆಯನ್ನು ಸುದೀಪ್ ಅವರು ಮಾಣಿಕ್ಯ ಶೂಟಿಂಗ್ ಸಮಯದಲ್ಲಿ ನನಗೆ ಕೊಟ್ಟಿದ್ದರು. ಇಂಥ ಕಥೆಗಳನ್ನು ನೀನು ಚೆನ್ನಾಗಿ ಹ್ಯಾಂಡಲ್ ಮಾಡ್ತೀಯ ಅಂತ ನನಗೊಪ್ಪಿಸಿದ್ದರು. ಸಂಜು ವೆಡ್ಸ್ ಗೀತಾ-2 ಕಥೆಯ ಕ್ರೆಡಿಟ್ ಸುದೀಪ್ ಅವರಿಗೇ ಸಲ್ಲುತ್ತದೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್‌ಲ್ಯಾಂಡ್ ವರೆಗೂ ಹೋಗುತ್ತದೆ. ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಆಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾರಾಮ್ ಅಭಿನಯಿಸಿದ್ದಾರೆ. ಸಂಗೀತಾ ರವೀಂದ್ರನಾಥ್ ಅವರು ಮಳೆಯಂತೆ ಹಾಡಿಗೆ ಧ್ವನಿಯಾಗಿದ್ದಾರೆ’ಎಂದರು.
“ಇದು ನನ್ನ ನಿರ್ಮಾಣದ ಎರಡನೇ ಚಿತ್ರ, ನಾಗಶೇಖರ ಹೇಳಿದ ಈ ಸ್ಟೋರಿ ಇಷ್ಟವಾಯಿತು. ಇದು ಅಪ್ಪಟ ಫ್ಯಾಮಿಲಿ, ಲವ್ ಸ್ಟೋರಿ. ನವಿರಾದ ಪ್ರೇಮದ ಜತೆ ರೈತರ ಬಗ್ಗೆಯೂ ಹೇಳಲಾಗಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರವನ್ನು ನೆನಪಿಸುತ್ತದೆ. ಇತ್ತೀಚೆಗೆ ಸಿನಿಮಾದ ಸೆನ್ಸಾರ್ ಆಯಿತು. ಒಂಚೂರೂ ಕಟ್ ಹೇಳದೆ “ಯು’ ಸರ್ಟಿಫಿಕೇಟ್ ಕೊಟ್ಟಿದ್ದಾರೆ’ ಎಂದರು ನಿರ್ಮಾಪಕ ಚಲವಾದಿ ಕುಮಾರ್.
ಚಿತ್ರದ ವಿಶೇಷ ಪಾತ್ರದಲ್ಲಿ ನಟ ಚೇತನ್‌ಚಂದ್ರ ಹಾಗೂ ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ವಿನೋದ್, ಸಂಪತ್ ಕುಮಾರ್ ತಾರಾಬಳಗದಲ್ಲಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸವಿದೆ.