Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Team Udayavani, Jan 4, 2025, 10:13 AM IST
ಕೇಂದ್ರ ಅಂತರ್ಜಲ ಮಂಡಳಿ(ಸಿಜಿಡಬ್ಲ್ಯುಬಿ) ಬಿಡುಗಡೆ ಮಾಡಿರುವ ಅಂತರ್ಜಲದ ಗುಣಮಟ್ಟದ ಕುರಿತಾಗಿನ ತನ್ನ ಇತ್ತೀಚಿನ ವರದಿಯಲ್ಲಿ ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಅಂತರ್ಜಲದಲ್ಲಿ ರಾಸಾಯನಿಕ ಅಂಶಗಳು ಅಧಿಕ ಪ್ರಮಾಣದಲ್ಲಿವೆ ಎಂದು ಹೇಳಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ವರ್ಷಗಳುರುಳಿದಂತೆಯೇ ಅಂತರ್ಜಲ ಮಟ್ಟ ಕುಸಿಯುತ್ತಿರುವ ಬಗೆಗೆ ಕಳೆದೊಂದು ದಶಕದಿಂದ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ ಈಗ ಅಂತರ್ಜಲದ ಗುಣಮಟ್ಟವೂ ಕಳಪೆಯಾಗತೊಡಗಿರುವುದು ಚಿಂತನೀಯ.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ ಒಂದಲ್ಲ ಒಂದು ರಾಸಾ ಯನಿಕ ಅಂಶಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿವೆ. “ಸಿಜಿಡಬ್ಲ್ಯುಬಿ’ 2024ರ ವಾರ್ಷಿಕ ಅಂತರ್ಜಲ ಗುಣಮಟ್ಟ ವರದಿಯ ಪ್ರಕಾರ ದಕ್ಷಿಣ ಭಾರತದ ರಾಜ್ಯಗಳ ಅಂತರ್ಜಲದಲ್ಲಿ ಫ್ಲೋರೈಡ್, ನೈಟ್ರೇಟ್, ಯುರೇನಿಯಂ, ಆರ್ಸೆನಿಕ್, ಕಬ್ಬಿಣ ಮತ್ತು ಲವಣಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಂತರ್ಜಲ, ಈ ಎಲ್ಲ ರಾಸಾ ಯನಿಕ ಅಂಶಗಳನ್ನು ಕೂಡಿರುವುದು ಸಹಜವೇ ಆದರೂ ಇವು ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿದ್ದರೆ ಈ ನೀರನ್ನು ಕುಡಿಯುವ ಅಥವಾ ತಮ್ಮ ವಿವಿಧ ಚಟುವಟಿಕೆಗಳಿಗೆ ಬಳಕೆ ಮಾಡುವ ಮಾನವನ ಆರೋಗ್ಯದ ಮೇಲೆ ತೀವ್ರ ತೆರನಾದ ಪರಿಣಾಮವನ್ನು ಬೀರುತ್ತವೆ. ಈ ಹಿನ್ನೆಲೆಯಲ್ಲಿ ಈ ವರದಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ನೀರಿನ ಅಭಾವ, ಅದರಲ್ಲೂ ಕುಡಿಯುವ ನೀರಿನ ಕೊರತೆ ವಾರ್ಷಿಕ ಸಮಸ್ಯೆಯಾಗಿದ್ದು, ಈಗಾಗಲೇ ಈ ಭಾಗದ ಬಹುತೇಕ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿತ ಕಂಡಿದೆ. ಕಳೆದೊಂದು ದಶಕದಿಂದೀಚೆಗೆ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳನ್ನೂ ಪ್ರತೀ ಬೇಸಗೆಯಲ್ಲಿ ನೀರಿನ ಅಭಾವ ಬಾಧಿಸುವುದು ಸರ್ವೇಸಾಮಾನ್ಯವಾಗಿದೆ.
ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ನಿರೀಕ್ಷಿತ ಪ್ರಮಾಣದ ಯಶಸ್ಸು ಲಭಿಸಿಲ್ಲ. ಮೂರ್‍ನಾಲ್ಕು ದಶಕಗಳ ಹಿಂದೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗಾಗಿ ವ್ಯಾಪಕವಾಗಿ ಕೊಳವೆಬಾವಿಗಳನ್ನು ಕೊರೆದ ಪರಿಣಾಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಕೊಳವೆಬಾವಿ ಕೊರೆಯುವುದಕ್ಕೆ ಕಠಿನ ಮಾರ್ಗಸೂಚಿಯನ್ನು ಜಾರಿಗೊಳಿಸಿತ್ತು. ಅಲ್ಲದೆ ಹಾಲಿ ಇರುವ ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸಲು ಜಲ ಮರುಪೂರಣ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇನ್ನು ಲಭ್ಯವಿರುವ ಜಲಮೂಲಗಳ ಅಂತರ್ಜಲವನ್ನು ಹೆಚ್ಚಿಸಲು ಮಳೆನೀರು ಕೊಯ್ಲು ಅಭಿಯಾನವನ್ನು ಕೈಗೊಂಡಿದೆ. ಇವೆಲ್ಲದರ ಪರಿಣಾಮವಾಗಿ ಅಂತರ್ಜಲ ಮಟ್ಟದಲ್ಲಿ ಒಂದಿಷ್ಟು ಸುಧಾರಣೆ ಕಂಡುಬಂದಿದೆ.
ಆದರೆ ಈಗ ಅಂತರ್ಜಲ ಗುಣಮಟ್ಟದ ಕುರಿತಂತೆ ಆತಂಕಕಾರಿ ವರದಿ ಹೊರಬಿದ್ದಿ ರುವುದರಿಂದ ಸರಕಾರ, ಸ್ವಯಂಸೇವಾ ಸಂಸ್ಥೆಗಳು ಮತ್ತು ಜಲ ತಜ್ಞರು ಅಂತರ್ಜಲದಲ್ಲಿ ರಾಸಾಯನಿಕ ಅಂಶಗಳು ಹೆಚ್ಚಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ, ಅಂತರ್ಜಲದ ಗುಣಮಟ್ಟವನ್ನು ವೃದ್ಧಿಸಲು ಸೂಕ್ತ ಪರಿಹಾರೋಪಾ ಯಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ದಿಸೆಯಲ್ಲಿ ಜನತೆಯ ಸಹಕಾರ ಅತ್ಯಗತ್ಯ. ವಿವಿಧ ಪ್ರದೇಶಗಳಲ್ಲಿ ಅಂತರ್ಜಲದಲ್ಲಿ ಬೇರೆ ಬೇರೆ ರಾಸಾಯನಿಕ ಅಂಶಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಅವುಗಳ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಕಲ್ಮಶರಹಿತ ಮತ್ತು ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದರ ಜತೆಯಲ್ಲಿ ಅಂತರ್ಜಲದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹೆಚ್ಚಿನ ಆಸ್ಥೆ ವಹಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.