Kundapura: ರಸ್ತೆ, ಪೈಪ್‌ಲೈನ್ ಕಾಮಗಾರಿಯಿಂದ ಧೂಳು; ಹೈರಾಣಾದ ಜನ
ಹಾಲಾಡಿ- ಕಕ್ಕುಂಜೆ ಕ್ರಾಸ್ ಮುಖ್ಯ ರಸ್ತೆ: ತ್ವರಿತಗತಿಯಲ್ಲಿ ಕೆಲಸ ಮುಗಿಸಲು ಸಾರ್ವಜನಿಕರ ಆಗ್ರಹ
Team Udayavani, Jan 8, 2025, 4:08 PM IST
ಕುಂದಾಪುರ: ಉಡುಪಿ – ಶಿವಮೊಗ್ಗ ರಾಜ್ಯ ಹೆದ್ದಾರಿ ಹಾದುಹೋಗುವ ಕಕ್ಕುಂಜೆ ಕ್ರಾಸ್ ಬಳಿಯಿಂದ ಹಾಲಾಡಿ ಶಾಲೆಯವರೆಗಿನ ಸುಮಾರು ಒಂದೂವರೆ ಕಿ.ಮೀ. ದೂರದ ರಸ್ತೆಯೀಗ ಕಳೆದ ಕೆಲ ತಿಂಗಳಿನಿಂದ ಧೂಳುಮಯವಾಗಿದೆ. ಒಂದೆಡೆ ವಾರಾಹಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಧೂಳು, ಮತ್ತೂಂದೆಡೆ ರಸ್ತೆಯ ವಿಸ್ತರಣೆಗಾಗಿ ಹಾಕಿದ ಜಲ್ಲಿಯ ಹುಡಿಯಿಂದಾಗಿ ಈ ರಸ್ತೆ, ಆಸುಪಾಸಿನ ಪರಿಸರವಿಡೀ ಧೂಳುಮಯಗೊಂಡು, ಜನ ಹೈರಾಣಾಗುವಂತಾಗಿದೆ.
ಕಕ್ಕುಂಜೆ ಕ್ರಾಸ್ ಬಳಿಯಿಂದ ಹಾಲಾಡಿ ಶಾಲೆಯ ವರೆಗಿನ ಸುಮಾರು ಒಂದೂವರೆ ಕಿ.ಮೀ. ದೂರದ ರಸ್ತೆಯು ಮಳೆಗಾಲಕ್ಕೆ ಮೊದಲೇ ಹೊಂಡಮಯ ಗೊಂಡು, ವಾಹನಗಳು ಸಂಚರಿಸಲು ಆಗದಷ್ಟು ಜರ್ಜರಿತ ಗೊಂಡಿತ್ತು. ಆದರೂ ಮಳೆಗಾಲಕ್ಕೆ ಮೊದಲು ತೇಪೆ ಕಾರ್ಯ ಮಾಡಿರಲಿಲ್ಲ. ಮಳೆಗಾಲ ಮುಗಿದ ಬಳಿಕ ವಾದರೂ, ಮರು ಡಾಮರು ಕಾಮಗಾರಿ ಮಾಡುತ್ತಾರೆ ಅಂದರೆ ಅದಕ್ಕೂ ಇಂದು- ನಾಳೆ ಅಂತ ಮೀನಮೇಷ ಎಣಿಸುತ್ತಿದ್ದಾರೆ ಅನ್ನುವುದು ಊರವರ ಆರೋಪ.
ಧೂಳಿನಿಂದ ನಿತ್ಯ ಕಿರಿಕಿರಿ
ರಸ್ತೆ ವಿಸ್ತರಣೆ, ವಾರಾಹಿ ಉಡುಪಿ ಕಡೆಗೆ ಕೊಂಡೊಯ್ಯುವ ನೀರಿನ ಪೈಪ್‌ಲೈನ್‌ಗಾಗಿ ಅಗೆದ ಹೊಂಡ, ಚರಂಡಿ ಕಾಮಗಾರಿ ಹೀಗೆ ಬೇರೆ ಬೇರೆ ಕಾಮಗಾರಿಗಳು ಏಕಕಾಲದಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದ ಇಲ್ಲಿನ ಜನರು ನಿತ್ಯ ಧೂಳು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯ ಮನೆಗಳು, ಅಕ್ಕಪಕ್ಕದ ಅಂಗಡಿಯವರು, ಶಾಲೆ, ಅಂಚೆ ಕಚೇರಿಗೆ ನಿತ್ಯ ಧೂಳಿನ ಸಿಂಚನವಾಗುತ್ತಿದೆ. ದಿನಕ್ಕೆ 3 ಬಾರಿ ನೀರು ಹಾಕಿದರೂ, ಹಾಕಿದ ಅರ್ಧ ಗಂಟೆಗೆ ನೀರು ಒಣಗಿ ಹೋಗುತ್ತಿದೆ. ಉಡುಪಿ, ಕುಂದಾಪುರ ಕಡೆಯಿಂದ ಶಿವಮೊಗ್ಗ, ಹೆಬ್ರಿ ಕಡೆಗೆ ಸಂಚರಿಸುವ ರಾಜ್ಯ ಹೆದ್ದಾರಿಯೂ ಆಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಇದರಿಂದ ಇಲ್ಲಿ ನಡೆದಾಡುವುದೂ ಅಸಹನೀಯವಾಗಿದೆ. ಇಲ್ಲಿನ ಜನರಿಗೆ ಕಾಯಿಲೆ ಭೀತಿಯ ಆತಂಕವೂ ಶುರುವಾಗಿದೆ. ಇನ್ನು ಈ ಧೂಳಿನಿಂದಾಗಿ ಇಲ್ಲಿನ ಮನೆಗಳ ಬಣ್ಣ, ಮನೆಗಳ ಗೋಡೆಗೆ ಕೊಟ್ಟ ಬಣ್ಣ, ಹಸಿರು ಗಿಡಗಳ ಬಣ್ಣವೆಲ್ಲ ಧೂಳಿನಂತಾಗಿದೆ.
ಶೀಘ್ರ ಕಾಮಗಾರಿ ಮುಗಿಸಿ
ಮಳೆಗಾಲಕ್ಕೆ ಮುನ್ನವೇ ಕಕ್ಕುಂಜೆ ಕ್ರಾಸ್‌ನಿಂದ ಹಾಲಾಡಿಯವರೆಗೆ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ರಸ್ತೆ ಹಾಳಾಗಿತ್ತು. ಆ ಬಳಿಕ ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟು ಹೋಗಿದೆ. ಮತ್ತೂಂದೆಡೆ ವಾರಾಹಿಯ ನೀರನ್ನು ಉಡುಪಿಗೆ ಕೊಂಡು ಹೋಗುವ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆ ಬದಿಯನ್ನು ಅಗೆಯಲಾಗಿದೆ. ಇದರಿಂದ ನಮಗೆ ನಿತ್ಯ ಧೂಳು ತಿನ್ನುವ ದುಃಸ್ಥಿತಿ ಬಂದಿದೆ. ಸೂಕ್ತ ಚರಂಡಿ ವ್ಯವಸ್ಥೆ ಮಾಡಿ ಅನಂತರ ಆದಷ್ಟು ರಸ್ತೆ ಮರು ಡಾಮರೀಕರಣಗೊಳಿಸಲಿ ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.
ವಾರದೊಳಗೆ ಆರಂಭ
ಈಗಾಗಲೇ ಕಕ್ಕುಂಜೆ ಕ್ರಾಸ್‌ನಿಂದ ಹಾಲಾಡಿ ಟಿವಿಎಸ್ ಶೋರೂಂವರೆಗೆ ನಡೆಯುವ ಅಗಲೀಕರಣ ಕಾಮಗಾರಿ ಕುರಿತಂತೆ ಗುತ್ತಿಗೆದಾರರನ್ನು ಕರೆಯಿಸಿ, ಸೂಚನೆ ನೀಡಲಾಗಿದೆ. ವಾರಾಹಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಅದಕ್ಕಾಗಿ ಅಗೆದ ಪ್ರದೇಶ ಒಣಗದೇ, ಡಾಮರೀಕರಣ ಕಷ್ಟ. ವಾರದೊಳಗೆ ಮತ್ತೆ ಆರಂಭಿಸಿ, ತ್ವರಿತಗತಿಯಲ್ಲಿ ಮುಗಿಸಲಾಗುವುದು.
– ರಾಮಣ್ಣ ಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.