Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ಶೈಕ್ಷಣಿಕ ಮಂಡಳಿಯ ತೃತೀಯ ಸಾಮಾನ್ಯ ಸಭೆಯಲ್ಲಿ ಪ್ರೊ|ಪಿ.ಎಲ್.ಧರ್ಮ
Team Udayavani, Jan 8, 2025, 11:30 PM IST
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ವಾಯತ್ತ ಕಾಲೇಜುಗಳು ವಿವಿ ಗಮನಕ್ಕೆ ಬಾರದೆ ಹೊಸ ಕೋರ್ಸ್‌ಗಳನ್ನು ಆರಂಭಿಸು ವಂತಿಲ್ಲ. ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ) ನಿಯಮ ಪ್ರಕಾರ ಸ್ವಾಯತ್ತ ಕಾಲೇಜುಗಳು ಇದಕ್ಕೆ ಸಂಬಂಧಿತ ಹೊಸ ಕೋರ್ಸ್ ಆರಂಭಿಸಲು ಬೋರ್ಡ್ ಆಫ್ ಸ್ಟಡೀಸ್, ಆಡಳಿತ ಸಮಿತಿ ಹಾಗೂ ವಿವಿ ಅನುಮೋದನೆ ಪಡೆಯಲೇಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಲ್.ಧರ್ಮ ಹೇಳಿದರು.
ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಶೈಕ್ಷಣಿಕ ಮಂಡಳಿಯ ತೃತೀಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾವಗೊಂಡಿತು.
ವಿದ್ಯಾರ್ಥಿಗಳ ಕಲಿಕೆಗೆ, ಉದ್ಯೋಗಕ್ಕೆ ನೆರವಾಗುವ ರೀತಿಯ ಪಠ್ಯಕ್ರಮಗಳನ್ನು ರಚಿಸಲಾಗಿದೆ. ರಾಜ್ಯಶಾಸ್ತ್ರ ವಿಭಾಗದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ವಿಭಾಗಗಳಲ್ಲೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ಪಠ್ಯಗಳ ಜತೆಗೆ ಪ್ರವೇಶಾತಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಬೇರೆ ವಿಭಾಗಗಳಿಂದ ಇನ್ನೊಂದು ವಿಭಾಗಗಳ ಕೋರ್ಸ್ ಆಯ್ಕೆ ಮಾಡಿ ಕೊಳ್ಳುವ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ಪರಿಚಯಿಸಲು ಬ್ರಿಡ್ಜ್ ಕೋರ್ಸ್ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಇದರಿಂದ ಅಂತಹ ವಿಭಾಗದ ಬಗ್ಗೆ ಸ್ವಲ್ಪ ಪರಿಚಯ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಡೀನ್ ಒಬ್ಬರು ಸಲಹೆ ನೀಡಿದರು.
ಮಂಗಳೂರು ವಿವಿಯಲ್ಲಿ ತುಳು ವಿಭಾಗ ಸ್ಥಾಪನೆ ಹಾಗೂ ಹುದ್ದೆಗಳನ್ನು ಸೃಜಿಸುವ ಬಗ್ಗೆ ಸರಕಾರದಿಂದ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಲಾಯಿತು. ಪತ್ರಿಕೋ ದ್ಯಮ ವಿಭಾಗದ ಹೆಸರನ್ನು “ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ’ ಎಂದು ಬದಲಾಯಿಸುವ ಮೂಲಕ ಈ ವಿಭಾಗಕ್ಕೆ ಪುನಃಶ್ಚೇತನ ಕೊಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕುಲಪತಿ ತಿಳಿಸಿದರು.
ಸ್ನಾತಕೋತ್ತರ ಇಂಗ್ಲಿಷ್, ಹಿಂದಿ ಸಹಿತ ವಿವಿಧ ವಿಭಾಗಗಳ ಪಠ್ಯಕ್ರಮಗಳಿಗೆ ಅನುಮೋದನೆ ಪಡೆಯಲಾಯಿತು. ಸಂತ ಆನ್ಸ್ ಸ್ವಾಯತ್ತ ಸಂಸ್ಥೆಯಲ್ಲಿ ಸ್ನಾತಕ ಪದವಿಯಲ್ಲಿ ಕೋ-ಎಜುಕೇಶನ್ ಸಿಸ್ಟಮ್ ಅನುಮೋದನೆ ನೀಡಲಾ ಯಿತು. ಸ್ನಾತಕೋತ್ತರ ಕಾರ್ಯಕ್ರಮಗಳ ಪಠ್ಯಕ್ರಮಗಳಲ್ಲಿ ಉದ್ಯೋಗಾವಕಾಶ ಉದ್ಯಮಶೀಲತೆ, ಕೌಶಲ ಅಭಿವೃದ್ಧಿ ವಿಷಯಾಧಾರಿತ ಕೋರ್ಸ್‌ಗಳ ಪಟ್ಟಿಯನ್ನು ಅನುಮೋದಿಸಲಾಯಿತು.
ಆಡಳಿತ ವಿಭಾಗದ ರಿಜಿಸ್ಟ್ರಾರ್ ರಾಜು ಮೊಗವೀರ, ಪರೀûಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗದ ಅಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ಮಕ್ಕಳೇ ಬೋಧಕರು!
ಪ್ರೊ|ಪಿ.ಎಲ್.ಧರ್ಮ ಮಾತನಾಡಿ, ವಿವಿಯ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋಧಿಸುವ ವಿನೂತನ ಪ್ರಯತ್ನ ಕಳೆದ ಎರಡು ಸೆಮಿಸ್ಟರ್‌ಗಳಿಂದ ನಡೆಸಲಾಗುತ್ತಿದ್ದು, ಯಶಸ್ವಿಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಬೋಧನಾ ವೃತ್ತಿಯಲ್ಲಿ ತೊಡಗಿಸುವ ಆಸಕ್ತಿ ಹೊಂದಿರುವುದರಿಂದ ವಿದ್ಯಾರ್ಜನೆ ಅವಧಿಯಲ್ಲೇ ಬೋಧನೆಗೆ ಅವಕಾಶ ನೀಡಿದರೆ, ಭವಿಷ್ಯಕ್ಕೆ ಸುಲಭವಾಗಲಿದೆ. ಇದೇ ಮಾದರಿಯನ್ನು ಇತರ ವಿಭಾಗಗಳೂ ಅನುಸರಿಸಿದರೆ ಉತ್ತಮವಾಗುತ್ತದೆ ಎಂದು ಹೇಳಿದರು.
ವಿವಿ ಸಂಯೋಜಿತ ಕಾಲೇಜು ಸಂಖ್ಯೆ ಇಳಿಕೆ!
ವಿವಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಒಟ್ಟು 174 ಕಾಲೇಜುಗಳ ಪೈಕಿ 12 ಕಾಲೇಜುಗಳು ವಿವಿಯ ಸಂಯೋಜನೆಗೆ ಒಳಪಡಲು ಅರ್ಜಿ ಸಲ್ಲಿಸಿರಲಿಲ್ಲ. ಈ ಸಂಖ್ಯೆ 162ಕ್ಕೆ ಇಳಿದಿತ್ತು. ಈ ಬಾರಿಯೂ ಹಲವು ಕಾಲೇಜುಗಳು ವಿವಿ ಸಂಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಈಗ ಒಟ್ಟು ಕಾಲೇಜುಗಳ ಸಂಖ್ಯೆ 155ಕ್ಕೆ ಇಳಿಕೆಯಾಗಿದೆ ಎಂದು ಕುಲಪತಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.