Bantwal: ಕಲ್ಲಡ್ಕ ಫ್ಲೈಓವರ್; ಪೂರ್ಣತೆಯತ್ತ; ಕಾಂಕ್ರೀಟ್ ಕಾಮಗಾರಿ ಪ್ರಗತಿ
ಒಂದು ಭಾಗದ ಕಾಂಕ್ರೀಟ್ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಆರಂಭ
Team Udayavani, Jan 9, 2025, 12:58 PM IST
ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಟಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಕಲ್ಲಡ್ಕದಲ್ಲಿ ಸುಮಾರು 2.1 ಕಿ.ಮೀ.ಉದ್ದದ ಫ್ಲೈಓವರ್ ನಿರ್ಮಾಣವಾಗುತ್ತಿದ್ದು, ಇದೀಗ ಫ್ಲೈಓವರ್‌ನ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡು ಅಂತಿಮ ಹಂತದ ಕೆಲಸ ಪ್ರಗತಿಯಲ್ಲಿದೆ. ಪಿಲ್ಲರ್‌ಗಳ ಮಧ್ಯೆ ಬೃಹತ್ ಗರ್ಡರ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದೆ.
ಬಿ.ಸಿ.ರೋಡು – ಅಡ್ಡಹೊಳೆ ಹೆದ್ದಾರಿಯ ಕಾಮಗಾರಿಯಲ್ಲಿ ಫ್ಲೈಓವರ್ ನಿರ್ಮಾಣವೇ ಬಹುದೊಡ್ಡ ಯೋಜನೆಯಾಗಿದ್ದು, ಹೀಗಾಗಿ ಕಲ್ಲಡ್ಕ ಪೇಟೆಯು ಸಾಕಷ್ಟು ತೊಂದರೆಯನ್ನೂ ಅನುಭವಿಸಿತ್ತು. ಹೆದ್ದಾರಿ ಕಾಮಗಾರಿ ಆರಂಭದಲ್ಲೇ ಕಲ್ಲಡ್ಕದಲ್ಲೂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಕೆಸರು, ಮಳೆ ನೀರು, ಚರಂಡಿ ಮೊದಲಾದ ಸಮಸ್ಯೆಗಳಿಂದ ಪೇಟೆಯ ಜನತೆ ಸಂಕಷ್ಟ ಅನುಭವಿಸಿದ್ದರು.
ಕಲ್ಲಡ್ಕದ ಸರ್ವೀಸ್ ರಸ್ತೆಯ ಅವ್ಯವಸ್ಥೆಯ ಕಾರಣದಿಂದ ಇಂತಹ ತೊಂದರೆ ಎದುರಾಗಿದ್ದು, ಆದರೆ ಫ್ಲೈಓವರ್ ಕಾಮಗಾರಿ ಒಂದು ಹಂತಕ್ಕೆ ತಲುಪದೆ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಸಾಧ್ಯವಿರಲಿಲ್ಲ. ಫ್ಲೈಓವರ್ ನಿರ್ಮಾಣ ಒಂದು ಹಂತಕ್ಕೆ ತಲುಪಿದ್ದು, ಹೀಗಾಗಿ ಕಳೆದ ಒಂದು ತಿಂಗಳ ಹಿಂದೆ ಕಲ್ಲಡ್ಕದ ಒಂದು ಬದಿಯ ಸರ್ವೀಸ್ ರಸ್ತೆಗೆ ಕಾಂಕ್ರೀಟ್ ಹಾಕಲಾಗಿತ್ತು. ಕಾಂಕ್ರೀಟ್ ಕಾಮಗಾರಿಯ ಬಳಿಕ ಕಲ್ಲಡ್ಕ ಪೇಟೆಯ ಜನತೆ ಒಂದು ಹಂತಕ್ಕೆ ನಿರಾಳರಾಗಿದ್ದು, ಇದೀಗ ಫ್ಲೈಓವರ್ ನಿರ್ಮಾಣವೂ ವೇಗವನ್ನು ಪಡೆದುಕೊಂಡಿರುವುದರಿಂದ ಸ್ವಲ್ಪ ಸಮಯದಲ್ಲಿ ಹೆದ್ದಾರಿಯ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
2025ರ ಎಪ್ರಿಲ್‌ನಲ್ಲಿ ಸಂಚಾರ ಆರಂಭ.?
ಹೆದ್ದಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಅಧಿಕಾರಿಗಳು 2025ರ ಎಪ್ರಿಲ್ ಆರಂಭಕ್ಕೆ ಕಲ್ಲಡ್ಕ ಫ್ಲೈಓವರ್‌ನ್ನು ಸಂಚಾರಕ್ಕೆ ಮುಕ್ತಗೊಳಿಸುವ ಯೋಜನೆ ಹಾಕಿಕೊಂಡಿದ್ದು, ಇದೀಗ ಸುಮಾರು 70 ಪಿಲ್ಲರ್‌ಗಳ ಮಧ್ಯೆ ಗಾರ್ಡ್‌ಗಳ ಅಳವಡಿಕೆ ಪೂರ್ಣಗೊಂಡಿದೆ. ನರಹರಿಪರ್ವತದ ಬಳಿಕ ಮೂರ್‍ನಾಲ್ಕು ಪಿಲ್ಲರ್‌ಗಳ ಮಧ್ಯೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಇದರ ಜತೆಗೆ ಫ್ಲೈಓವರ್‌ನ ಎರಡೂ ಭಾಗದಲ್ಲೂ ಕಾಂಕ್ರೀಟ್ ರಸ್ತೆಗೆ ಸಂಪರ್ಕಿಸುವ ದೃಷ್ಟಿಯಿಂದ ಕಾಮಗಾರಿ ನಡೆಯುತ್ತಿದೆ.
ಕಲ್ಲಡ್ಕದ ಬಳಿ ಪೂರ್ಲಿಪ್ಪಾಡಿ ಭಾಗದಲ್ಲಿ ಕೆಳಗಿನ ಕಾಂಕ್ರೀಟ್ ರಸ್ತೆಯು ಈಗಾಗಲೇ ಪೂರ್ಣಗೊಂಡಿರುವುದರಿಂದ ಓವರ್‌ನ್ನು ಕೆಳಗಿನ ರಸ್ತೆಗೆ ಸಂಪರ್ಕಿಸುವ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ. ಆದರೆ ನರಹರಿ ಪರ್ವತ ಭಾಗದಲ್ಲಿ ಏರು ಭಾಗವನ್ನು ತಗ್ಗಿಸುವ ಕಾರ್ಯ ನಡೆಯುತ್ತಿದ್ದು, ಅದರ ಬಳಿಕವೇ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಈಗಾಗಲೇ ಈ ಭಾಗದಲ್ಲಿ ಸಂಪರ್ಕ ಕೊಂಚ ವಿಳಂಬವಾಗಲಿದ್ದು, ಗುತ್ತಿಗೆ ಸಂಸ್ಥೆಯ ಗಡುವಿಗೆ ಇನ್ನೂ ಎರಡೂವರೆ ತಿಂಗಳು ಬಾಕಿರುವುದರಿಂದ ಆ ಸಮಯಕ್ಕೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಉದಯವಾಣಿ ಸುದಿನ ಚೆಲ್ಲಿದ ಬೆಳಕು
ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದ ಜನತೆಗೆ ಆಗಿರುವ ತೊಂದರೆಗಳ ಕುರಿತು ಉದಯವಾಣಿ ಸುದಿನದಲ್ಲಿ ಅ. 19ರಿಂದ 30ರ ವರೆಗೆ ರಾ.ಹೆದ್ದಾರಿ ಕಾಮಗಾರಿ; ಯಾವಾಗ ಮುಗಿಸ್ತೀರಿ ಅಭಿಯಾನವನ್ನು ನಡೆಸಲಾಗಿತ್ತು. ಯಾವ ಭಾಗದಲ್ಲಿ ಏನೇನು ತೊಂದರೆಗಳಾಗಿವೆ ಎಂಬುದನ್ನು ವಿವರವಾಗಿ ತಿಳಿಸಲಾಗಿತ್ತು. ಈ ಅಭಿಯಾನಕ್ಕೆ ಓದುಗರು, ಸಾರ್ವಜನಿಕರ ವಲಯದಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ವರದಿಗೆ ಸ್ಪಂದನೆ ನೀಡಿ ದ.ಕ.ಸಂಸದರು, ಬಂಟ್ವಾಳ, ಪುತ್ತೂರು, ಸುಳ್ಯ ಶಾಸಕರು ಹಾಗೂ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್‌ನವರು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದರು. ಅದಾದ ಬಳಿಕ ಹೆದ್ದಾರಿಯ ಹಲವು ಭಾಗಗಳ ಸಂಚಾರಕ್ಕೆ ಮುಕ್ತಗೊಂಡಿದ್ದು, ಸರ್ವೀಸ್ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗಳು, ಫ್ಲೈಓವರ್ ಕಾಮಗಾರಿ ಭರದಿಂದ ಸಾಗುತ್ತಿದೆ.
ಮತ್ತೂಂದು ಭಾಗದ ಸರ್ವೀಸ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಸಿದ್ಧತೆ
ಕಲ್ಲಡ್ಕ ಪೇಟೆಯಲ್ಲಿ ಒಂದು ಭಾಗದ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡು ಕ್ಯೂರಿಂಗ್ ಅವಧಿಯೂ ಮುಗಿದು ಪ್ರಸ್ತುತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಮತ್ತೂಂದು ಭಾಗದ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಮೆಲ್ಕಾರಿನಿಂದ ಪಾಣೆಮಂಗಳೂರು ಸೇತುವೆವರೆಗಿನ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಭಾಗದಲ್ಲಿ ಕ್ಯೂರಿಂಗ್ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.