Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
ಬೆಂಗ್ಳೂರಿನ ಕೋರ್ಟ್ ಆವರಣದಲ್ಲಿ ಬೆನ್ನು ತಟ್ಟಿ ಪವಿತ್ರಾರನ್ನು ಸಂತೈಸಿದ ನಟ ; 5 ದಿನ ಮೈಸೂರಿಗೆ ತೆರಳಲು ದರ್ಶನ್‌ಗೆ ಅನುಮತಿ
Team Udayavani, Jan 11, 2025, 11:37 AM IST
ಹೊರ ರಾಜ್ಯಕ್ಕೆ ಹೋಗಲು ಪವಿತ್ರಾಗೌಡಗೂ ಕೋರ್ಟ್ ಅವಕಾಶ ; 17 ಮಂದಿ ಆರೋಪಿಗಳು ನ್ಯಾಯಾಲಯ ಎದುರು ಹಾಜರು
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ 6ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರ ಸಾರ್ವಜನಿಕವಾಗಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬೆಂಗಳೂರಿನ ಸಿಸಿಎಚ್-57ನೇ ಕೋರ್ಟ್ ಆವರಣದಲ್ಲಿ ಪರಸ್ಪರ ಮುಖಾಮುಖಿ ಆಗಿದ್ದರು. ಪವಿತ್ರಾ ಗೌಡ ಹಾಗೂ ಇನ್ನಿತರೆ ಆರೋಪಿಗಳು ತುಸು ಮುಂಚಿತವಾಗಿಯೇ ತಮ್ಮ ವಕೀಲರ ಜೊತೆ ಕೋರ್ಟ್‌ಗೆ ಆಗಮಿಸಿದ್ದರು.
ನಟ ದರ್ಶನ್ ಸ್ನೇಹಿತ ಧನ್ವೀರ್ ಜೊತೆಗೆ ಕಾರಿನಲ್ಲಿ ಆಗಮಿಸಿದರು. ಹಲವು ದಿನಗಳ ಬಳಿಕ ದರ್ಶನ್ ಅವರನ್ನು ನೋಡಿದ ಪವಿತ್ರಾ ಗೌಡ ಭಾವುಕರಾದರು. ಇದನ್ನು ಕಂಡ ದರ್ಶನ್ ಬೆನ್ನುತಟ್ಟಿ ಪವಿತ್ರಾ ಗೌಡರನ್ನು ಸಂತೈಸಿದರು. ಬಳಿಕ ಪವಿತ್ರಾ ಗೌಡ ಹಾಗೂ ದರ್ಶನ್ ಪರಸ್ಪರ ಮಾತನಾಡಿದರು. ಈ ವೇಳೆ ಪವಿತ್ರಾಗೌಡ ಅವರು ದರ್ಶನ್ ಆರೋಗ್ಯ ವಿಚಾರಿಸಿದರು ಎನ್ನಲಾಗಿದೆ.
17 ಮಂದಿ ಆರೋಪಿಗಳು ಹಾಜರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿರುವ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಆರೋಪಿಗಳು ಶುಕ್ರವಾರ ಬೆಂಗಳೂರಿನ ಸಿಸಿಎಚ್-57ನೇ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾಗೌಡ ಸೇರಿ ಪ್ರಕರಣದ 17 ಮಂದಿ ಆರೋಪಿಗಳೂ ಕೋರ್ಟ್‌ಗೆ ಹಾಜರಾದ ಬಳಿಕ ಸಿಸಿಎಚ್-57ನೇ ನ್ಯಾಯಾಲಯದ ನ್ಯಾಯಾಧೀಶರು ಹಾಜರಿ ಪಡೆದುಕೊಂಡರು. ಪ್ರಕರಣದ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿ ಆದೇಶಿಸಿದರು. ಇದೀಗ ಫೆ.25ಕ್ಕೆ ನಟ ದರ್ಶನ್ ಸೇರಿ ಎಲ್ಲ ಆರೋಪಿಗಳು ಪುನಃ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ.
ಬೆಂಗಳೂರು ಬಿಟ್ಟು ತೆರಳಲು ಅನುಮತಿ: ಈ ನಡುವೆ ನಟ ದರ್ಶನ್ ಮೈಸೂರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿ ಪರಿಶೀಲಿಸಿದ ಕೋರ್ಟ್ 5 ದಿನಗಳ ಕಾಲ ದರ್ಶನ್‌ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿದೆ. ಅದರಂತೆ ಜ.12 ರಿಂದ 17ರವರೆಗೆ ದರ್ಶನ್ ಮೈಸೂರಿನಲ್ಲಿ ಇದ್ದು, ಬಳಿಕ ಮತ್ತೆ ಬೆಂಗಳೂರಿಗೆ ಆಗಮಿಸಬೇಕಿದೆ. ಇನ್ನು ಪ್ರಕರಣದ ಮೊದಲನೇ ಆರೋಪಿಯಾಗಿರುವ ಪವಿತ್ರಾಗೌಡ, ತಾವು ದೇವಾಲಯಕ್ಕೆ ತೆರಳಲು ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯಗಳಿಗೆ ತೆರಳಲು ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಸಿ ಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ನ್ಯಾಯಾಲಯವು ಅನುಮತಿಸಿದೆ.
ದರ್ಶನ್ ಕೋರ್ಟ್‌ಗೆ ಹಾಜರು ಏಕೆ?: ರೇಣುಕಸ್ವಾಮಿ ಹತ್ಯೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳೂ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡು ಜೈಲಿನಿಂದ ಬಿಡುಗಡೆ ಆಗಿದ್ದರು. ನ್ಯಾಯಾಲಯದ ಪ್ರತಿ ವಿಚಾರಣೆ ವೇಳೆ ಹಾಜರಾಗುವಂತೆ 17 ಆರೋಪಿಗಳಿಗೂ ಜಾಮೀನು ನೀಡುವ ವೇಳೆ ಹೈಕೋರ್ಟ್ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಗಾಗಿ ಆರೋಪಿಗಳು 57ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.