Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಪಾಡ್‌ಕಾಸ್ಟ್ ಸಂವಾದದಲ್ಲಿ ಹಲವು ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ, 3ನೇ ಬಾರಿಗೆ ಪ್ರಧಾನಿಯಾದ ಬಳಿಕ ನಾನು ಬದಲಾಗಿದ್ದೇನೆ
Team Udayavani, Jan 11, 2025, 6:21 PM IST
ಜೆರೋಧಾ ಸಂಸ್ಥಾಪಕ ಹಾಗೂ ಉದ್ಯಮಿ ನಿಖಿಲ್ ಕಾಮತ್ ಅವರು ನಡೆಸಿಕೊಡುವ “ಪೀಪಲ್’ ಪಾಡ್‌ಕಾಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ತಮ್ಮ ಬಾಲ್ಯ, ಶಿಕ್ಷಣ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಸಾಮಾಜಿಕ ಜಾಲತಾಣಗಳು, ವಿದೇಶಿ ನಾಯಕರ ಸಂಬಂಧ, ಯುದ್ಧ, ವಿಕಸಿತ ಭಾರತ, ಉದ್ಯಮ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. “ಪಾಡ್‌ಕಾಸ್ಟ್ ಲೋಕಕ್ಕೆ ಹೊಸಬ’ ಎನ್ನುತ್ತಲೇ ಪ್ರಧಾನಿ ಮೋದಿ ಅವರು ಸುಮಾರು 2 ಗಂಟೆಗಳ ಕಾಲ ಮನಬಿಚ್ಚಿ ಮಾತನಾಡಿದ್ದು, ಆ ಪೈಕಿ ಆಯ್ದು ಕೆಲವು ತುಣುಕುಗಳು ಇಲ್ಲಿವೆ…
ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ!
ಮಹಾತ್ಮಾ ಗಾಂಧೀಜಿ ಈ ದೇಶದ ನಾಯಕನಾಗಲು ಕಾರಣ ಅವರ ಬದುಕಿನ ಮಾರ್ಗ. ಅವರು ಒಳ್ಳೆಯ ಮಾತುಗಾರನಲ್ಲ, ಆದರೆ ಇಡೀ ದೇಶವನ್ನು ತಮ್ಮ ಸಂವಹನ ಶಕ್ತಿಯಿಂದ ಸಂಘಟನೆಗೊಳಿಸಿದರು. ಅವರು ಎಂದೂ ಟೋಪಿ ಧರಿಸುತ್ತಿರಲಿಲ್ಲ. ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತಗೊಂಡಿತು. ಅವರು ಎಂದೂ ಅಧಿಕಾರಕ್ಕೆ ಬರಲಿಲ್ಲ. ಆದರೆ ಅವರ ಸಮಾಧಿ “ರಾಜಘಾಟ್’ ಎಂದೇ ಕರೆಸಿಕೊಂಡಿತು. ಅವರಿಗಿಂತ ಉದ್ದದ ಕೋಲು ಹಿಡಿದುಕೊಂಡಿದ್ದರೂ ಅವರು ಅಹಿಂಸಾವಾದಿಯಾಗಿದ್ದರು.
ಚಂದ್ರಯಾನ 2 ಲಾಂಚ್‌ಗೆ ಹೋಗಬೇಡಿ…
2019ರಲ್ಲಿ ಕೈಗೊಂಡ ಚಂದ್ರಯಾನ-2 ಉಡಾವಣೆಗೆ ಹೋಗಬೇಡಿ ಅನೇಕರು ನನಗೆ ಸಲಹೆ ನೀಡಿದ್ದರು. ಈ ರೀತಿಯ ಉಡಾವಣೆಗಳು ಸಾಕಷ್ಟು ಅನಿಶ್ಚಿತತೆಯಿಂದ ಕೂಡಿರುತ್ತವೆ. ಏನಾದರೂ ತಪ್ಪಾದರೆ ಏನು ಗತಿ ಎಂದಿದ್ದರು. ಆದರೆ ನಾನು ಹೋಗಲು ನಿರ್ಧರಿಸಿದೆ. ಚಂದ್ರಯಾನ 2 ಮಿಷನ್ ಕೊನೆ ಹಂತದಲ್ಲಿ ವಿಫಲವಾಯಿತು. ಆದರೆ ನನಗೆ ಈ ಕುರಿತು ಯಾರೂ ಹೇಳಲು ಮುಂದಾಗಲಿಲ್ಲ. ಆದರೆ ಅಲ್ಲಿನ ಪರಿಸ್ಥಿತಿ ನೋಡಿದಾಗ ನನಗೆ ಮನವರಿಕೆಯಾಗಿತ್ತು. ಕೊನೆಗೆ ಹಿರಿಯ ವಿಜ್ಞಾನಿಯೊಬ್ಬರು ನನ್ನ ಬಳಿ ಬಂದರು. ನಾನು ಹೇಳಿದೆ, ವರಿ ಮಾಡ್ಕೊಬೇಡಿ ಎಂದೆ. ಬಳಿಕ ವಿಜ್ಞಾನಿಗಳ ಹತ್ತಿರ ಹೋಗಿ, ಒಂದೇ ವೇಳೆ ಏನೇ ವೈಫಲ್ಯವಾದರೂ ನಾನು ಹೊಣೆ ಹೊರುವೆ. ನಿರಾಶರಾಗಬೇಡಿ ಎಂದು ಹೇಳಿದೆ. ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ.
ಚೀನ ಅಧ್ಯಕ್ಷ ಗುಜರಾತ್‌ಗೆ ಬಂದಿದ್ದೇಕೆ?
ನಾನು 2014ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಶುಭಾಶಯ ತಿಳಿಸಲು ಕರೆ ಮಾಡಿದರು. ಆಗ ಅವರು ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದರು. ಅದಕ್ಕೆ ನಾನು, “ಬನ್ನಿ ನಿಮಗೆ ಸ್ವಾಗತ’ ಎಂದೆ. “ನಾನು ನಿಮ್ಮ ಗುಜರಾತ್ ಹಾಗೂ ವಡನಗರಕ್ಕೆ ಭೇಟಿ ನೀಡಬೇಕು. ಯಾಕೆ ಗೊತ್ತಾ? ನಾನು ಮತ್ತು ನೀವು ವಿಶೇಷ ಸಂಬಂಧ ಹಂಚಿಕೊಂಡಿದ್ದೇವೆ. ಭಾರತ ಪ್ರವಾಸದಲ್ಲಿದ್ದಾಗ ಚೀನದ ತಣ್ತೀಜ್ಞಾನಿ ಹ್ಯೂಯನ್ ತ್ಸಾಂಗ್ ನಿಮ್ಮ ಊರು ವಡನಗರದಲ್ಲಿ ಬಹಳಷ್ಟು ದಿನಗಳಲ್ಲಿ ವಾಸವಾಗಿದ್ದರು. ಅವರು ಚೀನಕ್ಕೆ ಮರಳಿದಾಗ ನನ್ನ ಊರಲ್ಲಿ ಹೆಚ್ಚು ದಿನಗಳ ಕಾಲ ವಾಸವಾಗಿದ್ದರು’ ಎಂದು ಹೇಳಿದರು. ಹಾಗಾಗಿ ಚೀನ ಅಧ್ಯಕ್ಷರು ಗುಜರಾತ್‌ಗೆ ಭೇಟಿ ನೀಡಿದರು.
ಮಧ್ಯಾಹ್ನ 12ರ ವರೆಗೂ ರಿಸಲ್ಟ್ ಗೊತ್ತಿರಲಿಲ್ಲ
ನಾನೂ ಆತಂಕದ ಪರಿಸ್ಥಿತಿ ಎದುರಿಸುತ್ತೇನೆ. “ಭಾವನೆಗಳಿಂದ ದೂರ ಇರುವ’ ಮೂಲಕ ನಾನು ಅದನ್ನು ಎದುರಿಸುತ್ತೇನೆ. ಉದಾಹರಣೆಗೆ 2002ರ ಗುಜರಾತ್ ಚುನಾವಣೆ ಫಲಿತಾಂಶದ ಬಗ್ಗೆ ನಾನು ಆತಂಕಿತನಾಗಿದ್ದೆ. ಹಾಗಾಗಿ ಮಧ್ಯಾಹ್ನ 12 ಗಂಟೆವರೆಗೂ ಟಿವಿಯನ್ನೂ ನೋಡದೆ, ಫಲಿತಾಂಶದಿಂದ ದೂರವೇ ಉಳಿದಿದ್ದೆ. ಫಲಿತಾಂಶದ ಮಾಹಿತಿ ನೀಡದಂತೆಯೂ ಸೂಚಿಸಿದ್ದೆ. ಆದರೆ ಕೊನೆಗೆ ತಿಳಿಯಿತು ನಾನು ಬಹುಮತದಿಂದ ಗೆದ್ದಿದೆ ಎಂದು!
ನಾನು ವಿಐಪಿ ಅಲ್ಲ, ನಡೀರಿ ಹೋಗೋಣ
ನನ್ನ ಜೀವನದಲ್ಲೇ ಮೊದಲ ಬಾರಿಗೆ ನಾನು 2002 ಫೆಬ್ರವರಿ 24ರಂದು ಶಾಸಕನಾದೆ. ಆಗ ನಾನು 3 ದಿನಗಳ ಶಾಸಕ. ಅಷ್ಟೋತ್ತಿಗೆ ಗೋಧ್ರಾ ಹತ್ಯಾಕಾಂಡದ ಸುದ್ದಿಗಳು ಬರಲಾರಂಭಿಸಿದವು. ನಾನು ಗೋಧ್ರಾಕ್ಕೆ ಹೋಗಲು ನಿರ್ಧರಿಸಿದೆ. ಬರೋಡಾದಿಂದ ಗೋಧ್ರಾಕ್ಕೆ ಹೋಗಲು ಹೆಲಿಕಾಪ್ಟರ್ ಇರಲಿಲ್ಲ. ಕೊನೆಗೆ ಒಎನ್‌ಜಿಸಿ ಒಂದು ಕಾಪ್ಟರ್ ಸಿಕ್ಕಿತು. ಅದು ಸಿಂಗಲ್ ಎಂಜಿನ್ ಕಾಪ್ಟರ್. ವಿಐಪಿಗಳ ಪ್ರಯಾಣಕ್ಕೆ ಸೂಕ್ತವಾದುದಲ್ಲ ಎಂದು ಹೇಳಲಾಯಿತು.
ಆಗ ನಾನು,”ವಿಐಪಿ ಅಲ್ಲ. ನಡೆಯಿರಿ’ ಎಂದೆ. ಬಳಿಕ ನಾವು ಗೋಧ್ರಾಕ್ಕೆ ಹೋದೆವು. ಅಲ್ಲಿ ಹೆಣಗಳ ರಾಶಿ. ನಾನು ಮನುಷ್ಯ ಅಲ್ಲವೇ, ಅಲ್ಲಿನ ಪರಿಸ್ಥಿತಿ ನೋಡಿ ವಿಚಲಿತನಾದೆ.
ಬಾಂಬ್ ಸ್ಫೋಟ ಸ್ಥಳಕ್ಕೆ ಹೋದೆ…
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಐದು ಕಡೆ ಏಕಾಏಕಿ ಬಾಂಬ್ ಸ್ಫೋಟಗಳು ನಡೆದವು. ಆಗ ನನ್ನ ಸ್ಥಿತಿ ಹೇಗಾಗಬೇಡ. ನನಗೆ ತತ್‌ಕ್ಷಣ ಪೊಲೀಸ್ ಕಂಟ್ರೋಲ್ ರೂಮ್, ಆಸ್ಪತ್ರೆಗೆ ಹೋಗಬೇಕು ಅನ್ನಿಸಿತು. ಭದ್ರತಾ ಸಿಬಂದಿ ಬೇಡ ಎಂದು ಹೇಳಿದರು. ಆದರೆ ನಾನು ಕೇಳಲಿಲ್ಲ. “ಏನು ಬೇಕಾದರೂ ಆಗಲಿ ನಾನು ಸ್ಥಳಕ್ಕೆ ಹೋಗಲೇಬೇಕು ಎಂದು ಹೇಳಿ ಕಾರಿನಲ್ಲಿ ಹೊರಟೆ. ಮೊದಲಿಗೆ ಆಸ್ಪತ್ರೆಗೆ ಹೋಗೋಣ ಎಂದರು. ಬೇಡ, ಆಸ್ಪತ್ರೆಗೆ ಬಾಂಬ್ ಹಾಕಿದರೆ ಎಂದು ಎಚ್ಚರಿಸಿದರು. ನಾನು ಮತ್ತೆ ಹೇಳಿದೆ- “ಏನಾದರೂ ಆಗಲಿ ಹೋಗೋಣ’ ಎಂದು ಮುನ್ನುಗ್ಗಿ ನಡೆದೆ.
ಮೆಲೊನಿ ಮೀಮ್ಸ್: ಅದೆಲ್ಲ ನಡೀತಾ ಇರ್ತದೆ
ಇಟಲಿ ಪ್ರಧಾನಿ ಮೆಲೊನಿ ಜತೆಗಿನ ಮೀಮ್ಸ್ ವೈರಲ್ ಆಗುವ ಕುರಿತು ಪ್ರತಿಕ್ರಿಯಿಸಿದ ಮೋದಿ. “ಅದೆಲ್ಲ ನಡೀತಾ ಇರ್ತದೆ. ನಾನು ಯಾವತ್ತೂ ಇಂಥ ಮೀಮ್ಸ್ ಕುರಿತು ತಲೆಕೆಡಿಸಿಕೊಂಡು ಸಮಯ ವ್ಯರ್ಥ ಮಾಡಿದವನೇ ಅಲ್ಲ.
ಮುಖ್ಯಮಂತ್ರಿ ಆಗಿದ್ದೇ ನನಗೆ ಆಶ್ಚರ್ಯ
ನನ್ನ ಹಿನ್ನೆಲೆ ಹೇಗಿತ್ತು ಎಂದರೆ, ನಾನು ಸಿಎಂ ಆಗುವುದು ಯೋಚಿಸಲು ಸಾಧ್ಯವಿರಲಿಲ್ಲ. ಆದರೂ ನಾನು ಮುಖ್ಯ ಮಂತ್ರಿಯಾದೆ. ಇದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಯಾಕೆಂದರೆ ಒಂದು ವೇಳೆ ನಾನು ಶಾಲಾ ಶಿಕ್ಷಕನಾಗಿದ್ದರೆ, ಅದೇ ಖುಷಿಗೆ ನನ್ನ ತಾಯಿ ಬೆಲ್ಲ ಹಂಚುತ್ತಿದ್ದರು. ಅಂಥ ಹಿನ್ನೆಲೆ ನಮ್ಮದು. ಆದರೂ ನಾನು ಮುಖ್ಯಮಂತ್ರಿಯಾದೆ, ಪ್ರಧಾನಿಯಾದೆ.
ಅಮೆರಿಕದಿಂದ ವೀಸಾ ನಿರಾಕರಣೆ ಅಗೌರವ
ಅಮೆರಿಕ ನನಗೆ ವೀಸಾ ನೀಡಲು ನಿರಾಕರಿಸಿದಾಗ ನಾನು ಶಾಸಕನಾಗಿದ್ದೆ. ವ್ಯಕ್ತಿಯಾಗಿ ಅಮೆರಿಕಕ್ಕೆ ಹೋಗುವುದು ದೊಡ್ಡ ವಿಷಯವಲ್ಲ. ಒಂದು ಚುನಾಯಿತ ಸರಕಾರ ಪ್ರತಿನಿಧಿಯಾಗಿರುವ ನನಗೆ ವೀಸಾ ನಿರಾಕರಣೆ ಅಗೌರವ ಎಂದು ಭಾವಿಸಿದೆ. ವೀಸಾ ನಿರಾಕರಣೆಯಾದ ದಿನವೇ ಪತ್ರಿಕಾಗೋಷ್ಠಿ ಮಾಡಿ ವಿಷಯ ತಿಳಿಸಿದೆ. ನಾನು ಅವತ್ತೇ ಹೇಳಿದೆ. ಇಡೀ ಜಗತ್ತು ವೀಸಾಕ್ಕಾಗಿ ಸಾಲಿನಲ್ಲಿ ನಿಲ್ಲುವ ಭಾರತವನ್ನು ಕಾಣ ಬಯಸುತ್ತೇನೆ. ಇದನ್ನು ನಾನು 2005ರಲ್ಲಿ ಹೇಳಿದ್ದೆ. ನಾವೀಗ 2025ರಲ್ಲಿದ್ದೇವೆ. ಆ ಸಮಯ ಈಗ ಭಾರತಕ್ಕೆ ಬಂದಿದೆ.
ನಾನೂ ಹಿಂದಿ ಭಾಷಿಕನಲ್ಲ!
ಪಾಡ್‌ಕಾಸ್ಟ್ ವೇಳೆ ನಿಖಿಲ್ ಕಾಮತ್ ಅವರು ತಮ್ಮ ಹಿಂದಿ ಭಾಷೆ ಅಷ್ಟೇನೂ ಚೆನ್ನಾಗಿಲ್ಲ ಎಂದು ಹೇಳುತ್ತಾರೆ. ನಾನು ಕರ್ನಾಟಕದವನು. ತಂದೆ ಮಂಗಳೂರಿನವರು, ತಾಯಿ ಮೈಸೂರಿನವರು. ನನ್ನ ಹಿಂದಿ ಚೆನ್ನಾಗಿಲ್ಲ ಎಂದು ಹೇಳಿದಾಗ, ಮೋದಿ ಕೂಡ, ನಾನು ಕೂಡ ಹಿಂದಿ ಭಾಷಿಕನಲ್ಲ ಎನ್ನುತ್ತಾರೆ. ಪರವಾಗಿಲ್ಲ. ನನಗೆ ಮೊದಲ ಪಾಡ್‌ಕಾಸ್ಟ್ ಇದು. ಜನ ಹೇಗೆ ಸ್ವೀಕರಿಸುತ್ತಾರೋ ತಿಳಿಯದು ಎನ್ನುತ್ತಾರೆ.
ಈಗ ನನ್ನ ಕನಸುಗಳು ಹೆಚ್ಚಾಗಿವೆ…
ಪ್ರಧಾನಿಯಾಗಿ ನನ್ನ ಮೊದಲ ಅವಧಿಯಲ್ಲಿ ಜನರು ನನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ನಾನು ದಿಲ್ಲಿ ರಾಜಕಾರಣವನ್ನು ಅರಿತುಕೊಳ್ಳಲು ಮುಂದಾದೆ. ಎರಡನೇ ಅವಧಿಯಲ್ಲಿ ನಾನು ಹಿಂದಿನ ದೃಷ್ಟಿಕೋನದಿಂದ ಯೋಚಿಸುತ್ತಿದ್ದೆ. ಮೂರನೇ ಅವಧಿಯಲ್ಲಿ, ನನ್ನ ಆಲೋಚನೆ ಬದಲಾಗಿದೆ. ನನ್ನ ಸ್ಥೆçರ್ಯ ಹೆಚ್ಚಾಗಿದೆ ಮತ್ತು ನನ್ನ ಕನಸುಗಳು ಬೆಳೆದಿವೆ.
ನಾನೂ ಮನುಷ್ಯ, ತಪ್ಪುಗಳಾಗುತ್ತವೆ
ನನ್ನ ಜೀವನದ ಮಂತ್ರ ಒಂದೇ. ಕೆಟ್ಟ ಉದ್ದೇಶದೊಂದಿಗೆ ಎಂದು ತಪ್ಪು ಕೆಲಸ ಮಾಡಬಾರದು. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಮಾಡಿದ ಭಾಷಣದಲ್ಲಿ ಹೇಳಿದೆ, ಕಠಿನ ಪರಿಶ್ರಮ ಪಡಲು ನಾನು ನಾಚಿಕೆಪಡಲ್ಲ. ನನಗಾಗಿ ಏನೂ ಮಾಡಿಕೊಳ್ಳಲಾರೆ. ನಾನೂ ಮನುಷ್ಯ. ನನ್ನಿಂದಲೂ ತಪ್ಪಾಗಬಹುದು. ಆದರೆ ದುರುದ್ದೇಶದಿಂದ ಎಂದೂ ತಪ್ಪು ಕೆಲಸ ಮಾಡಲಾರೆ. ನನ್ನನ್ನೂ ಸೇರಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ನಾನೂ ಕೂಡ ಮನುಷ್ಯ, ದೇವರಲ್ಲ.
ದೇಶ ಮೊದಲು: ಇದೇ ನನ್ನ ಸಿದ್ಧಾಂತ
ಸಿದ್ಧಾಂತಕ್ಕಿಂತ ಆದರ್ಶವಾದ ಮುಖ್ಯ. ರಾಜಕಾರಣದಲ್ಲಿ ಸಿದ್ಧಾಂತ, ಆದರ್ಶವಾದ ಇಲ್ಲದೇ ಏನೂ ಮಾಡಲಾಗುವುದಿಲ್ಲ. ಮಹಾತ್ಮಾ ಗಾಂಧಿ ಮತ್ತು ಸಾವರ್ಕರ್ ವಿಭಿನ್ನ ದಾರಿಗಳನ್ನು ಆಯ್ಕೆ ಮಾಡಿಕೊಂಡರೂ ಅವರ ಸಿದ್ಧಾಂತವು ಸ್ವಾತಂತ್ರ್ಯವನ್ನು ಪಡೆಯುವುದಾಗಿತ್ತು. ನನ್ನ ಸಿದ್ಧಾಂತ ದೇಶವೇ ಮೊದಲು. ಉತ್ತಮ ಜನರು ರಾಜಕಾರಣಕ್ಕೆ ಬರಬೇಕು. ರಾಜಕಾರಣಕ್ಕೆ ಬರುವುದು ಒಂದು ಸಂಗತಿಯಾದರೆ, ಯಶಸ್ವಿ ಆಗುವುದು ಮತ್ತೂಂದು ವಿಷಯ. ಧ್ಯೇಯದೊಂದಿಗೆ ರಾಜಕಾರ ಣಕ್ಕೆ ಬರಬೇಕೆ ಹೊರತು ಮಹತ್ವಾಕಾಂಕ್ಷೆಗಲ್ಲ.
I hope you all enjoy this as much as we enjoyed creating it for you! https://t.co/xth1Vixohn
— Narendra Modi (@narendramodi) January 9, 2025
ನಾನು ಸಾಮಾನ್ಯ ವಿದ್ಯಾರ್ಥಿ ಆಗಿದ್ದೆ
ಶಾಲಾ ದಿನಗಳಲ್ಲಿ ನಾನು ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಯಾವುದೇ ರೀತಿಯಲ್ಲಿ ನಾನು ಗಮನ ಸೆಳೆಯಬಲ್ಲವನಾಗಿರಲಿಲ್ಲ. ಆದರೆ, ಭೆಲ್ಜಿಭಾಯಿ ಚೌಧರಿ ಎಂಬ ಶಿಕ್ಷಕರು ನನಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಒಂದು ದಿನ ಅವರು ನನ್ನ ತಂದೆಗೆ, “ನಿಮ್ಮ ಹುಡುಗ ತುಂಬಾ ಪ್ರತಿಭಾವಂತ. ಆದರೆ ಗಮನ ಕೇಂದ್ರೀಕರಿಸಲ್ಲ’ ಎಂದು ಹೇಳಿದ್ದರು. ಒಂದು ವೇಳೆ ಪರೀಕ್ಷೆ, ಸ್ಪರ್ಧೆಗಳಿದ್ದರೆ ನಾನು ದೂರ ಓಡಿ ಹೋಗುತ್ತಿದ್ದೆ. ಹೇಗೋ ಪರೀಕ್ಷೆಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?
Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.