Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು
Team Udayavani, Jan 11, 2025, 7:55 PM IST
ಗಂಗೊಳ್ಳಿ: ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಬೋಟಿನಲ್ಲಿ ಜ. 2ರಂದು ಸಂಜೆ ಮೀನುಗಾರಿಕೆಯಲ್ಲಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕಡಲಿಗೆ ಬಿದ್ದು ನಾಪತ್ತೆಯಾದ ನಾರಾಯಣ ಮೊಗವೀರ (58) ಅವರ ಬಗ್ಗೆ 9 ದಿನ ಕಳೆದರೂ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ.
ಘಟನೆ ನಡೆದ ದಿನ ಇತರ ಮೀನುಗಾರರು ಬೋಟುಗಳಲ್ಲಿ ಹುಡುಕಾಡಿದ್ದರೂ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕಳೆದ 9 ದಿನಗಳಿಂದಲೂ ಅವರ ಪತ್ತೆಗಾಗಿ ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಪೊಲೀಸರು, ಬೋಟ್‌ಗಳು, ಮನೆಯವರು, ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ತಂಡ ನಿರಂತರ ಹುಡುಕಾಟ ನಡೆಸುತ್ತಿದ್ದರೂ, ಈವರೆಗೆ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಪತ್ತೆಗೆ ಹೆಲಿಕಾಪ್ಟರ್ ಬಳಕೆಗೆ ಒತ್ತಾಯ:
ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಸಹ ಆಗಮಿಸಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿತು. ಮೀನುಗಾರರೊಬ್ಬರು ನಾಪತ್ತೆಯಾಗಿ 9 ದಿನ ಕಳೆದಿದ್ದು, ಇನ್ನೂ ಜಿಲ್ಲಾಡಳಿತ, ಸರಕಾರ ಎಚ್ಚೆತ್ತುಕೊಂಡಿಲ್ಲ. ಆಳ ಸಮುದ್ರದಲ್ಲಿ ನಾಪತ್ತೆಯಾಗಿದ್ದರಿಂದ ಗಂಗೊಳ್ಳಿಯಿಂದ ಗೋವಾ ಗಡಿಯವರೆಗೆ ಹೆಲಿಕಾಪ್ಟರ್ ಬಳಸಿ, ಹುಡುಕಾಟ ನಡೆಸಬೇಕಾಗಿ ಈಶ್ವರ್ ಮಲ್ಪೆ ಒತ್ತಾಯಿಸಿದ್ದಾರೆ.
ಮನೆಗೆ ಶಾಸಕರ ಭೇಟಿ:
ನಾರಾಯಣ ಮೊಗವೀರ ಅವರ ಮನೆಗೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ, ಕುಟಂಬಸ್ಥರಿಗೆ ಧೈರ್ಯ ತುಂಬಿದರಲ್ಲದೇ ನಾಪತ್ತೆಯಾದ ಮೀನುಗಾರನ ನ್ನು ಶೀಘ್ರವಾಗಿ ಪತ್ತೆಹಚ್ಚಲು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಸಹ ಭೇಟಿ ನೀಡಿ ಮನೆಯವರೊಂದಿಗೆ ಮಾತುಕತೆ ನಡೆಸಿದರು.
ಜಿಲ್ಲಾಡಳಿತ ಪತ್ತೆಗೆ ಸಹಕರಿಸಲಿ:
ಕಳೆದ 9 ದಿನಗಳಿಂದಲೂ ಕರಾವಳಿ ಕಾವಲು ಪಡೆ, ಮೀನುಗಾರರು ಹಾಗೂ ಮನೆಯವರು ಹುಡುಕಾಟ ನಡೆಸುತ್ತಿದ್ದು, ಬೋಟಿಗೆ ಡೀಸೆಲ್ ಬಳಸಿ ಹುಡುಕಾಟ ನಡೆಸಿ, ನಡೆಸಿ ವೆಚ್ಚ ಭರಿಸಲು ಬಡ ಕುಟುಂಬಕ್ಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕುಟುಂಬದ ನೆರವಿಗೆ ಬಂದು ಪತ್ತೆ ಕಾರ್ಯಕ್ಕೆ ಸಹಕರಿಸಲಿ ಎಂದು ಮೀನುಗಾರರು ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.