Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
Team Udayavani, Jan 12, 2025, 4:15 PM IST
ಜ್ಞಾನಕ್ಕಿಂತ ಕಲ್ಪನಾ ಶಕ್ತಿ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಜ್ಞಾನಕ್ಕೆ ಮಿತಿ ಎಂಬುದಿದೆ ಆದರೆ ಕಲ್ಪನೆಗೆ ಯಾವುದೇ ಮಿತಿಗಳಿಲ್ಲ. ಮನುಷ್ಯನು ಜಗತ್ತಿನಲ್ಲಿ ಇಂದು ಅಸಾಧ್ಯವಾದ ಸಂಗತಿಗಳನ್ನು ಸಾಧ್ಯವಾಗಿಸಿದ್ದಾನೆಂದರೆ ಅದಕ್ಕೆ ಕಾರಣ ಅವನಲ್ಲಿರುವ ಅಪಾರ ಕಲ್ಪನಾ ಶಕ್ತಿ. ನಾವು ಯಾವಾಗಲೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ನೈಸರ್ಗಿಕ ಘಟನೆಗಳ ಬಗ್ಗೆ ಕುತೂಹಲವನ್ನು ಹೊಂದಿರುತ್ತೇವೆ. ಕುತೂಹಲ ನಮ್ಮನ್ನು ಆ ಘಟನೆಗಳ ಕುರಿತು ಕಲ್ಪನೆಯನ್ನುಂಟು ಮಾಡಲು ಹಚ್ಚುತ್ತದೆ.
ಈ ಕಲ್ಪನೆಗಳನ್ನು ಕಾರ್ಯಗತಗೊಳಿಸಲು ನಮಗೆ ಸಹಾಯಕವಾಗುವುದೇ ಪ್ರಯತ್ನ ಮತ್ತು ಪ್ರಮಾದಗಳು. ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಾ ಪ್ರಮಾದಗಳಿಗೆ ಪರಿಹಾರಗಳನ್ನು ಹುಡುಕುತ್ತಾ ಮುಂದೆ ಸಾಗುವುದರಿಂದ ಕಲ್ಪನೆಗಳಿಂದ ಒಂದು ತೀರ್ಮಾನಕ್ಕೆ ಬರುತ್ತೇವೆ ಅದುವೇ ವೈಜ್ಞಾನಿಕ ಅನ್ವೇಷಣೆಯಾಗಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಯತ್ನ-ಪ್ರಮಾದಗಳನ್ನು ಮಾಡದೇ ಏನಾದರೊಂದು ಸಮಸ್ಯೆಯನ್ನು ಅವರ ಮುಂದಿಟ್ಟಾಗ ತತ್‌ಕ್ಷಣ ಅವರು ಗೂಗಲ್ ಮೊರೆ ಹೋಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ತಂತ್ರಜ್ಞಾನದ ಮೇಲಿನ ತೀವ್ರವಾದ ಅವಲಂಬನೆಯಿಂದ ಸ್ವಂತವಾಗಿ ಕಲಿಯಲು ಅಗತ್ಯವಿರುವ ಕೌಶಲ ಮತ್ತು ಜ್ಞಾನವನ್ನು ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯ ಯಾವಾಗಲೂ ತನ್ನ ಸ್ವಂತ ಅನುಭವ ಹಾಗೂ ಪ್ರಮಾದಗಳಿಂದ ಕಲಿಯುತ್ತಾ ಸಾಗುತ್ತಾನೆ. ಸೃಜನಾತ್ಮಕ ಪ್ರಕ್ರಿಯೆಯಲ್ಲಿ ನಿಜವಾದ ನವೀನ ಕಲ್ಪನೆಗಳನ್ನು ಉತ್ಪಾದಿಸಲು ಪ್ರಯತ್ನ ಮತ್ತು ಪ್ರಮಾದವು ಸಾಮಾನ್ಯವಾಗಿ ಅತ್ಯಗತ್ಯವಾಗಿರುತ್ತದೆ.
ಯಾವುದೇ ಒಂದು ಪ್ರಯೋಗದಲ್ಲಿನ ಪ್ರಮಾದವು ಅವನನ್ನು ಇನ್ನೂ ಹೆಚ್ಚಿನ ವಿಶ್ಲೇಷಣೆಗೆ ಹಚ್ಚುತ್ತದೆ. ಪ್ರಯತ್ನ ಮತ್ತು ಪ್ರಮಾದವು ವೈಜ್ಞಾನಿಕ ವಿಧಾನದ ಮೂಲಭೂತ ಅಂಶವಾಗಿದೆ ಮತ್ತು ಇದನ್ನು ವಿವಿಧ ವೈಜ್ಞಾನಿಕ ಪ್ರಯೋಗಗಳು ಮತ್ತು ತನಿಖೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಸಮಸ್ಯೆ ಅಥವಾ ಪ್ರಶ್ನೆಗೆ ಉತ್ತಮ ಅಥವಾ ಹೆಚ್ಚು ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳಲು ವಿವಿಧ ವಿಧಾನಗಳು ಅಥವಾ ವಿಧಾನಗಳನ್ನು ಪದೇ ಪದೆ ಪ್ರಯತ್ನಿಸುವುದನ್ನು ಇದು ಒಳಗೊಂಡಿರುತ್ತದೆ.
ಥಾರ್ನ್ ಡೈಕ್ ಪ್ರಯೋಗಕ್ಕೆ ಹೆಸರಾದ ಥಾರ್ನ್ಡೈಕ್ ಎಂಬ ಮನೋವಿಜ್ಞಾನಿ ಹಸಿದ ಬೆಕ್ಕೊಂದನ್ನು ಪಂಜರದಲ್ಲಿಟ್ಟನು. ಬಾಗಿಲಿನ ಕೀಲಿ ತಿರುಗಿಸುವು ದರಿಂದ ಆ ಪಂಜರದ ಬಾಗಿಲು ತೆರೆಯುತ್ತಿತ್ತು. ಪಂಜರದ ಹೊರಗೆ ಬಾಗಿಲ ಹತ್ತಿರ ಆಹಾರವನ್ನು ಇಡಲಾಗಿತ್ತು. ಬೆಕ್ಕು ಬಾಗಿಲು ತೆರೆದು ಆಹಾರ ಪಡೆಯಲು ಬಹಳ ಪ್ರಯತ್ನಿಸಿತು. ಹೀಗೆ ಪ್ರಯತ್ನ ನಡೆಯುತ್ತಿರುವಾಗ ಆಕಸ್ಮಾತ್ತಾಗಿ ಅದರ ಕಾಲು ಬಾಗಿಲ ಹತ್ತಿರವಿದ್ದ ಕೀಲಿಗೆ ತಗುಲಿ ಬಾಗಿಲು ತೆರೆಯಿತು. ಕೂಡಲೇ ಬೆಕ್ಕು ಹೊರ ಬಂದು ಆಹಾರವನ್ನು ಪಡೆಯಿತು. ಈ ಪ್ರಯೋಗವನ್ನು ಅದೇ ಬೆಕ್ಕಿನ ಮೇಲೆ ಪುನಃ ಪುನಃ ಮಾಡಿದಾಗ ಮುಂದಿನ ಪ್ರಯೋಗಗಳಲ್ಲಿ ಆ ಬೆಕ್ಕು ಬಾಗಿಲನ್ನು ತೆಗೆಯಲು ಕಡಿಮೆ ತಪ್ಪುಗಳನ್ನು ಮಾಡಿತು ಮತ್ತು ಕೊನೆಯದಾಗಿ ಬೆಕ್ಕು ತಪ್ಪಿಲ್ಲದೇ ಕೀಲಿಯನ್ನು ತೆರೆಯುವುದನ್ನು ಕಲಿಯಿತು.
ಮರಳಿ ಯತ್ನವ ಮಾಡು ಎಂಬ ಉಕ್ತಿಯಂತೆ ಈ ರೀತಿಯ ಕಲಿಕೆಯಿಂದ ಅನೇಕ ಮಹತ್ಕಾರ್ಯಗಳು ಸಾಧಿಸಲ್ಪಟ್ಟಿವೆ. ಅನೇಕ ವೈಜ್ಞಾನಿಕ ಸಂಶೋಧನೆಗಳು ಕೂಡ ಮಾಡಲ್ಪಟ್ಟಿವೆ. ಇದರಲ್ಲಿ ಒಬ್ಬ ನಿರ್ದಿಷ್ಟ ಗುರಿಯನ್ನು ಸಾಧಿಸಲು ವಿಭಿನ್ನ ಕ್ರಮಗಳು ಅಥವಾ ತಂತ್ರಗಳನ್ನು ಪ್ರಯತ್ನಿಸುವ ಮೂಲಕ ಕಲಿಯುತ್ತಾನೆ. ಇದು ವಿಭಿನ್ನ ಆಯ್ಕೆಗಳನ್ನು ಪ್ರಯತ್ನಿಸುವುದನ್ನು ಒಳಗೊಂಡಿರುತ್ತದೆ ಮತ್ತು ಅಂತಿಮವಾಗಿ ಸರಿಯಾದ ಉತ್ತರ ಅಥವಾ ಪರಿಹಾರವನ್ನು ಕಂಡುಹಿಡಿಯಲು ತಪ್ಪುಗಳನ್ನು ಮಾಡುತ್ತದೆ. ಒಂದು ಕ್ರಿಯೆ ಅಥವಾ ತಂತ್ರವು ಯಶಸ್ವಿಯಾಗದಿದ್ದರೆ, ಅದನ್ನು ಕೈಬಿಡಲಾಗುತ್ತದೆ ಮತ್ತು ಹೊಸದನ್ನು ಪ್ರಯತ್ನಿಸಲಾಗುತ್ತದೆ. ಈ ಪುನರಾವರ್ತನೆಯ ವಿಧಾನವು ಕ್ರಮೇಣ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ.
ಪ್ರಯತ್ನ ಮತ್ತು ಪ್ರಮಾದದಿಂದ ಕಲಿಯುವ ತತ್ವದ ಹಿಂದೆ ಸರಳವಾದ ಮೂಲಭೂತ ಕಲ್ಪನೆ ಇದೆ. ಮಾನವರು ಮತ್ತು ಪ್ರಾಣಿಗಳು ಅನುಭವದಿಂದ ಕಲಿಯುತ್ತಾರೆ. ಕೇವಲ ನಡೆಯಲು ಕಲಿಯುತ್ತಿರುವ ಮಕ್ಕಳಿಂದ ಈ ತತ್ವವನ್ನು ಚೆನ್ನಾಗಿ ವಿವರಿಸಬಹುದು. ನಡೆಯಲು ಕಲಿಯಲು ಪ್ರಯತ್ನಿಸುವ ಮಕ್ಕಳು ಎಂದಿಗೂ ಪ್ರಯತ್ನಿಸಲು ಆಯಾಸಗೊಳ್ಳುವುದಿಲ್ಲ, ಕೆಳಗೆ ಬೀಳುತ್ತಾರೆ, ಮತ್ತೆ ಎದ್ದು ಮತ್ತೆ ನಡೆಯುವುದನ್ನು ಮುಂದುವರೆಸುತ್ತಾರೆ. ಪ್ರತಿ ಹೊಸ ಪ್ರಯತ್ನದೊಂದಿಗೆ (ಪ್ರಯೋಗ), ನಾವು ಏನು ಕೆಲಸ ಮಾಡಬಹು ದೆಂದು ಪ್ರಯತ್ನಿಸುತ್ತೇವೆ. ಅದು ಕೆಲಸ ಮಾಡದಿದ್ದರೆ, ಅದನ್ನು ಪ್ರಮಾದವಾಗಿ ಸಂಗ್ರಹಿಸಲಾಗುತ್ತದೆ ಮತ್ತು ತಿರಸ್ಕರಿಸಲಾಗುತ್ತದೆ. ಈ ವಿಧಾನವು ನಿಧಾನವಾಗಿ ಏರುತ್ತಾ ಸಾಗುವ ಕಲಿಕೆಯ ರೇಖೆಯಂ ತಿದ್ದು ಅದು ಅಂತಿಮವಾದ ನಿರೀಕ್ಷಿತ ಗುರಿಗೆ ಕಾರಣವಾಗುತ್ತದೆ. ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಹೊಸ ಕೌಶಲ ಗಳನ್ನು ಕಲಿಯಲು ಇದು ಪರಿಣಾಮಕಾರಿ ವಿಧಾನವಾಗಿದೆ.
ಒಟ್ಟಾರೆಯಾಗಿ ನಿರಂತರವಾದ ಪ್ರಯತ್ನಗಳು, ಪ್ರಮಾದಗಳನ್ನು ಕಡಿಮೆಗೊಳಿಸುವ ಮೂಲಕ ಕಲಿಕೆಯನ್ನು ಗಟ್ಟಿಗೊಳಿಸುತ್ತವೆ ಹೀಗಾಗಿ ಕಲಿಕೆಯಲ್ಲಿ ಪ್ರಯತ್ನ ಮತ್ತು ಪ್ರಮಾದಕ್ಕೆ ಅವಕಾಶವಿರಲಿ.
-ರಾಜು ಭೂಶೆಟ್ಟಿ
ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.