UV Fusion: ನವ ವರುಷ ನವೋಲ್ಲಾಸ; ನಿರ್ಧಾರಗಳಿಗೆ ಬದ್ಧರಾಗಿರಿ
Team Udayavani, Jan 12, 2025, 4:47 PM IST
21ನೇ ಶತಮಾನದ ಬೆಳ್ಳಿ ವರ್ಷಕ್ಕೆ ಕಾಲಿಡುತ್ತಿರುವ ಜಗತ್ತು ಸಂಭ್ರಮದಿಂದ ಹೊಸ ವರ್ಷವನ್ನು ಆಚರಿಸಲು ಸಿದ್ಧವಾಗಿದೆ. ಪ್ರತಿಯೊಬ್ಬರಿಗೂ ಹೊಸ ವರ್ಷವೆಂದರೆ ಹೊಸ ನಿರೀಕ್ಷೆ, ಭರವಸೆ ಹಾಗೂ ಆಲೋಚನೆಗೆ ಮುನ್ನುಡಿ ಬರೆಯಲು ಒಂದೊಳ್ಳೆ ಸುಸಂದರ್ಭವೆಂದು ಭಾವಿಸುತ್ತಾರೆ.
ಅಂದಿನಿಂದಲೇ ಕೈಗೊಂಡ ಕೆಲವು ನಿರ್ಧಾರಗಳಿಗೆ ಬದ್ಧರಾಗಿ ಪಾಲಿಸಲು ಪ್ರಾರಂಭಿಸುತ್ತಾರೆ. ಬದುಕಿನಲ್ಲಿ ಬರುವ ಪ್ರತಿ ಸಂದರ್ಭಗಳು ಚೆನ್ನಾಗಿರಲಿ ಹಾಗೂ ಸಂದಿಗ್ಧತೆ ಸಂದರ್ಭಗಳನ್ನು ಎದುರಿಸಲು ಮಾನಸಿಕ, ದೈಹಿಕವಾಗಿ ಧೈರ್ಯ ಹೆಚ್ಚಲಿ ಎಂದು ಅಪೇಕ್ಷಿಸುತ್ತಾರೆ. ನವ ವರ್ಷ ಪ್ರತಿಯೊಬ್ಬರಲ್ಲೂ ನವೋಲ್ಲಾಸ ತಂದು ಒಳಿತನ್ನೇ ಮಾಡಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತೇವೆ. ಇದರೊಂದಿಗೆ ಪ್ರಮುಖವಾಗಿ ನಾವು ಅವಲೋಕಿಸುವ ವಿಷಯವೆಂದರೆ ಮುನ್ನೋಟಕ್ಕಿಂತ ಹಿನ್ನೋಟ ಎಂಬುದು ಬಹು ಮುಖ್ಯವಾಗುತ್ತದೆ.
ಹಿನ್ನೋಟದ ವಿಷಯಕ್ಕೆ ಬಂದರೆ ಹೊಸ ವರ್ಷಕ್ಕೆ ಕಾಲಿಡುತ್ತಿರುವ ನಾವೆಲ್ಲರೂ ಈ ಹಿಂದಿನ ವರ್ಷದಲ್ಲಿ ಯಾವೆಲ್ಲ ಬಯಕೆಗಳನ್ನು ಈಡೇರಿಸಿಕೊಂಡಿದ್ದೇವೆ. ಯಾವೆಲ್ಲ ನಿರ್ಧಾರಗಳಿಗೆ ಬದ್ಧರಾಗಿ ನಡೆದುಕೊಂಡಿದ್ದೇವೆ ಮತ್ತು ಯಾವೆಲ್ಲ ಒಳಿತಿನ ಕೈಂಕರ್ಯಗಳನ್ನು ಮಾಡಿದ್ದೇವೆ ಎಂಬುದು ನವ ವರ್ಷದ ಪ್ರಾರಂಭದ ದಿನದಲ್ಲಿ ಯೋಚಿಸುವ ಮುಖ್ಯ ವಿಷಯವೇ ಸರಿ. ಸಹಜವಾಗಿ ಪ್ರತಿಯೊಬ್ಬರೂ ಹೊಸ ವರ್ಷದ ಪ್ರಾರಂಭದಿಂದ ಒಂದಿಷ್ಟು ನಿರ್ಧಾರ, ನಿರೀಕ್ಷೆ ಹಾಗೂ ಭರವಸೆಗಳನ್ನು ಇಟ್ಟುಕೊಂಡು ಅವುಗಳ ಸಾಕಾರಕ್ಕೆ ಅನುಗುಣವಾಗಿ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ. ಆದರೆ ಕೆಲವೊಂದು ಪರಿಸ್ಥಿತಿ, ಸಂದರ್ಭ ಬದುಕಿಗೆ ಭರವಸೆ ನೀಡಿದರೆ, ಇನ್ನೂ ಕೆಲವು ಪರಿಸ್ಥಿತಿಗಳು ಅವರವರ ನಿರೀಕ್ಷೆ, ಆಸೆಗಳು ಅವರನ್ನ ನಿರಾಶರನ್ನಾಗಿ ಮಾಡುತ್ತವೆ. ಜೀವನದ ಪ್ರತಿ ಮನುಷ್ಯನಿಗೂ ಒಳ್ಳೆಯ ಹಾಗೂ ಕೆಟ್ಟ ಸಂದರ್ಭಗಳು ಬಂದು ಹೋಗುತ್ತಿರುತ್ತವೆ, ಆದರೆ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂಬ ಭರವಸೆ ಇಟ್ಟುಕೊಂಡು ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಾ ಹೋದರೆ ಖಂಡಿತ ಒಳ್ಳೆಯ ಫಲ ದೊರಕುತ್ತದೆ. ಈ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರ, ಆಲೋಚನೆಗಳಿಗೆ ಬದ್ಧರಾಗಿ ಮಾನಸಿಕವಾಗಿ ಅದಕ್ಕೆ ತಯಾರಿ ನಡೆಸಬೇಕು. ಹಾಗಾದರೆ ಮಾತ್ರ ಬದುಕಿನ ಭರವಸೆಯ ದೀವಿಗೆ ಬೆಳಗಲು ಸಾಧ್ಯ.
2024ಕ್ಕೆ ಟಾಟಾ ಹೇಳಿ 2025ಕ್ಕೆ ಸ್ವಾಗತಿಸೋಣ. ಮನಸ್ಸಿನಲ್ಲೊಂದು ಸಂತೋಷ, ಭರವಸೆ, ನಿರೀಕ್ಷೆ, ಜವಾಬ್ದಾರಿಗಳು ಹೆಗಲೇರಿ ಕುಳಿತುಬಿಡುತ್ತವೆ. ವರ್ಷದಿಂದ ವರ್ಷಕ್ಕೆ ವಯಸ್ಸು ಹೆಚ್ಚಾದಂತೆ ಪ್ರತಿಯೊಬ್ಬರ ಕನಸುಗಳು, ಜವಾಬ್ದಾರಿಗಳು ಹೆಚ್ಚಾಗ ತೊಡಗುತ್ತವೆ. ಈ ನಿಟ್ಟಿನಲ್ಲಿ ಹೊಸ ಶಕ್ತಿ ಹೊಸ ಹುರುಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಬೇಕು. ಕಟ್ಟಿಕೊಂಡ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಅದಕ್ಕೆ ಅನುಗುಣವಾಗಿ ಕೆಲಸಗಳನ್ನು ಮಾಡಬೇಕು. ಹೊಸ ವರ್ಷವನ್ನು ಹೊಸ ದೃಷ್ಟಿಕೋನದೊಂದಿಗೆ ಕಾಣುತ್ತಾ ಸಂಭ್ರಮ, ಸಡಗರದಿಂದ ಆಚರಿಸುವ ಮೂಲಕ ಒಳಿತು ಕೆಡುಕುಗಳನ್ನು ಸಮನಾಗಿ ಸ್ವೀಕರಿಸಿ ಕಂಡ ಕನಸುಗಳಿಗೆ ನಿರೀಕ್ಷೆಗಳಿಗೆ ಈಡೇರಿಸಿಕೊಳ್ಳಲು ಪಣತೊಡಬೇಕು.
ವಿಜಯಕುಮಾರ ಎಚ್., ಗದಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.