Sarigama Viji: ಚಂದನವನದ ಹಿರಿಯ ನಟ ಸರಿಗಮ ವಿಜಿ ವಿಧಿವಶ
Team Udayavani, Jan 15, 2025, 11:31 AM IST
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ರಂಗನಿರ್ದೇಶಕ ಸರಿಗಮ ವಿಜಿ (Sarigama Viji) ಬುಧವಾರ (ಜ.15ರಂದು) ನಿಧನ ಹೊಂದಿದ್ದಾರೆ.
ಇತ್ತೀಚೆಗೆ ಸರಿಗಮ ವಿಜಿ (76) ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುರುವಾರ (ಜ.16ರಂದು) ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.
ಚಿತ್ರರಂಗದ ಸಾಧನೆ:
1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳುವಳದ ಮಡಿಲಲ್ಲಿʼ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿ ಸಿನಿಮಾ ಲೋಕಕ್ಕೆ ಕಾಲಿಟ್ಟ ಅವರು ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ.
ನಟನೆ ಮಾತ್ರವಲ್ಲದೆ ಸುಮಾರು 80 ಚಿತ್ರಗಳಿಗೆ ವಿಜಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಿರುತೆರೆಯಲ್ಲಿ 2,400 ಧಾರಾವಾಹಿಗಳ ನಿರ್ದೇಶನದ ಜೊತೆಗೆ ನಟನೆ ಮಾಡಿರುವುದು ಅವರ ನಟನಾ ಪ್ರತಿಭೆಯ ಸಾಧನೆ.
ಟೈಗರ್ ಪ್ರಭಾಕರ್ ಜತೆಗಿನ ಸಿನಿಮಾಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಚಿತ್ರರಂಗಕ್ಕೆ ಬಂದ ಬಳಿಕ ವಿಜಯ್ ಸರಿಗಮ ವಿಜಿಯಂದೇ ಜನಪ್ರಿಯರಾಗಿದ್ದಾರೆ ಅದಕ್ಕೆ ಕಾರಣವಾಗಿದ್ದು, ವಿಜಿ ಅವರ ನಿರ್ದೇಶನದ “ಸಂಸಾರದಲ್ಲಿ ಸರಿಗಮ ಎಂಬ ನಾಟಕ ನಿರ್ದೇಶಿಸಿದ್ದು, ಅದು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ 1,300ಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. ನಂತರ ಇವರು ಸರಿಗಮ ವಿಜಿ ಎಂದೇ ಜನಪ್ರಿಯರಾಗಿದ್ದರು. ಹಾಸ್ಯ ಪಾತ್ರಗಳಿಂದ ಅವರು ಪ್ರೇಕ್ಷಕರ ಮನಗೆದ್ದಿದ್ದರು.
ಕೊನೆಯದಾಗಿ ಅವರು ʼಡಕೋಟಾ ಪಿಕ್ಚರ್ʼ ಚಿತ್ರದಲ್ಲಿ ನಟಿಸಿದ್ದರು.
ರಂಗಕರ್ಮಿಯಾಗಿಯೂ ಜನಪ್ರಿಯ: ವಿಜಿ ಸಿನಿಮಾದಲ್ಲಿ ಮಾತ್ರವಲ್ಲದೆ ರಂಗಭೂಮಿಯಲ್ಲೂ ಹೆಚ್ಚು ಪರಿಚಿತರಾದವರು.
ಅವರ ʼಸಂಸಾರದಲ್ಲಿ ಸರಿಗಮʼ ಎನ್ನುವ ರಂಗಭೂಮಿ ನಾಟಕ 1390ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡು ಜನಪ್ರಿಯತೆ ಪಡೆದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.