Editorial: ಕುಡಿಯುವ ನೀರಿನ ಪರಿಶುದ್ಧತೆಯ ಪ್ರಶ್ನೆ ಬಾರದಿರಲಿ
Team Udayavani, Jan 13, 2025, 1:10 PM IST
ಶುದ್ಧ ಕುಡಿಯುವ ನೀರು ಕೂಡ ನಾಗರಿಕರ ಹಕ್ಕು. ಆದರೆ ಇಂತಹ ಜೀವಜಲದ ಶುದ್ಧತೆಯ ಬಗ್ಗೆಯೇ ಅನುಮಾನ ಬಂದರೆ ಅದು ಗಂಭೀರ ವಿಚಾರ. ಬೆಳೆಯುತ್ತಿರುವ ಮಂಗಳೂರು ಮಹಾನಗರ ಸಹಿತ ಪಾಲಿಕೆ ವ್ಯಾಪ್ತಿಯ ಕೆಲವೆಡೆ ಕಲುಷಿತಗೊಂಡ ನೀರು ಪೂರೈಕೆಯಾಗುತ್ತಿದೆ ಎಂಬ ಗಂಭೀರ ಆಪಾದನೆ ಇತ್ತೀಚೆಗೆ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೇಳಿಬಂತು.
ಒಳಚರಂಡಿಗಳಲ್ಲಿ ಶೇಖರಣೆಯಾಗುವ ಕೊಳಚೆ ನೀರನ್ನು ಶುದ್ಧೀಕರಿಸುವ ಶುದ್ಧೀಕರಣ ಘಟಕಗಳಲ್ಲಿ (ಎಸ್‌ಟಿಪಿ ಪ್ಲ್ರಾಂಟ್) ಶುದ್ಧೀಕರಣ ಪ್ರಕ್ರಿಯೆ ಸಮರ್ಪಕವಾಗಿ ನಡೆಯದೆ ಕೊಳಚೆ ನೀರು ನದಿ, ಕೆರೆಗಳನ್ನು ಸೇರುತ್ತಿದೆ. ಮಾತ್ರವಲ್ಲ, ನಗರಕ್ಕೆ ನೀರು ಪೂರೈಕೆಯಾಗುವ ನೇತ್ರಾವತಿ ನದಿಯ ನೀರು ಕೂಡ ಕಲುಷಿತಗೊಂಡಿದ್ದು ಅದನ್ನು ತುಂಬೆಯಲ್ಲಿ ಸಮರ್ಪಕವಾಗಿ ಸಂಸ್ಕರಿಸದೆಯೇ ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ಪಾಲಿಕೆ ವ್ಯಾಪ್ತಿಯ ಶೇ.40ರಿಂದ 50ರಷ್ಟು ಮಂದಿ ಕಲುಷಿತ ನೀರು ಕುಡಿಯುವಂತಾಗಿದೆ ಎಂಬುದು ವಿಪಕ್ಷಗಳ ಆರೋಪದ ತಿರುಳು. ಅಲ್ಲದೆ ಕೈಗಾರಿಕೆಗಳ ಬಳಕೆಗೆ ಪೂರೈಸುವ ಸಂಸ್ಕರಿಸದ ನೀರನ್ನು ಕೆಲವು ವಾರ್ಡ್‌ಗಳಲ್ಲಿ ಜನರ ಬಳಕೆಗೂ ಪೂರೈಸಲಾಗುತ್ತಿದೆ ಎಂಬುದು ಇನ್ನೊಂದು ದೂರು. ಈ ಹಿನ್ನೆಲೆಯಲ್ಲಿ ಮೇಯರ್ ಖುದ್ದಾಗಿ ಶುದ್ಧೀಕರಣ ಘಟಕಗಳನ್ನು ಪರಿಶೀಲನೆ ಕೂಡ ನಡೆಸಿದ್ದಾರೆ. ಎಸ್‌ಟಿಪಿಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೂ ಯಾವುದೇ ಸಂಪರ್ಕವಿಲ್ಲ. ಒಳಚರಂಡಿ ವ್ಯವಸ್ಥೆಯ ವೆಟ್‌ವೆಲ್‌ಗಳು, ಎಸ್‌ಟಿಪಿಗಳೆಲ್ಲ ಇರುವುದು ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ. ಹೀಗಾಗಿ ಒಳಚರಂಡಿ ನೀರು ಯಾವ ಕಾರಣಕ್ಕೂ ತುಂಬೆ ಅಣೆಕಟ್ಟು ಸೇರುವ ಪ್ರಶ್ನೆಯೇ ಬರುವುದಿಲ್ಲ ಎಂದು ಮೇಯರ್ ಮತ್ತು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಆರೋಪ-ಸ್ಪಷ್ಟೀಕರಣಗಳ ನಡುವೆಯೂ ನೀರಿನ ಶುದ್ಧತೆಯ ಬಗ್ಗೆ ಒಂದಷ್ಟು ಗೊಂದಲ ಮುಂದುವರಿದಿದೆ. ಯಾಕೆಂದರೆ ಒಳಚರಂಡಿ ಅವ್ಯವಸ್ಥೆ, ಕೆಲವು ಎಸ್‌ಟಿಪಿಗಳಲ್ಲಿನ ಸಮಸ್ಯೆಯಿಂದಾಗಿ ಇದ್ದ ಬಾವಿ, ಕೆರೆ, ನದಿ, ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುತ್ತಿರುವುದು, ಇಂತಹ ನೀರಿನ ಮೂಲಗಳನ್ನು ಬಳಕೆ ಮಾಡಲು ಜನತೆ ಹಿಂಜರಿಯುತ್ತಿರುವುದು ಸ್ಪಷ್ಟ. ಅನೇಕ ಕಟ್ಟಡಗಳ ತ್ಯಾಜ್ಯ ನೇರವಾಗಿ ಮಳೆನೀರು ಹರಿಯುವ ಚರಂಡಿಗಳಿಗೂ ಸೇರುತ್ತಿದೆ. ಒಳಚರಂಡಿ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ. ವ್ಯಯವಾಗುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ದೂರದೃಷ್ಟಿ ಯೋಜನೆಯ ಕೊರತೆ ಕಂಡುಬರುತ್ತಿದೆ. ಕಲುಷಿತ ನೀರನ್ನು ಶುದ್ಧೀಕರಿಸುವ ಘಟಕಗಳ ನಿರ್ವಹಣೆ ಕೂಡ ಆದ್ಯತೆಯ ನೆಲೆಯಲ್ಲಿ ನಡೆಯಬೇಕಿದೆ. ಇಲ್ಲವಾದರೆ ಕೊಳಚೆ ನೀರು ಕುಡಿಯುವ ನೀರಿನ ಮೂಲಗಳನ್ನು ಸೇರುವುದನ್ನು ತಪ್ಪಿಸಲಾಗದು. ಅಂತೆಯೇ ನದಿಗಳಿಂದ ಪೂರೈಕೆ ಮಾಡುವ ನೀರು ಶುದ್ಧೀಕರಣದ ಪ್ರತೀ ಹಂತವನ್ನು ಸಮರ್ಪಕವಾಗಿ ಹಾದು ಬಂದಿದೆಯೇ ಎಂಬುದನ್ನು ನಿರಂತರವಾಗಿ ಖಾತರಿಪಡಿಸಿಕೊಳ್ಳುವುದು ಕೂಡ ಅಗತ್ಯ. ಕುಡಿಯುವ ನೀರಿನ ಶುದ್ಧತೆ/ಕಲುಷಿತ ವಿಚಾರ ರಾಜಕೀಯ ವಸ್ತುವಾಗಿ ಜನರಲ್ಲಿ ಆತಂಕ ಹುಟ್ಟಿಸಬಾರದು. ಅಂತೆಯೇ ಕುಡಿಯುವ ನೀರಿನ ಪ್ರತಿಹನಿಯೂ ಗರಿಷ್ಠ ಪರಿಶುದ್ಧತೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು ಆಡಳಿತ ವರ್ಗದ ಆದ್ಯ ಜವಾಬ್ದಾರಿ ಎಂಬುದನ್ನು ಕೂಡ ಮರೆಯಬಾರದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.