ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
ಭವಿಷ್ಯದಲ್ಲಿ ಎಂತಹ ಬದಲಾವಣೆಗಳು ಉಂಟಾಗಬಹುದು?
Team Udayavani, Jan 13, 2025, 1:53 PM IST
ಭಾರತ ಈಗ ಒಂದು ಪ್ರಬಲ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದ್ದು, ಇದು ಕೇವಲ ವೈಜ್ಞಾನಿಕ ಅನ್ವೇಷಣೆಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಅದರೊಡನೆ, ಭಾರತದ ಬಾಹ್ಯಕಾಶ ಉತ್ಕರ್ಷ ದೇಶದ ಭದ್ರತೆಯೊಡನೆಯೂ ಸಂಬಂಧ ಹೊಂದಿದೆ. ಭೂಮಿಯ ಮೇಲೆ ಭಾರತೀಯ ಸೇನೆಯ ಶೌರ್ಯ ಪರಾಕ್ರಮಗಳು ಪ್ರಶ್ನಾತೀತವಾಗಿ ಸಾಬೀತಾಗಿವೆ. ಆದರೆ, ಈಗ ಭಾರತೀಯ ಸೇನೆ ಬಾಹ್ಯಾಕಾಶ ಆಧಾರಿತ ವ್ಯವಸ್ಥೆಗಳ ಮೇಲೆ ಹೆಚ್ಚು ಅವಲಂಬನೆ ಹೊಂದುತ್ತಿದ್ದು, ಇವುಗಳು ಮೌನವಾಗಿಯೇ ಭಾರತೀಯ ಸೇನೆಯ ಕಾರ್ಯಾಚರಣಾ ಸಾಮರ್ಥ್ಯದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸುತ್ತಿವೆ. ಹಿಮಾಲಯದ ಮಂಜುಗಡ್ಡೆಯ ಪರ್ವತ ಶ್ರೇಣಿಗಳಿಂದ, ಗಡಿಯಾದ್ಯಂತ ಇರುವ ದಟ್ಟ ಕಾಡುಗಳ ತನಕ, ಭಾರತೀಯ ಸೇನೆ ‘ಆಕಾಶದಲ್ಲಿರುವ ಕಣ್ಣುಗಳ’ ಮೂಲಕ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ, ಕಾರ್ಯತಂತ್ರದ ಮೇಲುಗೈ ಸಾಧಿಸಿ, ದೇಶವನ್ನು ಹೆಚ್ಚು ಸುರಕ್ಷಿತ ಮತ್ತು ಭದ್ರವಾಗಿಸಿದೆ.
ಒಂದು ಮೌನ ಕ್ರಾಂತಿ: ಭೂ ಸಾಮರ್ಥ್ಯವನ್ನು ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
ಆಧುನಿಕ ಯುದ್ಧರಂಗ ಇಂದು ಬರಿಗಣ್ಣಿಗೆ ಕಾಣುವ ವ್ಯಾಪ್ತಿಯನ್ನು ಮೀರಿ ಬಹುದೂರ ಸಾಗಿದೆ. ಭೂಮಿಯಿಂದ ಮೇಲೆ, ಎತ್ತರದಲ್ಲಿ ಸಂಚರಿಸುತ್ತಿರುವ ಉಪಗ್ರಹಗಳು ನೈಜ ಸಮಯದಲ್ಲಿ ಗುಪ್ತಚರ ಮಾಹಿತಿ ಒದಗಿಸುತ್ತಾ, ಸಂವಹನವನ್ನು ವೃದ್ಧಿಸುತ್ತಾ, ಮತ್ತು ನಿಖರ ದಾಳಿಗಳಿಗೆ ಬೆಂಬಲ ನೀಡುತ್ತಾ ಭಾರತೀಯ ಸೇನೆಗೆ ಹೆಚ್ಚಿನ ಸಾಮರ್ಥ್ಯ ಒದಗಿಸಿವೆ. ಇವುಗಳಿಂದ ಭಾರತೀಯ ಸೇನೆಗೆ ಹಲವಾರು ಅನುಕೂಲತೆಗಳು ಒದಗಿವೆ:
ಕಣ್ಣು ಮಿಟುಕಿಸದ ಕಣ್ಗಾವಲು: ದುರ್ಗಮವಾದ ಗಡಿ ಪ್ರದೇಶಗಳನ್ನು ನಿರ್ವಹಿಸುವದು, ಸೇನಾ ಪಡೆಗಳ ಸಂಚಾರವನ್ನು ಗಮನಿಸುವುದು ಮತ್ತು ಒಬ್ಬೊಬ್ಬ ಗುರಿಯನ್ನೂ ಅತ್ಯಂತ ನಿಖರವಾಗಿ ಗುರುತಿಸುವ ಸವಾಲುಗಳನ್ನು ಒಮ್ಮೆ ಊಹಿಸಿಕೊಳ್ಳಿ. ಅತ್ಯಂತ ಗುಣಮಟ್ಟದ ಕ್ಯಾಮರಾಗಳು ಮತ್ತು ಸೆನ್ಸರ್‌ಗಳನ್ನು ಅಳವಿಡಿಸಿರುವ ಉಪಗ್ರಹಗಳು ಇಂತಹ ಮಹತ್ತರ ಸಾಮರ್ಥ್ಯವನ್ನು ಸೇನೆಗೆ ಒದಗಿಸಿ, ಭಾರತೀಯ ಸೇನೆ ಸದಾ ಜಾಗೃತವಾಗಿದ್ದು, ಸಂಭಾವ್ಯ ಅಪಾಯಗಳಿಗೆ ತಕ್ಷಣವೇ ಪ್ರತಿಕ್ರಿಯಿಸುವಂತೆ ಮಾಡುತ್ತವೆ.
ಮಿತಿಯಿಲ್ಲದ ಸಂವಹನ: ಭಾರತೀಯ ಸೇನೆ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುವ ದುರ್ಗಮ ಪ್ರದೇಶಗಳಲ್ಲಿ ನಂಬಿಕಾರ್ಹ ಸಂವಹನವನ್ನು ಹೊಂದುವುದು ಸೋಲು ಮತ್ತು ಗೆಲುವಿನ ನಡುವಿನ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಉಪಗ್ರಹ ಆಧಾರಿತ ಸಂವಹನ ಜಾಲಗಳು ತಡೆರಹಿತ ಸಂವಹನ ವ್ಯವಸ್ಥೆಯನ್ನು ಕಲ್ಪಿಸಿ, ಸೇನಾ ಪಡೆಗಳ ಸಂಚಾರದ ನಡುವೆ ನಿರಂತರ ಸಂಪರ್ಕ, ಸಹಯೋಗ ಹೊಂದಲು ನೆರವಾಗುತ್ತವೆ. ಅದರೊಡನೆ, ಅತ್ಯಂತ ದುರ್ಗಮ ಮತ್ತು ವ್ಯತಿರಿಕ್ತ ಪ್ರದೇಶಗಳು ಮತ್ತು ಸನ್ನಿವೇಶಗಳಲ್ಲಿ ನೈಜ ಸಮಯದಲ್ಲಿ ಗುಪ್ತಚರ ಮಾಹಿತಿ ಹಂಚಿಕೆ, ಪರಿಣಾಮಕಾರಿ ಕಮಾಂಡ್ ಮತ್ತು ಕಂಟ್ರೋಲ್ ಹೊಂದಲು ನೆರವಾಗುತ್ತವೆ.
ನಿಖರ ದಾಳಿ: ಆಧುನಿಕ ಯುದ್ಧಗಳಲ್ಲಿ ಕೇವಲ ಗುರಿಗೆ ಮಾತ್ರ ಗಂಭೀರ ಹಾನಿಯಾಗಿ, ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಜಿಮೊನೆಯಷ್ಟು ನಿಖರವಾದ ದಾಳಿ ನಡೆಸುವುದು ಅನಿವಾರ್ಯವಾಗಿದೆ. ಉಪಗ್ರಹ ನಿರ್ದೇಶಿತ ಆಯುಧಗಳು ಮತ್ತು ಕ್ಷಿಪಣಿಗಳು ಭಾರತೀಯ ಸೇನೆಗೆ ಇಂತಹ ಗುರಿಗಳ ಮೇಲೆ ನಿಖರವಾಗಿ ದಾಳಿ ನಡೆಸಿ, ಶತ್ರುಗಳನ್ನು ಸಂಹರಿಸಿ, ಅಲ್ಲಿರುವ ನಾಗರಿಕರು ಮತ್ತು ಮಿತ್ರ ಪಡೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ.
ಹೆಚ್ಚಿನ ಪರಿಸ್ಥಿತಿಯ ಅರಿವು: ಸೂಕ್ತವಾದ ನಿರ್ಧಾರಗಳನ್ನು ಕೈಗೊಳ್ಳಲು ಯುದ್ಧರಂಗದ ಸಂಪೂರ್ಣ ಅರಿವು ಬಹಳ ಮುಖ್ಯವಾಗಿದೆ. ಉಪಗ್ರಹಗಳು ಪಕ್ಷಿನೋಟವನ್ನು ಒದಗಿಸುವುದರಿಂದ, ಭಾರತೀಯ ಸೇನೆಗೆ ವಿವಿಧ ಪ್ರದೇಶಗಳಲ್ಲಿ ಶತ್ರುಗಳ ಚಲನೆಯನ್ನು ಗಮನಿಸಲು, ಭೂ ಪ್ರದೇಶಗಳನ್ನು ಅಂದಾಜಿಸಲು, ಮತ್ತು ಸಂಭಾವ್ಯ ಅಪಾಯಗಳನ್ನು ಎದುರು ನೋಡಲು ಸಾಧ್ಯವಾಗುತ್ತದೆ. ಇದರಿಂದ ಸೇನೆಯ ಅಧಿಕಾರಿಗಳಿಗೆ ಕಾರ್ಯತಂತ್ರದ ಯೋಜನೆಗಳಲ್ಲಿ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮೇಲುಗೈ ಲಭಿಸುತ್ತದೆ.
ವಾಸ್ತವ ಜಗತ್ತಿನ ಮೇಲೆ ಪರಿಣಾಮ: ಬಾಹ್ಯಾಕಾಶ ಸಾಮರ್ಥ್ಯದ ಕಾರ್ಯಗಳು
ಭಾರತೀಯ ಸೇನೆ ಬಾಹ್ಯಾಕಾಶ ವ್ಯವಸ್ಥೆಗಳನ್ನು ಬಳಸಿಕೊಳ್ಳುವುದರಿಂದ ಈಗಾಗಲೇ ಬಹಳಷ್ಟು ಪ್ರಯೋಜನಗಳು ಮತ್ತು ಧನಾತ್ಮಕ ಫಲಿತಾಂಶಗಳನ್ನು ಪಡೆದುಕೊಂಡಿದೆ.
ಸರ್ಜಿಕಲ್ ದಾಳಿ: 2016ರಲ್ಲಿ, ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಭಾರತೀಯ ಸೇನೆ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಆದ್ಯಂತ ಸರ್ಜಿಕಲ್ ದಾಳಿಯನ್ನು ನಡೆಸಿತ್ತು. ಗುರಿಗಳನ್ನು ಗುರುತಿಸಲು, ಕಾರ್ಯಾಚರಣೆಯನ್ನು ರೂಪಿಸಲು ಮತ್ತು ನಿಖರವಾಗಿ ದಾಳಿ ನಡೆಸಲು ಉಪಗ್ರಹ ಚಿತ್ರಗಳು ಸಾಕಷ್ಟು ನೆರವಾಗಿದ್ದವು.
ಒಳನುಸುಳುವಿಕೆ ತಡೆ ಕಾರ್ಯಾಚರಣೆಗಳು: ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತದಂತಹ ಅಕ್ರಮ ಒಳನುಸುಳುವಿಕೆಯಿಂದ ಬಾಧಿತವಾಗಿರುವ ಪ್ರದೇಶಗಳಲ್ಲಿ, ಉಪಗ್ರಹ ಕಣ್ಗಾವಲು ಮಹತ್ತರ ಗುಪ್ತಚರ ಮಾಹಿತಿಗಳನ್ನು ಒದಗಿಸಿ, ಭಾರತೀಯ ಸೇನೆಗೆ ಶತ್ರುಗಳ ಚಲನವಲನಗಳನ್ನು ಗಮನಿಸಲು, ಅವರ ಅಡಗುತಾಣಗಳನ್ನು ಗುರುತಿಸಲು ಮತ್ತು ಒಳನುಸುಳುವಿಕೆ ನಿರೋಧಕ ಕಾರ್ಯಾಚರಣೆಗಳನ್ನು ನಡೆಸಲು ನೆರವಾಗುತ್ತವೆ.
ವಿಕೋಪ ಪರಿಹಾರ: ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ, ಅವುಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ಉಪಗ್ರಹ ಚಿತ್ರಗಳು ಭಾರತೀಯ ಸೇನೆಗೆ ಬಾಧಿತ ಪ್ರದೇಶಗಳಲ್ಲಿ ಯಾವ ಮಟ್ಟಿಗೆ ಸಮಸ್ಯೆ ಉಂಟಾಗಿದೆ ಎಂದು ತಿಳಿದು, ಪತ್ತೆ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲು, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ನೆರವಾಗುತ್ತವೆ.
ಗಡಿ ನಿರ್ವಹಣೆ: ಭಾರತದ ವಿಶಾಲ ಮತ್ತು ವಿಭಿನ್ನವಾದ ಗಡಿಗಳನ್ನು ರಕ್ಷಿಸುವುದು ಅತ್ಯಂತ ಪ್ರಯಾಸದ ಕಾರ್ಯ. ಉಪಗ್ರಹ ಕಣ್ಗಾವಲು ಗಡಿ ಪ್ರದೇಶಗಳ ಮೇಲೆ ನಿರಂತರವಾಗಿ ಕಣ್ಣಿಡಲು ನೆರವಾಗಿ, ಭಾರತೀಯ ಸೇನೆಗೆ ಆಕ್ರಮಣಗಳನ್ನು, ಅಕ್ರಮ ಚಟುವಟಿಕೆಗಳನ್ನು ಗುರುತಿಸಲು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ನೆರವಾಗುತ್ತದೆ.
ಬಾಹ್ಯಾಕಾಶ ಆಧಾರಿತ ಯುದ್ಧದ ಭವಿಷ್ಯ
ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವಂತೆ, ಬಾಹ್ಯಾಕಾಶ ಆಧಾರಿತ ತಂತ್ರಜ್ಞಾನಗಳ ಮೇಲೆ ಭಾರತೀಯ ಸೇನೆಯ ಅವಲಂಬನೆಯೂ ಹೆಚ್ಚಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಎಂತಹ ಬದಲಾವಣೆಗಳು ಉಂಟಾಗಬಹುದು?
ಸಣ್ಣ ಗಾತ್ರದ ಉಪಗ್ರಹಗಳು: ಸಣ್ಣದಾದ, ಆದರೆ ಕ್ಷಿಪ್ರವಾಗಿ ಚಲಿಸುವ ಉಪಗ್ರಹಗಳು ಹೆಚ್ಚಿನ ವ್ಯಾಪ್ತಿ ಮತ್ತು ಹೊಂದಾಣಿಕೆಗಳನ್ನು ಹೊಂದಿರುತ್ತವೆ. ಇದರಿಂದ, ಕಣ್ಗಾವಲು ಮತ್ತು ಸಂವಹನ ಸಾಮರ್ಥ್ಯವೂ ವೃದ್ಧಿಸುತ್ತದೆ.
ಎಐ ಚಾಲಿತ ವಿಶ್ಲೇಷಣೆ: ಬಾಹ್ಯಾಕಾಶ ಮಾಹಿತಿಗಳನ್ನು ವಿಶ್ಲೇಷಿಸುವಲ್ಲಿ, ನೈಜ ಸಮಯದ ಮಾಹಿತಿಗಳನ್ನು ಒದಗಿಸುವಲ್ಲಿ, ಕ್ಷಿಪ್ರವಾಗಿ ನಿರ್ಧಾರ ಕೈಗೊಳ್ಳುವಂತೆ ಮಾಡುವಲ್ಲಿ ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ – ಎಐ) ಪಾತ್ರ ಇನ್ನಷ್ಟು ಹೆಚ್ಚಾಗಲಿದೆ.
ಉಪಗ್ರಹ ನಿರೋಧಕ ಸಾಮರ್ಥ್ಯಗಳು: ಭಾರತದ ಬಾಹ್ಯಾಕಾಶ ವ್ಯವಸ್ಥೆಗಳನ್ನು ಸಂಭಾವ್ಯ ಅಪಾಯಗಳಿಂದ ರಕ್ಷಿಸುವುದು ದಿನೇ ದಿನೇ ಹೆಚ್ಚು ಮುಖ್ಯವಾಗುತ್ತಿದೆ. ಇದರ ಪರಿಣಾಮವಾಗಿ, ಉಪಗ್ರಹ ನಿರೋಧಕ ತಂತ್ರಜ್ಞಾನಗಳು ಮತ್ತು ರಕ್ಷಣಾ ಕ್ರಮಗಳ ಅಭಿವೃದ್ಧಿ ಹೆಚ್ಚಾಗುತ್ತಿದೆ.
ಅಂತಾರಾಷ್ಟ್ರೀಯ ಸಹಭಾಗಿತ್ವ: ಭಾರತ ತನ್ನ ಮಿತ್ರ ರಾಷ್ಟ್ರಗಳೊಡನೆ ಬಾಹ್ಯಾಕಾಶ ಸಹಕಾರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಅವುಗಳೊಡನೆ ಮಾಹಿತಿಗಳ ವಿನಿಮಯ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಭಾಗಿತ್ವ, ಮತ್ತು ಪರಸ್ಪರ ಭದ್ರತೆಗಾಗಿ ತಂತ್ರಜ್ಞಾನಗಳ ಅಳವಡಿಕೆ ನಡೆಸಲು ಭಾರತ ಮುಂದಾಗಬಹುದು.
ಭವಿಷ್ಯದ ಶಕ್ತಿಯಾಗಿ ಭಾರತೀಯ ಸೇನೆ
ಭಾರತೀಯ ಸೇನೆ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಒಪ್ಪಿಕೊಂಡಿರುವುದು ಅದರ ಹೊಂದಿಕೊಳ್ಳುವ ಗುಣ ಮತ್ತು ಆಧುನಿಕ ಯುದ್ಧ ಸಾಮರ್ಥ್ಯದಲ್ಲಿ ಮುಂಚೂಣಿಯಲ್ಲಿರಬೇಕೆಂಬ ಭಾರತೀಯ ಸೇನೆಯ ಬದ್ಧತೆಗೆ ಸಾಕ್ಷಿಯಾಗಿದೆ. ಬಾಹ್ಯಾಕಾಶದಲ್ಲಿ ಕಣ್ಣನ್ನು ಇಟ್ಟು, ಭೂಮಿಯಲ್ಲಿ ಕಾಲನ್ನು ಇಡುವ ಮೂಲಕ ಭಾರತೀಯ ಸೇನೆ ಭಾರತದ ಭವಿಷ್ಯವನ್ನು ಸುರಕ್ಷಿತವಾಗಿಸುತ್ತಿದೆ. ಅದರೊಡನೆ, 21ನೇ ಶತಮಾನ ಮತ್ತು ಅದರಾಚೆಗಿನ ಸವಾಲುಗಳನ್ನು ಎದುರಿಸಲೂ ಭಾರತೀಯ ಸೇನೆ ಸನ್ನದ್ಧವಾಗಿದೆ.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್ ಕಸರತ್ತು…ISRO ಸಾಹಸ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
Cool Moon: ಇದು ಚಂದ್ರನ ಕೂಲ್ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ
ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.