ಮನಮುಟ್ಟಿದ ನೃತ್ಯ; ಇಂದಿನ ಜಗತ್ತಿನಲ್ಲಿ ಅರ್ಧನಾರೀಶ್ವರನ ಪ್ರಸ್ತುತಿ
"ನಾಟ್ಸ್' ನರ್ತನ ಶಾಲೆಯಲ್ಲಿ ಮನಮುಟ್ಟಿದ ನೃತ್ಯ
Team Udayavani, Jan 14, 2025, 2:11 PM IST
ಇತಿಹಾಸವೇ ಇರಲಿ ರೋಚಕ ಕಟ್ಟು ಕಥೆಯೇ ಇರಲಿ, ಶಕ್ತಿಯ ಸ್ವರೂಪವಾದ ಕಾಳಿಯಿಂದ ವರ ಪಡೆದನೆಂದು ಹೇಳಲ್ಪಡುವ ಮಹಾ ಕವಿ ಕಾಳಿದಾಸನ ಮಹಾಕಾವ್ಯ ರಘುವಂಶದ ನಾಂದಿ ಶ್ಲೋಕದಲ್ಲಿ “ವಾಗರ್ಥಮಿವ ಸಂಪ್ರಕೌ¤’ ಎಂದು ಆರಂಭವಾಗಿ “ಜಗತಃ ಪಿತರೌ ವಂದೇ ಪಾರ್ವತಿ ಪರಮೇಶ್ವರೌ’, ಜಗತ್ತಿನ ತಂದೆ ತಾಯಿಗಳಾದ ಪಾರ್ವತಿ ಪರಮೇಶ್ವರರನ್ನು ವಂದಿಸುವೆ ಅಂತ ಆರಂಭವಾಗುತ್ತದೆ. ಶಿವ ಪುರಾಣ ಕಾಲದಿಂದ ಶಿವ – ಶಕ್ತಿಯರು ಭಾರತದಿಂದ ಹಿಡಿದು ದೂರ ಪ್ರಾಚ್ಯದವರೆಗೆ ಪೂಜಿಸಿಕೊಳ್ಳುತ್ತಾರೆ ಮತ್ತು ಲಲಿತ ಕಲಾವಿದರಿಗೆ ಸ್ಫೂರ್ತಿದಾಯಕವಾಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಯುಕೆಯ ಮಧ್ಯದ ನಾಟಿಂಗಮ್ ನಗರದಲ್ಲಿ ಸ್ಥಾಪನೆಗೊಂಡಿರುವ ಲಾಸ್ಯ ಸ್ಕೂಲ್ ಆಫ್ ಡಾನ್ಸಿಂಗ್ ಇತ್ತೀಚಿಗೆ ಹತ್ತನೆಯ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಅದರ ಅಬಾಲ ಪ್ರೌಢ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ತಮ್ಮ ಗುರು ಡಾ| ಸುಮನಾ ನಾರಾಯಣ್ ಅವರ ನೇತೃತ್ವದಲ್ಲಿ ತಮಗಾಗಿ ಕಲಿಸಿದ ಸೋಲೋ ಮತ್ತು ಸಾಮೂಹಿಕ ನೃತ್ಯಗಳಿಂದ ಹೆಚ್ಚು ಪಾಲು ಪಾಲಕ-ಪೋಷಕರಿಂದ ತುಂಬಿದ ಸಭೆಯ ಮನಸ್ಸನ್ನು ಸೂರೆಗೊಳಿಸಿದರು. ಬಹುಕಾಲದಿಂದ ಅವರಿಗೆ ಪ್ರತ್ಯೇಕವಾಗಿ ಆಯ್ದು ತರಬೇತಿ ಕೊಟ್ಟಿದ್ದರು.
ಪುಷ್ಪಾಂಜಲಿಯಿಂದ ಹಿಡಿದು ತಿಲ್ಲಾನಾ ಮತ್ತು ಮಂಗಳದವರೆಗಿನ 16 ಪ್ರಸ್ತುತಿಗಳ 90 ನಿಮಿಷದ ಕಾರ್ಯಕ್ರಮ. ಅಪರಾಹ್ನದ ಸಭೆಗೆ ಮುಖ್ಯ ಅತಿಥಿಯಾಗಿ ಸ್ಥಳೀಯ ಮೇಯರ್ ಸಹ ಬಂದು ಪ್ರೋತ್ಸಾಹಿಸಿ ಶ್ಲಾಘಿಸಿದರು. ಅದರಲ್ಲಿ ನನಗೆ ಮತ್ತು ನೆರೆದವರ ಮನದಲ್ಲಿ ಸ್ಥಿರವಾಗಿ ಉಳಿದದ್ದು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಎಂಟು ಚರಣಗಳನ್ನೊಳಗೊಂಡ ಒಂದು ಸ್ತೋತ್ರಕ್ಕೆ ಭರತನಾಟ್ಯವನ್ನು ಅಳವಡಿಸಿ ತಾವೇ ನರ್ತಿಸಿದ ರೀತಿ. ಸುಮನಾ ನಾರಾಯಣ್ ಅವರ ಅಂದಿನ ಆ ಏಕವ್ಯಕ್ತಿ ನೃತ್ಯದ ಹೊಸ ಪ್ರಯೋಗ ಯಶಸ್ವಿಯಾಗಿತ್ತು.
ಅರ್ಧನಾರೀಶ್ವರ ಪರಿಕಲ್ಪನೆ ಮತ್ತು ಇಂದಿನ ಕಾಲದಲ್ಲಿ “ಲಿಂಗ’ದ ವ್ಯಾಖ್ಯೆ:
ಶಿವನ ಶರೀರದ ಎಡ ಅರ್ಧ ಭಾಗ ಪೂರ್ತಿ ಆವರಿಸಿಕೊಂಡಿದ್ದಾಳೆ ಪರ್ವತಕುಮಾರಿ, ಆತನ ಹೃದಯೇಶ್ವರಿಯಾದ ಶಕ್ತಿ. ಎಡ ಭಾಗ ಮುಖ್ಯ ಏಕೆಂದರೆ ಅಲ್ಲೇ ಇದೆ ಹೃದಯ. ಆದರೂ ಆತನ “ಆ ಪತ್ಯ’ದೊಳಗೂ ಇಲ್ಲ; ಆತನಿಗಿಂತ ಒಂದು ಕೈ ಮೇಲೂ ಅಲ್ಲ.
ಈಗಿನ ಕಾಲದಲ್ಲಿ, ಅದು ನಾವು ವಾಸಿಸುತ್ತಿರುವ ಪಾಶ್ಚಾತ್ಯ ದೇಶಗಳಲ್ಲಿ ಗಂಡು ಹೆಣ್ಣುಗಳ ಸಂಬಂಧ, ಹೆಣ್ಣುಮಕ್ಕಳ ಹಕ್ಕುಗಳು, ರಜೆ, ವೇತನ, ಸಮಾನತ್ವ ಎಲ್ಲದರ ಬಗ್ಗೆ ಪ್ರತೀ ದಿನ ರೇಡಿಯೋ, ಟಿವಿ ಮೀಡಿಯಾಗಳಲ್ಲಿ ಚರ್ಚೆಯಾಗುತ್ತದೆ. ಇತ್ತೀಚಿಗೆ ಅನೇಕ ರಾಷ್ಟ್ರಗಳಲ್ಲಿ, ಸಂಘ-ಸಂಸ್ಥೆ, ಸರಕಾರಗಳು “ಇನ್ನೊಂದು’ ವರ್ಗದವರನ್ನು ಹೇಗೆ ಸಂಬೋಧಿಸಬೇಕು, ಯಾವ ಪದಗಳನ್ನು ಉಪಯೋಗಿಸಬೇಕು ಅನ್ನುವ ವಿಷಯದಲ್ಲಿ ಆದೇಶ ಕೊಡುತ್ತಿವೆ. ನಿಯಮಗಳನ್ನು ರೂಪಿಸಿವೆ. ಆ “ಇನ್ನೊಂದು ವರ್ಗವೆಂದರೆ’ ಟಾನ್ಸ್ ಇಂಟರ್‌ಸೆಕ್ಸ್, ಕ್ವಿಯರ್, LGBTQ+, ನಾನ್ ಬೈನರಿ, ಹೀಗೆ ಗಂಡಸು ಅಲ್ಲ ಹೆಂಗಸು ಸಹ ಅಲ್ಲ ಅಂತ ತಮ್ಮದೇ ಅಸ್ಮಿತೆ ಹುಡುಕಿಕೊಂಡು ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಗುಂಪು. ಅವರ ದನಿ ಹೆಚ್ಚೆಚ್ಚು ಕೇಳಿ ಬರುತ್ತಿದೆ. ಜಗತ್ತಿನ ಲಿಂಗ ಸಮಾನತ್ವದಲ್ಲಿ (gender equality) ಯೂರೋಪಿನ ದೇಶಗಳಾದ ಐಸ್‌ಲ್ಯಾಂಡ್ ಮತ್ತು ನಾರ್ವೆ ಪ್ರಥಮ ಎರಡು ಸ್ಥಾನಗಳನ್ನು ಪಡೆದಿವೆ.
“ಈ ನಿಮ್ಮ ನೃತ್ಯದ ಪರಿಕಲ್ಪನೆಗೆ ಏನು ಸ್ಫೂರ್ತಿ?’ ಎಂದು ಕೇಳಿ ದಾಗ ಸ್ವತಃ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಕಳೆದೆರಡು ದಶಕಗಳಿಂದ ಯುಕೆಯಲ್ಲಿ ನ್ಯಾಶನಲ್ ಹೆಲ್ತ… ಸರ್ವಿಸ್‌ನಲ್ಲಿ ಕೆಲಸ ಮಾಡುತ್ತ ಬಂದಿರುವ ಸುಮನಾ ನಾರಾಯಣ್ ಅವರು ಇತ್ತೀಚಿಗೆ ಲಿಂಗ ಸಾಮ್ಯತೆ ಮತ್ತು ಮಾನವ ಹಕ್ಕುಗಳ ಚರ್ಚೆ ಹೇಗೆ ಅ ಧಿಕಾರಿಗಳ ಹೊಸ ನಿಯಮಗಳ ಪ್ರಕಾರ ಆಸ್ಪತ್ರೆಯ ಫಲಕಗಳಲ್ಲಿ ಆದ ಮಾರ್ಪಾಡಿನ ಬಗ್ಗೆ ಹೇಳಿದರು. “ಪ್ರಸೂತಿ ಮಹಿಳೆ ಮತ್ತು ಮಕ್ಕಳ ಕೋಣೆ’ಯಾಗಿದ್ದುದು ಈಗ “ಹೆರಿಗೆಯಾಗುತ್ತಿರುವ ವ್ಯಕ್ತಿ’ (Birthing persons) ಅಂತಲೂ ಆತ, ಆಕೆ ಅನ್ನುವ ಬದಲು ವ್ಯಕ್ತಿ (person) ಅನ್ನಬೇಕಂತೆ.
ಆಗ ನನಗೆ ಅನಿಸಿದ್ದು ಅನಾದಿ ಕಾಲದಿಂದಲೂ ನಾವು ಭಾರತದಲ್ಲಿ ಹೆಂಗಸು- ಗಂಡಸರನ್ನು ಸಮಾನವಾಗಿ ಗೌರವಿಸುತ್ತ ಬಂದಿದ್ದೇವೆ. ಪುರಾಣ, ವೇದಕಾಲದಿಂದಲೂ ಆ ಭಾವನೆ ನಮ್ಮ ಸಂಸ್ಕಾರದಲ್ಲಿ ತಳವೂರಿದೆ ಎನ್ನುವುದಕ್ಕೆ ಒಬ್ಬರು ಹೆಚ್ಚು ಕಡಿಮೆ ಅನ್ನದೆ ಶಕ್ತಿ- ಶಿವನಂತೆ, ಅರ್ಧನಾರೀಶ್ವರ ಪರಿಕಲ್ಪನೆಯಲ್ಲಿ ಒಬ್ಬರಿಗೊಬ್ಬರು ಸಮಾನರು, ಪೂರಕವಾಗಿ ನಿಂತಿರುವದನ್ನೇ ಪಾಲಿಸಿಕೊಂಡು ಬಂದಿದ್ದೇವೆಯಲ್ಲ, ಅಂತ ಬಹುಕಾಲ ಮಂಥನ ಮಾಡುತ್ತ ಇದನ್ನು ರೂಪಿಸಿದೆ ಎಂದರು.
ಆಂಗ್ಲ ವೇದಿಕೆಯ ಮೇಲೆ ಶಿವ ತಾಂಡವ ಶಕ್ತಿ!
ತಲೆಯಲ್ಲಿ ಬಂದ ಯೋಚನೆಯನ್ನು ನೃತ್ಯದಲ್ಲಿ ಅಳವಡಿಸುವುದು ಹೇಗೆ? ಯೂಟ್ಯೂಬ್ ತುಂಬ ಈ ನೃತ್ಯದ ಅನೇಕ ಪ್ರಸ್ತುತಿಗಳು ಹರಿದಾಡುತ್ತಿವೆ. ಒಬ್ಬರು ಅಥವಾ ಇಬ್ಬರು ಜತೆಗೆ ಕುಣಿಯುತ್ತ ಸರತಿಯ ಪ್ರಕಾರ ಶಕ್ತಿ ಮತ್ತು ಶಿವರಾಗಿ -ಆ ತರದಲ್ಲಿ, ಶಕ್ತಿ ಮೊದಲು- ತೋರಿಸಬಹುದು. ಅಥವಾ ಅದಕ್ಕೇನಂತೆ ಅರ್ಧರ್ಧ ಬೇರೆ ಧಿರಿಸನ್ನು ಧರಿಸಿ ನರ್ತಿಸಬಹುದು. ಆದರೆ ಒಬ್ಬರೇ ಇಲ್ಲಿ ಬರೀ ಹನ್ನೊಂದಕ್ಷರಗಳ ಪಾದದಲ್ಲಿ (ಪ್ರತೀ ಶ್ಲೋಕದಲ್ಲಿ ನಾಲ್ಕು ಪಾದಗಳು) ಶಿವ ಅಥವಾ ಶಿವೆಯ ಗುಣಲಕ್ಷಣಗಳನ್ನು ತಮ್ಮ ಭರತನಾಟ್ಯದ ಹಾವ ಭಾವ ಮುದ್ರೆ ಅಭಿನಯದಲ್ಲಿ ತೋರಿಸಬೇಕು.
ಆ ಮೂರೋ-ನಾಲ್ಕೇ ಸೆಕೆಂಡುಗಳಲ್ಲಿ ಒಂದರಿಂದ ಇನ್ನೊಂದು ರೂಪಕ್ಕೆ ಬದಲಿಸಬೇಕು, ಮತ್ತೆ ಮುಂದಿನ ಪಾದ ಹೀಗೆ ಎಂಟು ನಿಮಿಷಗಳಲ್ಲಿ ಕಣ್ಣಿಗೆ ಕಟ್ಟುವಂತೆ ನರ್ತಿಸಿದರು. ಅದು ದೊಡ್ಡ ಸವಾಲೇ ಆಗಿರಬೇಕು. ಸಭಿಕರೆಲ್ಲ ಮಂತ್ರಮುಗ್ಧರಾಗಿದ್ದರು. “ಕೃತಸ್ಮರಾಯೈ ವಿಕೃತಸ್ಮರಾಯ ನಮಃ’ ಎನ್ನುವ ಪಾದದಲ್ಲಿ ಶಿವೆಯ ಸೃಷ್ಟಿಯ ವೈಭವವನ್ನು ಅನಂತರ ಕೂಡಲೇ ವಿಕೃತಿಯ ಮನ್ಮಥನ ದಹನವನ್ನು ತೋರಿಸಿದ್ದು ಅನನ್ಯ. ಮುಂದಿನ ಏಳನೆಯ ಶ್ಲೋಕದಲ್ಲಿ ಬರುವ ಜಗಜ್ಜನನಿ ಪಾರ್ವತಿ ಮತ್ತು ಸಂಹಾರಕ ತಾಂಡವ ನೃತ್ಯದಿಂದ ಮತ್ತೆ ವಿಶ್ವವನ್ನು ಒಂದುಗೂಡಿಸುವುದನ್ನು ಚಂದವಾಗಿ ನೃತ್ಯದಲ್ಲಿ ತೋರಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೇಯರ್ ಆಂಡಿ ಬ್ರೌನ್ ಅವರು ಎಲ್ಲರಿಗೂ ಪ್ರಶಸ್ತಿ ಪತ್ರ ಹಂಚಿದರು. ಭರತನಾಟ್ಯ ಕಲಿಯಲು ಈ ಪ್ರದೇಶದಲ್ಲಿ ಉತ್ಸಾಹ ಬೆಳೆಯುತ್ತಿದೆ. ಅದಕ್ಕೆ ಇಲ್ಲಿ 4ರಿಂದ ನಲವತ್ತು ವಯಸ್ಸಿನವರೂ ಕಲಿಯಲು ಬರುವುದು ಗುರುವಿನ ಆಸ್ಥೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗೆ ಹಿನ್ನುಣಿಕೆಯಿತ್ತು ಹುರಿದುಂಬಿಸುವುದೇ ಕಾರಣ. ಅದು ಸುಲಭದ ಕೆಲಸವಲ್ಲ. ಅವರಿಗೆ ಮತ್ತು ಜತೆಗೆ ಕೆಲಸಕ್ಕೆ ಕೈಜೋಡಿಸುವ ಸ್ವಯಂ ಸೇವಕ ಸಹಾಯಕರಿಗೂ ಅಭಿನಂದನೆಗಳು. ಲಾಸ್ಯ ನರ್ತನ ಶಾಲೆ ಉತ್ತರೋತ್ತರ ಬೆಳವಣಿಗೆ ಕಾಣಲಿ!
*ಶ್ರೀವತ್ಸ್ ದೇಸಾಯಿ, ಡೋಂಕಾಸ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ
Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ
Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು
ಬ್ರಿಟನ್‌ನ “ಅನಿವಾಸಿ.ಕಾಂ’ ಸಾಹಿತ್ಯ ಜಾಲಜಗುಲಿಗೆ ದಶಮಾನೋತ್ಸವ
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
MUST WATCH
ಹೊಸ ಸೇರ್ಪಡೆ
South Korea; 2ನೇ ಪ್ರಯತ್ನದಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ : ವರದಿ
ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
Women’s ODI: ಒತ್ತಡದಲ್ಲಿ ಐರ್ಲೆಂಡ್: ಭಾರತದ ಯೋಜನೆ ಕ್ಲೀನ್‌ಸ್ವೀಪ್
Cast Census Report: ಹಲವು ವಿರೋಧಗಳ ನಡುವೆಯೂ ಜಾತಿ ಗಣತಿ ರಹಸ್ಯ ನಾಳೆ ಬಯಲು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.