Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ
Team Udayavani, Jan 14, 2025, 8:57 PM IST
ಮಂಗಳೂರು/ಉಡುಪಿ: ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಂಗಳವಾರ ಸಂಜೆ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.
ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಗುರುವಾಯನಕೆರೆ, ಗುರಿಪ್ಪಳ್ಳ, ಕಿರಿಯಾಡಿ, ಗೇರುಕಟ್ಟೆ, ಬಂದಾರು, ಇಳಂತಿಲ, ಬಂಟ್ವಾಳ, ಬಿ.ಸಿ. ರೋಡ್, ಮೂಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಬಜಪೆ, ಸುರತ್ಕಲ್ ಸಹಿತ ಮಂಗಳೂರು ನಗರದ ಕೆಲವು ಕಡೆಗಳಲ್ಲಿ ಮಳೆಯಾಗಿದೆ.
ಅಕಾಲಿಕ ಮಳೆಯಿಂದಾಗಿ ಗ್ರಾಮೀಣ ಭಾಗದ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದೆ. ಜಿಲ್ಲೆಯಾದ್ಯಂತ ಹಲವು ಯಕ್ಷಗಾನ ಮೇಳಗಳಿಂದ ಆಯೋಜಿಸಿದ ಯಕ್ಷಗಾನ ಸಹಿತ ಕೆಲವೊಂದು ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೋತ್ಸವ, ನೇಮೋತ್ಸವಕ್ಕೂ ಮಳೆಯಿಂದಾಗಿ ಅಡಚಣೆ ಉಂಟಾಯಿತು.
ಸಿಡಿಲಿನ ಅಬ್ಬರ
ಸಂಜೆಯ ವೇಳೆ ಏಕಾಏಕಿ ದಟ್ಟ ಮೋಡ ಕವಿದು ಭಾರೀ ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿಯಿತು. ಇದೇ ವೇಳೆ ಗಾಳಿ ಕೂಡ ಬೀಸಿ ಕೆಲವು ಕಡೆ ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿತು. ರಾತ್ರಿ 10 ಗಂಟೆ ಬಳಿಕ ಹೆಚ್ಚಿನ ಕಡೆ ಮಳೆ ನಿಂತಿತು.
ಬೆಳ್ತಂಗಡಿ: ಸಂಜೆ ಮಳೆ
ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ಮಳೆಯಾಗಿದೆ. ಬೆಳ್ತಂಗಡಿ, ಲಾಯಿಲ ಸಹಿತ ಕೆಲವೆಡೆ ಸಾಧರಣ ಮಳೆಯಾಗಿದ್ದು, ಉಜಿರೆ, ಧರ್ಮಸ್ಥಳ ಸಹಿತ ಬಹುತೇಕ ಕಡೆಗಳಲ್ಲಿ ಹನಿ ಮಳೆಯಾಗಿದೆ. ಬಿಸಿಲು ಸಹಿತ ಶೀತಲ ವಾತಾವಾರಣದಿಂದ ಕೂಡಿದ್ದ ಜನತೆಗೆ ಸಂಜೆಯ ಮಳೆ ಮತ್ತಷ್ಟು ತಂಪೆರೆಯಿತು.
ನಿಮ್ನ ಒತ್ತಡ
ಅರಬಿ ಸಮುದ್ರದ ಶ್ರೀಲಂಕಾ ಭಾಗದ ಕೊಮೊರಿನ್ ಪ್ರದೇಶದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು, ಇದರ ಪರಿಣಾಮ ಮೋಡದ ಚಲನೆ ಜಾಸ್ತಿಯಾಗುವ ಸಾಧ್ಯತೆ ಇದೆ. ಪರಿಣಾಮ ಒಂದೆರಡು ದಿನ ಮಳೆ ಸುರಿಯುವ ಸಾಧ್ಯತೆ ಇದೆ.
ತಾಪಮಾನದಲ್ಲಿ ವ್ಯತ್ಯಾಸ
ಜಿಲ್ಲೆಯಲ್ಲಿ ಕಳೆದ ವರ್ಷವೂ ಜನವರಿ ಎರಡನೇ ವಾರ ಉತ್ತಮ ಮಳೆಯಾಗಿತ್ತು. ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಮೋಡ ಬಿಸಿಲಿನ ವಾತಾವರಣ ಇರುವ ಸಾಧ್ಯತೆ ಇದೆ. ಹವಾಮಾನ ಬದಲಾವಣೆಯ ಪರಿಣಾಮ ತಾಪಮಾನದಲ್ಲಿಯೂ ವ್ಯತ್ಯಾಸ ಉಂಟಾಗಿದೆ. ಜ.14 ರಂದು 34 ಡಿ.ಸೆ. ಗರಿಷ್ಠ ತಾಪಮಾನ ಉಂಟಾಗಿ ವಾಡಿಕೆಗಿಂತ 0.8 ಡಿ.ಸೆ. ಏರಿಕೆ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ಉಂಟಾಗಿ ವಾಡಿಕೆಗಿಂತ 4 ಡಿ.ಸೆ. ಏರಿಕೆ ಕಂಡಿತ್ತು.
ಉಡುಪಿ:ವಿವಿಧೆಡೆ ಮಳೆ
ಉಡುಪಿ: ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆಯ ಅನಂತರ ಉತ್ತಮ ಮಳೆ ಸುರಿದಿದೆ.
ಬೆಳಗ್ಗಿನಿಂದ ಸಂಜೆಯವರೆಗೂ ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣ ಇದ್ದು, ಸಂಜೆ 6 ಗಂಟೆಯ ಅನಂತರ ಮಿಂಚು, ಗುಡುಗು ಕಂಡುಬಂದಿದೆ. ಬಳಿಕ ಗಾಳಿಮಳೆ ಸುರಿಯಲು ಆರಂಭವಾಗಿ ಉಡುಪಿ ನಗರದ ವಿವಿಧೆಡೆ, ಮಣಿಪಾಲ, ಹೆಬ್ರಿ, ಕಾರ್ಕಳ, ಅಜೆಕಾರು, ಹಿರಿಯಡಕ, ಶಿರ್ವ, ಮಂಚಕಲ್ಲು, ಕಾಪು, ಕಟಪಾಡಿ, ಉದ್ಯಾವರ, ಮಲ್ಪೆ, ಪಡುಬಿದ್ರಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕಾರ್ಕಳ, ಕಾಪು ಭಾಗದಿಂದ ಆರಂಭವಾದ ಮಳೆ ವಿವಿಧೆಡೆಗೆ ಪಸರಿಸಿತು. ಕಟಪಾಡಿ ವಿಶ್ವನಾಥ ದೇಗುಲದ ಒಳಭಾಗ ಮತ್ತು ಆವರಣದಲ್ಲಿ ನೀರು ನಿಂತಿತು.
ಸವಾರರ ಪರದಾಟ
ಮಳೆ ಬರುವ ಲಕ್ಷಣ ಇಲ್ಲದೇ ಇದ್ದರಿಂದ ಪಾದಚಾರಿಗಳು ಛತ್ರಿಯಿಲ್ಲದೆ ಮನೆಯಿಂದ ಹೊರಗೆ ಬಂದಿದ್ದರೆ, ದ್ವಿಚಕ್ರ ವಾಹನ ಸವಾರರು ರೈನ್‌ಕೋಟ್ ಮನೆಯಲ್ಲೇ ಇಟ್ಟಿದ್ದರು. ಹೀಗಾಗಿ ಸಂಜೆ ದಿಢೀರ್ ಸುರಿದ ಮಳೆಗೆ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಅನೇಕರು ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಮಳೆ ನಿಲ್ಲುವವರೆಗೂ ಕಾದು ಅನಂತರ ಮನೆ ಕಡೆ ಹೊರಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಅಧಿಕೃತವಾಗಿ ಅನೌನ್ಸ್ ಆಯಿತು ʼಜೈಲರ್ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ
Ramanagara: ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
Bhalki: ಬಸವೇಶ್ವರ ಪುತ್ತಳಿ ಕಿಡಿಗೇಡಿಗಳಿಂದ ವಿರೂಪ; ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.