Uppinangady: ಎಲ್ಲೆಂದರಲ್ಲಿ ಪಾರ್ಕಿಂಗ್; ದಂಡ ವಿಧಿಸಲು ನಿರ್ಣಯ
ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆ; ತೆರಿಗೆ ವಸೂಲಿಗೆ ಕ್ರಮಕ್ಕೆ ಸೂಚನೆ
Team Udayavani, Jan 15, 2025, 12:46 PM IST
ಉಪ್ಪಿನಂಗಡಿ: ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುವರ ವಿರುದ್ಧ ದಂಡ ವಿಧಿಸುವಂತಹ ಕಠಿನ ಕ್ರಮ ಜಾರಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತದ ನಿರ್ಣಯ ಅಂಗೀಕರಿಸಿದರು.
ಸಭೆಯು ಗ್ರಾ.ಪಂ.ನ ಸಮಾಜ ಮಂದಿ ರದಲ್ಲಿ ಪಂಚಾಯತ್ ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಗೀತಾ ಶೇಖರ ಲೆಕ್ಕಪತ್ರ ಮಂಡಿಸಿ ವರದಿ ಗಳಿಗೆ ಮಂಜೂರಾತಿ ಪಡೆದರು.
ಹಿರಿಯ ಸದಸ್ಯ ಸುರೇಶ ಅತ್ರಮಜಲು ಮಾತನಾಡಿ, ಪುತ್ತೂರು ಸಂಚಾರ ಪೊಲೀ ಸರು ಎರಡು ದಿನಕೊಮ್ಮೆ ಬಸ್ ನಿಲ್ದಾಣದ ಜಂಕ್ಷನ್ ಬಳಿಗೆ ದಿಢೀರ್ ಆಗಿ ಬಂದು ದ್ವಿಚಕ್ರ, ಹಾಗೂ ಲಘ ವಾಹನಗಳನ್ನು ಏಕಾಏಕಿ ನಿಲ್ಲಿಸಿ ಕಳ್ಳರನ್ನು ಹಿಡಿದಂತೆ ವರ್ತಿಸಿ ಹೆಲ್ಮೆಟ್, ದಾಖಲೆ ಪತ್ರ, ಸೀಟ್ ಬೆಲ್ಟ್ ಹೀಗೆ ದಂಡ ವಿಧಿಸುತ್ತಾರೆ ಹೊರತು ಅಲ್ಲೇ ಪಕ್ಕದಲ್ಲಿ ಟ್ರಾಪಿಕ್ ಜಾಮ್ ಆದಾಗ ಅದನ್ನು ಸರಿಪಡಿಸಲು ಮುಂದಾಗದೆ ತಮ್ಮಪಾಡಿಗೆ ಹಿಂದಿರುಗುತ್ತಾರೆ ಎಂದು ದೂರಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಇತರ ಸದಸ್ಯರು ನೋ ಪಾರ್ಕಿಂಗ್‌ನಲ್ಲಿ ವಾಹನಗಳಿದ್ದರೂ ಲಘು ವಾಹನಗಳ ಮೇಲೆಯೇ ಅವರ ಕಣ್ಣಿರುತ್ತದೆ. ಅದೆಷ್ಟೋ ಬಸ್ಸುಗಳಲ್ಲಿ ಯಾವುದೇ ದಾಖಲೆ ಪತ್ರ ಇಲ್ಲದೆ ಲೆಕ್ಕಕ್ಕೂ ಮೀರಿ ಪ್ರಯಾಣಿಕರನ್ನು ಕರೆದೊಯ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದರು.
ಸದಸ್ಯ ಅಬ್ದುಲ್ ರಹಿಮಾನ್ ಕೆರೆಮೂಲೆ ಮಾತನಾಡಿ ಪಟ್ಟಣದ ಬ್ಯಾಂಕ್, ಶಾಲಾ ರಸ್ತೆ, ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಒಂದಿಬ್ಬರಿಂದ ದಂಡ ವಸೂಲಿ ಮಾಡುವ ಬದಲು ಟೆಂಡರ್ ಕರೆದು ಯಾರಿಗಾದರೂ ವ್ಯವಸ್ಥೆ ಸರಿಪಡಿಸಿದರೆ ಪಂಚಾಯತ್‌ಗೂ ಆದಾಯ. ಎಲ್ಲರಿಗೂ ಆನುಕೂಲ ಎಂದರು. ಪಾರ್ಕಿಂಗ್ ವಿಚಾರದಲ್ಲಿ ದೀರ್ಘ ಚರ್ಚೆ ನಡೆದು ಕೊನೆಗೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಪಂಚಾಯತ್ ವತಿಯಿಂದಲೇ ದಂಡ ವಿಧಿಸುವ ನಿರ್ಧಾರಕ್ಕೆ ಬರಲಾಯಿತು.
ಜಾಗ ಹುಡುಕಲು ನಿರ್ಣಯ
ಹೊಸಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನದವರು ಬೆಳಗ್ಗಿನಿಂದ ರಾತ್ರಿ ತನಕ ಅಲ್ಲೇ ನಿಲ್ಲಿಸಿ ತಮ್ಮ ತಮ್ಮ ಕಾರ್ಯಕ್ಕೆ ತೆರಳುತ್ತಾರೆ. ಇದರಿಂದ ಬಸ್ಸುಗಳ ನಿಲುಗಡೆ ತೊಂದರೆಯಾಗುತ್ತಿದೆ ಎಂದು ಬಂದಿರುವ ದೂರಿಗೆ ಪರ್ಯಾಯ ವ್ಯವಸ್ತೆಗೆ ಜಾಗ ಹುಡುಕಲು ನಿರ್ಣಯಿಸಲಾಯಿತು.
ಕುಡಿಯುವ ನೀರಿನ ಪೈಪ್‌ಲೈನ್‌ನ ದುರಸ್ತಿಗೆ ಬಳಸಲಾದ ರೂ. 60 ಸಾವಿರ ಖರ್ಚಿನ ಬಗ್ಗೆ ಸದಸ್ಯ ರಹಿಮಾನ್ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಮುಂದೆ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ದುರಸ್ತಿ ಕಾರ್ಯ ಮಾಡಬೇಕಾದರೆ ಆಯಾಯ ವಾರ್ಡ್ ಸದಸ್ಯರ ಗಮನಕ್ಕೆ ತರಲೇ ಬೇಕು ಎಂದು ಪಟ್ಟು ಹಿಡಿದರು.
ಮುಂದಿನ ಬೇಸಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಅಡ್ಡಿ ಆಗಬಾರದು ಎಂದು ಸದಸ್ಯರು ಆಗ್ರಹಿಸಿದರು. ಅಂಗಡಿ ಮಾಲಕರು ಹಾಗೂ ಮನೆಯವರು ಪಂಚಾಯತ್‌ಗೆ ಬಾಕಿಯಿರಿಸಿರುವ ತೆರಿಗೆ ಹಣದ ವಸೂಲಿಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ಮಾಡಿದರು.
ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಇಬ್ರಾಹಿಂ, ಅಬ್ದುಲ್ ರಶೀದ್, ಮಹಮ್ಮದ್ ತಾಸಿಫ್ ಯು.ಟಿ., ವಿನಾಯಕ ಪೈ, ಉಷಾ ಮುಳಿಯ, ಶೋಭಾ, ಜಯಂತಿ ರಂಗಾಜೆ, ರುಕ್ಮಿಣಿ, ವನಿತಾ, ನೆಬಿಸಾ, ಲೋಕೇಶ್, ಧನಂಜಯ ನಟ್ಟಿಬೈಲು ಮತ್ತಿತರರಿದ್ದರು. ಗುಮಾಸ್ತೆ ಜ್ಯೋತಿ ವಂದಿಸಿದರು.
ತ್ಯಾಜ್ಯ ಸಂಗ್ರಹಣೆಗೆ ಲಘುವಾಹನ ಖರೀದಿಸಿ
ತ್ಯಾಜ್ಯ ಸಂಗ್ರಹಣೆಗೆ ಲಘುವಾಹನದ ಆವಶ್ಯಕತೆ ಇದ್ದು ಎರಡು ತಿಂಗಳ ಹಿಂದೆಯೇ ನಿರ್ಣಯಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಅನುಮೋದನೆ ಕಳುಹಿಸಿದರೂ ಈ ತನಕ ಸಾಧ್ಯವಾಗಿಲ್ಲ. ತತ್‌ಕ್ಷಣ ಅಧಿಕಾರಿಗಳಲ್ಲಿ ವಿವರಣೆ ಕೇಳಿ ಮಂಜೂರಿಗೆ ಯತ್ನಿಸಿ ಎಂದು ಅಬ್ದುಲ್ ರಶೀದ್ ಸಲಹೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.