ಭಯಂಕರ ಸೀರಿಯಸ್‌ ಲವ್‌ ಸ್ಟೋರಿ!


Team Udayavani, Jan 3, 2017, 3:45 AM IST

column.jpg

ಶಿವಗಣ ಎಂಬ ಶಪಿತ ಆಕಾಶಮಾರ್ಗವಾಗಿ ತೇಲಿಕೊಂಡು ಹೋಗುತ್ತಿದ್ದ. ಹಿಮಪರ್ವತ ಕ್ರಮೇಣ ಹಿಂದೆ ಹಿಂದೆ ಸರಿದು ಬೆಳ್ಳಿಮೋಡಗಳು ದಟ್ಟೈಸಿ ವಿಚಿತ್ರವಾದ ಬೆಚ್ಚನೆಯ ಅನುಭವವನ್ನು ಕೊಡುತ್ತಿದ್ದವು.

ಅದು ನಿಜಕ್ಕೂ ಫ‌ಜೀತಿಯ ಕ್ಷಣ. ಕೈಲಾಸ ಪರ್ವತದ ಹಲವು ಗಣಗಳಲ್ಲಿ ತಾನೂ ಒಬ್ಬ. ತನ್ನ ಅನುಭವಕ್ಕನುಗುಣವಾಗಿ ಕ್ರಮೇಣ ಅವನಿಗೂ ವೃತ್ತಿಯಲ್ಲಿ ಮೇಲೆ ಮೇಲೆ ಹೋಗುವುದಕ್ಕೆ ಸಾಧ್ಯವಾಗಿತ್ತು. ಹಿರಿಯ ಗಣಗಳೆಲ್ಲಾ ನಿವೃತ್ತರಾಗಿದ್ದರು. ಸಾಕಷ್ಟು ವರ್ಷಗಳ ಕೆಲಸದಿಂದ ತನಗೆ ಹೇಗೋ ಹಿರಿತನ ಪ್ರಾಪ್ತವಾಗಿತ್ತು. ಹಾಗಾಗಿ ತಾನು ಇದೀಗ ಶಿವನ ಹತ್ತಿರದ ಪರಿಚಾರಕನಾಗಿ ಕೆಲಸ ಮಾಡುವ ಭಾಗ್ಯ ದೊರೆಯಿತು. ಒಬ್ಬ ಅಧಿಪತಿಯ ಅಡಿ ಕೆಲಸ ಮಾಡುವುದು ಭಾಗ್ಯವೋ ದೌರ್ಭಾಗ್ಯವೋ ತನಗೇ ಗೊತ್ತಿಲ್ಲ. ಹೆಚ್ಚುಕಡಿಮೆ ಆದರೆ ಅತಿಯಾದ ಪ್ರೀತಿಯೂ, ಅತಿಯಾದ ಶಿಕ್ಷೆಯೂ ದೊರೆಯುವುದುಂಟು. ತನಗೆ ಸಿಕ್ಕ ಹುದ್ದೆ ಹೇಗೆ ಶಿಕ್ಷೆಯ ಅತಿರೇಕ ಅಂತ ಗೊತ್ತಾಗಿದ್ದೇ ಆವತ್ತು.

ಶಿವನಂಥ ಒಬ್ಬ ರುದ್ರಕೋಪಿಯನ್ನು ಸಹಿಸಿಕೊಳ್ಳುವುದು ಯಾರಿಗಾದರೂ ಕಷ್ಟವೇ. ಜಪದಲ್ಲಿ ತಲ್ಲೀನನಾದನೆಂದರೆ ಅದಕ್ಕೆ ಯಾರಿಂದಲೇ ಅಡ್ಡಿ ಬಂದರೂ ಶಿವ ಶಪಿಸದೇ ಬಿಡಲಾರ. ಹಿಂದೆ ಈ ರೀತಿಯ ಶಿಕ್ಷೆಗೆ ಗುರಿಯಾದವರು ಒಬ್ಬರಿಬ್ಬರಲ್ಲ. ಪಾರ್ವತಿಗಾಗಲೀ, ಶಿವನಿಗಾಗಲೀ ಸಿಟ್ಟು ಬಂದಿತೆಂದರೆ ಶಿಕ್ಷೆ ಗಣಗಳಿಗೆ. ಭೃಂಗಿ ಹಾಗೇ ಪಾರ್ವತಿಯ ಶಾಪಕ್ಕೆ ತುತ್ತಾದದ್ದು. ಅವರ ಸೇವಕರಾಗಿ ಕೆಲಸ ಮಾಡುವುದೂ ಅದೆಂಥ ಘೋರ ಕಷ್ಟ. ಇಬ್ಬರೂ ಪಗಡೆ ಆಡುತ್ತಾರೆ, ದೇವರಾದರೇನು, ಮನುಷ್ಯರಾದರೇನು ಇಬ್ಬರಲ್ಲೊಬ್ಬರು ಸೋಲಲೇಬೇಕು ತಾನೇ? ಇಬ್ಬರೂ ಸೋಲೊಪ್ಪಿಕೊಳ್ಳುವುದಿಲ್ಲ, ಸೋತದ್ದು ಯಾರು ಅಂತ ಅಲ್ಲೇ ನಿಂತ ಸೇವಕರು ಹೇಳಬೇಕು. ಇಬ್ಬರಲ್ಲಿ ಯಾರೊಬ್ಬರು ಸೋತರೆಂದರೂ ತಮ್ಮ ತಲೆಗೇ ಸಂಚಕಾರ. ಹಾಕಿದ ಭಸ್ಮ, ಉಟ್ಟ ಸೀರೆ, ತೊಟ್ಟ ಒಡವೆ, ಇಷ್ಟಭಕ್ತರು, ಕಷ್ಟಕಾರ್ಪಣ್ಯವೀವ ದುಷ್ಟರು-ಹೀಗೆ ಶಿವ ಶಿವೆಯರ ಮಧ್ಯೆ ಜಗಳಕ ಕಿಡಿ ಹೊತ್ತಿಕೊಳ್ಳಲು ಯಾರು ಬೇಕಿದ್ದರೂ ಕಾರಣವಾಗಬಹುದು.

ಶಿವಗಣನಿಗೂ ಆವತ್ತು ಆಗಿದ್ದದೇ. ಪಾರ್ವತಿ ಆ ದಿನ ಬೆಳಿಗ್ಗೆ ತನ್ನ ಎಂದಿನ ಸ್ನಾನಾದಿ ಕೆಲಸ ಕಾರ್ಯಕ್ಕೆ ಹೊರಟಿದ್ದಳು. ಬಂದವಳೇ ನನ್ನನ್ನುದ್ದೇಶಿಸಿ “ಇವತ್ತು ನನ್ನ ಸ್ನಾನ ಕೊಂಚ ಸುದೀರ್ಘ‌ವಾಗಿರುತ್ತದೆ, ಶಿವ ಬಂದರೆ ಇಲ್ಲಿ ಅವನನ್ನು ಒಳಬಿಡಗೊಡಬೇಡ. ಇದು ಪಾರ್ವತಿಯಾಜ್ಞೆ’ ಅಂದಳು. ಇದೇ ಜಾಗದಲ್ಲಿ ಇಂಥ ಸ್ನಾನಕ್ಕೆ ಪಾರ್ವತಿ ಹೊರಟಾಗಲೇ ಗಣೇಶನ ಜನನ, ಸಾವು, ಆನೆಮೊಗ ಜೋಡಣೆ ಇತ್ಯಾದಿ ಘಟನೆಗಳು ಜರುಗಿದ್ದು. ಬೆಳಿಗ್ಗೆಯಿಂದ ಅವನ ಎಡಗಣ್ಣು ಯಾಕೋ ಅದುರುತ್ತಿತ್ತು. ಪಾರ್ವತಿಯ ಈ ಮಾತು ಕೇಳಿ ನಿಜಕ್ಕೂ ಇವತ್ತು ತನಗೇನೋ ಕಾದಿದೆ ಅಂತ ಅನ್ನಿಸಿಯೇಹೋಯಿತು ಅವನಿಗೆ. ಆದರೆ ಒಡತಿಯ ಆಣತಿಯನ್ನು ನಿರಾಕರಿಸಲಾದೀತೇ?

ಬರುವ ಉರಿಗಣ್ಣನ ಆಗಮನಕ್ಕಾಗಿ ಕಾಯುತ್ತಾ ಬೆದರುತ್ತಾ ನಿಂತುಕೊಂಡ. ವೇಳೆ ಸರಿಯುತ್ತಿತ್ತು, ಹೆಜ್ಜೆ ಸಪ್ಪಳವಾಯಿತು ಹೊರಬಾಗಿಲಿನಲ್ಲಿ. ನಡುಗೆಯಲ್ಲೇ ಶಿವನ ಗತ್ತು ಗೋಚರವಾಯಿತು. ನೋಡಿದರೆ ಸಾಕ್ಷಾತ್‌ ಪರಶಿವನೇ.

“ಎಲ್ಲಿ ಪಾರ್ವತಿ’ ಅಂದ ಶಿವ. ಸ್ನಾನಾದಿ ಪ್ರಾತಃವಿಧಿಯಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದ. ಅದರ ಬಗ್ಗೆ ಅವನಿಗೆ ಅಂಥ ಆಸಕ್ತಿ ಇರಲಿಲ್ಲವಾ ಅಥವಾ ಆಸಕ್ತಿ ಇರದವನಂತೆ ನಟಿಸಿದನಾ? ಅದಕ್ಕೆ ಉತ್ತರ ಕೊಡದೇ ತಾನು ಧ್ಯಾನದಲ್ಲಿ ಇರುವುದಾಗಿಯೂ ಯಾರನ್ನೂ ತನ್ನ ಬಳಿ ಬಿಡದಂತೆ, ಪಾರ್ವತಿಗೂ ಅಲ್ಲಿಗೆ ಪ್ರವೇಶವಿಲ್ಲವೆಂದು ಶಿವ ಹೇಳಿ ಮರು ಮಾತನ್ನೂ ಕೇಳದೇ ಒಳನಡೆದ.

ಇದೆಂಥ ಪೀಕಲಾಟ. ಸ್ನಾನಕ್ಕೆ ಶಿವನನ್ನೂ ಬಿಡಬಾರದೆಂದು ಪಾರ್ವತಿ, ಧ್ಯಾನಕ್ಕೆ ಪಾರ್ವತಿಯಿಂದಲೂ ತಡೆ ಬರಬಾರದೆಂದು ಶಿವ. ದಾಕ್ಷಾಯಿಣಿಯನ್ನು ತೊರೆದು, ಹುಚ್ಚನಂತಾಗಿ, ಅಗ್ನಿ ದಹಿಸಿ ದಕ್ಷಸುತೆ ಪರ್ವತರಾಜ ಸಂಜಾತೆಯಾಗಿ ಉಮೆಯಾಗಿ ಹುಟ್ಟಿ ಮತ್ತೆ ಇಬ್ಬರಿಗೂ ಮದುವೆಯಾಯಿತು. ಇದೀಗ ಏಳ್ಳೋ ಎಂಟೋ ವರ್ಷಗಳು, ಮದುವೆ ಮುಗಿದು. ಗಣೇಶನ ಜನ್ಮವೃತ್ತಾಂತ, ಸುಬ್ರಹ್ಮಣ್ಯನ ಜನನಗಳೆಲ್ಲಾ ಆಗಿವೆ. ಹಿಮಗಿರಿಯ ಈ ಗಣಸಂಕುಲಗಳ ಮಧ್ಯೆ ಪಾರ್ವತಿ-ಶಿವ ಕೂಡ ಥೇಟ್‌ ಭೂಲೋಕದ ಮಾನವರ ಲೆಕ್ಕವೇ ಆಗಿಹೋಗಿದ್ದಾರೆ. “ಶಿವನನ್ನೂ..’ ಅನ್ನುವ ಪಾರ್ವತಿಯ ಮಾತಿನ ಹಿಂದೆ “ಶಿವನನ್ನೇ’ ಬಿಡಬಾರದೆಂಬ ಸೂಚನೆ ಕಾಣುತ್ತಿದೆ, “ಪಾರ್ವತಿಯನ್ನೂ..’ ಎನ್ನುವ ಮಾತಲ್ಲೂ “ಪಾರ್ವತಿಯನ್ನೇ’ ಎನ್ನುವ ಸೂಚನೆ ಕಾಣುತ್ತಿದೆ. ಎರಡು ಬೆಂಕಿಯ ಕೊಳ್ಳಿಗಳು ಒಂದಕ್ಕೊಂದು ತಾಗಿದರೆ ಯಾವುದೇ ಕ್ಷಣವೂ ಯಾವ ಪ್ರಮಾಣದಲ್ಲೂ ಬುಗ್ಗೆನ್ನಬಹುದು ಬೆಂಕಿ. ಹಣೆಯಲ್ಲಿ ಬೆಂಕಿ ಇಟ್ಟುಕೊಂಡರೂ ಶಿವ, ಬೆಂಕಿಯನ್ನೇ ಪ್ರವೇಶಿಸಿ ಮಿಂದೆದ್ದು ಬಂದರೂ ಪಾರ್ವತಿ- ತಮ್ಮ ಸಾಂಸಾರಿಕ ಜ್ವಾಲೆಯನ್ನು ಹತ್ತಿಕ್ಕಿಕೊಳ್ಳಲಾಗದ ಸ್ಥಿತಿಯಲ್ಲಿರುವ ಕೇವಲ ಮನುಷ್ಯ.

ಹೀಗೆ ತಾನು ಹಿಡಿದಿರುವ ಅನಾಹುತಕಾರಿ ಕಿಡಿಗೆ ಶಿವಗಣ ಒಂದು ಕ್ಷಣ ಅದುರಿದ. 

ಪಾರ್ವತಿ ಸ್ನಾನ ಮುಗಿಸಿ ಬಂದಳು, ಹೆಚ್ಚುಕಡಿಮೆ ಸುದೀರ್ಘ‌ವಾಗೇ ಇತ್ತು ಜಳಕ. “ಶಿವ ಬಂದನೇ..’ ಅಂತ ಕೇಳಿದಳು, “ಇಷ್ಟೊತ್ತಾದರೂ ಬರಲಿಲ್ಲವೇ’, “ಬಂದರೂ ತನ್ನ ವಿಚಾರಿಸಲಿಲ್ಲವೇ’, “ವಿಚಾರಿಸಿದರೂ ಒಳಹೋಗಲೇಬೇಕು’ ಅಂತ ಕ್ರೋಧಗೊಳ್ಳಲಿಲ್ಲವೇ ಅಂತೆಲ್ಲಾ ವಿಚಾರಿಸಿದಳು. ಗಣ ಯೋಚಿಸಿದ, ನೋಡಿ ಇಲ್ಲೂ ತನ್ನ ನಿಯತ್ತಾದ ಕಾವಲಿಗೆ ಮೆಚ್ಚುಗೆಯಿಲ್ಲ, ತನ್ನ ಕಾವಲು ಹೇಗಾದರೂ ಶಿವನ ಕ್ರೋಧಕ್ಕೆ ತುತ್ತಾಗಿ ಮುರಿದು ಹೋಗಿದ್ದರೆ ಎನ್ನುವ ಯೋಚನೆಯೇ ಶಿವೆಗೆ. ಅದಕ್ಕೆಲ್ಲಾ ಬೇರೇನೂ ಉತ್ತರಿಸದೇ “ಒಡೆಯ ಬಂದು ಧ್ಯಾನಮಗ್ನನಾಗಿದ್ದಾನೆ.. ಯಾರನ್ನೂ ಒಳಬಿಡಕೂಡದಂತೆ’ ಅಂತ ತೊದಲುತ್ತಲೇ ಶಿವಗಣ ಹೇಳಿದ. ಶಿವನ ಬದಲು ಪಾರ್ವತಿಯೇ ಹಣೆಗಣ್ಣು ಬಿಟ್ಟುಬಿಡುವಳಂತೆ ಕೋಪಾವಿಷ್ಠಳಾದಳು. “ನನ್ನನ್ನೇ ಧ್ಯಾನಮಂದಿರದೊಳಗೆ ಬಿಡದ ಶಿವನಿಗದೆಷ್ಟು ಧೈರ್ಯ, ನೀನು ನನ್ನನ್ನೇ ಒಳಬಿಡುವುದಿಲ್ಲವೆನ್ನುತ್ತೀಯಲ್ಲಾ, ನಿನಗೆಷ್ಟು ಧೈರ್ಯ’ ಅಂತ ಕಿಡಿಕಿಡಿಯಾದಳು. ಅವಳ ಒದ್ದೆಯಾದ ಕೂದಲಿನಿಂದ ಇಳಿವ ಶುದ್ಧ ಸ್ಪಟಿಕ ನೀರು ಬೆವರಾಗಿ ಬದಲಾಯಿತು. ಇಟ್ಟ ಕುಂಕುಮ ತೊಯ್ದು ಹೋಯಿತು. ದುಮುದುಮುಗುಡುತ್ತಾ ಪಾರ್ವತಿ ದಡದಡನೆ ಅವನ ನಿರ್ಬಂಧಿತ ಧ್ಯಾನಮಂದಿರದೊಳಗೆ ನುಗ್ಗಿಯೇಬಿಟ್ಟಳು.

ಮುಂದೆ ಏನಾಗಬೇಕೋ ಅದೇ ಆಯಿತು. ಪಾರ್ವತಿಯನ್ನು ಒಳಬಿಟ್ಟ ತಪ್ಪಿಗೆ ಶಿವಗಣನನ್ನು ಭೂಲೋಕದಲ್ಲಿ ಹುಟ್ಟುವಂತೆ ಶಿವ ಶಪಿಸಿದ. ದೇವ-ದೇವತೆಯರ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯಾದ ಶಾಪ ಅದು. ತಾನು ನಿರ್ಬಂಧಿಸಿದರೂ ಒಳಹೋಗಿದ್ದು ಪಾರ್ವತಿಯೇ ಅಂತ ಎಷ್ಟೇ ಅನುನಯದಿಂದ ಹೇಳಲು ಶಿವಗಣ ಪ್ರಯತ್ನಿಸಿದರೂ ಅದು ತಾಯಿ ಶಂಕರಿಯ ಪಾಲಿಗೆ ಉದ್ದಟತನದ ಮಾರುತ್ತರವಾಯಿತು. ತನ್ನ ಶಿಕ್ಷೆಯನ್ನೂ ಹೊರುವುದಕ್ಕೆ ಶಿವಗಣ ಅರ್ಹನೆಂದು ಆಕೆಯೂ ಶಪಿಸಿದಳು: “ನೀನು ಅಲ್ಲೂ ಇಂಥದ್ದೇ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡು ಒದ್ದಾಡು.. ಅದೇ ನಿನಗೆ ಶಿಕ್ಷೆ.. ನನ್ನಂಥವಳ ಕಷ್ಟ ನಿನಗೂ ಅರಿವಾಗಲಿ.’

ಈ ಜಗತ್ತಿನಲ್ಲಿ ಏನೇ ಆಗದೇ ಹೋದರೂ ಶಾಪ ಮಾತ್ರ ಹುಸಿಯಾದ ವರ್ತಮಾನವಿಲ್ಲ. ತನ್ನ ಕಾರಣಕ್ಕೇ ಅವರಿಬ್ಬರ ಮಧ್ಯೆ ಚಕಮಕಿ ನಡೆದರೂ ತನಗೂ ಗೊತ್ತು, ಶಿವ ಪಾರ್ವತಿಯರಿಗೂ ಗೊತ್ತು-ಆ ಚಕಮಕಿಗೆ ಸ್ವತಃ ಅವರಿಬ್ಬರೇ ಕಾರಣ. ಇದರ ನಂತರ ಎಂದಿನಂತೆ ಶಿವ ಶಿವೆಯ ಮನವೊಲಿಸುವ ಪ್ರಯತ್ನ ಮಾಡುತ್ತಾನೆ, ಕರಗದ ಹಿಮಗಿರಿ ಕರಗಿಬಿಟ್ಟಂತೆ ಶಿವೆಯೂ ಕರಗುತ್ತಾಳೆ. ಅವರ ಮಧ್ಯೆಯ ಗೆರೆ ಹೀಗೆ ಬೇಕಾದಾಗ ಬರೆಯಲ್ಪಡುತ್ತದೆ, ಬೇಡವೆಂದಾಗ ಅಳಿಸಲ್ಪಡುತ್ತದೆ.

ಹೀಗೆ ಶಾಪಗ್ರಸ್ತನಾದ ಶಿವಗಣ ಆಕಾಶಮಾರ್ಗವಾಗಿ ಇಳಿಯುತ್ತಲೇ ಎಲ್ಲವೂ ಕಪ್ಪಾಗತೊಡಗಿತು. ತದನಂತರ ಎಷ್ಟೋ ಸಂವತ್ಸರಗಳ ನಿದ್ದೆ ತಿಳಿದೆದ್ದವನಂತೆ ಆತ ಕಣ್ತೆರೆದ. ಕಣ್ತೆರೆದಾಕ್ಷಣ ಎಲ್ಲಾ ಮಬ್ಬು ಮಬ್ಬು. ಒಂದು ಬಾಗಿಲು ಸಣ್ಣಗೆ ತೆರೆದುಕೊಂಡಿತ್ತು, ಅದರೊಳಗಿಂದ ಸೂರ್ಯಕಿರಣ ಬಂದು ಮೈತಾಗುತ್ತಿತ್ತು. ಆಗಷ್ಟೇ ಬಿದ್ದು ಹೋದ ಎಳೆಮಳೆಯಂಥ ವಾತಾವರಣಕ್ಕೆ ಆ ಎಳೆಬಿಸಿಲು ಬೆಚ್ಚನೆ ಅನುಭವವನ್ನು ಕೊಟ್ಟಿತು. ಕ್ರಮೇಣ ಅದೊಂದು ಕೋಣೆ ಎನ್ನುವ ವಿಚಾರ ಸ್ಪಷ್ಟವಾಯಿತು. ಆಧುನಿಕ ಉಪಕರಣಗಳು ಆ ಕೋಣೆಯನ್ನು ಸಜ್ಜುಗೊಳಿಸಿದ್ದವು. ಒಂದು ಗಡಿಯಾರ ಟಿಕ್‌ಟಿಕ್‌ಗುಡುತ್ತಾ ಆ ಕೋಣೆಯಲ್ಲಿ ಸದ್ದೊಂದನ್ನು ಚಾಲನೆಯಲ್ಲಿಟ್ಟಿತ್ತು. ಕಾಲ ಸರಿಯುತ್ತಿತ್ತು. ಒಂದು ಯಂತ್ರ ಆಗಾಗ ರಿಂಗಣಿಸಿ, ಅನಂತರ ಯಾವುದೋ ಗೊತ್ತಾಗದ ಭಾಷೆಯಲ್ಲಿ ಸಂದೇಶವನ್ನು ದಾಖಲಿಸಿ ಸುಮ್ಮನಾಗುತ್ತಿತ್ತು. ತನ್ನ ಪೂರ್ವಾಶ್ರಮದ ಕತೆಯನ್ನು ಮೆಲ್ಲ ನೆನಪು ಮಾಡಿಕೊಳ್ಳುತ್ತಾ ತನ್ನ ತಾನೇ ನೋಡಿಕೊಂಡರೆ ಒಂದು ಕ್ಷಣ ತತ್ತರಿಸಿಹೋದಂತಾಯಿತು. ಅವನೊಂದು ಚೆನ್ನಾಗಿ ಕೆತ್ತಿಟ್ಟ, ಅದಕ್ಕೆ ಬಣ್ಣ ಬಳಿದು ಮೆತ್ತೆಯನ್ನು ಅಳವಡಿಸಿದ ಆಸನವಾಗಿಹೋಗಿದ್ದ.

ಕಣ್ಣುಜ್ಜಿಕೊಳ್ಳುತ್ತಾ ಸುತ್ತಮುತ್ತ ನೋಡಿದ. ತನ್ನಂತೇ ಹಲವು ಆಸನಗಳು, ಟೀಪಾಯಿಗಳು, ಸೌಂದರ್ಯ ಸಾಮಗ್ರಿಗಳನ್ನು ಹೊತ್ತ, ಕನ್ನಡಿ ಅಳವಡಿಸಿಕೊಂಡ ಪೀಠ. ಇನ್ನೊಂದೆಡೆ ಜೀವವಿರುವ ಕುದುರೆಯಂಥದ್ದೇ ಒಂದು ಕಾಷ್ಠನಿರ್ಮಿತ ನಿರ್ಜೀವ ಅಶ್ವಪ್ರತಿಮೆ. ಕಣ್ಣು ಮುಚ್ಚಿದರೂ ತೆರೆದರೂ ಏನೂ ವ್ಯತ್ಯಾಸವಾಗದಂತೆ ಅವನು ಮರದೊಳಗೆ ಹೀಗೇ ಮಲಗಬೇಕಾಗಿ ಬಂದಿದ್ದಕ್ಕೆ ಕಣ್ಣೀರು ಬಂದಿತು.

“ಎಲ್ಲಿದ್ದೆ ಮೊದುÉ- ದೇವರ ಮನೇಲೋ, ದೇವತೆಗಳ ಮನೇಲೋ, ಋಷಿಗಳ ಮನೇಲೋ?’

ಧ್ವನಿ ಕೇಳಿ ಪಕ್ಕ ತಿರುಗಿದರೆ ಅಲ್ಲೊಂದು ಚಂದದ ಮೇಜು. ಅದು ಮಾತಾಡುತ್ತಿದೆಯಲ್ಲಾ ಅಂತ ಆಶ್ಚರ್ಯವಾಯಿತಾದರೂ ತನಗೇ ಮಾತಾಡುವುದಕ್ಕೆ ಬರುವಾಗ ಅದಕ್ಕೂ ಮಾತಾಡುವುದಕ್ಕೆ ಬರುವುದರಲ್ಲಿ ತಪ್ಪೇನು ಅನ್ನಿಸಿತು.

“ಹೂಂ ಶಿವನ ಕೈಲಾಸದಲ್ಲಿದ್ದೆ..’

“ಓಹೋ ಪರವಾಗಿಲ್ಲ ಕಣಯ್ನಾ, ಸಿಕ್ಕಾಪಟ್ಟೆದೊಡ್ಡಮನುಷ್ಯ ಅಂತಾಯ್ತು ನೀನು.. ನಾನು ಆ ನಿನ್ನ ಒಡೆಯನನ್ನ ಪೂಜೆ ಮಾಡೋ ಋಷಿಗಳ ಮನೇಲಿದ್ದೆ..’

ಅವನೆಂದ.

“ನಾನು ದೇವೇಂದ್ರನ ಆಪ್ತ ಕಾವಲಿನವ.. ಶಚಿ ದೇವಿಗೂ ಇಂದ್ರನಿಗೂ ಜಗಳ.. ನಮಗೆ ಶಿಕ್ಷೆ’.

ಒಂದು ಸಲ ಕಣ್ತೆರೆದು ನೋಡಿದರೆ ಕೋಣೆಯ ಆಸನಗಳಲ್ಲೆಲ್ಲಾ ಒಬ್ಬೊಬ್ಬ ಗಂಧರ್ವರು, ಕಾವಲುಗಾರರು, ಋಷಿ ಪರಿಚಾರಕರು. ಒಬ್ಬೊಬ್ಬರದು ಒಂದೊಂದು ಕತೆ. ತಪೋಧನರ ಶಾಪ, ಗಂಧರ್ವಕನ್ಯೆಯರಿಂದ ಪ್ರೇಮಭಂಗವಾಗಿದ್ದಕ್ಕೆ ಶಾಪ, ದೇವತೆಯರಿಂದ ಶಾಪ, ದೇವರಿಂದ ಶಾಪ, ದೇವಪತ್ನಿಯರಿಂದ ಶಾಪ. ಒಬ್ಬೊರಿಗೂ ಅವರವರದೇ ಆದ ಕಾರಣಗಳು, ಅವರವರದೇ ತೊಡಕುಗಳು. ದೊಡ್ಡವರ ಮುಂದೆ ಹುಲ್ಲಾಗಿ ಹುಟ್ಟಿದರೂ ತಪ್ಪು. ಕಾಲಿಟ್ಟರೆ ಚುಚ್ಚಿದೆವು ಅಂತ ಕಷ್ಟ, ಕಾಲಿಡದಿದ್ದರೆ ತನ್ನ ಮುಂದೆ ಎದೆ ಸೆಟೆದು ನಿಂತಿರೆಂಬ ಕೋಪ.

ಅದೆಲ್ಲಾ ಸರಿ, ಇಂಥ ಜಾಗದಲ್ಲಿ ಇಂಥ ಜನ್ಮವೇನೋ ಸಿಕ್ಕಿತು. ಆದರೆ ಈ ಕೋಣೆಯಲ್ಲಿ ಹೀಗೆ ನಿರ್ಜೀವವಾಗಿ ಮಲಗಿಕೊಂಡಿದ್ದರೆ ಮುಗಿಯಿತಲ್ಲಾ! ಇದರಲ್ಲಿ ನನ್ನ ಸಂದಿಗ್ಧವೇನು ಎದುರಾದೀತು?

“ಗೊತ್ತಾಗತ್ತೆ.. ರಾತ್ರಿ ಆಗಲಿ..’

ನಕ್ಕಿತು ಕುರ್ಚಿ, ಕೊಕ್ಕೆಂದಿತು ಮೇಜು.

ರಾತ್ರಿ ಆಯಿತು, ಮನೆ ಸದ್ದಾಯಿತು. ಪುಟ್ಟ ಹುಡುಗನೊಬ್ಬ ಬಂದು ಬೆನ್ನಿಗಂಟಿಕೊಂಡಿದ್ದ ಚೀಲ ತೆಗೆದು ಎಸೆದ, ಪಳ್ಳನೆ ಬಂದು ತನಗೇ ತಾಗಿತು. ಪಟಪಟನೆ ಒಬ್ಬ ಹೆಂಗಸು ಕೋಣೆಯ ದೀಪಗಳನ್ನೆಲ್ಲಾ ಬೆಳಗಿಸಿದಳು. ಬ್ಯಾಗ್‌ ತಂದು ಮೇಜಿನ ಮೇಲೆ ಎಸೆದಳು. ಅಡುಗೆ ಮನೆಯಲ್ಲಿ ಸದ್ದು ಗದ್ದಲಗಳು ಪ್ರಾರಂಭವಾದವು, ಗಂಡ ಬಂದವನೇ ಬೈದ. ಮಕ್ಕಳಿಗೆ ಮನೆಪಾಠ ಮಾಡುವುದಕ್ಕೆ ಅಮ್ಮ ಕುಳಿತಳು, ಮಗ ಓ ಎಂದು ಅರಚಿದ, ಬೆನ್ನಿಗೆ ದಬಾರನೆ ಬಿದ್ದವು ಪೆಟ್ಟುಗಳು.

ರಾತ್ರಿ ಹನ್ನೊಂದರವರೆಗೂ ಆ ಕೋಣೆ ಅಕ್ಷರಶಃ ಹರಗಣವಾಯಿತು. ಗಂಡ ಅವಳನ್ನು ಕಚಪಚನೆ ಬೈದ, ಅವಳು ಗೊಣಗಿಕೊಂಡಳು, ಅನಂತರ ಕಣ್ಣೀರು ಹರಿಸಿದಳು. ಇದೆಲ್ಲಾ ಮುಗಿದು ರಾತ್ರಿಯ ಕಣ್ಣು ಮುಚ್ಚಿಕೊಂಡವು ಅನ್ನುವ ಹೊತ್ತಿಗೆ ಅವನು ಅವಳನ್ನು ಮುದ್ದುಭಾಷೆಯಲ್ಲಿ ಪಿಸುಮಾತಲ್ಲಿ ಅನುನಯಿಸುತ್ತಿದ್ದ. ಅವರ ಮಧ್ಯೆ ಆ ರಾತ್ರಿ ಭಾಷೆಯೇ ಇಲ್ಲದ ಸಂಜ್ಞೆಗಳು ಹುಟ್ಟಿಕೊಂಡವು, ಸದ್ದುಗಳು ಉದ್ದವಾದವು.

“ನಾನು ನೋಡುತ್ತೇನೆ, ಅವಳದೆಷ್ಟು ಸೌಂದರ್ಯಪ್ರಜ್ಞೆ. ಕಣ್ಣಿನ ಎಡಭಾಗದಲ್ಲಿ ಇರುವ ನೆರಿಗೆಗಳನ್ನು ನಾನು ಕಂಡಷ್ಟು ಆ ಸ್ನಾನದ ಮನೆಯೂ ನೋಡಿದಂಗಿಲ್ಲ.. ಆದರೆ ನಾನು ಅದನ್ನು ಹೇಳಲಾರೆ, ಸುಮ್ಮನಿರಲಾರೆ.. ನಿನ್ನ ಇವತ್ತು ಬೆಳಿಗ್ಗೆಯಷ್ಟೇ ಅಂಗಡಿಯೋರು ತಂದುಕೊಟ್ಟು ಹೋಗಿದ್ದಾರೆ, ಹಾಗಾಗಿ ನಿಂಗೇನೂ ಜಾಸ್ತಿ ಕಾಟ ಇಲ್ಲ.. ನಾವೆಲ್ಲಾ ಇಲ್ಲಿ ಅನುಭವಿಸಿದ್ದು ಒಂದೆರಡು ಸಮಸ್ಯೆಯಲ್ಲ.. ಮೊನ್ನೆ ಇವನ ಕಾಲನ್ನೇ ಮುರಿದಿದ್ದಾನೆ ಗೊತ್ತಾ ಆ ಮನುಷ್ಯ..’

ಕಾಲು ಮುರಿಸಿಕೊಂಡ ಇನ್ನೊಂದು ಕುರ್ಚಿಯನ್ನು ತೋರಿಸಿ ಸೌಂದರ್ಯ ಸಾಮಗ್ರಿಗಳನ್ನಿಡುವ ಟೀಪಾಯಿ ಪಿಸುಗುಟ್ಟಿತು.

ಅರಮನೆಯಂತೆ ಕಾಣುವ ಆ ಮನೆ ಒಳಗೊಳಗೇ ಸೆರೆಮನೆಯಂತೆ ಕುರುಕ್ಷೇತ್ರ ಯುದ್ಧಭೂಮಿಯಂತೆ ಕಾಣತೊಡಗಿತು ಶಿವಗಣನಿಗೆ. ತಾನು ಇದಕ್ಕೊಂದು ಉಃಶಾಪವನ್ನೂ ಪಡೆದಿದ್ದೆ, ಅದೇನದು, ಇದರಿಂದ ಪಾರಾಗುವ ಬಗೆ ಹೇಗೆ ಅಂತೆಲ್ಲಾ ಯೋಚಿಸಿದಷ್ಟೂ ಹಳೆಯದು ಮರೆತು ಹೋಗತೊಡಗಿತು.

“ಏನು ನೆನಪಾಗ್ತಿಲ್ಲವಾ.. ನೆನಪಾಗಿದ್ದರೆ ನಾವೂ ಯಾಕೆ ಇಲ್ಲೇ ಇರುತ್ತಿದ್ದೆವು?’

– ವಿಕಾಸ್‌ ನೇಗಿಲೋಣಿ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.