ಮದುವೇಲಿ ಒಲವಿನ ಕರೆಯೋಲೆ
Team Udayavani, Jan 10, 2017, 3:45 AM IST
ಮದುವೆ ಮನೆಗಳಷ್ಟು ಅದ್ಭುತ ಜಾಗ ಈ ಜಗತ್ತಿನಲ್ಲಿ ಯಾವುದೂ ಇಲ್ಲ.
ಸೂರ್ಯನಿಗಿಂತ ಮೊದಲೇ ಎದ್ದೇಳುವ ಸುಂದರಿಯರು, ಬೆಳಕು ಹರಿವ ಮೊದಲೇ ಸಾಲಂಕೃತರಾಗಿ ಮನೆಯಲ್ಲಿ ಗಲಗಲ ಓಡಾಡುತ್ತಿದ್ದರೆ ಗಂಡ್ಮಕ್ಕಳಿಗೆ ನಿದ್ದೆ ಹೇಗಾದರೂ ಬರಬೇಕು, ಯಾಕಾದರೂ ನಿದ್ದೆ ಮಾಡಬೇಕು. ಮೂಗಿಗೆ ಅಡರುವ ಪರಿಮಳ, ಕಿವಿಗೆ ಮೆತ್ತುವ ಗಲಗಲ, ಸರಭರ ಸದ್ದು, ಕಣ್ಣಿಗೆ ಕಟ್ಟುವಂಥ ನಗು ಮಾತುಕತೆ, ಸುಳಿವ ಸೌಂದರ್ಯ ಪ್ರತಿಮೆಗಳು.
ಅಂಥ ಒಂದು ಮದುವೆ ಮನೆಯಾಗಿತ್ತದು. ಹುಡುಗ ತನಗೆ ಹತ್ತಿರದ ಸಂಬಂಧಿ, ಕಾಲೇಜು ಓದುತ್ತಿದ್ದ ಹುಡುಗನಾಗಿದ್ದರಿಂದ ಕ್ಲಾಸ್‌ಗೆ ಬಂಕ್ ಮಾಡಿ ಅವರ ಮನೆಯಲ್ಲೇ ಝಂಡಾ ಊರಿದ್ದೆ, ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾ, ರೇಗಿಸುತ್ತಾ, ಕೀಟಲೆ ಮಾಡುತ್ತಾ, ಮದುಮಗನ ಸಣ್ಣಪುಟ್ಟ ರಹಸ್ಯ ಕೆಲಸಗಳನ್ನು ಮಾಡಿಕೊಡುತ್ತಾ ಮದುವೆ ಮನೆಯ ಭಾಗವಾಗಿಹೋಗಿದ್ದೆ. ಹಾಗಾಗಿ ಯಾರಾದರೂ ಬಂದರೆ, ಕೆಲಸ ನೆನಪಾದರೆ ಸಾಕು ಇದ್ದಾನಲ್ಲ ಪ್ರಮುಖ್, ಅವನಿಗೆ ಹೇಳಿ ಅಂತ ನೆಂಟರಿಷ್ಟರು ತನ್ನ ಹೆಸರು ಬಾಯಿಪಾಠ ಮಾಡಿಕೊಂಡಿದ್ದರು. ಎಂಬಲ್ಲಿಗೆ ಒಂದು ಸುಂದರ ಮದುವೆಯ ನೆಪದಲ್ಲಿ ಸರಭರ ಸುಳಿದಾಡುವ ಕನ್ಯೆಯರ ಮುಂಗುರುಳಿನ ಆಟ ನನ್ನ ಕಣ್ಣೋಟದ ಜೊತೆ ಮೀಟಾಗಿ ಮೈ ನವಿರೇಳುತ್ತಿತ್ತು.
ಮದುವೆ ಮನೆಯ ಸಂತೋಷಗಳು ಎಷ್ಟೊಂದಿರುತ್ತವೋ ಅಷ್ಟೇ ಕೆಲ ಸಂಕಟಗಳೂ ಇರುತ್ತವೆ. ಅವುಗಲೆಂದರೆ ನಾವು ಪ್ರತಿನಿಧಿಸುವ ನೆಂಟರ ಕಡೆಯಲ್ಲೇ ಸಾಕಷ್ಟು ಪರಮ ಸುಂದರಿಯರು ಇದ್ದರೂ ಅವರೆಲ್ಲಾ ತುಂಬ ಹತ್ತಿರದ ಪರಿಚಯಸ್ಥರ ಮನೆಯವರಾಗಿರುತ್ತಾರೆ. ಅಣ್ಣಾ ಅಂತನೋ, ಬಾವ ಅಂತನೋ ಕರೆದು ಮುಜುಗರ ಉಂಟು ಮಾಡಿದ್ದಲ್ಲದೇ ತೀರಾ ಕ್ಲೋಸ್ ಆಗಿಬಿಟ್ಟಿರುತ್ತಾರೆ. ಅಂಥವರ ಜೊತೆ ಫ್ಲರ್ಟ್ ಮಾಡುವ ಹಾಗಿಲ್ಲ, ಮಾಡದೇ ಇರುವ ಹಾಗೂ ಇಲ್ಲ. ಫರ್ಟ್ ಮಾಡಿದರೆ ಅಪಚಾರ, ಮಾಡದಿದ್ದರೆ ಗಂಡು ಜಾತಿಗೆ ಅಪಮಾನ. ಇಂಥ ಒಂದು ಅಪಚಾರ, ಅಪವಾದಗಳು ನನಗೂ ಉಂಟಾಗಿ ಸುಂದರ ಝುಮಕಿಯ ಕೆಳಗೆ ಯಾರಿಗೂ ಕಾಣದಂತೆ ಓಲಾಡುವ ಮುತ್ತಿನ ಮಣಿಯ ಹಾಗೆ ನನ್ನ ಪ್ರೀತಿ, ಆಕರ್ಷಣೆಗಳೆಲ್ಲಾ ಅನ್ ನೋಟೀಸ್ಡ್ ಆಗಿಬಿಟ್ಟಿದ್ದವು.
ಇಂಥ ಹೊತ್ತಿಗೆ ಮದುವೆ ದಿಬ್ಬಣ ಹೊರಟಿತು, ನದಿ ಮೇಲಿನ ಸೇತುವೆ ರಸ್ತೆ ಮೇಲೆ ಓಲಾಡುತ್ತಾ ಸಾಗುವ ಒಂದು ಬಸ್ಸಿನಲ್ಲಿ ಅಚಾನಕ್ಕಾಗಿ ಹತ್ತಿಕೊಂಡವಳು ಅವಳು. ತೀರಾ ಮೌನಿ ಅನ್ನುವಷ್ಟು ತುಟಿ ತೆರೆಯದ ಚೆಲುವೆ. ಉದ್ದ ಗಾಗ್ರಾದ, ಕಿವಿಗೊಂದು ಮುತ್ತಿನ ಓಲೆ ತೊಟ್ಟ, ಕೂದಲನ್ನು ಒಪ್ಪ ಮಾಡಿ ಎತ್ತಿ ಕಟ್ಟಿಕೊಂಡ, ಎಡಗೈಗೆ ಒಂದು ಚಿನ್ನದ ಬಣ್ಣದ ವಾಚ್ ಕಟ್ಟಿಕೊಂಡ, ತನ್ನ ಸೌಂದರ್ಯದಿಂದ ಕಾಲವನ್ನೇ ನಿಲ್ಲಿಸಿಬಿಡಬಲ್ಲ ಸುಂದರಿ. ಪ್ರಮುಖ್ ಪ್ರಮುಖ್ ಅಂತ ಪ್ರತಿಕೆಲಸಕ್ಕೂ ನನ್ನನ್ನೇ ಕರೆಯುವುದು ನನಗೆ ವರದಾನವಾಗಿಬಿಟ್ಟಿತ್ತು. ಎಂದಿನಕ್ಕಿಂತ ಹೆಚ್ಚು ಉತ್ಸಾಹದಿಂದ ನಾನು ಓಡಾಡಿದ್ದೆ, ಕೈಲಿ ಸರಳು ಹಿಡಿದು ಬಸ್ಸಿನ ಈ ತುದಿಯಿಂದ ಆ ತುದಿಗೆ ಓಡಾಡಿ, ಲಗೇಜುಗಳನ್ನೆಲ್ಲಾ ನಾನೇ ಎತ್ತಿ ಆಪದಾºಂಧವ, ಅನಾಥ ರಕ್ಷಕ, ಹೀಮ್ಯಾನ್, ಹೀರೋ ಅಂತ ಆಗಿಬಿಟ್ಟಿದ್ದೆ, ನನ್ನ ಮಟ್ಟಿಗೆ ಆ ಬಸ್ಸಿನ ಪರಮ ಸುಂದರ, ಮೋಸ್ಟ್ ಎಲಿಜಬಲ್, ಮೋಸ್ಟ್ ಹ್ಯಾಂಡ್‌ಸಮ್ ಹೀರೋ ನಾನೇ!
ಅವಳು ಅದಕ್ಕೆ ತಕ್ಕಂತೆ ನೋಡಿದಂತೆ ಮಾಡಿ, ಕಣ್ಣು ಕಿಟಕಿ ಕಡೆ ಹೊರಳಿಸಿ ಕಣ್ಮುಚ್ಚಿ ತೆರೆದಳು ಸ್ಲೋ ಮೋಶನ್‌ನಲ್ಲಿ. ಆಗ ಅವಳ ಕಿವಿಯೋಲೆಗೆ ಬಡಿದ ನಾಲ್ಕು ಎಳೆ ಗುಂಗುರು ಕೂದಲುಗಳು ನನಗೆ ಹಲವು ಸತ್ಯಗಳನ್ನು ಒಟ್ಟಿಗೇ ಹೇಳಿಬಿಟ್ಟು ಕಚಗುಳಿ ಇಟ್ಟವು.
ಮದುವೆ ಮನೆಯ ಮಂಟಪ, ಬಾಗಿಲು, ಹಾಲ್‌ಗಳೆಲ್ಲಾ ಅಲಂಕಾರಗೊಂಡಿದ್ದವು. ನನ್ನ ಮನಸ್ಸು ಇನ್ನೂ ಅಲಂಕಾರಗೊಂಡಿತ್ತು. ಬಾಚಣಿಗೆಯಲ್ಲಿ ಮತ್ತೆ ಮತ್ತೆ ಕೂದಲು ಬಾಚಿಕೊಳ್ಳುತ್ತಿದ್ದೆ, ಯಾರೂ ಗಮನಿಸದಂತೆ. ಇನ್‌ಶರ್ಟ್ ಹಾಳಾಗಿದೆಯೇನೋ ಅಂತ ಕೈ ಮತ್ತೆ ಮತ್ತೆ ಬೆಲ್ಟ್ ಹತ್ತಿರವೇ ಸುಳಿದಾಡಿತ್ತು, ಕಣ್ಣು ಬೇಡಬೇಡವೆಂದರೂ ನಿಲುವುಗನ್ನಡಿ, ನೀರಿನ ತಪ್ಪಲೆ, ಪ್ರತಿಫಲಿಸುವಂಥ ನುಣುಪು ಗೋಡೆಗಳನ್ನು ಹುಡುಕಿ ನನ್ನನ್ನು ನಾನೇ ನೋಡಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಕುಳಿತ ಹೆಣ್ಮಕ್ಕಳ ಸಾಲಿನಲ್ಲಿ ಒಂದು ನವಿಲಿನಾಕಾರದ ಕೆಂಪು ಕ್ಲಿಪ್ಪು ಎಲ್ಲಿ ಕಾಣುತ್ತದೆ ಅಂತ ನೋಡುತ್ತಾ ಮಾಡುವ ಕೆಲಸ, ಹೇಳಿದ ಕೆಲಸ ಮರೆತು ಎತ್ತೆತ್ತಲೋ ಸುತ್ತಾಡುತ್ತಿದ್ದೆ. ಚಂಚಲ ಮನಸ್ಸಿಗೆ ಬುದ್ಧಿ ಕಡಿಮೆ ಅಂತ ಆವತ್ತೇ ಅರಿವಾಗಿದ್ದು.
ಮದುಮಗ ಅಲ್ಲಿಂದಲೇ ನೋಡಿ ಏನಾಯೊ¤à ಅಂತ ಕಣÕನ್ನೆ ಮಾಡುತ್ತಿದ್ದ, ಏನಿಲ್ಲ ಅಂತ ಅವನನ್ನು ಸುಮ್ಮನಿರಿಸಿದ್ದೆ, ಹೇಳಿದ್ದ ಕೆಲಸ ಮರೆತೆಯೋನೋ ಅಂತ ಯಾರೋ ನೆಂಟರು ಸಿಡಿಮಿಡಿಗೊಂಡರು, ಕುಡಿದ ಪಾನಕ ಸಪ್ಪೆ ಸಪ್ಪೆಯಾಗಿದೆ, ಸಕ್ಕರೆ ಹಾಕ್ಕೋಕ್ಕೆ ಹೇಳ್ಳೋ ಅಂತ ಯಾರೋ ಹೇಳಿದ್ದು ಮರೆತಿದ್ದೆ, “ಹುಡುಗಿ ಹೇಗಿದ್ದಾಳೆ, ಚೆನ್ನಾಗಿದ್ದಾಳಾ’ ಂತ ಮದುಮಗಳ ಬಗ್ಗೆ ಕೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡು “ಸಕತ್ತಾಗಿದ್ದಾಳೆ ಕಣೇ’ ಅಂತ ಹೇಳಿ ಅವರು ವಿಚಿತ್ರವಾಗಿ ನಕ್ಕಾಗ ಪೆಚ್ಚಾಗಿದ್ದೆ.
ಹಾಗೆ ಇದ್ದಾಗ ಗದ್ದಲಗಳು ಸೋತು ಸುಣ್ಣಾದವು, ಮಂಟಪದ ಹೂವಿನಲಂಕಾರ ಬಾಡಿತು, ಉಟ್ಟ ಸೀರೆ ಮುದ್ದೆಯಾಯಿತು, ಗಂಡಸರ ಜರತಾರಿ ಪಂಚೆ ಸುಕ್ಕಾದವು, ಮಕ್ಕಳು ಕೂಗಿ ಅತ್ತು ಬಿಸಿಲಿಗೆ ಹಣ್ಣಾದವು, ಹುಡುಗ ಹುಡುಗಿ ಕತ್ತಿಗೆ ತಾಳಿ ಬಿಗಿದ, ಕೈಲಿ ಹಿಡಿದ ಅಕ್ಷತೆಗಳು ಮದುಮಕ್ಕಳ ತಲೆ ಮೇಲೆ ಉದುರಿವು, ಗಟ್ಟಿಮೇಳದ ಸದ್ದಿಗೆ ಮಲಗಿದ್ದ ಮಗು ಬೆಚ್ಚಿ ಎದ್ದು ಅಳತೊಡಗಿತು, ಮದುವೆ ಮನೆ ಗಲಾಟೆಗೆ ಯಾರ ಪಿಸುಮಾತೂ ಯಾರಿಗೂ ಕೇಳಲಿಲ್ಲ.
ನನ್ನ ಕಣ್ಣಿಗೆ ಬಿದ್ದ ಆ ಹುಡುಗಿಯ ಹಳದಿ ಬಣ್ಣದ ಗಾಗ್ರಾ, ತುಟಿಯಲ್ಲಿದ್ದ ಗಾಢ ರಂಗು, ಕಣ್ಣ ಕಾಡಿಗೆ ಮಾತ್ರ ನನ್ನನ್ನೇ ಆಕರ್ಷಿಸಿ, ನಕ್ಕು ಕರೆಯುವಂತಿತ್ತು. ನಾನು ಗಮನಿಸುತ್ತಿದ್ದೇನೆ ಅನ್ನುವುದನ್ನು ಅವಳೂ ಗಮನಿಸಿಬಿಟ್ಟು ಸಿಕ್ಕಿಬೀಳಿಸಿದಳು, ನಾನು ಗೊತ್ತಾದರೇನು ಅಂತ ಧೈರ್ಯದಿಂದ ಅವಳನ್ನೇ ನೋಡುತ್ತಾ ನಿಂತೇ ಇದ್ದೆ, ಆದರೆ ಆ ಹುಡುಗಿಯ ಪಕ್ಕವೇ ಕುಳಿತಿದ್ದ ಹುಡುಗನ ಹತ್ತಿರದ ಸಂಬಂಧಿ ಮಾತ್ರ ಅನುಮಾನ ಪಡುವವಳಂತೆ ಪದೇ ಪದೇ ನನ್ನ ನೋಡಿ, ಕಂಡುಹಿಡಿದೆ ಅಂತ ಕಣ್ಣರಳಿಸಿ ಎದ್ದು ಹೋದಳು.
ಆದರೆ ಅವಳನ್ನು ನನ್ನ ಹತ್ತಿರಕ್ಕೆ ತಂದಿದ್ದು ಮದುವೆ ಮನೆ ಊಟ. ಆ ಕಡೆಯಿಂದ ಈ ಕಡೆಗೆ ಬಂದಳು ಅವಳು, ಈ ಕಡೆಯಿಂದ ಆ ಕಡೆಗೆ ಹೋಗುತ್ತಿದ್ದೆ ನಾನು. ಇಬ್ಬರೂ ಒಂದು ಬಿಂದುವಿನಲ್ಲಿ ಸಂಧಿಸಿದೆವು, ಇಬ್ಬರೂ ಅಕ್ಕಪಕ್ಕವೇ ಕುಳಿತುಬಿಟ್ಟೆವು, ದೇವರೇ ವರ ಕೊಟ್ಟಂತೆ. ಅವಳ ಕಡೆಯಿಂದ ಗುರುತಿರುವ ನೆಂಟರ ಹೆಣ್ಮಕ್ಕಳು, ನನ್ನ ಕಡೆಯಿಂ ಗುರುತಿರುವ ಗಂಡ್ಮಕ್ಕಳು. ಮಧ್ಯೆ ಇಬ್ಬರೂ ಹೀಗೆ ಸೇರಿದ್ದೆವು, ನಗಲು ನಾನು ಅವಳ ಕಡೆ ತಿರುಗುವಾಗ ಅವಳು ಅದೇ ಹೊತ್ತಿಗೆ ಆಚೆ ತಿರುಗಿ ಬೇಕೆಂದೇ ನಕ್ಕು ಪಕ್ಕದವಳ ಜೊತೆ ಮಾತಾಡುತ್ತಾ ನನ್ನನ್ನು ಕೆಣಕಿದ್ದಳು, ಅವಳು ಈಚೆ ತಿರುಗುವಾಗ ನಾನೂ ಅದೇ ತಂತ್ರ ಮಾಡಿದ್ದರೂ ಮನಸ್ಸು ಮಾತ್ರ ಅವಳ ಕಡೆಗೇ ಇತ್ತು. ಕೊನೆಗೆ ನಾನೇ ಕೇಳಿದೆ, “ಹೆಸರೇನು?’
ಅವಳೆಂದಳು, “ಪ್ರಾರ್ಥನಾ’.
ಆಹಾ ಎಂಥ ಹೆಸರು, ಎಂಥ ಧ್ವನಿ. ಓದುತ್ತಿದ್ದಾಳಾ, ಫ್ರೆಂಡ್ಸ್ ಇರಬಹುದಾ, ಗಂಡ್ಮಕ್ಕಳು ಫ್ರೆಂಡ್ಸ್ ಇರುತ್ತಾರಾ, ಸಿನಿಮಾದಲ್ಲಿ ಆಗೋ ಥರ ಎಂಗೇಜೆ¾ಂಟ್ ಆಗಿದೆ ಅನ್ನುತ್ತಾಳಾ, ಕಮ್ಮಿಟೆಡ್ಡಾ, ಯಾರು ಹುಡುಗ, ಓದು ಯಾವಾಗ ಕಂಪ್ಲೀಟ್ ಆಗುತ್ತದೆ, ಈಗಲೇ ಬುಕ್ ಆಗಿಬಿಟ್ಟಿದ್ದಾಳಾ?
ಹೀಗೇ ಬಾಯಿಬಿಟ್ಟ ಕೇಳಿಲ್ಲ ಅನ್ನೋದು ಬಿಟ್ಟರೆ ಮನಸೊÕಳಗೇ ಕೇಳಿ ಆಗಿದೆ, ಅಯ್ಯೋ ದೇವರೇ ಬಡಿಸುವವರು ಕಳಿಸಿಕೊಡುವ ತಿಳಿ ಸಾರಿನ ಜೊತೆ, ಹಪ್ಪಳ, ಬಾಳಕದ ಜೊತೆ ಗುಲಾಬಿ ಹೂವನ್ನೂ ಕಳಿಸಿಕೊಟ್ಟಿದ್ದರೆ ಇಲ್ಲೇ ಅವಳಿಗೆ ಕೊಟ್ಟು ಮದುವೆ ಆಗ್ತಿàಯಾ ಅಂತ ಕೇಳಿಬಿಡುತ್ತಿದ್ದೆ, ಈ ಕ್ಷಣ ಯಾವಾಗ ಬೇಕಿದ್ದರೂ ಜಾರಿ ಹೋಗಬಹುದು, ಬೇಗ ಊಟ ಮುಗಿದು ಹೋಗುತ್ತಿದೆ, ಆಗಲೇ ಸಾಂಬಾರು ಬರುತ್ತಿದೆ, ಬಿಸಿಲೇರುತ್ತಿದೆ, ಊಟ ಮುಗಿಸಿ, ಹೊರಟೇ ಬಿಟ್ಟರೆ, ಹೋದವಳು ಮತ್ತೆಂದೂ ಸಿಗದೇ ಹೋದರೆ, ಸಿಕ್ಕರೂ ಮದುವೆಯಾಗಿಬಿಟ್ಟಿದ್ದರೆ, ಇಷ್ಟೊಂದು ಸ್ಲಿಮ್ ಇದ್ದ ಹುಡುಗಿ ಇನ್ನೊಂದೆರಡು ವರ್ಷಕ್ಕೆ ಮದುವೆಯಾಗಿ, ಮಗು ಹಡೆದು ಗಜಗಾಮಿನಿಯಾಗಿ ಕಣ್ಣೆದುರು ಬಂದರೆ- ಬರೀ ಆದರೆ ಹೋದರೆ.
ಥಟ್ಟನೆ ತಿರುಗಿ ದಡಬಡಿಸಿ ಒದರಿಬಿಟ್ಟೆ, “ಎಲ್ಲಿ ಓದಿ¤ದ್ದೀರಿ, ಯಾವ ಊರು, ಇವನಿಗೆ ಹೇಗೆ ನೀವು ರಿಲೇಟೀವ್, ಇವತ್ತು ಮದುವೆ ಪೂರ್ತಿ ಇದ್ದೇ ಮುಗಿಸಿ ಹೋಗುತ್ತೀರಾ?’
ಅವಳು ಪಕಪಕನೆ ನಕ್ಕಳು, ದೇವರೇ ನಿಂತು, ಪೋಣಿಸಿ ಕಳಿಸಿದ ಹಲ್ಲುಗಳ ಸಾಲು ನನ್ನ ಕಣ್ಣಲ್ಲಿ ನಾಟಿಹೋದವು, ನಗುವಾಗ ನೆರಿಗೆಯಾಗುವ ಅವಳ ಕಣ್ಣಂಚು ನನ್ನ ಕಣ್ಣಲ್ಲಿ ಹೂತು ಹೋಯಿತು.
“ನಂಬರು ಕೊಡ್ತೀನಿ, ನೀವೇ ಫೋನ್ ಮಾಡಿ, ಎಲ್ಲಾ ಹೇಳ್ತೀನಿ, ಈಗ ಹೇಳ್ಳೋಕ್ಕೆ ಶುರು ಮಾಡಿದ್ರೆ ಊಟ ಮಾಡೋಕ್ಕಾಗಲ್ಲ, ಸರಿಯಾಗ್ ಕೇಳÕಲ್ಲ.. ಮೈ ನಂಬರ್ ಈಸ್ ನೈನ್ ಫೋರ್…’
ಅವಳು ಮುಂದುವರಿಸುತ್ತಿದ್ದಳು. ಅವಳ ಬಾಯಲ್ಲಿ ಬಂದ ಒಂದೊಂದೂ ನಂಬರುಗಳೂ ವಾಸ್ಕೋಡಿಗಾಮ ಕಂಡು ಹಿಡಿದ ಭಾರತದ ಥರ, ನ್ಯೂಟನ್‌ನ ತಲೆ ಮೇಲೆ ಬಿದ್ದ ಸೇಬಿನ ಥರ, ಥಾಮಸ್ ಎಡಿಸನ್‌ಗೆ ಬೆಳಗಿದ ಬಲ್ಬ್ ಥರ, ಆರ್ಕಿಮಿಡಿಸ್‌ನ ಯುರೇಕಾ ಥರ ತಲೆ ಮೇಲೆ ನಕ್ಷತ್ರಗಳ ಥರ ತಿರುಗಾಡುತ್ತಿದ್ದವು. ಅದನ್ನ ಸೇವ್ ಮಾಡಿಕೊಳ್ಳಬೇಕಾಗಿಯೂ ಇರಲಿಲ್ಲ, ಅವಳು ಹೇಳಿದ ಅಂಕಿಸಂಕಿಗಳೆಲ್ಲಾ ನನ್ನ ಮನಸೊÕಳಗೆ ಅಚ್ಚಾಗುತ್ತಿತ್ತು.
ಅವಳ ಕಡೆ ತಿರುಗಿದೆ, ಅವಳ ಕಡೆಯಿಂದ ಪಾಯಸ ಬಡಿಸಿಕೊಂಡು ಬರುತ್ತಿದ್ದರು. ಅವಳ ಎಲೆ ಮೇಲೆ ಬಿದ್ದ ಪಾಯಸದಲ್ಲಿ ಗೋಡಂಬಿ ಎರಡೂವರೆ ಇತ್ತು, ನನ್ನ ಬಾಳೆ ಎಲೆ ನೋಡಿದೆ, ದ್ರಾಕ್ಷಿಯ ಗೊಂಚಲೇ ತಪ್ಪಿ ಬಿದ್ದಿತ್ತು. ಅವಳು ನೀಳ ಚಿಗುರು ಬೆರಳಿಂದ ಪಾಯಸವನ್ನು ಎತ್ತಿಕೊಂಡಳು, ನನ್ನ ಕಡೆ ನೋಡಿದಳು. ನಾನೂ ನಕ್ಕೆ.
ಮದುವೆ ಮಂಟಪದಲ್ಲಿ ಹಾಕಿದ ಹೋಮದ ಹೊಗೆಯ ಮಧ್ಯೆ ಮದುಮಕ್ಕಳಿಬ್ಬರೂ ಐಕ್ಯರಾಗಿದ್ದರು. ನಾನೂ ಹೊಗೆ ಹಾಕಿಸಿಕೊಳ್ಳಲಿದ್ದೇನೆಂಬ ವಿಷಯಕ್ಕೆ ರೋಮಾಂಚನಗೊಂಡು ಮುಂದೆ ನೋಡಿದೆ, ನಮ್ಮ ಕಡೆಯ ನೆಂಟರಿಷ್ಟರೆಲ್ಲಾ ಕೈಲಿ ತುತ್ತು ಹಿಡಿದೇ ನಮ್ಮಿಬ್ಬರನ್ನೇ ಮಿಕಿಮಿಕಿ ನೋಡುತ್ತಿದ್ದರು, ಸಿನಿಮಾಗಳಲ್ಲಿ ಫ್ರೀಜ್ ಆದ ಜ್ಯೂನಿಯರ್ ಆರ್ಟಿಸ್ಟ್‌ಗಳ ಥರ ಅವರಿದ್ದರು.
ನಾವಿಬ್ಬರೂ ಹೀರೋ ಹೀರೋಯಿನ್‌ಗಳ ಥರ ನಾವು ಸ್ಲೋ ಮೋಶನ್‌ನಲ್ಲಿ ಪಾಯಸದ ತುತ್ತಿರುವ ಕೈಯನ್ನು ಮೇಲಕ್ಕೆತ್ತಿ ಹಿಡಿದಿದ್ದೆವು.
– ವಿಕಾಸ್ ನೇಗಿಲೋಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.