ಲಾಲ್ಬಾಗಲ್ಲಿ ನೋಡಬನ್ನಿ ಗೋಲ್ಗುಂಬಜ್
Team Udayavani, Jan 19, 2017, 12:20 PM IST
ಬೆಂಗಳೂರು: ಜಗತ್ಪ್ರಸಿದ್ಧ ಗೋಲ್ಗುಂಬಜ್ನ್ನು ಸಸ್ಯಕಾಶಿ ಲಾಲ್ಬಾಗ್ನಲ್ಲಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನೋಡುವ ಅವಕಾಶ ಲಭ್ಯವಾಗಲಿದೆ!. ಹೌದು, ಗೋಲ್ಗುಂಬಜ್ ವಾಸ್ತುಶಿಲ್ಪದ ಪ್ರತಿಕೃತಿಯಾಗಿ ನಿರ್ಮಾಣ ವಾಗಿರುವ ಪುಷ್ಪಗುಮ್ಮಟ ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಧಾನ ಆಕರ್ಷಣೆಯಾಗಲಿದೆ.
ಗೋಲ್ಗುಂಬಜ್ ಮಾದರಿಯನ್ನು ಚಚ್ಚೌಕವಾಗಿ ನಾಲ್ಕು ಕಡೆ 30 ಅಡಿ ಅಗಲ ಹಾಗೂ ಒಟ್ಟಾರೆ 30 ಅಡಿ ಎತ್ತರದ ವಿಸ್ತೀರ್ಣದಲ್ಲಿ ಸುಮಾರು 4 ಲಕ್ಷ ಕೆಂಪು, ಬಿಳಿ, ಕೇಸರಿ ಹಾಗೂ ಹಳದಿ ಬಣ್ಣಗಳ ಗುಲಾಬಿ ಹೂಗಳಿಂದ ರೋಸ್ಗುಂಬಜ್ ನಿರ್ಮಿಸಲಾಗಿದೆ. ಈ ಪುಷ್ಪ ಸ್ಮಾರಕದ ಮುಂದೆ ಸುಂದರ ಉದ್ಯಾನವೊಂದು ನಿರ್ಮಾಣಗೊಳ್ಳಲಿರುವುದು ವಿಶೇಷ. ಏಳು ದಿನಗಳ ಕಾಲ 32 ನುರಿತ ನೌಕರರಿಂದ ರೂಪಗೊಂಡು, 52 ಜನ ಪುಷ್ಪ ಪರಿಣಿತರ ಪರಿಶ್ರಮದಿಂದ ವಿಕನಗೊಳ್ಳುವ ರೋಜ್ಗುಂಬಜ್ ನೋಡುಗರನ್ನು ಸೆಳೆಯಲಿವೆ.
ಆರ್ಕಿಡ್ಸ್ ಪುಷ್ಪಗಳ ಸಂಭ್ರಮ: ಸಮುದ್ರಮಟ್ಟದಿಂದ ಐದು ಸಾವಿರ ಅಡಿಗಿಂತಲೂ ಎತ್ತರದಲ್ಲಿರುವ ಕಡು ಶೀತ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಸಿಕ್ಕಿಂ ರಾಜ್ಯದ ಸಿಂಬಿಡಿಯಂ ಆರ್ಕಿಡ್ಸ್ ಪುಷ್ಪಗಳ ಪ್ರದರ್ಶನವೂ ಈ ಫಲಪುಷ್ಪ ಪ್ರದರ್ಶನದಲ್ಲಿದೆ. ಸುಮಾರು 1.5 ಅಡಿ ಉದ್ದದ ಆಕರ್ಷಕ ಹೂಗೊಂಚಲುಗಳನ್ನು ಈ ಸಿಂಬಿಡಿಯಂ (ಸೀತಾಳೆ)ಆರ್ಕಿಡ್ಸ್ ಬಿಡಲಿದ್ದು, ಅತ್ಯಾಕರ್ಷಕವಾಗಿರುತ್ತವೆ. 250ಕ್ಕೂ ಹೆಚ್ಚು ಅತ್ಯಾಕರ್ಷಕ ಅಪರೂಪದ ಸಿಂಬಿಡಿಯಂ ಆರ್ಕಿಡ್ಸ್ ಪುಷ್ಪಗಳನ್ನು ಬೃಹತ್ ಬಿದಿರಿನ ವಿನ್ಯಾಸದ ಮೇಲೆ ವಿಶೇಷವಾಗಿ ಸಿಂಗರಿಸಿ ಪ್ರದರ್ಶಿಸಲಾಗುತ್ತಿದೆ.
ವರ್ಟಿಕಲ್ ಗಾರ್ಡನ್: ಬೆಂಗಳೂರಿನ ಭಾಗ್ಯಲಕ್ಷ್ಮಿ ಫಾರಂ ಮತ್ತು ನರ್ಸರಿ ಸಂಸ್ಥೆಯು ಸುಮಾರು 35 ಸಾವಿರ ವಿವಿಧ ವರ್ಣಗಳ ಪುಷ್ಪಗಳು ಮತ್ತು ಅತ್ಯಾಕರ್ಷಕ ಎಲೆ ಜಾತಿಯ ಗಿಡಗಳನ್ನು ಬಳಸಿಕೊಂಡು 1750 ಚದರಡಿ ಪ್ರದೇಶದಲ್ಲಿ ಗಾಜಿನ ಮನೆಯ ಎಡಭಾಗದ ಪ್ರಾಂಗಣದಲ್ಲಿ 37 ಅಡಿ ಉದ್ದ, 15 ಅಡಿ ಅಗಲ ಹಾಗೂ 12 ಅಡಿ ಎತ್ತರದ ಲಂಬೋದ್ಯಾನ ಭವನದ ಮಾದರಿ ಮನೆಯೊಂದನ್ನು ಸುಮಾರು 45 ಲಕ್ಷ ರೂ.ಗಳ ವೆಚ್ಚದಲ್ಲಿ ವಿಶೇಷವಾಗಿ ನಿರ್ಮಿಸಿ ಪ್ರದರ್ಶಿಸುತ್ತಿರುವುದು ಇದೇ ಮೊದಲು.
ಹೂವಿನಿಂದ ಅರಳುವ ವಿವಿಧ ಪಾತರಗಿತ್ತಿಗಳ ಪ್ರತಿರೂಪ, ಶೀತವಲಯದ ಪುಷ್ಪಗಳ ಪ್ರದಶ°, ಬಿಎಸ್ಎಫ್ ಯೋಧರ ಬ್ಯಾಂಡ್, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಬ್ಯಾಂಡ್ ವಾದನ ಹಿಮ್ಮೇಳ, ಕೆಎಸ್ಆರ್ಪಿ ಬ್ಯಾಂಡ್ ಹಿಮ್ಮೇಳ ನಡೆಯಲಿದೆ. ದೇಶ ವಿದೇಶಗಳ ವಿಶೇಷ ಬಗೆಯ ಸೇವಂತಿಗೆ ಹೂಗಳ ಜೋಡಣೆ, ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿಯಿಂದ ಹೂಗಳ ಪ್ರದರ್ಶನ, ಗಾಜಿನ ಮನೆಯ ನಾಲ್ಕು ಮೂಲೆಗಳಲ್ಲಿ ಹೂವಿನ ಪಿರಮಿಡ್, ತೂಗುವ ಹೂಗಳ ಚೆಲುವು, ಹೊಸಹೊಸ ಹೂಗಳ ಒಸಗೆ ಮತ್ತು ಗಾಜಿನಮನೆಯ ಒಳಾಂಗಣಕ್ಕೆ ತಂಪು ನೀಡುವ ಫಾಗರ್ಸ್ ಅಳವಡಿಕೆ ಪುಷ್ಪ ಪ್ರದರ್ಶದಲ್ಲಿ ಈ ಬಾರಿ ಕಂಡು ಬರುವ ವಿಶೇಷಗಳಾಗಿವೆ.
ಹೊರಾಂಗಣ ವಿಶೇಷ: ಹುಲ್ಲುಹಾಸಿನ ಮೇಲೆ ಆಕರ್ಷಕ ಪೊಟೊನಿಯಾ ಹೂಗಳಿಂದ ಬೃಹತ್ ಹೂವಿನ ಜಲಪಾತ, ಕುಂಡದಲ್ಲಿ ಬೆಳೆದ ಹೂಗಳಿಂದ ರೂಪಿತವಾದ ನವಿಲಿನ ಪ್ರತಿರೂಪ, ಪ್ಲೋರಲ್ ಹಾರ್ಟ್ ಪರ್ಗೊಲಾಗಳು, ತೂಗು ಪುಷ್ಪಗಳು, ಬೆಳಗ್ಗೆ 10ರಿಂದ 12 ಹಾಗೂ ಮಧ್ಯಾಹ್ನ 3ರಿಂದ 6ಗಂಟೆಯವರೆಗೆ ಹಾಡುಗಾರಿಕೆ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ. ಡಾ.ಎಂ.ಎಚ್.ಮರಿಗೌಡ ಅವರು ನಡೆದು ಬಂದ ಹಾದಿ ಮತ್ತು ಸಾಧನೆ ಕುರಿತ ಬೃಹತ್ ಕುಠೀರ, ಲಾಲ್ಬಾಗ್ ತರಬೇತಿ ಕೇಂದ್ರದಿಂದ ಮಿನಿ ಲ್ಯಾಂಡ್ ಸ್ಕೇಪ್ ಮಾಡೆಲ್ಗಳು, ಸಸ್ಯಪ್ರೇಮಿಗಳಿಗಾಗಿ ಸಸ್ಯ ಸಂತೆ ನಡೆಯಲಿದೆ.
ಮುನ್ನೆಚ್ಚರಿಕೆ ಕ್ರಮ: ಕಳೆದ ತಿಂಗಳು ಬಾಲಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಉದ್ಯಾನದೆಲ್ಲೆಡೆ ಇರುವ ಕಲ್ಲು ಕಂಬಗಳ ಪರಿಶೀಲನೆ ನಡೆಸಲಾಗಿದೆ. 67 ಕಂಬಗಳು ಅಸುರಕ್ಷಿತವಾಗಿರುವುದು ಕಂಡುಬಂದಿದ್ದು, ಅವುಗಳ ದುರಸ್ಥಿ ಮಾಡಲಾಗಿದೆ. ಲಾಲ್ಬಾಗ್ ಎಲ್ಲೆಡೆ 90ಕ್ಕೂ ಹೆಚ್ಚು ನಾಯಿಗಳಿವೆ. ಅವುಗಳಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಗಿಡ, ಮರಗಳು ಹೆಚ್ಚಾಗಿರುವ ಉದ್ಯಾನವನ ಇದಾಗಿರುವುದರಿಂದ ಹಾವುಗಳು ಕೂಡ ಇವೆ. ಹಾವು ಕಡಿತಕ್ಕೆ ಔಷಧ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿನ ನಾಲ್ಕು ದ್ವಾರದಲ್ಲೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ವಾಹನ ನಿಲುಗಡೆ ವ್ಯವಸ್ಥೆ: ಫಲಪುಷ್ಪ ಪ್ರದರ್ಶನ ವೇಳೆ ಲಾಲ್ಬಾಗ್ಗೆ ವಾಹನ ಪ್ರವೇಶ ನಿಷೇಧಿಸಲಾಗಿದೆ. ಆದರೆ ಶಾಂತಿನಗರ ಬಸ್ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದು. ಜೆ.ಸಿ.ರಸ್ತೆಯಿಂದ ಬರುವ ವಾಹನಗಳು ಜೆ.ಸಿ.ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿ ಇರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣ ಮತ್ತು ಲಾಲ್ಬಾಗ್ ಮುಖ್ಯ ಪ್ರವೇಶದ್ವಾರ ಮತ್ತು ಜೋಡಿ ರಸ್ತೆ ಪ್ರವೇಶ ದ್ವಾರಗಳ ನಡುವೆ ಇರುವ ಆಲ್ ಅಮೀನ್ ಕಾಲೇಜು ಮೈದಾನದಲ್ಲಿ ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದರು.
ನಾಳೆ ಫಲಪುಷ್ಪ ಪ್ರದರ್ಶನ ಉದ್ಘಾಟನೆ
ಬೆಂಗಳೂರು: ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನಕಲಾ ಸಂಘ ಸಹಯೋಗದಲ್ಲಿ ಜ.20ರಂದು ಬೆಳಗ್ಗೆ 11ಕ್ಕೆ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನ ಉದ್ಘಾಟನೆ ನಡೆಯಲಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಶ್ಚಂದ್ರ ರೇ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಶಾಸಕ ಆರ್.ವಿ.ದೇವರಾಜ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಬಿಬಿಎಂಪಿ ವಿರೋಧಪಕ್ಷದ ನಾಯಕ ಉದಯ್ ಶಂಕರ್, ಬಿಬಿಎಂಪಿ ಸದಸ್ಯೆ ವಾಣಿ ವಿ.ರಾವ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ಚಾವ್ಲಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜ.21ರಂದು ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣಹೂವಿನ ಜೋಡಣೆ, ಥಾಯ್-ಆರ್ಟ್, ಜಾನೂರ್ ಮತ್ತು ಕುಬj ಮರಗಳ ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಅಂದು ಮಧ್ಯಾಹ್ನ 1ಕ್ಕೆ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಕವಯತ್ರಿ ಲತಾರಾಜಶೇಖರ್ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಲಾಲ್ಬಾಗ್ ಅಭಿವೃದ್ಧಿಗೆ ಶ್ರಮಿಸಿದ ಕೃಂಬಿಗಲ್ ಅವರ ಮರಿಮಗಳು ಜರ್ಮನಿಯ ಅಲಿಯಾ ಫೆಲ್ಪ್ ಗಾರ್ಡಿನರ್ ಕೃಂಬಿಗಲ್ ಪಾಲ್ಗೊಳ್ಳಲಿದ್ದಾರೆ ಎಂದರು.
ಹೂದೋಟಗಳು, ತರಕಾರಿ ತೋಟ, ತಾರಸಿ ತೋಟಗಳು, ಉದ್ಯಾನವನ ಸ್ಪರ್ಧೆಗಳು, ಗಾಜಿನ ಮನೆಯ ಪ್ರದರ್ಶಿಕೆಗಳು ಹಾಗೂ ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಬೋನ್ಸಾಯ್ ಗಿಡಗಳ ಪ್ರದರ್ಶನ, ಡಚ್ ಹೂವಿನ ಜೋಡಣೆ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜ.25ರಂದು ಮಧ್ಯಾಹ್ನ 3ಕ್ಕೆ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಜನ್ಮ ಶತಮಾನೋತ್ಸವ: ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಜ.23ರಂದು ಮಧ್ಯಾಹ್ನ 2ಕ್ಕೆ ಲಾಲ್ಬಾಗ್ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ನಡೆಯಲಿದೆ. ಮೈಸೂರು ಮಹಾರಾಜ ಎಚ್.ಎಚ್.ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಹಾರಾಣಿ ಎಚ್.ಎಚ್.ತ್ರಿಷಿಕಾ ಕುಮಾರಿ ಒಡೆಯರ್ ಉದ್ಘಾಟಿಸುವರು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಉದ್ಯಾನಕಲಾ ಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್, ಡಿಸಿಪಿ (ದಕ್ಷಿಣ) ಶರಣಪ್ಪ, ಉಪ ನಿರ್ದೇಶಕ ಚಂದ್ರಶೇಖರ್ ಇದ್ದರು.
ಟಿಕೆಟ್ ದರ
ಸಾಮಾನ್ಯ ದಿನಗಳಲ್ಲಿ ದೊಡ್ಡವರಿಗೆ 50 ರೂ. ಹಾಗೂ ರಜಾ ದಿನಗಳಲ್ಲಿ 60 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮಕ್ಕಳಿಗೆ 20 ರೂ. ಶುಲ್ಕ ನಿಗದಿ ಮಾಡಲಾಗಿದೆ. ಸರ್ಕಾರ ಮತ್ತು ಖಾಸಗಿ ಶಾಲಾ ಮಕ್ಕಳಿಗೆ 20, 23, 24, 25 ಹಾಗೂ 27ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಸ್ವೈಪಿಂಗ್ ಯಂತ್ರ
ನೋಟ್ ಬಂದ್ನಿಂದ ಆಗಿರುವ ತೊಂದರೆ ಹಿನ್ನೆಲೆಯಲ್ಲಿ ಪ್ರದರ್ಶನದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಸುಮಾರು 9 ಸ್ವೈಪಿಂಗ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಕಾರ್ಡುಗಳ ಮೂಲಕವೂ ಗಿಡಗಳನ್ನು ಖರೀದಿ ಮಾಡಬಹುದು. ಹಾಪ್ಕಾಮ್ಸ್ ಗಳಲ್ಲೂ ಈ ಯಂತ್ರಗಳಿದ್ದು, ಹಣ್ಣು, ಪಾನಿಯ ಖರೀದಿಗೆ ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.