“ಅಲ್ಲಮ್ಮ ‘ ಚಿತ್ರಕ್ಕೆ ಬಸವಾಭಿಮಾನಿಗಳ ಆಕ್ಷೇಪ
Team Udayavani, Jan 23, 2017, 3:45 AM IST
ಧಾರವಾಡ: ಗಣರಾಜ್ಯೋತ್ಸವ ದಿನದಂದು ತೆರೆ ಕಾಣಲಿರುವ “ಅಲ್ಲಮ’ ಚಲನಚಿತ್ರ ಶನಿವಾರ ರಾತ್ರಿ ಸಾಹಿತ್ಯ ಸಂಭ್ರಮದಲ್ಲಿ ಮೊದಲ ಪ್ರದರ್ಶನ ಕಂಡಿದ್ದು, ಚಿತ್ರದಲ್ಲಿ ಇಷ್ಟಲಿಂಗವನ್ನು ಮನಸೋ ಇಚ್ಛೆ ತೋರಿಸಿದ್ದಕ್ಕೆ ಬಸವಾಭಿಮಾನಿಗಳ ಸಂವಾದದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಹಾಡೊಂದರ ವಿವಾದಕ್ಕೆ ಸಿಲುಕಿರುವ ಅಲ್ಲಮ, ಪ್ರಿಮಿಯರ್ ಶೋ ಬಳಿಕ ಬಸವಾಭಿಮಾನಿಗಳ ಅಸಮಾಧಾನಕ್ಕೆ ಗುರಿಯಾಗಿದೆ. ಚಿತ್ರದುದ್ದಕ್ಕೂ ಅಲ್ಲಮನಿಗೆ ಇಷ್ಟಲಿಂಗ ಹಾಕಿಲ್ಲ. ಶೃಂಗಾರದ ದೃಶ್ಯ ಅತಿಯಾಯ್ತು ಎನ್ನುವ ಆರೋಪಗಳು ಕೇಳಿ ಬಂದವು.
ಇಡೀ ಚಿತ್ರದಲ್ಲಿ ಅಲ್ಲಮನ ಗುರು ಅನಿಮಿಷಯೋಗಿ ಪ್ರಸ್ತಾಪವಿಲ್ಲ. ಘಟಿಕಾಸ್ಥಾನದ ನಂದಿಮಯ್ಯ, ಗೌತಮಾರ್ಯರನ್ನು ಅಲ್ಲಮನ ಗುರು ಎಂದು ಬಿಂಬಿಸಲಾಗಿದೆ. ಇದು ವಚನ ಸಾಹಿತ್ಯವನ್ನು ತಿರುಚಿದಂತಾಗಿದೆ. ಚಿತ್ರದಲ್ಲಿನ ಸಿದ್ಧರಾಮೇಶ್ವರರ ಉಪದೇಶ ವಚನಾಧಾರಿತವಾಗಿಲ್ಲ ಎನ್ನುವಂಥ ಆಕ್ಷೇಪಗಳು ವ್ಯಕ್ತವಾದವು. ಸಂವಾದದಲ್ಲಿ ಪ್ರಶ್ನಿಸುವವರ ಸಂಖ್ಯೆ ಹೆಚ್ಚುತ್ತಲೇ ಹೋಯ್ತು. ಸಂಘಟಕರು ಸಂವಾದವನ್ನು ಮೊಟಕುಗೊಳಿಸಿ, ಮುಂದಿನ ಗೋಷ್ಠಿಗೆ ಅಣಿಯಾದರು.
ಸಂವಾದದಲ್ಲಿ ಉತ್ತರಿಸಿದ ಚಿತ್ರದ ನಿರ್ದೇಶಕ ನಾಗಾಭರಣ, “ಅಲ್ಲಮ ಆಕಾಶ. ನಾನು ತೋರಿಸಿದ್ದು ಬೊಗಸೆಯಷ್ಟು ಮಾತ್ರ. ಸಿನಿಮಾಗಳಿಗೆ ತನ್ನದೇ ಇತಿ-ಮಿತಿಗಳಿವೆ. ಅವುಗಳ ಮಧ್ಯೆ ಅಲ್ಲಮನನ್ನು ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಎಲ್ಲೂ ವಿವಾದಕ್ಕೆ ಆಸ್ಪದ ಕೊಡಬಾರದು ಎನ್ನುವ ಕಾಳಜಿಯಿಂದ ಸಾಕಷ್ಟು ಅಧ್ಯಯನ, ಎಂ.ಎಂ. ಕಲಬುರ್ಗಿ-ಚಿದಾನಂದಮೂರ್ತಿಯವರೊಂದಿಗೆ ಚರ್ಚೆ ನಡೆಸಿ, ಸಲಹೆ-ಸೂಚನೆಗಳನ್ನು ಪಡೆಯಲಾಗಿದೆ. ಸಿನಿಮಾ ಎನ್ನುವುದು ಮನರಂಜನಾ ಮಾಧ್ಯಮ. ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಕಾಗುತ್ತದೆ. ಎಲ್ಲ ಚಿತ್ರಗಳಂತೆ ಅಲ್ಲಮನಲ್ಲೂ ಒಂದೊಂದು ಅಂಶ, ಒಂದೊಂದು ವರ್ಗದ ಪ್ರೇಕ್ಷಕರಿಗೆ ಇಷ್ಟ-ಕಷ್ಟವಾಗುತ್ತದೆ ಎಂದರು.
ಆಭಾಸ ಎನ್ನುವಂತೆ ನಟಿಸಿಲ್ಲ:
ಅಲ್ಲಮನ ಪಾತ್ರಕ್ಕೆ ಧನಂಜಯ್ ಅಷ್ಟಾಗಿ ಸೂಕ್ತವಾಗಿಲ್ಲವೋ? ಅಥವಾ ಅವರಿಂದ ಅಲ್ಲಮನ ಪಾತ್ರ ನಿರ್ವಹಿಸಲು ಕಷ್ಟವಾಯಿತೋ? ಎಂಬ ಪ್ರಶ್ನೆಯೂ ಸಂವಾದದಲ್ಲಿ ಕೇಳಿ ಬಂದಿತು.
ಇದಕ್ಕೆ ಉತ್ತರಿಸಿದ ನಾಯಕ ನಟ ಧನಂಜಯ್, “ಅಲ್ಲಮನ ಬಗ್ಗೆ ನಾನು ಓದಿಕೊಂಡಿದ್ದು ಸಾಸಿವೆಯಷ್ಟು ಮಾತ್ರ. 12ನೇ ಶತಮಾನದ ಅಲ್ಲಮ ಹೇಗಿದ್ದರೋ ನಾನು ನೋಡಿಲ್ಲ. ನಾನೂ ಅಧ್ಯಯನ, ಆ ಕುರಿತು ಅನೇಕ ಚರ್ಚೆಗಳಲ್ಲಿ ಪಾಲ್ಗೊಂಡ ಬಳಿಕ ನನ್ನಲ್ಲಿ ಮೂಡಿದ ಕಲ್ಪನೆಯ ಅಲ್ಲಮನನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ನಾವು ನೋಡಿದ ವ್ಯಕ್ತಿಗಳ ಪಾತ್ರ ನಿರ್ವಹಣೆಯೇ ಬೇರೆ, ಕಾಣದ ವ್ಯಕ್ತಿಗಳ ಪಾತ್ರ ಪೋಷಣೆಯೇ ಬೇರೆ. ಆದರೆ ಖಂಡಿತವಾಗಿಯೂ ಆಭಾಸ ಎನಿಸುವಂತೆ ನಟಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
ಚಿತ್ರಕ್ಕೆ ಸಂಭಾಷಣೆ ಬರೆದವರಲ್ಲಿ ಒಬ್ಬರಾದ ಪ್ರತಿಭಾ ನಂದಕುಮಾರ್ ಮಾತನಾಡಿ, ಸಿನಿಮಾ ಆರಂಭಿಸಿದಾಗ ಧನಂಜಯ್‌ನನ್ನು ನೋಡಿದ ಕೆಲವರು “ಓಹ್! ಇದು ಸಿಕ್ಸ್ ಪ್ಯಾಕ್ ಅಲ್ಲಮ’ ಎಂದಿದ್ದು ಉಂಟು. ಆದರೆ ನಟ ಧನಂಜಯ್ ಅಲ್ಲಮನ ನಾನಾ ರೂಪಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದರು.
ಬ್ರೋಚರ್ ಬಿಡುಗಡೆ
ಪ್ರಿಮಿಯರ್ ಷೋಗಿಂತ ಮೊದಲು ಖ್ಯಾತ ಕವಿ ಚನ್ನವೀರ ಕಣವಿಯವರು ಅಲ್ಲಮ ಸಿನಿಮಾದ ಬ್ರೋಚರ್ ಬಿಡುಗಡೆಗೊಳಿಸಿ, ಅಲ್ಲಮನಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ವಸ್ತ್ರ ವಿನ್ಯಾಸಕಿ ನಾಗಿಣಿ ಭರಣ, ನಟಿ ಮೇಘನಾರಾಜ್, ಸಾಹಿತಿ ಬಿ.ಆರ್. ಲಕ್ಷಣರಾವ್, ನಿರ್ಮಾಪಕ ಶ್ರೀನಿವಾಸ ಖೋಡೆ ಇದ್ದರು.
ಸಿನಿಮಾದಲ್ಲಿ ಬಸವಾದಿ ಶರಣರನ್ನು ಅವಮಾನಿಸಲಾಗಿದೆ. ಲಿಂಗಧಾರಣೆ ಬಸವಣ್ಣನಿಗಿಂತಲೂ ಮುಂಚೆ ವೈದಿಕ ಪರಂಪರೆಯಲ್ಲಿತ್ತು ಎಂತಲೂ, ಇಷ್ಟಲಿಂಗದ ಬದಲು ಜ್ಯೋತಿರ್ಲಿಂಗ ಎಂತಲೂ ತೋರಿಸಲಾಗಿದೆ. ಎಡಗೈ ಬದಲು ಬಲಗೈಯಲ್ಲಿ ಲಿಂಗಪೂಜೆಯ ದೃಶ್ಯಗಳನ್ನು ಅಳವಡಿಸುವ ಮೂಲಕ ಶರಣ ಸಂಸ್ಕೃತಿಗೆ ಅಪಮಾನ ಮಾಡಲಾಗಿದೆ. ಅಲ್ಲಮ ಸಿನಿಮಾ ವಿರುದ್ಧ ಜ. 26ರಂದು ರಾಷ್ಟ್ರೀಯ ಬಸವ ದಳದಿಂದ ಹೋರಾಟ ಮಾಡಲಾಗುವುದು.
-ಎಚ್.ಎಸ್. ಬೇವಿನಗಿಡದ, ರಾಷ್ಟ್ರೀಯ ಬಸವ ದಳ, ಧಾರವಾಡ
ಇದು ಒಂದು ಅಲ್ಲಮ ಅಷ್ಟೇ. ಅಲ್ಲಮನ ಕುರಿತು ನೂರು ಸಿನಿಮಾ ಮಾಡಬಹುದು. ಮುಂದಿನ ಅಲ್ಲಮನ ಸಿನಿಮಾದಲ್ಲಿ ಇವುಗಳನ್ನ ಅಳವಡಿಸಿಕೊಳ್ಳೋಣ. ಈ ಅಲ್ಲಮನನ್ನೂ ಅಪ್ಪಿಕೊಳ್ಳಿ.
– ಟಿ.ಎಸ್.ನಾಗಾಭರಣ, ಅಲ್ಲಮ ಸಿನಿಮಾ ನಿರ್ದೇಶಕ
– ಬಸವರಾಜ ಕರುಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.