ಪಿಂಪಲ್ ಸ್ಟಾರ್ ಮೊಡವೆ ಹುಡ್ಗಿಯ ಬಯಾಗ್ರಫಿ
Team Udayavani, Jan 24, 2017, 3:45 AM IST
ಪರೀಕ್ಷೆ ಹತ್ತಿರ ಬಂದಾಗ ಕಾಲೇಜಿನವರು ಓದಲು ಕೆಲವೊಂದಿಷ್ಟು ದಿನ ರಜಾ ಕೊಟ್ಟಿದ್ದರು. ಮನೆಯಲ್ಲಿ ಸಮಯೋಚಿತವಾಗಿ ಪೌಷ್ಟಿಕಾಂಶಯುತ ಊಟ ತಿಂಡಿ ಸಿಕ್ಕಿದ್ದಕ್ಕೋ ಅಥವಾ ಯಾವುದೇ ಧೂಳು, ಬಿಸಿಲು ತಾಕದೆ ಇದ್ದಿದ್ದಕ್ಕೋ ಅಥವಾ ಸುಬ್ಬಣ್ಣನ ಬೇಕರಿ ತಿಂಡಿ ತಿನ್ನಲು ಆಗದೇ ಇದ್ದಿದ್ದಕ್ಕೋ ಏನೋ ಮುಖದ ಮೇಲೆ ಒಡವೆಯಂತಿದ್ದ ಮೊಡವೆಗಳು ಮಾಯವಾಗುತ್ತಾ ಬಂದಿದ್ದವು. ಪರೀಕ್ಷೆ ದಿನಗಳಲ್ಲಿ ಸಹಪಾಠಿಗಳು ಓದಿನಲ್ಲಿ ನಿರತರಾಗಿದ್ದರಿಂದ ನನ್ನ ಮೋರೆಯ ಬಗ್ಗೆ ಗಮನ ಹರಿಸಿರಲಿಲ್ಲ. ಪರೀಕ್ಷೆ ಮುಗಿದ ಮೇಲೆ ಮತ್ತೆ ಕೆಲವು ದಿನ ರಜಾ ಸಿಕ್ಕಿದ್ದು ಅವು ಮುಗಿದ ಮೇಲೆ ಯಥಾಸ್ಥಿತಿಯಂತೆ ಕಾಲೇಜಿನತ್ತ ದಾಪುಗಾಲಿಟ್ಟೆ.
ಇನ್ನೇನು ತರಗತಿಯೊಳಗಡೆ ಕಾಲಿಡಬೇಕು ಎನ್ನುವಷ್ಟರಲ್ಲಿ ಗೆಳತಿಯರು ಅಡ್ಡ ಬಂದು ಎಲ್ಲರೂ ದಿಟ್ಟಿಸಿಕೊಂಡು ನನ್ನನ್ನೇ ನೋಡುತ್ತಿದ್ದರು. ಮುಖದ ಮೇಲೆ ಮಸಿ-ಗಿಸಿ ಏನಾದರೂ ಬಳಿದಿದೆಯೇ ಅಥವಾ ಕಣ್ಣಿಗೆ ಸ್ವಲ್ಪವೇ ಸ್ವಲ್ಪ ಹಚ್ಚಿದ ಕಾಡಿಗೆ ವದನದ ತುಂಬ ಹರಡಿದೆಯೇ ಎಂಬ ಆತಂಕ ಶುರುವಾಯಿತು.
ನನ್ನನ್ನೇ ನೋಡುತ್ತಿದ್ದ ದೊಡ್ಡ ದೊಡ್ಡ ಆ ಕಣ್ಣುಗಳು ರೆಪ್ಪೆ ಮಿಟುಕಿಸಿ ಅಂತೂ ಬಾಯಿ ತೆರೆದು ಪದ್ದೂ. ಚೆಂದ ಕಾಣಸ್ತಿದ್ಯಲೇ ಎಂದಾಗ ಹಾರಿ ಹೋಗುತ್ತಿದ್ದ ಪ್ರಾಣಪಕ್ಷಿ ಮರಳಿ ಹೃದಯದ ಗೂಡಿಗೆ ಸೇರಿದ ಅನುಭವ ಆಗಿತ್ತು. ಏನು ಔಷಧಿ ಮಾಡಿದೆ ಎಂದು ಕೇಳಿದರು. ನಾನು ಸಹಜವಾಗಿ ಏನಿಲ್ಲ ಎಂದೆ. ಆದರೆ ನನ್ನ ಉತ್ತರ ಅವರಿಗೆ ಸಮಾಧಾನ ತರಲಿಲ್ಲ. ಕೆಲವೊಬ್ಬರಂತೂ ಆವಾಜ್ ಹಾಕಲು ಶುರುಮಾಡಿದರು. ಒಂದು ಕಡೆ ನನ್ನ ರಕ್ತ ಕೊತಕೊತನೆ ಕುದಿಯುತ್ತಿದ್ದರೂ ಅವರನ್ನು ಶಾಂತ ಪಡಿಸಲೇಬೇಕಾದ ಅನಿವಾರ್ಯತೆಯಿದ್ದರಿಂದ ಸಂತೈಸುವ ಬಗೆ ತಿಳಿಯದೆ ಪೇಚಿಗೆ ಸಿಲುಕಿಬಿಟ್ಟಿದ್ದೆ.
ಹುಡುಗರೇ ಬಳಿಬಂದು ಎಷ್ಟು ಗಂಟೆ ಮೇಕಪ್‌ಗೆ ಸಮಯ ತೆಗೆದುಕೊಂಡೆ ಎಂದಾಗ ಕ್ಷಣ ಕಾಲ ಮೂಕ ಸ್ತಬ್ಧನಾಗಿಬಿಟ್ಟೆ. ನನ್ನ ಮುಖದ ಸೌಂದರ್ಯದ ವಿಷಯ ಕಾಲೇಜಿನಲ್ಲಿ ಇಷ್ಟುದೊಡ್ಡ ಪ್ರಮಾಣದಲ್ಲಿ ಬ್ರೇಕಿಂಗ್ ನ್ಯೂಸ್ ಮಾಡುತ್ತದೆಂದು ಭಾವಿಸಿರಲಿಲ್ಲ, ಬಿಡಿ. ಅದು ಅವರ ತಪ್ಪೆಂದು ಹೇಳಲಾರೆ. ಡಿಗ್ರಿ ಆರಂಭವಾದ ಕೆಲವು ದಿನಗಳಲ್ಲಿ ನನ್ನ ಮುಖವನ್ನು ಬೆಣ್ಣೆಗೆ ಹೋಲಿಸಬಹುದಿತ್ತೇನೋ ಏನೋ! ಆದರೆ ಕುರುಕಲು ತಿಂಡಿಯ ಬಗೆಗೆ ನನಗಿದ್ದ ಒಲವು ಬೆಣ್ಣೆಯಂತಿದ್ದ ತ್ವಚೆಯ ಕಾಂತಿಯನ್ನು ಬಿಸಿ ಬಿಸಿ ಬಾಂಡಲಿ ಮೇಲೆ ಹಾಕಿದ ಬೆಣ್ಣೆಯಂತೆ ಕರಗಿಸಿಬಿಟ್ಟಿತು. ಹೀಗಾಗಿ ಎಲ್ಲರಿಗೂ ನಾನು ಮೊಡವೆ ಮುಖದವಳು ಎಂದೇ ಪರಿಚಿತಳು.
ನನ್ನ ಪಾದರಕ್ಷೆಗಳು ಎಲ್ಲಾ ವೈದ್ಯರ ಆಸ್ಪತ್ರೆಯ ಭೇಟಿ ಮಾಡಿದ್ದರೂ ಮೊಡವೆ ನಾ ಬಿಟ್ಟರೂ ನಿನ್ನನ್ನು ಬಿಟ್ಟು ಹೋಗಲಾರೆ ಎನ್ನುತ್ತಿತ್ತು. ಅಮ್ಮನ ಗೆಳತಿ ಜಯಾ ಆಂಟಿ ಒಮ್ಮೆ ಸಿಕ್ಕಾಗ ಚಿಕ್ಕವಳಿದ್ದಾಗ ಹೇಗಿದ್ದೆ? ಈಗ ಹೇಗಾಗಿದ್ದೀಯಾ? ಎಂದಿದ್ದರು. ಮೊದಲೇ ಉರಿಯುತ್ತಿದ್ದ ಅಗ್ನಿಕುಂಡಕ್ಕೆ ತುಪ್ಪ ಸುರಿದಂತಾಗಿತ್ತು.
ಮೊಡವೆ ನಿವಾರಣೆಯಾಗಿ ಮೊಗದಲ್ಲಿ ತೇಜಸ್ಸು ಹೊರಹೊಮ್ಮುತ್ತಿದ್ದಂತೆ ಆಗುವವರು, ಆಗದಿದ್ದವರೆಲ್ಲಾ ಬಂದು ಬಂದು ಮಾತನಾಡಿಸಲು ಶುರುಮಾಡಿದ್ದರು. ಒಂದು ಹುಡುಗಿ ಯಾವ ಬ್ಯೂಟಿಪಾರ್ಲರ್‌ನಲ್ಲಿ ಫೇಶಿಯಲ್ ಮಾಡಿಸಿದ್ದೀಯಾ ಎಂದು ವ್ಯಂಗ್ಯವಾಗಿ ಕೇಳಿದಳು. ಏನೂ ಮಾಡಿಸಿಲ್ಲ ಎಂಬ ಚಿಕ್ಕ ಹೇಳಿಕೆ ನೀಡಿ ಸುಮ್ಮನಾದೆ. ಮತ್ತೂ ಕುತೂಹಲಕಾರಿಗಳು ಎಡೆಬಿಡದೆ ಬ್ಲೀಚ್ ಮಾಡಿಸಿದ್ದೀಯಾ ಎಂದರು.
ಫೇಶಿಯಲ್, ಬ್ಲೀಚ್ ಇಂತಹ ಪದಗಳನ್ನು ಟಿವಿಯಲ್ಲೋ, ಬಸ್ಸಿನಲ್ಲೋ, ಸಾರ್ವಜನಿಕ ಸ್ಥಳಗಳಲ್ಲೋ ಕಾಣಸಿಗುತ್ತಿದ್ದ ಅಪರಿಚಿತ ಆಂಟಿ, ಅಜ್ಜಿ, ಅಕ್ಕಂದಿರ ಬಾಯಲ್ಲಿ ಕೇಳಿದ್ದ ನೆನಪು ಬಂದಿತು. ನಿಜ ಹೇಳಬೇಕೆಂದರೆ ನಾನು ಬ್ಯೂಟಿಪಾರ್ಲರ್‌ನ ಖಾಯಂ ಗಿರಾಕಿ ಅಲ್ಲವೇ ಅಲ್ಲ ಅಂದರೆ ಸುಳ್ಳಲ್ಲ. ವಿಶೇಷವಾಗಿ ತ್ವಚೆಯ ಬಗ್ಗೆ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಪ್ರಯೋಗ ಮಾಡುವ ಧೈರ್ಯ ನನಗಿಲ್ಲ.
ಮೊಗಸಿರಿಯ ಕಾರಣ ಕಂಡುಹಿಡಿಯಲು ಬಯಸಿದವರು ತಾವು ಬುದ್ಧಿವಂತರೆಂದು ತಿಳಿದವರು ಏನು ಔಷಧಿ ಮಾಡಿದೆ? ನಿಜ ಹೇಳು, ನಾನು ಒಂದು ವರ್ಷ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿದ್ದೇನೆ ಎಂದಿದ್ದೂ ಉಂಟು. ಕೆಲಸದ ಅನುಭವ ಒಂದು ವೇಳೆ ಇದ್ದಲ್ಲಿ ಮುಖದ ಕಾಂತಿ ವೃದ್ಧಿ ಕಾರಣವೇನಿರಬಹುದು ಎಂದು ಪತ್ತೆಮಾಡಬಹುದಿತ್ತಲ್ಲಾ ಎಂದು ಮನಸ್ಸಿಗೆ ಅನಿಸಿದ್ದರೂ ಕೆರೆದು ಗಾಯಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ.
ಬೆಳಿಗ್ಗೆ ಎದ್ದ ಕೂಡಲೇ ಕರ ಹಿಡಿದು ಕರಾಗ್ರೇ ವಸತೇ ಲಕ್ಷಿ¾à ಎಂದು ಹೇಳಬೇಕಾದವಳು. ಮುಖ ಮುಟ್ಟಿ ಮತ್ತೆ ಗುಳ್ಳೆಗಳು ಹುಟ್ಟಿಕೊಂಡಿವೆಯೇ ಎಂದು ನೋಡಬೇಕಾಗುವಷ್ಟು ಹೆದರಿಕೆ ಬಂದಿದೆ. ಕನ್ನಡಿ ನೋಡಲು ಹೆದರುತ್ತಿದ್ದವಳಿಗೆ ಕನ್ನಡಿ ಬಿಟ್ಟಿರಲಾಗುತ್ತಿಲ್ಲ. ಬೆಳ್ಳಗೆ ಕಾಣುತ್ತಿದ್ದೀಯಲ್ಲಾ ಎಂದು ಮೂರನೆಯವರು ಹೇಳುವಾಗ ಅಲ್ಲಿ ಅವರ ಕೊಂಕಿನ ಜೊತೆಗೆ ಸಕಾರಾತ್ಮಕ ಅಂಶವೂ ಸೇರಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದು ನನಗೆ ಅನಗತ್ಯ ಎನಿಸಿತ್ತು.
ಆತ್ಮೀಯರು ಮನೆಗೆ ಹೋಗಿ ದೃಷ್ಟಿ ತೆಗೆಸಿಕೋ, ಇಲ್ಲದಿದ್ದರೆ ಮತ್ತೆ ಮೊಡವೆ ತನ್ನ ಪ್ರತಾಪ ತೋರಿಸಬಹುದು ಎಂದಾಗ ಈ ಹಿಂದೆ ಗೆಳತಿಯೊಬ್ಬಳು ಮೊಡವೆ ನಿನಗೆ ದೃಷ್ಟಿrಬೊಟ್ಟಿನಂತಿದೆ ಎಂದು ಹೇಳಿದ್ದು ಜ್ಞಾಪಕಕ್ಕೆ ಬಂದು ನಗು ಉಮ್ಮಳಿಸಿ ಬಂತು. ಜೊತೆಗೆ ನಕಾರಾತ್ಮಕ ಸಂದರ್ಭದಲ್ಲಿಯೂ ನನ್ನನ್ನು ಸಂತೈಸುವ ಯತ್ನ ಮಾಡಿದಳಲ್ಲಾ ಆಕೆ ಎಂದು ಒಮ್ಮೆ ಅಂತಹ ಗೆಳತಿ ಹೊಂದಿದ್ದಕ್ಕೆ ಹೆಮ್ಮೆಯೆನಿಸಿತು.
ಜಯ ಆಂಟಿಗೆ ಮುಖ ಎಂದು ತೋರಿಸುವೆನೆಂಬ ಕಾತರದಿಂದ ಇದ್ದೇನೆ. ಅವರ ಬರುವಿಕೆಗಾಗಿ ಈ ಮೊಡವೆ ರಹಿತ ಮುಖ ಕಾಯುತ್ತಿದೆ. ಆಮೇಲೆ ಅವರ ಮುಖ ಹೇಗಾಗುವುದು ಎಂದು ನೋಡಬೇಕಿದೆ.
– ಪದ್ಮಶ್ರೀ ಭಟ್ಟ ಕೊಪ್ಪದಗದ್ದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.