ಪುಟ್ಟಗೌರಿಯ ಕತೆ
Team Udayavani, Jan 25, 2017, 2:45 PM IST
ಕೇರಳದ ಪ್ರತಿಷ್ಠಿತ “ಕಲೋತ್ಸವ’ ದಲ್ಲಿ ಭಾಗವಹಿಸೋದು ಈ ರಾಜ್ಯದ ಹೆಣ್ಣುಮಕ್ಕಳ ಕನಸು. ಸಾವಿರಾರು ಮಂದಿ ಚಿತ್ರ ವಿಚಿತ್ರ ವೇಷಗಳಲ್ಲಿ ಅದ್ಭುತ ಕಲಾಪ್ರದರ್ಶನ ನೀಡುತ್ತಾರೆ. ವಿವಿಧ ಸ್ಪರ್ಧೆಗಳು, ಎಲ್ಲಿಲ್ಲದ ಉತ್ಸಾಹದಿಂದ ಬಣ್ಣ ಹಚ್ಚಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು, ಅವರ ಕೇಕೆ, ನಗುವಿನಲ್ಲಿ ಕಳೆಕಳೆಯಾಗಿತ್ತು ಈ ಬಾರಿಯ ಕಲೋತ್ಸವ. ಆದರೆ ಅಲ್ಲೊಬ್ಬ ಹುಡುಗಿ ಮಾತ್ರ ಬಹಳ ಮಂಕಾಗಿದ್ದಳು, ಆಗಾಗ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಉಳಿದ ಮಕ್ಕಳ ಜೊತೆಗೆ ಬೆರೆಯದೇ ಮೂಲೆಯಲ್ಲಿ ಕೂತು ಕಷ್ಟಪಟ್ಟು ಅಳುವನ್ನು ನಿಯಂತ್ರಿಸುತ್ತಿದ್ದಳು.
ಆ ಹುಡುಗಿ ಹೆಸರು ಸುಕನ್ಯಾ. ಕಲೋತ್ಸವಂನಲ್ಲಿ ಭಾಗವಹಿಸೋದು ಅವಳ ಬಹಳ ದಿನಗಳ ಆಸೆ. ಮದುವೆಯ ಸಂದರ್ಭದಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳು ಮಾಡುವ ಸಾಂಪ್ರದಾಯಿಕ ನೃತ್ಯವನ್ನು ಆಕೆ ಪ್ರದರ್ಶಿಸಬೇಕಿತ್ತು.
ಅದಕ್ಕೋಸ್ಕರ ಬಹಳ ದಿನಗಳಿಂದ ಅಭ್ಯಾಸ ಮಾಡಿದ್ದಳು. ಅಂಥ ಸ್ಥಿತಿವಂತರಲ್ಲದಿದ್ದರೂ ಅವಳ ಅಪ್ಪ ಅವಳಿಗಾಗಿ ಕಾಸ್ಟೂéಮ್‌ಗಳನ್ನು ರೆಡಿಮಾಡಿ ಮಗಳಿಗೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿದ್ದರು. ಮಗಳು ಕಲೋತ್ಸವಂ ವೇದಿಕೆಯಲ್ಲಿ ಡಾನ್ಸ್ ಮಾಡೋದನ್ನು ಕಣ್ತುಂಬಿಕೊಳ್ಳಬೇಕೆಂಬುದು ಅವರ ಕನಸೂ ಹೌದು.
ಮರುದಿನವೇ ಮಗಳ ನೃತ್ಯ ಪ್ರದರ್ಶನ. ಮನೆಯಿಡೀ ಅವಳದೇ ಓಡಾಟ. ಪ್ಯಾಕಿಂಗ್, ಕಾಸ್ಟೂéಮ್ ರೆಡಿ ಮಾಡ್ಕೊಳಕ್ಕೆ ಅಂತ ಓಡಾಡ್ತಿದ್ದ ಅಪ್ಪ ಸುಭಾಷ್ ಇದ್ದಕ್ಕಿದ್ದ ಹಾಗೆ ರಕ್ತವಾಂತಿ ಮಾಡಿಕೊಳ್ಳಲಾರಂಭಿಸಿದರು. ಮನೆಯವರು ಆಧರಿಸೋ ಮೊದಲೇ ಕುಸಿದು ಬಿದ್ದವರು ಮತ್ತೆ ಏಳಲೇ ಇಲ್ಲ. ಕ್ಷಣದ ಹಿಂದೆ ಸಂಭ್ರಮದ ಗೂಡಾಗಿದ್ದ ಮನೆಯಲ್ಲಿ ಕ್ಷಣಮಾತ್ರದಲ್ಲಿ ನೀರವ ಮೌನ, ಆಗಾಗ ಕೇಳಿಬರುವ ರೋದನ.
ಇಂಥ ಸ್ಥಿತಿಯಲ್ಲಿ ಅಪ್ಪನ ಮುದ್ದಿನ ಮಗಳ ಸ್ಥಿತಿ ಹೇಗಿರಬೇಡ? ತನ್ನ ನೃತ್ಯ ನೋಡಲು ಕಾತರದಿಂದ ಕಾಯುತ್ತಿದ್ದ ಅಪ್ಪ ಕಣ್ಣಮುಂದೆಯೇ ಬಾರದ ಲೋಕಕ್ಕೆ ಹೋದರೆ?
ಅಳುತ್ತ ಕೂತಿದ್ದ ಮಗಳನ್ನು ಸಮಾಧಾನ ಮಾಡಿದ್ದು ಧೈರ್ಯ ತುಂಬಿದ್ದು ಅಮ್ಮ.
” ನೀನು ಡಾನ್ಸ್ ಮಾಡಬೇಕು ಮಗಳೇ, ಇಲ್ಲಾಂದ್ರೆ ಮಲಗಿರೋ ಅಪ್ಪ ಕಣ್ಣೀರು ಹಾಕ್ತಾರೆ ..’ ಅಂದರಾಕೆ ಭಾವುಕರಾಗಿ.
ಮರುದಿನ ಮುಂಜಾನೆ ಅಪ್ಪನ ಅಂತಿಮ ವಿಧಿ ನಡೆಯೋ ಮೊದಲೇ ಮಗಳು ಹೊರಟುನಿಂತಿದ್ದಳು.
ಹಸಿದ ಹೊಟ್ಟೆಯಲ್ಲಿ ಕಣ್ಣೀರು ಸುರಿಸುತ್ತಲೇ ಸುಕನ್ಯಾ ಡಾನ್ಸ್ ಪ್ರದರ್ಶಿಸಿದಳು.
ಬೆರಗಿನಿಂದ ನೃತ್ಯ ನೋಡುತ್ತಿದ್ದ ಪತ್ರಕರ್ತೆಯೊಬ್ಬರಿಗೆ ಈಕೆಯ ಕಣ್ಣೀರು ಕಂಡು ಅನುಮಾನ ಬಂತು. ಆಕೆ ಕರೆದು ವಿಚಾರಿಸಿದಾಗ ಹೊರಬಿದ್ದ ಸತ್ಯವಿದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.