ಲತಾಂಗಿ ಸೋದರಿಯರ ಸುನಾದ
Team Udayavani, Jan 27, 2017, 3:45 AM IST
ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಈಚೆಗೆ ನಾದಸುಧಾ ಸಂಗೀತ ವಿದ್ಯಾಲಯದ ದಶಮಾನೋತ್ಸವದ ಸಂಭ್ರಮ. ಇದಕ್ಕೆ ಪುಟವಿಟ್ಟಂತೆ ಉಡುಪಿಯ, ಲತಾಂಗಿ ಸಹೋದರಿಯ ರೆಂದೇ ಖ್ಯಾತಿ ಪಡೆದ ಕು| ಅರ್ಚನಾ ಹಾಗೂ ಕು| ಸಮನ್ವಿ ಇವರ ಅದ್ಭುತ ಕಛೇರಿ. ಚೆನ್ನೆಯ ಚಿತ್ರವೀಣಾ ಎನ್. ರವಿಕಿರಣ್ ಗರಡಿಯಲ್ಲಿ ಪಳಗುತ್ತಿರುವ ಇವರೀರ್ವರ ಸಾಧನೆ ಅನ್ಯಾದೃಶ. ಕಛೇರಿಯ ಆರಂಭದಿಂದ ಅಂತ್ಯ ದವರೆಗೂ ಶ್ರೋತೃಗಳನ್ನು ಸೆಳೆದು ಹಿಡಿದಿಟ್ಟುಕೊಂಡದ್ದು ಈ ಕುವರಿಯರ ಸಾಧನೆ ಹಾಗೂ ಬದ್ಧತೆಗೆ ಸಾಕ್ಷಿ.
ಅಭೋಗಿ ವರ್ಣದೊಂದಿಗೆ ಆರಂಭಗೊಂಡ ಕಛೇರಿ ಹಂಸಧ್ವನಿಯ ವಾತಾಪಿ ಗಣಪತಿಂ ಭಜೇ ಕೃತಿಯೊಂದಿಗೆ ಮುಂದುವರಿದಾಗ ಹೊಸತನ ಎದ್ದು ಕಾಣುತ್ತಿತ್ತು. ಗೌಳ ರಾಗದ ಅಗಣಿತ ಗುಣಶೀಲ ಹಾಗೂ ಶುದ್ಧಧನ್ಯಾಸಿಯ ಸಾಮೋದಂ ಚಿಂತಯಾಮಿ ಈ ಎರಡು ಅಪರೂಪದ ಕೃತಿಗಳನ್ನು ನಿರಾಯಾಸವಾಗಿ ಸ್ವರ ಖಚಿತತೆ ಮತ್ತು ರಾಗ ನಿಖೀರತೆಯೊಂದಿಗೆ ಪ್ರಸ್ತುತಪಡಿಸಿದರು. ಘನ ಸದೃಶಾ ಭಾಸಂ… ಮಾಡಿದ ನೆರವಲ್ ಮತ್ತು ಸ್ವರಪ್ರಸ್ತಾರ ಪೊರುತ್ತಂ ನೊಂದಿಗೆ ಮಿಂಚಿ ಚಿರಸ್ಥಾಯಿಯಾಯಿತು. ಬಂಟುರೀತಿಯಲ್ಲಿ ಹಂಸನಾದದ ಸೊಬಗು ಮೆರೆದಿತ್ತು. ತದನಂತರದ ಪ್ರಧಾನ ರಾಗ ತೋಡಿಯ ಆಲಾಪನೆ ಗಂಭೀರ – ಪ್ರೌಢಮಟ್ಟದ್ದಾಗಿತ್ತು. ಆದಿ ತಾಳ ತ್ರಿಶ್ರ ನಡೆ ಯಲ್ಲಿ ಸಾಗಿದ ಪುರಂದರದಾಸರ ಕೃತಿ ಕಂಗಳಿ ದ್ಯಾತಕೋ… ನೆರವಲ್‌ನಿಂದ ಮನೋಹರವಾಗಿತ್ತು. ಸ್ವರ ಕಲ್ಪನೆಯಲ್ಲಿನ ಗ್ರಹಭೇದವಂತೂ ವಯಸ್ಸಿಗೆ ಮೀರಿದ ಪ್ರತಿಭೆಯೇ ಸೈ.
ಗ್ರಹಭೇದವೆಂದರೆ ಸಂಸ್ಕೃತದಲ್ಲಿ ತುಂಡರಿಸಿ ಸ್ವೀಕರಿಸು ವುದು ಎಂದರ್ಥ ಮಾಡಬಹುದು. “ಗ್ರಹ ಉಪಾದಾನೇ’ ಎಂಬ ಕ್ರಿಯಾಪದದಿಂದ ನಿಷ್ಪನ್ನವಾದ ಗ್ರಹ ಎನ್ನುವ ಶಬ್ದಕ್ಕೆ ಸ್ವೀಕರಿಸುವುದು ಎಂದರ್ಥ. “ಭಿದಿರ್ ವಿದಾರಣೇ’ ಎಂಬ ಧಾತುವಿನಿಂದ ಹುಟ್ಟದ ಭೇದ ಶಬ್ದಕ್ಕೆ ತುಂಡರಿಸುವುದು ಎಂದರ್ಥ. ಒಟ್ಟಿನಲ್ಲಿ ಗ್ರಹಭೇದವೆಂದರೆ ಒಂದು ರಾಗವನ್ನು ತುಂಡರಿಸಿ ಇನ್ನೊಂದು ರಾಗವನ್ನು ಸ್ವೀಕರಿಸುವುದು ಎಂದು ತಿಳಿದುಕೊಳ್ಳಬಹುದು.
ಬೆಂಗಳೂರಿನ ವೈಭವ ರಮಣಿ ಅವರ ವಯಲಿನ್ ಸಹಕಾರ ಅತ್ಯುತ್ತಮವೆಂದೇ ಹೇಳಬೇಕು. ತ್ರಿಶ್ರ ನಡೆ ಆದಿತಾಳಕ್ಕೆ ತನಿ ನುಡಿಸಿದ ಸುನಾದಕೃಷ್ಣ ಅಮೈ ಕಛೇರಿಯ ಒಟ್ಟಂದಕ್ಕೆ ಕಾರಣವಾದರು. ಅಭೇರಿ ಹಾಗೂ ಮಾಂಡ್ ರಾಗದ ಭಜನೆಗಳು ಹೃದ್ಯವಾಗಿದ್ದು ಶ್ರೋತೃಗಳ ಮನತಣಿಸಿತು. ವಯಸ್ಸಿನಲ್ಲಿ ಕಿರಿಯರಾದ ಈ ಕುವರಿಯರಿಗೆ ಸಂಗೀತ ಪ್ರೌಢಿಮೆಯ ಮೆರುಗು ತಂದ ವಿ| ವಸಂತಲಕ್ಷ್ಮೀ ಹೆಬ್ಟಾರ್ ಹಾಗೂ ಪ್ರೊ| ಅರವಿಂದ ಹೆಬ್ಟಾರ್ ಇವರ ಗುರುತ್ವಕ್ಕೆ ನಮೋ ನಮಃ. ಅಂದು ಪ್ರಾತರಾರಭ್ಯ ವಿದ್ಯಾಲಯದ ವಿದ್ಯಾರ್ಥಿ ಗಳಿಂದ ಗಾಯನವಿತ್ತು. ಗುರು ವಿ| ಅರುಣಾ ಕೆ. ಎಸ್. ಭಟ್ ಇವರ ಕೀರ್ತನೆಗಳ ಕಿರು ಪ್ರಸ್ತುತಿ ಹಾಗೂ ಶಿಷ್ಯರೊಡ ಗೂಡಿ ಹಾಡಿದ ಪಂಚರತ್ನ ಕೃತಿ ಗಾಯನ ಸಂತ ತ್ಯಾಗರಾಜ ರಿಗೆ ಸಂದ ಆರಾಧನೆಯೇ ಆಗಿತ್ತು.
ನಾದ ಸುರಭಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.