ಕಡೆಗೂ ಲೋಕಾಯುಕ್ತ ನೇಮಕ ,ಸುಮಾರು 1 ವರ್ಷದಿಂದ ಹುದ್ದೆ ಖಾಲಿಯಿತ್ತು
Team Udayavani, Jan 27, 2017, 8:17 AM IST
ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಲೋಕಾಯುಕ್ತ ಸ್ಥಾನಕ್ಕೆ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ನೇಮಕಗೊಂಡಿದ್ದಾರೆ. ಹಣ ಸುಲಿಗೆಯ ಆರೋಪ ಹೊತ್ತು ನ್ಯಾ| ಭಾಸ್ಕರ ರಾವ್ ನಿರ್ಗಮಿಸಿದ ಬಳಿಕ ಸುಮಾರು ಒಂದು ವರ್ಷದಿಂದ ಖಾಲಿಯಾಗಿದ್ದ ಲೋಕಾಯುಕ್ತ ನೇಮಕಾತಿ ಒಂದರ್ಥದಲ್ಲಿ ಗಜಪ್ರಸವವೇ ಆಗಿತ್ತು. ಭಾಸ್ಕರ ರಾವ್ ಹೋದ ಬಳಿಕ ಎಸ್.ಆರ್.ನಾಯಕ್ ಅವರನ್ನು ಲೋಕಾಯುಕ್ತ ಸ್ಥಾನಕ್ಕೆ ತರಲು ಸರಕಾರ ಬಯಸಿದರೂ ನಾಯಕ್ ಮೇಲೆ ಆರೋಪಗಳಿದ್ದ ಕಾರಣ ಎರಡೆರಡು ಸಲ ರಾಜ್ಯಪಾಲರು ಸರಕಾರದ ಶಿಫಾರಸನ್ನು ತಿರಸ್ಕರಿಸಿದ್ದರು. ವಿಪಕ್ಷ ಬಿಜೆಪಿಯೂ ನಾಯಕ್ ನೇಮಕಾತಿಗೆ ಸಹಮತ ಹೊಂದಿರಲಿಲ್ಲ. ಈ ನಡುವೆ ಇತರ ಕೆಲವು ಹೆಸರುಗಳು ಕೇಳಿ ಬಂದರೂ ಯಾವುದೂ ಗಟ್ಟಿಯಾಗಿ ನಿಲ್ಲಲಿಲ್ಲ. ಲೋಕಾಯುಕ್ತರಿಲ್ಲದೆ ಕಾಂಗ್ರೆಸ್ ಸರಕಾರದ ಅವಧಿ ಮುಗಿಯಲಿದೆ ಎಂದೆನ್ನುತ್ತಿರುವಾಗ ನ್ಯಾ| ವಿಶ್ವನಾಥ ಶೆಟ್ಟಿ ಈ ಸ್ಥಾನವನ್ನು ಅಲಂಕರಿಸಿದ್ದಾರೆ.
ವಿಶ್ವನಾಥ ಶೆಟ್ಟಿ ಆಯ್ಕೆಯಲ್ಲಿ ಸರಕಾರ ಮತ್ತು ವಿಪಕ್ಷದ ನಡುವೆ ಸಹಮತವಿತ್ತು. ಹಾಗೆಂದು ಇದು ಸಂಪೂರ್ಣ ವಿವಾದರಹಿತ ಆಯ್ಕೆ ಎನ್ನುವಂತಿಲ್ಲ. ವಿಶ್ವನಾಥ ಶೆಟ್ಟಿಯೂ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದಾರೆಂದು ಹೋರಾಟಗಾರ ಎಸ್. ಆರ್. ಹಿರೇಮs… ಆರೋಪಿಸಿದ್ದಾರೆ ಮತ್ತು ರಾಜ್ಯಪಾಲರಿಗೂ ದೂರು ನೀಡಿ ಸಾಕಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಸರಕಾರದಿಂದ ಸ್ಪಷ್ಟನೆ ಪಡೆದುಕೊಂಡ ಬಳಿಕ ಕೊನೆಗೂ
ರಾಜ್ಯಪಾಲರು ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸುವ ಕಡತಕ್ಕೆ ಅಂಕಿತ ಹಾಕಿದ್ದಾರೆ.
ಈಗ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಎರಡು ಸಂಸ್ಥೆಗಳಿವೆ. ಒಂದು ಲೋಕಾಯುಕ್ತ ಹಾಗೂ ಇನ್ನೊಂದು ಸಿದ್ದರಾಮಯ್ಯ ಸರಕಾರ ರಚಿಸಿರುವ ಭ್ರಷ್ಟಾಚಾರ ನಿಗ್ರಹ ಪಡೆ. ಎರಡೂ ಸಂಸ್ಥೆಗಳ ಉದ್ದೇಶ ಒಂದೇ ಆಗಿದ್ದರೂ ಅಧಿಕಾರ ವ್ಯಾಪ್ತಿ ಭಿನ್ನವಾಗಿದೆ. ಶಾಸಕರನ್ನು, ಸಚಿವರನ್ನು ಮತ್ತು ಮುಖ್ಯಮಂತ್ರಿಯನ್ನು ಕೂಡ ತನಿಖೆ ಮಾಡುವ ಅಧಿಕಾರ ಹೊಂದಿರುವ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಸರಕಾರ ಭ್ರಷ್ಟಾಚಾರ ನಿಗ್ರಹ ಪಡೆಯನ್ನು ರಚಿಸಿದೆ ಎಂಬ ಆರೋಪವೂ ಇದೆ. ಇದಕ್ಕೆ ಪುಷ್ಟಿಕೊಡುವಂತೆ ಲೋಕಾಯುಕ್ತ ವಿಚಾರದಲ್ಲಿ ಸರಕಾರದ ನಡೆಗಳು ಗುಮಾನಿಗಳಿಂದಲೇ ಕೂಡಿದ್ದವು ಎನ್ನುವುದು ಸುಳ್ಳಲ್ಲ. ಭಾಸ್ಕರ ರಾವ್ ಮೇಲೆ ಆರೋಪ ಕೇಳಿ ಬಂದಾಗ ಅವರನ್ನು ಹುದ್ದೆಯಿಂದ ಕಿತ್ತು ಹಾಕಲು ಮೀನಮೇಷ ಎಣಿಸಿ ಟೀಕೆಗಳಿಗೆ ಗುರಿಯಾಗಿತ್ತು. ಅನಂತರ ಲೋಕಾಯುಕ್ತರಾಗುವ ಅರ್ಹತೆ ಇಲ್ಲದವರ ಹೆಸರನ್ನು ಶಿಫಾರಸು ಮಾಡಿ ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಇದನ್ನು ನೋಡುವಾಗ ಪ್ರಬಲ ಲೋಕಾಯುಕ್ತ ವ್ಯವಸ್ಥೆ ಇರುವುದು ಬೇಡ ಎಂದು ಸರಕಾರ ನಿರ್ಧರಿಸಿದೆಯೇ ಎಂಬ ಅನುಮಾನ ಉಂಟಾಗಿತ್ತು.
ಎನ್.ವೆಂಕಟಾಚಲ ಮತ್ತು ಸಂತೋಷ್ ಹೆಗ್ಡೆ ಲೋಕಾಯುಕ್ತ ರಾಗಿದ್ದ ಕಾಲದಲ್ಲಿ ಲೋಕಾಯುಕ್ತದ ಹೆಸರು ಉಚ್ಛಾ†ಯದಲ್ಲಿತ್ತು. ಹಲವು ಸಚಿವರು, ಶಾಸಕರು, ಕಡೆಗೆ ಮುಖ್ಯಮಂತ್ರಿಯೇ ಜೈಲಿಗೆ ಹೋಗುವಂತೆ ಮಾಡಿದ ಹಿರಿಮೆ ಈ ಇಬ್ಬರು ಲೋಕಾಯುಕ್ತರಿಗೆ ಸಲ್ಲುತ್ತದೆ. ಅನಂತರವೇ ಜನರಿಗೆ ಲೋಕಾಯುಕ್ತದ ಮೇಲೆ ವಿಶ್ವಾಸ ಬಂದದ್ದು.
ರಾಜ್ಯದಲ್ಲಿ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದಿರುವುದು 1984ರಲ್ಲಿ. ಮೌಲ್ಯಾಧಾರಿತ ರಾಜಕೀಯದ ಪ್ರತಿಪಾದಕರಾಗಿದ್ದ ರಾಮಕೃಷ್ಣ ಹೆಗ್ಡೆ ದೂರಾಲೋಚನೆ ಫಲವಿದು. ಆಗಲೇ ಅವರು ಮುಖ್ಯಮಂತ್ರಿಯನ್ನು ಕೂಡ ಲೋಕಾಯುಕ್ತ ವ್ಯಾಪ್ತಿಗೆ ತಂದಿದ್ದರು. ಪ್ರಸ್ತುತ 17 ರಾಜ್ಯಗಳಲ್ಲಿ ಲೋಕಾಯುಕ್ತ ಇದ್ದು, ಈ ಪೈಕಿ ಕರ್ನಾಟಕದ್ದೇ ಅತ್ಯಂತ ಪ್ರಬಲವಾದ ಕಾಯಿದೆ.
ಭಾಸ್ಕರ ರಾವ್ ಲೋಕಾಯುಕ್ತರಾಗಿದ್ದ ಕಾಲದಲ್ಲಿ ಲೋಕಾಯುಕ್ತ ಹೆಸರಿಗೆ ಇನ್ನಿಲ್ಲದ ಕಳಂಕ ಅಂಟಿಕೊಂಡಿದೆ. ಅವರ ಪುತ್ರ ಅಶ್ವಿನಿ ರಾವ್ ಲೋಕಾಯುಕ್ತ ಕಚೇರಿಯನ್ನೇ ಕೇಂದ್ರವಾಗಿಟ್ಟುಕೊಂಡು ಸರಕಾರಿ ನೌಕರರಿಗೆ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಿರುವುದು ಬೇಲಿಯೇ ಹೊಲ ಮೇಯ್ದದ್ದಕ್ಕೆ ಅತ್ಯುತ್ತಮ ಉದಾಹರಣೆ. ಇದರಿಂದ ನಷ್ಟವಾಗಿರುವ ಲೋಕಾಯುಕ್ತದ ವಿಶ್ವಾಸಾರ್ಹತೆ ಮರಳಿ ಸ್ಥಾಪಿಸುವ ದೊಡ್ಡ ಸವಾಲು ವಿಶ್ವನಾಥ ಶೆಟ್ಟಿ ಎದುರಿದೆ. ಲೋಕಾಯುಕ್ತರಿಲ್ಲದ ಒಂದು ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟರ ಬೇಟೆಯಾಗಿಲ್ಲ.
ಎಸಿಬಿಯನ್ನು ನೆಪವಾಗಿಟ್ಟುಕೊಂಡು ಸರಕಾರ ಲೋಕಾಯುಕ್ತದ ಕೈಕಟ್ಟಿ ಹಾಕಿದರೆ ಇಷ್ಟೆಲ್ಲ ಒದ್ದಾಡಿ ಲೋಕಾಯುಕ್ತರನ್ನು ನೇಮಿಸಿಯೂ ಫಲವಿಲ್ಲದಂತಾಗಬಹುದು. ಇದರಿಂದ ಲೋಕಾಯುಕ್ತ ನೇಮಕ ಉದ್ದೇಶವೇ ನಿಷ#ಲವಾಗುವ ಸಾಧ್ಯತೆಯಿದೆ. ಲೋಕಾಯುಕ್ತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಹಿಂದೆ ಇರುವ ಮಾದರಿಯಲ್ಲೇ ಪರಮಾಧಿಕಾರವನ್ನು ಕೊಡಬೇಕು. ಇಲ್ಲದಿದ್ದರೆ ಟೀಕಿಸುವವರ ಕಣ್ಣಿಗೆ ಮಣ್ಣೆರಚಲು ಲೋಕಾಯುಕ್ತರ ನೇಮಕವಾಗಿದೆ ಎಂಬ ಅಪವಾದವನ್ನು ಹೊತ್ತುಕೊಳ್ಳಬೇಕಾದೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.