ಈಶ್ವರಪ್ಪಗೆ ನೈತಿಕತೆ ಪ್ರಶ್ನೆ ಹಾಕಿದ ಮುಖ್ಯಮಂತ್ರಿ
Team Udayavani, Jan 27, 2017, 11:33 AM IST
ಬೆಂಗಳೂರು: ರಾಯಣ್ಣ ಬ್ರಿಗೇಡ್ ರೂವಾರಿ ಕೆ.ಎಸ್. ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹಿಂದುಳಿದ ವರ್ಗದ ಸಮುದಾಯಕ್ಕೆ ಕಲ್ಪಿಸಿದ ಮೀಸಲಾತಿಗೆ ವಿರೋಧ ವ್ಯಕ್ತವಾದಾಗ ಸುಮ್ಮನಿದ್ದ ಈಶ್ವರಪ್ಪನವರಿಗೆ ಸಂಗೊಳ್ಳಿ ರಾಯಣ್ಣನ ಹೆಸರೇಳಲು ನೈತಿಕತೆ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಯಣ್ಣನ ದೇಶಭಕ್ತಿ ಸ್ಮರಿಸುವ ಜತೆ ಜತೆಗೆ ಈಶ್ವರಪ್ಪ ವಿರುದ್ಧ ಮೊದಲ ಬಾರಿಗೆ ಖಾರವಾಗಿ ಮಾತನಾಡಿದ್ದಾರೆ. ಅಲ್ಲದೆ, ಕುರುಬ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗೆ ತಮ್ಮ ಶ್ರಮ ಎಷ್ಟಿದೆ ಎಂಬುದನ್ನೂ ಸಭೆಯ ಮುಂದಿಟ್ಟರು.
“ಸಮಾಜದ ಎಲ್ಲ ವರ್ಗದ ಜನರ ಹಿತಕ್ಕಿಂತ ತಮ್ಮ ಸ್ವಾರ್ಥ ಸಾಧನೆಗಾಗಿ ನಿಲುವು ಬದಲಿಸುವ ರಾಜಕೀಯ ಗೋಸುಂಬೆಗಳ ಬಗ್ಗೆ ಜನರ ಎಚ್ಚರಿಕೆಯಿಂದಿರಬೇಕು,” ಎಂದು ಸೂಕ್ಷ್ಮವಾಗಿ ಹೇಳಿದರು. “”ನಾನು ರಾಜಕೀಯಕ್ಕೆ ಬಂದಾಗಿನಿಂದ ಸಾಮಾಜಿಕ ನ್ಯಾಯದ ಸಿದ್ಧಾಂತ ಪಾಲಿಸಿಕೊಂಡು ಬಂದಿದ್ದೇನೆ. ನನ್ನ ಕೊಡುಗೆ ಏನು ಎಂದು ತಿಳಿಯಬೇಕಾದರೆ ಈವರೆಗೆ ಮಂಡಿಸಿದ 11 ಬಜೆಟ್ ಪರಿಶೀಲಿಸಿ ಮಾತನಾಡಲಿ.
ನಾನು ಕುರುಬರ ಸಂಘದಲ್ಲಿ ಓದಿಲ್ಲ, ಅಲ್ಲಿ ಇರಲೂ ಇಲ್ಲ. ಒಂದು ಕಾಲದಲ್ಲಿ ಐದಾರು ಕೋಟಿ ರೂ. ಸಾಲಕ್ಕಾಗಿ ಸಂಘದ ಜಾಗವನ್ನು ಸಂಘವು ಮಾರಾಟ ಮಾಡಲು ಮುಂದಾಗಿದ್ದಾಗ ಪ್ರಾಣ ಒತ್ತೆಯಿಟ್ಟು ಸಂಘ ಉಳಿಸಿದೆ. ಈಗ ಬ್ರಿಗೇಡ್ ಹೆಸರೇಳುತ್ತಿರುವವರು ಆಗ ಹತ್ತಿರವೂ ಕಾಣಿಸಿಕೊಂಡಿರಲಿಲ್ಲ,” ಎಂದು ಛೇಡಿಸಿದರು.
“ಬೆಂಗಳೂರು ನಗರ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಾಗ ಎಂದಾದರೂ ಒಮ್ಮೆ ಈಶ್ವರಪ್ಪ ಬಂದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, 1988ರಲ್ಲಿ 500 ನೇ ಕನಕ ಜಯಂತಿಯನ್ನು ವರ್ಷವಿಡೀ ಆಚರಿಸಲು ನಿರ್ಧರಿಸಿದಾಗಲೂ ಈ ಗಿರಾಕಿಗಳು ಪತ್ತೆಯಾಗಿರಲಿಲ್ಲ,” ಎಂದು ಹೇಳಿದರು.
ಉಡುಪಿಯ ಕೃಷ್ಣ ದೇವಸ್ಥಾನದ ಕನಕ ಕಿಂಡಿಯನ್ನು ನವಗ್ರಹ ಕಿಂಡಿ ಎಂದು ಬದಲಿಸಲು ಹಾಗೂ ಗೋಪುರ ತೆರವಿಗೆ ಮುಂದಾಗಿದ್ದನ್ನು ಖಂಡಿಸಿ ಹೋರಾಟ ನಡೆಸಿದಾಗ ಜನ ತಮ್ಮ ಬಗ್ಗೆ ತಪ್ಪು ತಿಳಿಯುತ್ತಾರೆ ಎಂಬ ಭಯದಿಂದ ಈಶ್ವರಪ್ಪ ಬರಲೇ ಇಲ್ಲ. ಈಗ ರಾಯಣ್ಣನ ಜಪ ಮಾಡುತ್ತಿರುವ ಅವರು ಅಂದು ಕನಕ ಗೋಪುರ ಒಡೆಯುವವರ ಪರವಾಗಿದ್ದವರು ಎಂದು ಟೀಕಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, “ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ ಕೆಲವರು ರಾಜಕೀಯ ಮಾಡುತ್ತಿರುವುದು ದುರ್ದೈವ. ಸ್ವಂತ ಶಕ್ತಿಯಿಂದ ರಾಜಕೀಯದಲ್ಲಿ ಏಳ್ಗೆ ಸಾಧಿಸಲಾಗದವರು
ರಾಯಣ್ಣ ಹೆಸರಿನಲ್ಲಿ ಬಲ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, “ಕನಕ ಗೋಪುರ ವಿವಾದ ಬಂದಾಗ ಓಡಿ ಹೋದವರು ಈಗ ಸಂಗೊಳ್ಳಿ ರಾಯಣ್ಣನ ಹೆಸರು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಶಾಸಕರಾದ ಎಂ.ಟಿ.ಬಿ. ನಾಗರಾಜ್, ಬಿ.ಎ.ಬಸವರಾಜು, ಬೈರತಿ ಸುರೇಶ್, ರಾಜ್ಯ ಸರ್ಕಾರದ ದೆಹಲಿ ಹೆಚ್ಚುವರಿ ಪ್ರತಿನಿಧಿ ಸಲೀಂ ಅಹಮ್ಮದ್ ಉಪಸ್ಥಿತರಿದ್ದರು.
ಎಲ್ಲಿಯ ನಂದಿಬೆಟ್ಟ, ಎಲ್ಲಿಯ ಹಿಮಾಲಯ: ಶಾಸಕ ವರ್ತೂರು ಪ್ರಕಾಶ್ ಮಾತನಾಡಿ, “ಎಲ್ಲಿಯ ಈಶ್ವರಪ್ಪ, ಎಲ್ಲಿಯ ಸಿದ್ದರಾಮಯ್ಯ, ಎಲ್ಲಿಯ ನಂದಿ ಬೆಟ್ಟ, ಎಲ್ಲಿಯ ಹಿಮಾಲಯ. ರಾಯಣ್ಣ ಮುಖ ತೋರಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡ್ತೇವೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ನಿಮಗೆ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಪಕ್ಷದಿಂದ ಹೊರಗೆ ಬಂದು ಸಮುದಾಯದ ಸಂಘಟನೆ ಮಾಡಿ, ಇಲ್ಲವೇ ಯಡಿಯೂರಪ್ಪನವರ ಪಾದಪೂಜೆ ಮುಂದುವರಿಸಿ. ಸಂಗೊಳ್ಳಿ ರಾಯಣ್ಣನಿಗೆ ಸಂಬಂಧವೇ ಇಲ್ಲದ ಕೂಡಲ ಸಂಗಮದಲ್ಲಿ ಸಮಾವೇಶ ನಡೆಸುವುದರಲ್ಲಿ ಅರ್ಥವೇನಿದೆ,” ಎಂದರು.
ದೇಣಿಗೆ ಕೇಳಿದ್ದಕ್ಕೆ ಈಶ್ವರಪ್ಪ ಪಲಾಯನ: “ಕುರುಬ ಸಮುದಾಯದ ಕೆಲ ಮುಖಂಡರು ಮಠ ಸ್ಥಾಪಿಸಬೇಕೆಂದು ಒತ್ತಾಯಿಸಿದಾಗ ಒಂದು ವರ್ಷ ರಾಜ್ಯಾದ್ಯಂತ ಸುತ್ತಾಡಿ ಜನರಿಂದಲೇ ದೇಣಿಗೆ ಪಡೆಯಲಾಯಿತು. ಶಿವಮೊಗ್ಗದಲ್ಲಿ ಸಭೆ ನಡೆಸಿದಾಗ ಈಶ್ವರಪ್ಪನವರಿಗೆ ಐದು ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡುವಂತೆ ತಿಳಿಸಲಾಯಿತು. ಆದರೆ, ಎರಡನೇ ಸಭೆಗೆ ಅವರು ಬರಲೇ ಇಲ್ಲ. ಬಳಿಕ ತಿಮ್ಯಯ್ಯ, ಪುಟ್ಟಪ್ಪ ಇತರರು ಮೂರು ಲಕ್ಷ ರೂ. ಸಂಗ್ರಹಿಸಿ ನೀಡಿದರು,” ಎಂದು ಮುಖ್ಯಮಂತ್ರಿ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.