ಕಂಬಳ ಆಟವಲ್ಲ ಆಚರಣೆ
Team Udayavani, Jan 29, 2017, 3:45 AM IST
ಕರಾವಳಿಯ ಕಂಬಳದಲ್ಲಿರುವ ಹಿಂಸಾಪ್ರವೃತ್ತಿಯನ್ನು ನಿಷೇಧಿಸಬೇಕೇ ಹೊರತು ಇಡೀ ಕಂಬಳವನ್ನಲ್ಲ !
ಇದು ಕೇವಲ ಸ್ಪರ್ಧೆಯಲ್ಲ ; ಇಲ್ಲಿನ ಶ್ರಮಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಒಂದು ಆಚರಣೆ !
ಕಂಬಳವನ್ನು ತುಳು ಭಾಷೆಯಲ್ಲಿ ಕಂಬುಲ ಎಂದು ಕರೆಯುತ್ತಾರೆ. ಕಂಬುಲ ಎಂದರೆ ಕೆಸರುಗದ್ದೆ ಎಂದರ್ಥ. ಇನ್ನೇನು, ನೇಜಿ (ಭತ್ತದ ಸಸಿ) ನೆಡುವುದಕ್ಕೆ ಹದಗೊಂಡಿದೆ ಎನ್ನುವಾಗ “ಕಂಬುಲ’ದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಸಂಪ್ರದಾಯವೇ ಕಂಬಳದ ಆಚರಣೆಯಾಗಿ ವಾಡಿಕೆ ಬಂತು. ಹಾಗಾಗಿ, ಕಂಬಳ ಎಂದರೆ ಕೇವಲ ಮನೋರಂಜನೆಯಲ್ಲ , ಪಂಥಾಹ್ವಾನವಂತೂ ಆಗಿರಲಿಲ್ಲ , ಬದಲಾಗಿ ಆಚರಣಾತ್ಮಕ ಹಿನ್ನೆಲೆಯನ್ನು ಹೊಂದಿರುವ ಜನಪದ ಸಂಪ್ರದಾಯ. ಹಾಗಾಗಿ ಕಂಬಳ ನಡೆಸುವುದು ಬೇಡ ಎಂದು ಹೇಳಿದರೆ ತುಳುನಾಡಿನ ನಿಡುಗಾಲದಿಂದ ವಾಡಿಕೆಯಲ್ಲಿರುವ ಆಚರಣಾತ್ಮಕ ಸಂಪ್ರದಾಯವನ್ನು ನಿಷೇಧಿಸಿದಂತೆಯೇ ಸರಿ.
ಕಂಬಳವನ್ನು ಕರಾವಳಿಯ ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಜನಪದ ಆಟವೆಂದರೂ ಸರಿಯೇ. “ಆಟ’ವೂ ಕೇವಲ ಆಟವಲ್ಲ ; ಇದು ಇಲ್ಲಿನ ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಒಂದು ಸಂಪ್ರದಾಯ.
ಕರ್ನಾಟಕದಲ್ಲಿ ಕೃಷಿ ಸಂಸ್ಕೃತಿಯನ್ನು ಅವಲಂಬಿಸಿದ ಮತ್ತು ಅದರ ಸಂಬಂಧವಿರಿಸಿಕೊಂಡ ಹಲವು ಜನಪದ ಆಟಗಳು ಇವೆ. ವ್ಯವಸಾಯ ಉತ್ಪಾದನೆ ಮತ್ತು ಹಂಚಿಕೆ, ಜಾತಿ ಮತ್ತು ಸಾಮಾಜಿಕ ಅಂತಸ್ತುಗಳ ಜೊತೆಗೆ ಈ ಜನಪದ ಆಟಗಳು ಸಂಬಂಧ ಹೊಂದಿರುವುದರಿಂದ ಇವು ಬಹಳ ಸಂಕೀರ್ಣವಾಗಿದೆ. ಕರಾವಳಿಯ ಕಂಬಳ, ಉತ್ತರ ಕರ್ನಾಟಕ ಮತ್ತು ಬಯಲುಸೀಮೆಗಳಲ್ಲಿ ಪ್ರಚಲಿತವಿರುವ ಎತ್ತುಗಳ ಓಟ, ಎತ್ತಿನಗಾಡಿಯ ಓಟ, ಗೂಳಿಗಳ ಕಾದಾಟ ಮೊದಲಾದವು ಪ್ರಮುಖವಾಗಿ ನೆಲ ಮತ್ತು ಕೃಷಿ ಸಂಸ್ಕೃತಿಯ ಜೊತೆಗೆ ಸಂಬಂಧ ಹೊಂದಿರುವ ಕ್ರೀಡೆಗಳಾಗಿವೆ.
ಕಂಬಳವು ಕರಾವಳಿ ಭಾಗದ ಜನರ ಸಾಂಸ್ಕೃತಿಕ ಬದುಕಿ ನಲ್ಲಿ ಧಾರ್ಮಿಕ ಆಚರಣೆಯಾಗಿ ಮತ್ತು ಮನೋರಂಜನೆಯ ಮಾಧ್ಯಮವಾಗಿ ಮಹಣ್ತೀವನ್ನು ಪಡೆದಿದೆ. ಕೆಸರುಗದ್ದೆಯಲ್ಲಿ ಅಥವಾ ಹೊಳೆಯ ಮರಳ ದಂಡೆಯಲ್ಲಿ ನಿರ್ಮಿಸಿದ ಕೆರೆಯಲ್ಲಿ ಕೋಣಗಳನ್ನು ಓಡಿಸುವ ಸ್ಪರ್ಧೆಯೇ ಮುಖ್ಯ ಆಕರ್ಷಣೆಯಾಗಿದೆ. ಕಂಬಳದ ಆಚರಣಾತ್ಮಕ ಮಾಹಿತಿಗಳನ್ನು ಇಟ್ಟುಕೊಂಡು ಅಧ್ಯಯನ ಮಾಡಿದ ಪುರುಷೋತ್ತಮ ಬಿಳಿಮಲೆಯವರು “ಕಂಬುಲ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆ’ ಎಂದಿದ್ದಾರೆ. ತುಳುನಾಡಿನಲ್ಲಿ ಗ್ರಾಮ, ಮಾಗಣೆ ಮತ್ತು ಸೀಮೆ ಮಟ್ಟದಲ್ಲಿ ಪ್ರಚುರವಾಗಿರುವ ಕಂಬಳವು ಇಂದು ಕರಾವಳಿಯ ಹಲವಾರು ಸ್ಥಳಗಳಲ್ಲಿ ನಡೆಯುತ್ತಿವೆ.
ಕಂಬಳದ ಕುರಿತ ಕೆಲವು ವಿಚಾರಗಳು
ಎಲ್ಲ ಕಡೆಯ ಕಂಬಳಗಳ ವಿಧಿವಿಧಾನಗಳು ಒಂದೇ ರೀತಿ ಇಲ್ಲ. ಕಂಬಳದಲ್ಲಿ ಮುಖ್ಯ ನಾಲ್ಕು ವಿಧ. 1. ಬಾರೆ (ಬಾಳೆ), 2. ಪೂಕರೆ ಕಂಬಳ, 3. ಅರಸು ಮತ್ತು ದೇವರ ಕಂಬಳ, 4. ಆಧುನಿಕ ಕಂಬಳ. ಗದ್ದೆಯನ್ನು ಉತ್ತು ಸಾಂಕೇತಿಕವಾಗಿ ಕೋಣಗಳನ್ನು ಓಡಿಸಿದ ಬಳಿಕ ಬಾಳೆಗಿಡವನ್ನು ಗದ್ದೆಯ ಮಧ್ಯದಲ್ಲಿ ನೆಟ್ಟು ಬಾಳೆಕಂಬಳವನ್ನು ಆಚರಿಸುತ್ತಾರೆ. ಬಾಳೆ ಕಂಬಳಕ್ಕಿಂತ ಪೂಕರೆ ಕಂಬಳ ಹೆಚ್ಚು ವೈಭವದಿಂದ ಕೂಡಿದ್ದಾಗಿದೆ. ಬಾಳೆ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುವುದಿಲ್ಲ. ಪೂಕರೆ ಕಂಬಳದಲ್ಲಿ ಆಚರಣಾತ್ಮಕ ವಿಧಿವಿಧಾನಗಳು ಅಧಿಕವಾಗಿರುತ್ತವೆ.
ವಯಸ್ಸಿನ ಆಧಾರದ ಮೇಲೆ ಕೋಣಗಳನ್ನು ಜೂನಿಯರ್ ಮತ್ತು ಸೀನಿಯರ್ ಎಂದು ಎರಡು ವಿಭಾಗ ಮಾಡುತ್ತಾರೆ. ಹಲ್ಲುಗಳನ್ನು ಎಣಿಸಿ ವಯಸ್ಸನ್ನು ನಿರ್ಧರಿಸುತ್ತಾರೆ. ಪ್ರತಿ ವಿಭಾಗದಲ್ಲಿಯೂ ನಾಲ್ಕು ಬಗೆಯ ಓಟದ ಸ್ಪರ್ಧೆಗಳು ನಡೆಯುತ್ತವೆ. 1. ಹಗ್ಗದ ಓಟ, 2. ಅಡ್ಡ ಹಲಗೆ, 3. ನೇಗಿಲ ಓಟ, 4. ಕಣೆ ಹಲಗೆ. ಕೋಣಗಳ ಕೊರಳಿಗೆ ನೊಗವನ್ನು ಕಟ್ಟಿ ನೊಗದ ಮಧ್ಯೆ ಹಗ್ಗವನ್ನು ಬಿಗಿಯುತ್ತಾರೆ. ಕೋಣಗಳನ್ನು ಓಡಿಸುವವರು ಈ ಹಗ್ಗವನ್ನು ಹಿಡಿದುಕೊಂಡು ಕೋಣಗಳನ್ನು ಓಡಿಸುತ್ತಾ ತಾನೂ ಓಡಬೇಕು. ಓಡುವ ಕೋಣಗಳ ಹೆಗಲಿಗೆ ಕಟ್ಟಿದ ನೊಗಕ್ಕೆ ವಿಶಿಷ್ಟವಾದ ಗೋರು ಹಲಗೆಯನ್ನು ಕಟ್ಟಿ ಅಡ್ಡ ಹಲಗೆ ಕಂಬಳವನ್ನು ಏರ್ಪಡಿಸುತ್ತಾರೆ. ಓಡಿಸುವವನು ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುತ್ತಾನೆ. ನೇಗಿಲ ಓಟದಲ್ಲಿ ನೊಗಕ್ಕೆ ನೇಗಿಲನ್ನು ಕಟ್ಟಿ ಓಡಿಸುತ್ತಾರೆ. ಓಡಿಸುವವನು ನೇಗಿಲನ್ನು ಹಿಡಿದುಕೊಂಡು ಕೋಣಗಳನ್ನು ಓಡಿಸಬೇಕು. ಕಂಬಳದ ಪ್ರಕಾರಗಳಲ್ಲಿ ಬಹಳ ಜನಪ್ರಿಯವಾದುದು ಕಣೆಹಲಗೆಯ ಓಟ. ಇತರ ಪ್ರಕಾರಗಳಲ್ಲಿ ಅತ್ಯಂತ ವೇಗವಾಗಿ ಓಡಿ ನಿರ್ದಿಷ್ಟ ದೂರವನ್ನು ಕ್ರಮಿಸಿ ಮಂಜೊಟ್ಟಿ ಹತ್ತಿದ ಕೋಣಗಳು ಗೆದ್ದರೆ, ಕಣೆಹಲಗೆಯ ಓಟದಲ್ಲಿ ನಿಶಾನಿಗೆ ನೀರು ಹಾಯಿಸಿದ ಕೋಣಗಳು ಗೆಲ್ಲುತ್ತವೆ.
ಗದ್ದೆಯ ಎರಡೂ ಕರೆಗಳಲ್ಲಿ ಆರೂವರೆ ಕೋಲು ಅಥವಾ ಏಳೂವರೆ ಕೋಲು ಎತ್ತರಕ್ಕೆ ನಿಶಾನಿಗಳನ್ನು ಕಟ್ಟುತ್ತಾರೆ. ಕೋಣಗಳು ಓಡುವಾಗ ಕಣೆಹಲಗೆಯು ಚಿಮ್ಮಿಸುವ ಕೆಸರುಕಾರಂಜಿಯ ದೃಶ್ಯ ಮನಸೆಳೆಯುವಂಥದ್ದು. ಈ ಎಲ್ಲಾ ಸ್ಪರ್ಧೆಗಳಲ್ಲಿ ಕೋಣ ಓಡಿಸುವವರಿಗೆ ವಿಶೇಷ ಕೌಶಲ ಇರಬೇಕು. ಸ್ಪರ್ಧೆ ಮುಗಿದ ಬಳಿಕ ಗೆದ್ದ ಕೋಣಗಳನ್ನು ಕಂಬಳದ ಗದ್ದೆಯಲ್ಲಿ ಮೆರವಣಿಗೆ ಮಾಡಿಸುತ್ತಾರೆ. ಸಾಂಪ್ರದಾಯಿಕ ಕಂಬಳಗಳಲ್ಲಿ ಗೆದ್ದ ಕೋಣಗಳಿಗೆ ಲಿಂಬೆಹಣ್ಣು , ಬಾಳೆಗೊನೆ, ಸೀಯಾಳಗಳನ್ನು ಕೊಟ್ಟು ಸತ್ಕರಿಸುತ್ತಾರೆ.
ಕಂಬಳಕ್ಕೆ ಪೂರ್ವಭಾವಿಯಾಗಿ ಮತ್ತು ಅನಂತರ ಹಲವು ಆಚರಣೆಗಳನ್ನು ನಡೆಸುತ್ತಾರೆ. ಕಂಬಳ ಗದ್ದೆಯ ಉಳುಮೆಯ ದಿನ, ಮುಹೂರ್ತದ ದಿನ ಮತ್ತು ಕಂಬಳದ ಹಿಂದಿನ ದಿನಕ್ಕೆ ಸಂಬಂಧಪಟ್ಟಂತೆ ಹಲವು ಆಚರಣೆಗಳಿವೆ. ಕೋಣಗಳನ್ನು ಕಂಬಳಗದ್ದೆಗೆ ಇಳಿಸುವ ದಿನ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನಡೆಸುತ್ತಾರೆ. ಹಲವಾರು ಆಚರಣೆಗಳು ಕಂಬಳಕ್ಕೆ ಧಾರ್ಮಿಕ ಆಯಾಮವನ್ನು ತಂದುಕೊಟ್ಟಿವೆ. ಕಂಬಳದ ಆಚರಣೆ, ಸಿದ್ಧತೆ, ಗದ್ದೆ ಮತ್ತು ಓಟದ ಕೋಣಗಳಿಗೆ ಸಂಬಂಧಪಟ್ಟಂತೆ ಅನೇಕ ನಂಬಿಕೆ, ನಿಷೇಧಗಳಿವೆ. ಕಂಬಳದ ಅನೇಕ ಆಚರಣೆಗಳಲ್ಲಿ ಹರಕೆಗಳ ಮೂಲಕ ಕಾಯಿಲೆಗಳಿಂದ ಗುಣ ಹೊಂದುವ ಆಶಯಗಳನ್ನು ಗುರುತಿಸಬಹುದು.
ಕಂಬಳ ಮತ್ತು ಜಲ್ಲಿಕಟ್ಟು
ಇಷ್ಟೊಂದು ಸಾಂಸ್ಕೃತಿಕ ಹಿನ್ನೆಲೆ ಇರುವ ಕಂಬಳಕ್ಕೂ ತಮಿಳುನಾಡಿನ “ಜಲ್ಲಿಕಟ್ಟು’ ಆಟಕ್ಕೂ ತುಂಬ ವ್ಯತ್ಯಾಸಗಳಿವೆ. ಜಲ್ಲಿಕಟ್ಟು ಆಟದಲ್ಲಿ ಬಹುಶಃ ಗೂಳಿಯನ್ನು ಜನಸಮೂಹದ ಮಧ್ಯೆ ಹೊಗಿಸಲಾಗುತ್ತದೆ. ಗೂಳಿಯನ್ನು ಕೆರಳಿಸುವ, ಅದನ್ನು ನಿಯಂತ್ರಿಸುವ ಆಟದಲ್ಲಿ ಸಾವುನೋವುಗಳಾಗುತ್ತವೆ. ಆದರೆ, ಕಂಬಳದಲ್ಲಿ ಅಂಥ ಸಾಧ್ಯತೆಗಳಿಲ್ಲ.
ಪ್ರಾಣಿದಯಾ ಸಂಘದವರ ಮುಖ್ಯ ಆರೋಪ ಕಂಬಳದಲ್ಲಿ ಕೋಣಗಳನ್ನು ಹಿಂಸಿಸಲಾಗುತ್ತದೆ ಎಂಬುದು. ಕೆಲವು ಸಮಯದ ಹಿಂದೆ ಕಂಬಳ ಸಂಸ್ಕೃತಿಯ ಕುರಿತ ವಿಶೇಷ ಕಾಳಜಿಯುಳ್ಳ ಗುಣಪಾಲ ಕಡಂಬರೇ ಮೊದಲಾದವರ ನೇತೃತ್ವದಲ್ಲಿ “ಕಂಬಳ ಸಮಿತಿ’ಯೊಂದು ಆರಂಭಗೊಂಡುದನ್ನು ನಾನಿಲ್ಲಿ ಉಲ್ಲೇಖೀಸಬಯಸುತ್ತೇನೆ. ಈ ಸಮಿತಿಯ ನಿರ್ಣಯಗಳ ಪ್ರಕಾರ ಕಂಬಳದ ಗದ್ದೆಯನ್ನು ಹೊರತುಪಡಿಸಿ, ಹೊರಗಡೆಗೆ, ಕೋಣಗಳ ಓಟ ಆರಂಭವಾಗುವ ಜಾಗದಲ್ಲಿ, ಕೋಣಗಳು ತಲುಪುವ ಎತ್ತರದ ತಾಣದಲ್ಲಿ, ಕೋಣಗಳು ವಿರಮಿಸುವ ಸ್ಥಳದಲ್ಲಿ – ಅವುಗಳಿಗೆ ಹೊಡೆಯುವುದನ್ನು ನಿಷೇಧಿಸಿತ್ತು. ಅಲ್ಲದೆ, ಈ ಬಗ್ಗೆ ಕಂಬಳ ನಡೆಯುವ ಸ್ಥಳದ ಧ್ವನಿವರ್ಧಕಗಳಲ್ಲಿ ಪ್ರಚಾರವನ್ನು ಮಾಡಲಾಗಿತ್ತು. ಈ ನಿಯಮವನ್ನು ಮೀರುವವರ ಕೋಣಗಳನ್ನು ಮತ್ತು ಕೋಣ ಓಡಿಸುವವರನ್ನು ಕಂಬಳದ ಸ್ಪರ್ಧೆಯಿಂದ ಕೈಬಿಡುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಕಂಬಳದ ಗದ್ದೆಯಲ್ಲಿ ಓಡುವ ಕೋಣಗಳಿಗೆ ಬೇಕಾದರೆ ಹೊಡೆಯಿರಿ ಎಂದು ಕೂಡ ಹೇಳಲಾಗಿತ್ತು. ಅಂದರೆ, ಸಮತೋಲನ ಕಾಯ್ದುಕೊಂಡು ಓಡುವ ಕೋಣಗಳಿಗೆ ಹೊಡೆಯುವುದು ಸುಲಭದ ಸಂಗತಿಯಲ್ಲ , ಅರ್ಥಾತ್ ಹೊಡೆಯುವುದಕ್ಕೆ ಅಸಾಧ್ಯವೆಂದೇ ಹೇಳಬಹುದು. ನಿಂತ ಕೋಣಗಳಿಗೆ ನಾಲ್ಕಾರು ಮಂದಿ ಸುತ್ತುವರಿದು ಹೊಡೆಯುವುದು ಬಹಳ ಸುಲಭ ಮತ್ತು ಇದು ಜೀವವಿರೋಧಿ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ನಿಲ್ಲಿಸುವ ಬಗ್ಗೆ ಕಂಬಳ ಸಂಯೋಜಕರ ನಡುವೆ ಬಹಳ ಹಿಂದೆಯೇ ಮಾತುಕತೆಗಳಾದದ್ದಿದೆ. ಕಂಬಳದಲ್ಲಿರುವ ಹಿಂಸಾಪ್ರವೃತ್ತಿಯ ಕಾರಣಕ್ಕೆ ಕೋಣಗಳನ್ನು ಸಾಕುವ ಸಂಪ್ರದಾಯವನ್ನು ಕೆಲವು ಅಹಿಂಸಾಪರ ಸಮುದಾಯದ ಮನೆತನಗಳು ಕೈಬಿಟ್ಟಿದ್ದಿದೆ. ಹೆಂಗಸರು ಕಂಬಳ ನೋಡಬಾರದು ಎಂಬ ನಿಷೇಧ ಇದ್ದದ್ದು ಇದರಲ್ಲಿರುವ ಹಿಂಸಾ ಮನೋಭಾವದ ಕಾರಣಕ್ಕಿರಬೇಕು.
ಕೋಣಗಳಿಗೆ ಇಷ್ಟೆಲ್ಲ ಹೊಡೆಯುವ ಅಥವಾ ಹೊಡೆಸುವ ಯಜಮಾನರು ಆ ಕೋಣಗಳನ್ನು ವರ್ಷವಿಡೀ ಅತ್ಯಂತ ಪ್ರೀತಿಯಿಂದ ಸಾಕುತ್ತಾರೆ ಎಂಬುದು ಗಮನಾರ್ಹ. ಹಾಗಾಗಿ ಇಲ್ಲಿ ಹೊಡೆಯುವುದು ದ್ವೇಷದ ಕಾರಣಕ್ಕಲ್ಲ. ಹೊಡೆತ ತಿಂದ ಕೋಣಗಳನ್ನು ಯಜಮಾನರೇ ಮನೆಗೆ ಕರೆದೊಯ್ದು ಎಣ್ಣೆ ಮಸಾಜ್ ಮಾಡಿ ಅಕ್ಕರೆಯನ್ನು ತೋರುವುದಿಲ್ಲವೆ?
ಕೆಲವು ಮನೆತನಗಳ ಯಜಮಾನರು, ಅಳಿಯಕಟ್ಟು (ಮಾತೃಮಾಲೀಯ) ಪದ್ಧತಿಯಿಂದ ಕಳೆದುಕೊಂಡ ಅಧಿಕಾರದ ಅಭಿವ್ಯಕ್ತಿಯನ್ನು ಮನೆಯಿಂದ ಹೊರಗೆ ಅಂದರೆ ಕಂಬಳದ ಆಚರಣೆಗಳಲ್ಲಿ ಕಾಣಿಸುತ್ತಾರೆ ಎಂದು ಕೆಲವು ಜನಪದ ವಿಶ್ಲೇಷಕರು ಹೇಳಿದ್ದಿದೆ. ಮನೆಯೊಳಗೆ ಮೌನವಾಗಿರುವವನೂ ಮನೆಯ ಹೊರಗೆ, ಅದೂ ಮೂಕಪ್ರಾಣಿಗಳ ಮೇಲೆ ತನ್ನ ದೌರ್ಜನ್ಯವನ್ನು ಪ್ರಕಟಿಸುತ್ತಾನೆ ಎಂಬುದು ಇದರರ್ಥ. ಆದರೆ, ಕಾಲ ಬದಲಾಗಿದೆ, ಆಸ್ತಿಹಕ್ಕಿನ ಕಾನೂನು ಕಡ್ಡಾಯವಾಗಿದೆ. ಇಂಥ ಸ್ಥಿತಿಯಲ್ಲಿ ಹಳೆಯ ಪರಿಸ್ಥಿತಿ ಈಗಲೂ ಇದೆ ಎಂದು ಹೇಳಲಾಗದು. ಹಾಗಾಗಿ, ಕಂಬಳದಂಥ ಆಚರಣೆಗಳಲ್ಲಿ ಹಿಂಸಾಪ್ರವೃತ್ತಿ ಕಡಿಮೆಯಾಗಬೇಕೇ ಹೊರತು ಹೆಚ್ಚಾಗಬಾರದು. ಅಲ್ಲದೆ, ಕಂಬಳದಲ್ಲಿ ಎಲ್ಲವೂ ಓಟದ ಸ್ಪರ್ಧೆಗಳಲ್ಲ. ಕೆಸರು ಎತ್ತರಕ್ಕೆ ಹಾರಿಸುವಂಥ ಕಂಬಳದ ಸ್ಪರ್ಧಾವಿಧಾನದಲ್ಲಿ ಕೋಣಗಳನ್ನು ಓಡಿಸುವವನು ಕೌಶಲದಿಂದ ಹಲಗೆಯನ್ನೊತ್ತಿ ಕೆಸರನ್ನು ಮೇಲೆ ಹಾರಿಸಿ ನಿಶಾನೆಗೆ ತಾಗಿಸುವುದು ಮುಖ್ಯವೇ ಹೊರತು, ಅವನು ಕೋಣಗಳಿಗೆ ಹೊಡೆಯವುದರಿಂದ ಏನನ್ನೂ ಸಾಧಿಸಲಾರ.
ಕಂಬಳವೆಂಬ ಆಚರಣೆ “ಸ್ಪರ್ಧೆ’ಯಾಗಿ ಬದಲಾದದ್ದು ಇತ್ತೀಚೆಗಿನ ದಿನಗಳಲ್ಲಿ. ಇದರ ಸಾಂಪ್ರದಾಯಿಕ ಪ್ರಾಮುಖ್ಯವು ಹಿನ್ನೆಲೆಗೆ ಸರಿದು ಮನೋರಂಜನೆಯೇ ಮುಖ್ಯ ಉದ್ದೇಶವಾಗುತ್ತಿದೆ. ಅದರ ಜೊತೆ ಕಂಬಳದಲ್ಲಿ ಕೋಣ ಓಡಿಸುವವರ ಪ್ರತಿಷ್ಠೆಯ ವಿಚಾರವೂ ಸೇರಿಕೊಂಡಿದೆ, ವ್ಯಾವಹಾರಿಕ ದೃಷ್ಟಿಕೋನವೂ ಅಡಗಿದೆ. ಹಾಗೆಂದು ಕಂಬಳದ ಸಾಂಸ್ಕೃತಿಕ ಮಹತ್ವವನ್ನು ಅಲ್ಲಗಳೆಯಲಾಗದು. ಕರಾವಳಿಯ ವಿವಿಧೆಡೆಗಳಲ್ಲಿ ದೇವರ ಜಾತ್ರೆಯಷ್ಟೇ ಶ್ರದ್ಧೆಯಲ್ಲಿ ಕಂಬಳವನ್ನು ನಡೆಸಲಾಗುತ್ತದೆ. ಕಂಬಳದಲ್ಲಿರುವ ಹಿಂಸಾತ್ಮಕ ಪ್ರವೃತ್ತಿಗಳನ್ನು ನಿಷೇಧಿಸಬೇಕೇ ಹೊರತು ಕಂಬಳವೇ ಬೇಡವೆಂದು ಹೇಳಿದರೆ ಅದು ಒಂದು ಪ್ರದೇಶದ ಜನಪದರ ಆಚರಣೆಯ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ, ಕೃಷಿಬದುಕಿನೊಂದಿಗಿನ ಶ್ರಮಸಂಸ್ಕೃತಿಯ ಸಂಪ್ರದಾಯಕ್ಕೆ ಚ್ಯುತಿ ಉಂಟುಮಾಡಿದಂತೆ! ಜಲ್ಲಿಕಟ್ಟು ನಿಷೇಧ ಹಿಂದೆಗೆತಕ್ಕಾಗಿ ಅಲ್ಲಿನ ಜನರು ಹಿಂಸಾತ್ಮಕ ಪ್ರತಿಭಟನೆಗಿಳಿದರು. ಈ ಲೇಖನ ಪ್ರಕಟವಾಗುವ ಹೊತ್ತಿಗೆ ಕಂಬಳದ ಕುರಿತು ಸರ್ಕಾರ ಏನು ನಿರ್ಧಾರ ತಳೆಯಬಹುದೋ ಗೊತ್ತಿಲ್ಲ. ಆದರೆ, ಕಂಬಳಕ್ಕಾಗಿ ಅನುಮತಿ ನೀಡಬೇಕೆಂದು ಅಹಿಂಸಾತ್ಮಕ ವಿಧಾನದಲ್ಲಿಯೇ ಒತ್ತಾಯ ಹೇರೋಣ.
– ಕೆ. ಚಿನ್ನಪ್ಪ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.