ಹಸಿರು ಗಾಜಿನ ಬಳೆಗಳೆ!
Team Udayavani, Feb 3, 2017, 3:45 AM IST
ಮಣ್ಣಿನ ಬಳೆಗಳನ್ನು ಧರಿಸುವುದು ಸಂಪ್ರದಾಯವಾಗಿದ್ದ ಕಾಲವಿತ್ತು. ಈಗ ಮಣ್ಣಿನ ಬಳೆಗಳು ಎಲ್ಲಿವೆ ! ಎಲ್ಲೆಲ್ಲೂ ಬಂಗಾರದ ಬಳೆಗಳು. ಆ ಬಳೆಗಳ ತೂಕದ ಮೇಲೆ ಅದನ್ನು ಧರಿಸಿದವರ ವ್ಯಕ್ತಿತ್ವದ ಘನತೆ ನಿರ್ಧಾರವಾಗುತ್ತದೆ !
ಅರಸಿನ-ಕುಂಕುಮ-ಬಳೆಗಳು ಹೆಣ್ಣಿನ ಸೌಭಾಗ್ಯದ ಸಂಕೇತ. ಇವು ನಮ್ಮ ಸಾಂಸ್ಕೃತಿಕ ಹಿರಿಮೆಯ ಪ್ರತೀಕಗಳೂ ಹೌದು. ಹೆಣ್ಣಿಗೆ ಕೈಯಲ್ಲಿನ ಬಳೆಗಳು ವಿಶೇಷ ಶೋಭೆ ತಂದುಕೊಡುತ್ತದೆ. ಅರಸಿನ ಕುಂಕುಮವಿಟ್ಟು ಕೈತುಂಬಾ ಬಳೆಗಳನ್ನು ಇಟ್ಟುಕೊಂಡು ಮುಡಿ ತುಂಬ ಮಲ್ಲಿಗೆ ಇಟ್ಟ ಹೆಣ್ಣು ಲಕ್ಷಣವಾಗಿ ಕಾಣಿಸುತ್ತಾಳೆ. ಕೈತುಂಬಾ ಗಾಜಿನ ಬಳೆಗಳನ್ನಿಟ್ಟುಕೊಂಡು ಮನೆತುಂಬಾ ಓಡಾಡುವ ಹೆಣ್ಣುಮಕ್ಕಳನ್ನು ನೋಡುವುದೇ ಒಂದು ಚೆಂದ. ಗಾಜಿನ ಬಳೆಗಳು ವಿವಿಧ ಬಣ್ಣಗಳಿಂದ ಕೂಡಿದ್ದು ಅವುಗಳನ್ನು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತ್ತೈದೆಯರ ಲಕ್ಷಣವಾಗಿದೆ.
ಹಿಂದೆ ಹಳ್ಳಿಯ ಮನೆಗಳಲ್ಲಿ ಎಷ್ಟೇ ಬಡತನವಿದ್ದರೂ ಹೆಣ್ಮಕ್ಕಳ ಕೈ ತುಂಬಾ ಗಾಜಿನ ಬಳೆಗಳು ಕಾಣಿಸುತ್ತಿದ್ದವು. ಮೊದಲೆಲ್ಲ “ಬಳೆ ಬೇಕವ್ವಾ ಬಳೆ… ಅಂದಚಂದದ ಬಳೆ… ಬಳೆಬೇಕವ್ವಾ ಬಳೆ’ ಎಂದು ಬಳೆಗಾರ ಬಳೆಗಳ ಗೊಂಚಲುಗಳನ್ನು ತನ್ನ ಹೆಗಲ ಮೇಲೆ ನೇತಾಡಿಸಿಕೊಂಡು ಊರೂರು ಸುತ್ತುತ್ತಾ ಬರುತ್ತಿದ್ದ. ಇಂದಿನ ಮಹಿಳೆಯರ ಹಾಗೆ ಅಂದಿನ ಹೆಣ್ಮಕ್ಕಳು ಆಗಾಗ ಶಾಪಿಂಗ್‌ಗೆ ಹೋಗುವುದು, ತಮಗೆ ಬೇಕಾದ್ದನ್ನು ಖರೀದಿಸಿ ತರುವುದು ಅಷ್ಟಾಗಿ ಇರಲಿಲ್ಲ. ಹಾಗಾಗಿ ಆಕೆ ಬಳೆ ತೊಟ್ಟುಕೊಳ್ಳಬೇಕೆಂದರೆ “ಬಳೆಗಾರ ಯಾವಾಗ ಬರುತ್ತಾನೆ?’ ಎಂದು ಅವನ ದಾರಿಯನ್ನೇ ಕಾಯುತ್ತಿದ್ದಳು. ಆತನ ಕೂಗು ಕೇಳಿದೊಡನೆ ಕೈಯಲ್ಲಿದ್ದ ಕೆಲಸಗಳನ್ನೆಲ್ಲಾ ಬದಿಗಿರಿಸಿ ಅವನನ್ನು ಮನೆಗೆ ಕರೆದು ಅಂಗಳದಲ್ಲಿ ಒಂದು ಚಾಪೆ ಹಾಸಿ, ಬಿಂದಿಗೆ ತುಂಬಾ ನೀರು ತಂದಿಟ್ಟು ಅವನೆದುರು ತಾನೂ ಕುಳಿತು, ಕೈಚಾಚಿ ತನಗೆ ಇಷ್ಟವಾದ ಗಾಜಿನ ಬಳೆಗಳನ್ನು ಆಯ್ದು ಅವನ ಕೈಯಿಂದಲೇ ತನ್ನ ಕೈತುಂಬಾ ತುಂಬಿಸಿಕೊಳ್ಳುವ ವಾಡಿಕೆ ಇತ್ತು. ಮನೆಯ ಒಡತಿಯಷ್ಟೇ ಅಲ್ಲ, ಆಕೆ ಸುತ್ತಮುತ್ತಲಿದ್ದ ಎಲ್ಲರನ್ನೂ ಕರೆದು ಎಲ್ಲರಿಗೂ ಕೈತುಂಬಾ ಬಳೆಯನ್ನು ತೊಡಿಸಿಕೊಂಡಾಗ ಆಗುವ ಆನಂದಕ್ಕೆ ಪಾರವೇ ಇರಲಿಲ್ಲ !
ಈಗ ಆ ಬಳೆಗಾರನ ಕೂಗು ಕೇಳಿಸುವುದೇ ಇಲ್ಲ, ಊರಿನ ಸಂತೆಯಲ್ಲಿ ಅಪರೂಪಕ್ಕೊಮ್ಮೆಯಾದರೂ ಬಳೆಗಾರರು ಕಾಣಿಸಿಕೊಳ್ಳುವುದು ಇತ್ತು; ಆದರೀಗ, ಅವರೂ ಅಲ್ಲಿ ಕಾಣಿಸುವುದೇ ಇಲ್ಲ. ಮದುವೆ, ಸೀಮಂತದ ದಿನಗಳಲ್ಲಿ ಬಳೆಗಾರರನ್ನು ಮನೆಗೆ ಕರೆದು ಮದುಮಗಳಿಗೆ ಮತ್ತು ಸುತ್ತಮುತ್ತಲಿನ ಹೆಣ್ಮಕ್ಕಳಿಗೆ ಕೈತುಂಬಾ ಬಳೆ ತೊಡಿಸುವ ಪದ್ಧತಿಯೂ ಈಗ ಮಾಯವಾಗಿದೆ!
ಮಣ್ಣಿನ ಬಳೆಗಳನ್ನು ಧರಿಸುವ ಒಂದು ಸಾಂಪ್ರದಾಯಿಕ ಕಾಲ ಇತ್ತು. ಆದರೀಗ, ಹೆಣ್ಣುಮಕ್ಕಳ ಕೈಯಲ್ಲಿ ಗಾಜಿನ ಬಳೆಗಳು ಕಾಣಿಸಿಕೊಳ್ಳುವುದು ತೀರಾ ಅಪರೂಪ. ಕೆಲವೊಮ್ಮೆ ಮದುವೆ, ಸೀಮಂತ, ಉಪನಯನದಂತಹ ಕಾರ್ಯಕ್ರಮಗಳಿಗೆ ಆಗಮಿಸಿದ ಹಳ್ಳಿಯ ಹಿರಿಯ ಹೆಂಗಸರ ಕೈಯಲ್ಲಿ ಗಾಜಿನ ಬಳೆಗಳು ಕಾಣಸಿಗುತ್ತವೆಯಷ್ಟೆ! ಈಗಲೂ ಗೃಹಿಣಿಯರು ಗಾಜಿನ ಬಳೆಗಳನ್ನು ತೊಡುವುದಿಲ್ಲವೆಂದಿಲ್ಲ. ಆದರೆ, ಹಿಂದಿನಂತೆ ಕೈತುಂಬಾ ಅಲ್ಲ, ಎಲ್ಲಾದರೂ ಒಂದೊಂದೇ.
ಈಗ ಕಾಲ ಬದಲಾಗಿದೆ. ಇದು ಹೇಳಿಕೇಳಿ ಫ್ಯಾಶನ್ ಯುಗ. ಇಂದಿನ ಹುಡುಗಿಯರ ಕೈಯಲ್ಲಿ ಕಾಣಿಸಿಕೊಳ್ಳುವುದು ಬರೇ ಫ್ಯಾನ್ಸಿ , ಮೆಟಲ್, ವುಡನ್ ಬಳೆಗಳು ಮಾತ್ರ. ಗಾಜಿನ ಬಳೆಗಳು ತೀರಾ ಕಡಿಮೆ. ಕೆಲಸ ಮಾಡುವಾಗ, ಉದ್ಯೋಗಕ್ಕೆ ಹೋಗುವಾಗ ಭಾರವಿರುತ್ತದೆ, ಕಂಫರ್ಟ್ ಎನಿಸುವುದಿಲ್ಲ , ಸದ್ದು ಮಾಡುತ್ತವೆ, ಜೊತೆಗೆ ಅವುಗಳ ನಿರ್ವಹಣೆಯೂ ತುಸು ಕಷ್ಟ . ಹಾಗಾಗಿ ಇಂದಿನ ಮಹಿಳೆಯರು ಗಾಜಿನ ಬಳೆಗಳನ್ನು ತೊಡಲು ಹಿಂಜರಿಯುತ್ತಾರೆ. ಆದರೆ, ಎಷ್ಟೇ ಮಾಡ್ ಆಗಿದ್ದರೂ ಮದುವೆಯಲ್ಲಿ ಇಲ್ಲವೇ ಹಾಗೇ ಸುಮ್ಮನೆ ಆಗಾಗ ತಮ್ಮ ಕೈಗಳಿಗೆ ಬಳೆಗಳನ್ನು ತೊಟ್ಟು ಘಲ್ ಘಲ್ ಸದ್ದು ಮಾಡುತ್ತಾ ಸಂಭ್ರಮಿಸುವುದಿದೆ.
ಚಿನ್ನದ ಬಳೆಗಳು
ಮಣ್ಣಿನ ಬಳೆಗಳ ಜಾಗದಲ್ಲಿ ಈಗ ಚಿನ್ನದ ಬಳೆಗಳು ಕಾಣಿಸುತ್ತಿವೆ. ಈಗ ಎಲ್ಲೆಲ್ಲೂ ಚಿನ್ನದ ಬಳೆಗಳೇ. ಚಿನ್ನದ ಬಳೆಗಳನ್ನು ಧರಿಸುವುದು ಪ್ರತಿಷ್ಠೆಯ ಸಂಕೇತವಾಗಿದೆ. ಮದುವೆ ಮುಂತಾದ ಸಮಾರಂಭಗಳಲ್ಲಿ ಚಿನ್ನದ ಬಳೆಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಚಿನ್ನದ ಬಳೆಗಳು ಸಾಂಪ್ರದಾಯಿಕ ವಿನ್ಯಾಸದಿಂದ ಹಿಡಿದು ನವನವೀನ ವಿನ್ಯಾಸಗಳಲ್ಲಿ ಕೂಡಿರುವುದೂ ಹೆಂಗಳೆಯರ ಮನ ಸೆಳೆದಿದೆ. ಚಿನ್ನದಲ್ಲೇ ಮುತ್ತು, ಹವಳ ಮತ್ತು ವಿವಿಧ ಬಣ್ಣದ ಹರಳುಗಳಿಂದ ಕಟ್ಟಿಸಿದ್ದಂಥ ಬಳೆಗಳು ಈಗ ಹೆಚ್ಚು ಜನಪ್ರಿಯ.
ಟ್ರೆಂಡಿ ಬಳೆಗಳು
ಒಂದೊಮ್ಮೆ ಸಿಂಪಲ್ ಪ್ಲೇನ್ ಆಗಿದ್ದ ಬಳೆಗಳ ತುಂಬಾ ಈಗ ವಿವಿಧ ಡಿಸೈನ್, ಕಸೂತಿಗಳ ಚಿತ್ತಾರ ಮೂಡಿಬಂದಿದೆ. ಗಾಜಿನ ಬಳೆಗಳು ನಾಜೂಕಾಗಿರುವುದರಿಂದ ಇವುಗಳನ್ನು ಧರಿಸುವಾಗ ಬಹಳ ಜಾಗೃತೆ ವಹಿಸಬೇಕಾಗುತ್ತದೆ. ಹಾಗಾಗಿ ಮೆಟಲ್, ಫ್ಯಾನ್ಸಿ, ವುಡನ್ ಬ್ಯಾಂಗಲ್, ಮಿಕ್ಸ್ ಆ್ಯಂಡ್ ಮ್ಯಾಚ್ ಬಳೆಗಳು ಹೆಚ್ಚು ಪ್ರಾಶಸ್ತ್ಯ. ಅಲ್ಲದೆ ಈಗಿನ ಲೇಟೆಸ್ಟ್ ಟ್ರೆಂಡೂ ಹೌದು. ನೋಡಲು ಸುಂದರ ಮಾತ್ರವಲ್ಲ ನಿರ್ವಹಣೆ ಕೂಡ ಸುಲಭ. ಇವು ಟ್ರೆಡಿಷನಲ್ ಉಡುಪಿಗೆ ಮಾತ್ರವಲ್ಲ ಫ್ಯಾಶನ್ ಉಡುಪುಗಳಿಗೂ ಹೊಂದಿಕೊಳ್ಳುತ್ತವೆ. ತುಂಬಾ ವೆರೈಟಿಗಳಲ್ಲಿ ಸಿಗುತ್ತವೆ. ಹ್ಯಾಂಡ್ ಪೇಂಟೆಡ್ ವುಡನ್ ಬ್ಯಾಂಗಲ್ಸ್ , ಡಿಸೈನರ್ ವುಡನ್, ಸ್ಟೋನ್ ಸ್ಟಡೆಡ್ ಹೀಗೆ. ಮಿಕ್ಸ್ ಆ್ಯಂಡ್ ಮ್ಯಾಚ್ ಬಳೆಗಳು ಲೇಟೆಸ್ಟ್ ಟ್ರೆಂಡ್. ಕಲರ್‌ಫುಲ್ ಮತ್ತು ಲೈಟ್‌ವೈಟ್ ಆಗಿರುವ ಈ ಬಳೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣಗಳಿರುತ್ತವೆ.
ಹೀಗೆ ಹೆಣ್ಣಿನ ಆಲಂಕಾರಿಕ ವಸ್ತುಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಸಾಂಪ್ರದಾಯಿಕ ಬಳೆಗಳು ಇಂದು ವಿವಿಧ ವಿನ್ಯಾಸಗಳಿಂದ ಮಹಿಳೆಯರಿಗೆ ಇನ್ನೂ ಪ್ರಿಯವಾಗಿವೆ.
– ಎಸ್‌ಎನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.