ಕಂಬಳ ಎಂದರೆ ಅಂತಃಕರಣ
Team Udayavani, Feb 4, 2017, 11:42 AM IST
ಈಗ ಎಲ್ಲೆಡೆ ಕಂಬಳದ ಸುದ್ದಿಯೇ. ಕಂಬಳ ನಿಷೇಧ ಸರಿಯೇ ತಪ್ಪೇ ಅನ್ನೋ ಚರ್ಚೆ. ಕಂಬಳ ಅನ್ನೋದು ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಕಂಬಳ ಸ್ಪರ್ಧೆಗೆ ಕೋಣಗಳನ್ನು ರಿಯಾಜು ಮಾಡಿಸುವ ಪ್ರಕ್ರಿಯೆ ಇದೆಯಲ್ಲ ಅದೊಂದು ಕೌತುಕದ ಕಾರ್ಯನಿರ್ವಹಣೆಯೂ ಆಗಿದೆ. ಹೇಗೆ ಅಂತ ನೋಡೋಣ ಬನ್ನಿ.
ಕಾಸರಗೋಡಿನಿಂದ ಭಟ್ಕಳದವರೆಗೆ ಕರಾವಳಿ ಪ್ರಾಂತ್ಯದಲ್ಲಿ ಕಂಬಳ ಕ್ರೀಡೆ ಚಾಲ್ತಿಯಲ್ಲಿತ್ತು.
ಈಗ ಕಾನೂನು ಅಡ್ಡ ಬಂದಿದೆ. ನಾಲ್ಕೈದು ದಶಕಗಳ ಹಿಂದೆ ಕರ್ನಾಟಕದ ಕರಾವಳಿ ಮಾತ್ರವೇ ಏನು ಇಡೀ ದೇಶವೇ ಕೃಷಿ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿತ್ತು. ಕೃಷಿ ಕ್ಷೇತ್ರ ನಲುಗಿದರೂ ಸಂಸ್ಕೃತಿ ಬೇರಿನೊಂದಿಗೆ ನಡೆದುಬಂದ ಕಂಬಳಕ್ಕೆ ಗದಾಪ್ರಹಾರ ನೀಡಿ ಅದಕ್ಕೂ ಎಳ್ಳುನೀರು ಬಿಡುವ ಸಂಚು ಕಾಣುತ್ತಿದೆ.
ಹದವಾದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದೇ ಕಂಬಳ ಕ್ರೀಡೆ. ವರ್ಷಕ್ಕೊಂದು ಸಲ ಇದು ನಡೆಯುವುದಾದರೂ ಕೋಣಗಳ ಸಾಕುವಿಕೆ ವರ್ಷವಿಡೀ ನಡೆಯಬೇಕು. ಸಾಂಪ್ರದಾಯಿಕ ಕಂಬಳದಲ್ಲಿ ಒಂದು ಸುತ್ತು ಬಂದು ಹರಕೆ ತೀರಿಸಿದರೆ ಸಾಕು. ಉಡುಪಿ ಜಿಲ್ಲೆಯ ಪ್ರಸಿದ್ಧ ಸಾಂಪ್ರದಾಯಿಕ ಕಂಬಳವಾದ ವಂಡಾರು ಕಂಬಳ, ಕೊಕ್ಕರ್ಣೆ ಬಳಿಯ ಒಡ್ಡಬೆಟ್ಟು ಕಂಬಳದಲ್ಲಿ ದನ, ಎತ್ತುಗಳನ್ನೂ ಗದ್ದೆಗೆ ಇಳಿಸಿ ಹರಕೆ ತೀರಿಸುವುದುಂಟು.
ಸಾಕಣೆ ಮಾಡುವುದು ವಿಶಿಷ್ಟ
ಕಂಬಳದಲ್ಲಿ ಜನಪದ ಸಂಸ್ಕೃತಿ, ದೈವಾರಾಧನೆಯ ಸಂಸ್ಕೃತಿಯೊಂದಿಗೆ ಮೇಳೈಸಿಕೊಂಡ ಸಾಂಪ್ರದಾಯಿಕ ಕಂಬಳ ಒಂದು ಬಗೆಯಾದರೆ, ವೈಭವದಿಂದ ಸ್ಪರ್ಧಾತ್ಮಕವಾಗಿ ನಡೆಯುವ ಜೋಡುಕರೆ ಕಂಬಳ ಇನ್ನೊಂದು ಬಗೆ. ಸಂಖ್ಯೆಯಲ್ಲಿ ಜೋಡುಕರೆ ಕಂಬಳ ಕಡಿಮೆಯಾದರೂ ಕೋಣಗಳ ಆಕರ್ಷಣೆ ಮಹತ್ವ ಪಡೆದಿರುತ್ತದೆ. ಸಾಂಪ್ರದಾಯಿಕ ಕಂಬಳದ ಸಂಖ್ಯೆಯೂ ಹೆಚ್ಚು, ಪಾಲ್ಗೊಳ್ಳುವ ಕೋಣಗಳೂ ಹೆಚ್ಚು. ಆದರೆ ಕೋಣಗಳ ಓಟ ಇಲ್ಲಿ ಹರಕೆ ದೃಷ್ಟಿಯಲ್ಲಿ. ಅಂದರೆ ಸ್ಪರ್ಧಾತ್ಮಕ ದೃಷ್ಟಿ ಇರುವುದಿಲ್ಲ.
ಕಂಬಳದ ಕೋಣಗಳ ಸಾಕಣೆ ತುಸು ವಿಭಿನ್ನ. ಈ ಕೋಣಗಳ ಉದ್ದೇಶ ವಿಶೇಷವಾಗಿ ಕಂಬಳಕ್ಕಾಗಿಯೇ. ಆದರೆ ಇದರ ಉಪಯೋಗ ಕೃಷಿಗೂ ಇರುತ್ತದೆ. ಕೋಣಗಳ ಆಯುಷ್ಯ ಸುಮಾರು 25 ವರ್ಷ. ಸುಮಾರು ಮೂರು ವರ್ಷವಾಗುವಾಗಲೇ ಅವುಗಳನ್ನು ಕಂಬಳದಲ್ಲಿ ಓಡಿಸಲು ಆರಂಭಿಸುತ್ತಾರೆ. 20-22 ವರ್ಷದವರೆಗೂ ಓಡಿ ಪದಕ ಗಳಿಸುವ ಕೋಣಗಳಿರುತ್ತವೆ.
ಕಂಬಳದ ಕೋಣಗಳ ಮಾನದಂಡದಲ್ಲಿ ಹಿಂದಿಗೂ ಇಂದಿಗೂ ತುಸು ವ್ಯತ್ಯಾಸವಾಗಿದೆ. ಹಿಂದೆ ಕೋಣಗಳ ಮೈಕಟ್ಟು, ಹೊಳಪುಗಳಿಗೆ (ಬಿಳುಪು) ಮಾನ್ಯತೆ ನೀಡಲಾಗುತ್ತಿದ್ದರೆ ಈಗ ಓಟದ ಮಾನ್ಯತೆ ಸಿಗುತ್ತಿದೆ. ಹಿಂದೆ ಕೊಟ್ಟಿಗೆಯಲ್ಲಿ ಕಟ್ಟಿ ಬಿಳಿಬಿಳಿಯಾಗಿ ಕಾಣುವಂತೆ ಸಾಕುತ್ತಿದ್ದರೆ ಈಗ ಚರ್ಮದ ಬಣ್ಣ ಕಪ್ಪಾಗುವಂತೆ ಹೊರಗೆ ಕಟ್ಟುತ್ತಾರೆ. ಇವುಗಳನ್ನು ನಿಭಾಯಿಸುವುದೂ ಕಷ್ಟ. ಕಂಬಳದಲ್ಲಿ ಓಡಬೇಕಾದರೆ ಅದಕ್ಕೆ ಸಾಕಷ್ಟು ಶಕ್ತಿ ಬೇಕು. ಅದೇ ಶಕ್ತಿ ನೇತ್ಯಾತ್ಮಕವಾಗಿಯೂ ಪರಿಣಮಿಸುವುದರಿಂದ ಅದರ ಪರಿಚಾರಕ ಜಾಗರೂಕನಾಗಿರಬೇಕು. ಒಂದು ವೇಳೆ ಗರ್ವದ ಕೋಣಗಳಿದ್ದರೆ ಕೆಲವು ಯಜಮಾನರು ರಿಸ್ಕ್ ತೆಗೆದುಕೊಳ್ಳಬಯಸುವುದಿಲ್ಲ, ಕೆಲವು ಯಜಮಾನರು ಗರ್ವವಿದ್ದರೆ ಅದರ ಓಟವೂ ಹೆಚ್ಚಿಗೆ ಇರುತ್ತದೆ ಎಂಬ ಭಾವನೆಯಲ್ಲಿ ಇಂಥದ್ದೇ ಕೋಣಗಳನ್ನು ಖರೀದಿಸುತ್ತಾರೆ.
ಕಂಬಳ ಕ್ಷೇತ್ರದ ಸಾಧನೆಗಾಗಿಯೇ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬಾರಕೂರು ಶಾಂತಾರಾಮ ಶೆಟ್ಟಿಯವರು ತಂದೆಯವರ ಕಾಲದಿಂದಲೂ ಕಂಬಳದ ಕೋಣಗಳನ್ನು ಸಾಕುತ್ತಿದ್ದಾರೆ. ಯಡ್ತಾಡಿಯಲ್ಲಿ ಈ ಕೋಣಗಳನ್ನು ದಿನವೂ ಉಪಚರಿಸುವವರು ಕುಷ್ಟ ನಾಯ್ಕರು. ದಿನವೂ ಎರಡು ಕೋಣಗಳಿಗೆ ತಲಾ ಮೂರು ಕೆ.ಜಿ. ಹುರುಳಿ ಬೇಯಿಸಿ ಕೊಡುತ್ತಾರೆ. ಇದರ ಜೊತೆ ದಿನವೂ ಒಂದು ತೆಂಗಿನ ಕಾಯಿಯನ್ನು ತುರಿದು ಹಾಕುತ್ತಾರೆ. ಕೆಲವರು ಕೊಬ್ಬರಿಯನ್ನು ಕೊಡುವುದಿದೆ. ಹಿಂದಿನ ದಿನ ಬೇಯಿಸಿ ಒಣಗಿಸಿ ಹುಡಿ ಮಾಡಿ ಸಂಜೆ ಅರ್ಧಾಂಶ ಕೊಟ್ಟು ಹುಲ್ಲು ಹಾಕುತ್ತಾರೆ. ಹುರುಳಿ ಜೊತೆ ಸ್ವಲ್ಪ ರಾಗಿ ಅಥವಾ ಅಕ್ಕಿಯ ಪೌಷ್ಟಿಕಾಂಶವಾದ ತೌಡನ್ನು ಬೆರೆಸುತ್ತಾರೆ. ಅನಂತರ ನೀರು ಕೊಡುತ್ತಾರೆ. ಬೆಳಗ್ಗೆ ಮತ್ತೆ ಅರ್ಧಾಂಶ ಹುರುಳಿಯನ್ನು ಕೊಟ್ಟು ಹುಲ್ಲು ಹಾಕುತ್ತಾರೆ. ಒಂದು ಕೆ.ಜಿ. ಕೊಚ್ಚಿಗೆ ಅಕ್ಕಿ ಗಂಜಿಯನ್ನು ಹಿಂದಿನ ದಿನ ರಾತ್ರಿ ತಯಾರಿಸಿ ಮರುದಿನ ಹುರುಳಿ ಜೊತೆ ಕೊಡುತ್ತಾರೆ. ಹೊರಗೆ ಕಟ್ಟಿ ಕೆಲ ಹೊತ್ತಿನ ಬಳಿಕ ನೀರಿನ ತೊಟ್ಟಿಯಲ್ಲಿ ಬಿಡುತ್ತಾರೆ. ಆಗ ನೀರಿನಲ್ಲಿ ಅವು ಸ್ವತ್ಛಂದವಾಗಿ ಕಾಲ ಕಳೆಯುತ್ತವೆ. ಅಲ್ಲಿ ಸ್ನಾನ ಮಾಡಿಸಿದ ಬಳಿಕ ಕೊಟ್ಟಿಗೆಯಲ್ಲಿ ಕಟ್ಟಿ ನಿತ್ಯವೂ ತೆಂಗಿನೆಣ್ಣೆಯ ಮಸಾಜ್ ಮಾಡುತ್ತಾರೆ. ವಾರಕ್ಕೊಂದಾವರ್ತಿ 100 ಗ್ರಾಂ. ಎಳ್ಳೆಣ್ಣೆ ಕುಡಿಸುತ್ತಾರೆ. ಮಳೆಗಾಲದಲ್ಲಿ ಹಸಿ ಹುಲ್ಲು ಹಾಕುತ್ತಾರೆ. ಮಳೆಗಾಲದಲ್ಲಿ ತೆಂಗಿನೆಣ್ಣೆ ಜೊತೆ ಕಹಿಗುಣದ ಕಹಿಬೇವಿನ ಎಣ್ಣೆ ಮಿಶ್ರಣ ಮಾಡಿ ಹಚ್ಚುತ್ತಾರೆ. ಇದು ಸೊಳ್ಳೆ ಬಾರದಂತೆ ಸಹಕಾರಿ. ಬೇಸಗೆಯಲ್ಲಿ ಕುಂಬಳ ಕಾಯಿಯನ್ನು ತಿನ್ನಲು ಕೊಡುತ್ತಾರೆ.
ಈಜುಕೊಳದ ಭಾಗ್ಯ!
ಮಣಿಪಾಲದ ಟ್ಯಾಪ್ಮಿ ಸಂಸ್ಥೆ ಬಳಿ ನಂದಳಿಕೆ ಶ್ರೀಕಾಂತ ಭಟ್ಟರು ಮೂರು ಜೊತೆ ಕೋಣಗಳನ್ನು ಆರು ವರ್ಷಗಳಿಂದ ಸಾಕುತ್ತಿದ್ದಾರೆ. ಇವರ ಕೋಣಗಳು ಮೂರು ವರ್ಷಗಳಿಂದ ಚಾಂಪಿಯನ್ ಆಗಿವೆ. ಈ ಕೋಣಗಳಿಗೆ ಈಜುಕೊಳದ ಭಾಗ್ಯವೂ ಇದೆ. ಕೊಳಚೂರು ಕೊಂಜಟ್ಟು ಸುಕುಮಾರ ಶೆಟ್ಟಿ, ಮೂಡಬಿದಿರೆ ಕರಿಂಜೆ ವಿಶ್ವನಾಥ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಕಾರ್ಕಳದ ಜೀವನದಾಸ್ ಅಡ್ಯಂತಾಯ ಮೊದಲಾದವರು ಕಂಬಳದ ಕೋಣಗಳನ್ನು ಸಾಕುವವರಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಮನೆಗಳಿಗೆ ಭೇಟಿ ನೀಡಿ ಕೋಣಗಳನ್ನು ಸಾಕುವುದನ್ನು ನೋಡಿದರೆ ಕಂಬಳ ಕ್ರೀಡೆಯನ್ನು ಹಿಂಸೆ ಅನ್ನಲು ಬಾಯಿ ಬಾರದು.
ಕಂಬಳದ ಕೋಣಗಳನ್ನು ಕೃಷಿ ಕಾರ್ಯಕ್ಕೂ ಬಳಸುವುದಿದೆ. ಇವುಗಳ ಗೊಬ್ಬರ ಕೃಷಿಗೆ ಬಳಕೆಯಾಗುತ್ತದೆ. ಕಂಬಳವಾಗುವ ಮುನ್ನ ಮತ್ತು ಅನಂತರ ಗದ್ದೆಗಳಲ್ಲಿ ಓಡಿಸಿ ಸಜ್ಜುಗೊಳಿಸುತ್ತಾರೆ. ಕೋಣಗಳ ಶಕ್ತಿ ವೃದ್ಧಿಸಲು ಇದು ಪೂರ್ವೋತ್ತರ ತಯಾರಿ ಅನ್ನಬಹುದು. ಕಂಬಳ ಕ್ರೀಡೆಗಾದರೂ ಕೋಣಗಳನ್ನು ಸಾಕುವ ಪರಿಪಾಠವಿದೆ. ಒಂದು ವೇಳೆ ಕೃಷಿ ಕಾಯಕ ನೇಪಥ್ಯಕ್ಕೆ ಸರಿದಂತೆ ಕಂಬಳವೂ ನೇಪಥ್ಯಕ್ಕೆ ಸರಿದರೆ ಕೋಣಗಳಿಗೆ ಇನ್ನು ಬೇಡಿಕೆ ಬರುವುದು ಕಸಾಯಿಕಾನೆಗಳಿಂದ ಮಾತ್ರ ಅನ್ನೋ ಅನುಮಾನ ಏನು ಸುಳ್ಳಲ್ಲ.
ಕಾಸರಗೋಡು ಜಿಲ್ಲೆಯಲ್ಲಿ, ಭಟ್ಕಳ ತಾಲೂಕಿನಲ್ಲಿ ಬೆರಳೆಣಿಕೆಯ ಕೆಲವು ಹರಕೆಯ, ಮನೋರಂಜನೆಯ ಕಂಬಳಗಳು ನಡೆಯುತ್ತವೆ. ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕಂಬಳಗಳು ಹೆಚ್ಚು. ದ.ಕ. ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಜೋಡುಕರೆ ಕಂಬಳಗಳು ಹೆಚ್ಚು. ಕರಾವಳಿಯಲ್ಲಿ ಒಟ್ಟು 24 ಜೋಡುಕರೆ ಕಂಬಳಗಳು, ಕೃಷಿ, ಕಂಬಳಕ್ಕಾಗಿ ಸಾಕುವ ಸುಮಾರು 600 ಕೋಣಗಳು ಕರಾವಳಿಯಲ್ಲಿವೆ ಎನ್ನುತ್ತಾರೆ ಚಾಂಪಿಯನ್ ಕೋಣಗಳ ಮಾಲಕ ನಂದಳಿಕೆ ಶ್ರೀಕಾಂತ ಭಟ್.
ಕೆಸರಿನ ಸ್ನಾನ- ಮಡ್ ಬಾತ್ ಥಿಯರಿ
ಕೋಣಗಳನ್ನು ಈಜುಕೊಳದಲ್ಲಿ ಈಜಾಡಿಸುತ್ತಾರೆ. ಕೋಣಗಳಿಗೆ ನಿತ್ಯ ಸ್ನಾನ ಮಾಡಿಸುವುದಕ್ಕಿಂತ ಕೆಸರಿನಲ್ಲಿ ಹೊರಳಾಡಲು ಬಿಟ್ಟರೆ ಅತ್ಯುತ್ತಮ. ಇದರಿಂದ ಅವುಗಳ ರೋಮಗಳ ರಂಧ್ರ ತೆರೆದುಕೊಳ್ಳುತ್ತದೆ. ಹೊರಳಾಡಿದರೆ ಕೈಕಾಲು ಸಡಿಲು ಆಗುತ್ತದೆಯಂತೆ. ಆಯುರ್ವೇದ ವೈದ್ಯರು ಮಡ್ ಬಾತ್ ಮಾಡಿಸುವ ಚಿಕಿತ್ಸಾಕ್ರಮಕ್ಕೂ ಕೋಣಗಳನ್ನು ಕೆಸರಿನಲ್ಲಿ ಹೊರಡಾಡಿಸಲು ಬಿಡುವುದೂ ಒಂದರ್ಥದಲ್ಲಿ ಸಮ. ಈಜು ಉತ್ತಮ ವ್ಯಾಯಾಮವೆನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.
ಫ್ಯಾನ್- ಎ.ಸಿ.
ಜಾನುವಾರುಗಳಿಗೆ ಫ್ಯಾನ್ ಹಾಕುವುದು ಇದೆ. ಇದರ ಮುಖ್ಯ ಉದ್ದೇಶ ಸೊಳ್ಳೆ ಬಾರದಂತೆ ತಡೆಯುವುದು. ಮನುಷ್ಯರು ಬಳಸುವುದೂ ಸೊಳ್ಳೆ ಬಾರದ ಕಾರಣಕ್ಕಾಗಿಯೇ. ಹವಾನಿಯಂತ್ರಣ ವ್ಯವಸ್ಥೆಯನ್ನು ಕಂಬಳದ ಕೋಣಗಳ ಕೊಟ್ಟಿಗೆಗೆ ಬಳಸುತ್ತಿದ್ದಾರೆ. ಆದರೆ ಹವಾನಿಯಂತ್ರಣ ಆರೋಗ್ಯಕ್ಕೆ ಉತ್ತಮವಲ್ಲ ಎಂಬ ಮನುಷ್ಯರಿಗೆ ಅನ್ವಯವಾಗುವ ನೀತಿ ಪ್ರಾಣಿಗಳಿಗೂ ಅನ್ವಯವಾಗುತ್ತಿಲ್ಲ.
ಡಾರ್ವಿನ್ ವಿಕಾಸವಾದ- ಕೋಣಗಳ ವಿಕಾಸವಾದ!
ಮಂಗನ ತಳಿಯಿಂದಲೇ ಮಾನವ ವಿಕಾಸ ಹೊಂದಿದ ಎಂಬ ಡಾರ್ವಿನ್ ವಿಕಾಸವಾದ ಎಲ್ಲರಿಗೂ ಗೊತ್ತಿದೆ. ಇದನ್ನು ನಿರಾಕರಿಸುವ ವಾದವೂ ಗೊತ್ತಿದೆ. ಕೆಲವು ಕಂಬಳದ ಕೋಣಗಳು ಪಕ್ಕದ ಕೋಣಗಳು ಓಡುವುದನ್ನು ನೋಡಿ ಅದನ್ನು ಹಿಂದಿಕ್ಕುತ್ತವೆ. ಕಂಬಳ ನೋಡುವಾಗ ಜನರು ಮುಗಿ ಬಿದ್ದು ಗದ್ದೆಗೆ ಬೀಳುವುದಿದೆ. ಎಂಥದ್ದೇ ಸಂದರ್ಭದಲ್ಲಿಯೂ ಓಟದ ಗಡಿಬಿಡಿಯಲ್ಲಿಯೂ ಒಂದೇ ಒಂದು ಕೋಣ ಬಿದ್ದವರ ಮೇಲೆ ಕಾಲು ಹಾಕಿದ್ದಿಲ್ಲ. ಸಾವು ನೋವು ಸಂಭವಿಸಿದ್ದು ಇಲ್ಲ. ಇದೊಂದು ವಿಶಿಷ್ಟ ಬೌದ್ಧಿಕ ಕ್ರಿಯೆ. ಮನುಷ್ಯರೂ ಓಟದ ಸ್ಪರ್ಧೆಯಲ್ಲಿ ಪಕ್ಕದವನನ್ನು ನೋಡಿ ಆತನ ವೇಗಕ್ಕೆ ಸರಿಯಾಗಿ ಓಡಿ ಆತನನ್ನು ಹಿಂದಿಕ್ಕುವ ಪ್ರಯತ್ನ ನಡೆಸುತ್ತಾರೆ. ಹಾಗಿದ್ದರೆ ಡಾರ್ವಿನ್ ವಿಕಾಸವನ್ನು ಇದಕ್ಕೂ ಅನ್ವಯಿಸಬಹುದೆ?
ಖರ್ಚೆಷ್ಟು?
ಒಂದು ಜೊತೆ ಕೋಣ ಸಾಕಲು ತಿಂಗಳಿಗೆ ಕನಿಷ್ಠ 15,000 ರೂ.ನಿಂದ 20,000 ರೂ. ಖರ್ಚು ತಗಲುತ್ತದೆ. ಕೋಣಗಳ ಸಾಕಣೆ ಖರ್ಚಿಗಿಂತ ಕಂಬಳಕ್ಕೆ ಕರೆದೊಯ್ಯುವಾಗ ಆಗುವ ಖರ್ಚೇ ಹೆಚ್ಚು. ಒಂದು ಕಂಬಳಕ್ಕೆ ಕನಿಷ್ಠ 20,000 ರೂ. ತಗಲುತ್ತದೆ. ಕೋಣಗಳ ಜೊತೆ 10-12 ಜನರು ಹೋಗಬೇಕು. ಅವರಿಗೆ ಕನಿಷ್ಠವೆಂದರೂ ಒಬ್ಬರಿಗೆ 1,000 ರೂ. ಕೊಡಬೇಕಾಗುತ್ತದೆ.
ಮಟಪಾಡಿ ಕುಮಾರಸ್ವಾಮಿ
ಕಂಬಳದ ಗದ್ದೆ ಹೇಗಿರುತ್ತದೆ..?
ಕೋಣಗಳನ್ನು ಓಟಕ್ಕೆ ಬೇಕಾದ ತಯಾರಿಯೊಂದಿಗೆ ತರಬೇತಿಯನ್ನು ನೀಡಿ ಪಂದ್ಯಕ್ಕೆ ಸಿದ್ಧಪಡಿಸುವುದರ ಹಿಂದೆಯೂ ಬದ್ಧತೆ ಮತ್ತು ತಾಳ್ಮೆ ಬಹು ಮುಖ್ಯ . ಅದೆಷ್ಟೋ ಬಾರಿ ಕೋಣಗಳು ಒದೆಯುವ ಹಾಗೂ ತಿವಿಯುವ ಸಂಭವವೂ ಇರುತ್ತದೆ. ಕೋಣಗಳನ್ನು ಪಂದ್ಯಕ್ಕೆ ತಯಾರು ಮಾಡುವ ಸವಾಲು ಮಾಲೀಕನಿಗೆ ಒಂದೆಡೆಯಾದರೆ ಇವುಗಳನ್ನು ಓಡಿಸುವ ಆರೋಗ್ಯವಂತ ಹಾಗೂ ಸದೃಢ ಯುವಕರ ಆಯ್ಕೆ ಇನ್ನೊಂದೆಡೆ.ಕೋಣಗಳ ಓಟದ ವೇಗಕ್ಕೆ ಸರಿ ಸಮಾನವಾಗಿ ನೀರು ಕೆಸರು ತುಂಬಿದ ಗದ್ದೆಯಲ್ಲಿ ಓಡುವುದು ಸಾಮಾನ್ಯದ ಮಾತಲ್ಲ. ಇಂದು ಕರಾವಳಿ ಕೇವಲ ಬೆರಳೆಣಿಕೆಯಷ್ಟೇ ಮಂದಿ ಕಂಬಳದ ಗದ್ದೆಯಲ್ಲಿ ಕೋಣಗಳೊಂದಿಗೆ ಓಡುವ ಓಟಗಾರರಿದ್ದಾರೆ.
ಕಂಬಳದ ಕೋಣಗಳ ಮತ್ತು ಓಟಗಾರರ ನಿರ್ವಹಣೆ ಮಾಲೀಕರಿಗೆ ಬಲು ಖರ್ಚಿನ ಬಾಬ್ತು. ಹೀಗಿದ್ದರೂ ಈ ಕ್ರೀಡೆ ಇಂದುಪ್ರತಿಷ್ಠೆಯ ಪ್ರಶ್ನೆಯಾಗಿ ಬೆಳೆದಿದೆ. ಕಂಬಳಕ್ಕೆ ಯೋಗ್ಯ ಕೋಣಗಳ ದರ ಮರುಕಟ್ಟೆಯಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷದವರೆಗೂ ಇದೆ ಎನ್ನುತ್ತಾರೆ ಹಿರಿಯ ಕಂಬಳ ತಜ್ಞರು. ಇಷ್ಟು ದೊಡ್ಡ ಮೊತ್ತವನ್ನು ನೀಡಿಯೂ ಕೋಣಗಳನ್ನು ಖರೀದಿಸುತ್ತಾರೆಂದರೆ ಕಂಬಳದ ಕ್ರೇಝ್ ಕರಾವಳಿಯಲ್ಲಿ ಎಷ್ಟಿದೆಯೆಂದು ತಿಳಿಯಬಹುದು.
ಭತ್ತದ ಕಟಾವು ನಡೆದ ನಂತರ ಖಾಲಿ ಗದ್ದೆ ಅಥವಾ ಬಳಸದೇ ಬಿಟ್ಟ ಗದ್ದೆಗಳಲ್ಲಿ (ಹಡೀಲು ಗದ್ದೆ ತುಳುವಿನಲ್ಲಿ, ಪಡೀಲ್ ಕಂಡ) ಕಂಬಳವನ್ನು ಬಹುವಾಗಿ ಏರ್ಪಡಿಸಲಾಗುತ್ತಿತ್ತು.ಆದರೆ ಇಂದು ಕಂಬಳಕ್ಕಾಗಿಯೇ ವಿಶೇಷವಾಗಿ ಕಂಬಳದ ಗದ್ದೆಗಳನ್ನು ಶಾಶ್ವತವಾಗಿ ನಿರ್ಮಿಸಲಾಗಿರುತ್ತದೆ. ಕಂಬಳದ ಅಂಕಣ ಆಯಾ ಕಂಬಳದ ಸ್ವರೂಪಕ್ಕನುಗುಣವಾಗಿ ನೂರೈವತ್ತರಿಂದ ಇನ್ನೂರೈವತ್ತು ಮೀಟರ್‌ನಷ್ಟಿರುತ್ತದೆ. ಹದ ಮಾಡಲಾದ ಗದ್ದೆಯ ಮಣ್ಣಿಗೆ ಅದು ಜಿಗುಟಾಗದಿರುವಂತೆ ಸೂಕ್ತ ಪ್ರಮಾಣದಲ್ಲಿ ಮರಳನ್ನು ಸೇರಿಸಿ ಅದರ ಮೇಲೆ ನಿಗದಿತ ಪ್ರಮಾಣದ ನೀರನ್ನು ತುಂಬಿಸಿ ಸಿದ್ಧ ಪಡಿಸಿದ ಗದ್ದೆಯೇ ಕಂಬಳದ ಅಂಕಣ. ಸಾಮಾನ್ಯವಾಗಿ ಕಂಬಳದ ಅಂಕಣ ಭೂಮಿಯ ಮಟ್ಟಕ್ಕಿಂತ 4 ರಿಂದ 5 ಅಡಿಗಳಷ್ಟು ಆಳದಲ್ಲಿದ್ದು, ಕಂಬಳದ ಓಟಪ್ರಾರಂಭವಾಗುವ ಪ್ರದೇಶ ಇಳಿಜಾರು ಮಾಡಿ ಕೋಣಗಳನ್ನು ಸಲೀಸಾಗಿ ಅಂಕಣದೊಳಗೆ ಇಳಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿರುತ್ತದೆ. ಕಂಬಳದ ಆರಂಭದ ಮತ್ತು ಅಂತ್ಯದ ಗೆರೆಗಳನ್ನು, ಮಾವಿನ ತೋರಣವನ್ನು ಕಟ್ಟುವ ಮೂಲಕ ನಿರ್ಮಿಸಲಾಗಿರುತ್ತದೆ. ಕಂಬಳ ಅಂಕಣ ಮುಕ್ತಾಯದ ಭಾಗವನ್ನು ಸ್ವಲ್ಪ ಏರು ರೀತಿಯಲ್ಲಿ ನಿರ್ಮಿಸುತ್ತಿದ್ದು, ಈ ಪ್ರದೇಶವನ್ನು ಮಂಜೋಟ್ಟಿ ಎಂದು ಕರೆಯುತ್ತಾರೆ. ಏಕೆಂದರೆ ಅತ್ಯಂತ ವೇಗವಾಗಿ ಓಡಿಕೊಂಡು ಬರುವ ಬಲಿಷ್ಟ ಕೋಣಗಳು ಎತ್ತರಪ್ರದೇಶವಾದ ಮಂಜೋಟ್ಟಿ ತಲುಪುತ್ತಿದ್ದಂತೆ ವೇಗವನ್ನು ಕಳೆದುಕೊಳ್ಳುತ್ತವೆ. ಇಲ್ಲಿ ಬಲಿಷ್ಠ ಯುವಕರು ನಿಂತಿದ್ದು ಆ ಕೋಣಗಳನ್ನು ಹಿಡಿದು ನಿಯಂತ್ರಿಸುತ್ತಾರೆ. ಕಂಬಳದ ಗದ್ದೆಯಲ್ಲಿ ಎರಡು ವಿಧಗಳಿದ್ದು ಅವುಗಳೆಂದರೆ ಒಂಟಿ ಗದ್ದೆ ಕಂಬಳ ಮತ್ತು ಜೋಡಿ ಗದ್ದೆ ಕಂಬಳ.
ಒಂಟಿಗದ್ದೆ ಕಂಬಳ ವಿಶಿಷ್ಟವಾದ ಕೆನೆ ಹಲಗೆ ಓಟವನ್ನು ನಡೆಸುವಾಗ ಬಳಸಲಾಗುತ್ತದೆ.ಇಲ್ಲಿ ಎರಡು ಜೊತೆ ಕೋಣಗಳ ಪೈಪೋಟಿಗೆ ಬದಲಾಗಿ ಕೇವಲ ಒಂದೇ ಜೊತೆ ಕೋಣಗಳನ್ನು ಓಡಿಸಲಾಗುತ್ತದೆ. ಆದರೆ ಕಂಬಳದ ಅಂಕಣದುದ್ದಕ್ಕೂ ಅಲ್ಲಲ್ಲಿ ವಿವಿಧ ಅಳತೆಯ ಎತ್ತರದಲ್ಲಿ ಅಲ್ಲಲ್ಲಿ ಕಟ್ಟಲಾದ ಬಿಳಿಯ ಪರದೆಗಳ (ಇವುಗಳನ್ನು ಪತಾಕೆ ಎನ್ನುತ್ತಾರೆ) ಪೈಕಿ ಅತೀ ಹೆಚ್ಚು ಎತ್ತರದ ಪರದೆಗೆ ವೇಗವಾಗಿ ಓಡುವ ಕೋಣಗಳ ಕೆನೆ ಹಲಗೆಯಿಂದ ಕೆಸರು ಚಿಮ್ಮಿಸುವ ಕೋಣಗಳನ್ನು ವಿಜೇತವೆಂದು ಘೋಷಿಸಲಾಗುತ್ತದೆ.
ಈ ಕಂಬಳದಲ್ಲಿ ಅಕ್ಕ ಪಕ್ಕದಲ್ಲಿ ಎರಡು ಕಂಬಳದ ಅಂಕಣಗಳಿದ್ದು ಏಕಕಾಲಕ್ಕೆ ಎರಡೂ ಅಂಕಣಗಳಲ್ಲಿ ತಲಾ ಒಂದೊಂದು ಜೊತೆ ಕೋಣಗಳನ್ನು ಓಡಿಸಿ ಅತ್ಯಂತ ವೇಗವಾಗಿ ಮಂಜೋಟ್ಟಿ ತಲುಪುವ ಕೋಣಗಳನ್ನು ವಿಜೇತವೆಂದು ಘೋಷಿಸಲಾಗುತ್ತದೆ.
ಹೆಚ್ಚಾಗಿ ಜೋಡು ಕೆರೆ ಕಂಬಳದ ಗದ್ದೆಗಳಿಗೆ ಜಾನಪದ ಪುರಾಣದಲ್ಲಿ ಸಿಗುವ ಅವಳಿ ಜವಳಿ ಅಥವಾ ಜೋಡುನುಡಿ ಪದಗಳನ್ನಿಡುವುದು ಸಾಮಾನ್ಯವಾಗಿದೆ.
ಸಂತೋಷ್ ರಾವ್ ಪೆರ್ಮುಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.