ಕವಿತೆಯನ್ನು ಬದುಕಿದವರು !
Team Udayavani, Feb 5, 2017, 3:45 AM IST
1987ರ ಆಸುಪಾಸು. ಡಿ.ಎಸ್. ನಾಗಭೂಷಣ ಅವರು ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾಗ ರಾಜ್ಯಮಟ್ಟದ ಆಕಾಶವಾಣಿ ಕವಿಗೋಷ್ಠಿಯನ್ನು ಆಯೋಜಿಸಿದ್ದರು. ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಘಟಾನುಘಟಿ ಕವಿಗಳೆಲ್ಲ ಅದರಲ್ಲಿ ಪಾಲುಗೊಂಡಿದ್ದರು. ಆ ಕವಿಗೋಷ್ಠಿಯಲ್ಲಿ ಕವಿತೆ ಓದಿದ ಅತ್ಯಂತ ಕಿರಿಯ ಕವಿ ಎಂದರೆ ಎಸ್. ಮಂಜುನಾಥ್. ನಾನು ಬೆರಗಿನಿಂದ ಶ್ರೋತೃವಾಗಿ, ಆ ಕವಿಗೋಷ್ಠಿಯಲ್ಲಿ ಸಾದರಪಡಿಸಿದ ಕವಿತೆಗಳನ್ನು ಆಲಿಸಿದ್ದೆ. ಆಗತಾನೆ ಮಂಜುನಾಥ್ ಅವರ ಹಕ್ಕಿ ಪಲ್ಟಿ ಪ್ರಥಮ ಕವನ ಸಂಕಲನ ಬಂದಿತ್ತು. ನನ್ನ ಪ್ರಥಮ ಕವನ ಸಂಕಲನ ನಾ ಬರುತ್ತೇನೆ ಕೇಳು ಕೂಡ ಅದೇ ತಾನೇ ಬಿಡುಗಡೆಯಾಗಿತ್ತು. ಒಂದೇ ವಯಸ್ಸಿನವರಾದ ನಾವು ಪ್ರಸಕ್ತ ವಿನಿಮಯ ಮಾಡಿಕೊಂಡೆವು. ನಂತರ ಅವರು ನಮ್ಮ ಮನೆಗೂ ಬಂದಿದ್ದರು. ಅಂದಿನಿಂದಲೂ ಮಂಜುನಾಥ್ ನಮಗೆ ಪರಿಚಿತರೂ, ಕಾವ್ಯ ಪ್ರೀತಿಯ ಕಾರಣ ಆಪ್ತರೂ ಆದರು.
ಈ ಹೊತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ಮಂಜುನಾಥ್ “24ಗಿ7′ ಕವಿ. ಸದಾ ಕವಿತೆಯ ಗುಂಗಿನಲ್ಲಿ ಇರುತ್ತಿದ್ದ ಅವರು ಪ್ರತಿಬಾರಿ ನಮ್ಮ ಮನೆಗೆ ಬರುವಾಗ ಜತೆಯಲ್ಲಿ ಪಂಪ-ಕುಮಾರವ್ಯಾಸನನ್ನೋ, ಅಲ್ಲಮಪ್ರಭು-ಲಾವೋತ್ಸೆಯನ್ನೋ ಬೇಂದ್ರೆ ಪ್ರತಿದಿನ ಅವರನ್ನೋ ಕರೆತರುತ್ತಿದ್ದರು! ಕಾವ್ಯದ ಬಗೆಗಿನ ಅವರ ಏಕಾಗ್ರತೆ, ಪ್ರೀತಿ, ಅಧ್ಯಯನ ನಾಗಭೂಷಣ ಅವರೊಂದಿಗೆ ಅವರು ನಡೆಸುವ ಕಾವ್ಯ ಚರ್ಚೆ ನನಗೆ ಅಸೂಯೆ ಹುಟ್ಟಿಸುತ್ತಿತ್ತು. ಅವರನ್ನು ಕಾವ್ಯ ದೇವತೆಯ ತೆಕ್ಕೆಯಿಂದ ಬಿಡುಗಡೆಗೊಳಿಸಲು ವಿಫಲರಾಗಿ ಅವರಿಗೆ ಮದುವೆ ಮಾಡಲು ಪ್ರಯತ್ನಿಸಿ ಹುಡುಗಿಯರ ಅನ್ವೇಷಣೆಗೆ ತೊಡಗಿದೆವು. ಅವರದ್ದು ಚಿಕ್ಕಿ-ಅಕ್ಕ-ತಂಗಿ, ಅಣ್ಣ-ತಮ್ಮಂದಿರ ತುಂಬು ಸಂಸಾರ. ಕೊನೆಗೆ ಅವರೇ ಇಷ್ಟಪಟ್ಟು ಮದುವೆಯಾದ ಹುಡುಗಿ-ಆಕೆಯ ಹೆಸರೂ “ಸವಿತಾ’ ಮಂಜುನಾಥ್ ಅವರ ಕಾವ್ಯದ ಹುಚ್ಚನ್ನು ಮತ್ತಷ್ಟು ಹೆಚ್ಚಿಸಿ ಮತ್ತಷ್ಟು ಒಳ್ಳೆಯ ಕವನಗಳನ್ನು ಬರೆಯುವುದಕ್ಕೆ ಒತ್ತಾಸೆಯಾದಳು.
ಎಸ್. ಮಂಜುನಾಥ್ ಕೆ.ಆರ್. ನಗರದ ಒಂದು ಮೂಲೆಯಲ್ಲಿ ತನ್ನ ಪಾಡಿಗೆ ತಾನು ಕವಿತೆಯನ್ನೇ ಉಸಿರಾಡಿದ ಕವಿ. “ಕೀರಂ’ ಹೊರತುಪಡಿಸಿದರೆ ಕಾವ್ಯ ಬಗ್ಗೆ ನಿರ್ವಾಜ್ಯ ಪ್ರೀತಿಯನ್ನು ಹೊಂದಿದ ವ್ಯಕ್ತಿಯನ್ನು ನಾನು ಕಂಡಿದ್ದು ಮಂಜುನಾಥರಲ್ಲೇ. ಕಾವ್ಯವೆಂದರೆ “ಎಲ್ಲವನ್ನೂ ಮುಟ್ಟಿದಂತೆ’ “ಮೂಸಿದಂತೆ’ “ಸೋಕಿದಂತೆ’ “ಒಂದು ಒಳ್ಳೆಯ ಮನಸ್ಸಿನ ಹಾಜರಿ’ ಇವು ಕಾವ್ಯವನ್ನು ಕುರಿತು ಅವರು ಉಚ್ಚರಿಸುತ್ತಿದ್ದ ನುಡಿಗಳು. ಅದು “ದೇಶೀಯವೂ ಪ್ರಸನ್ನವೂ ವಿಶದವೂ’ ಆಗಿರಬೇಕು ಎಂದು ಪುತಿನ ಅವರ ಹೇಳಿಕೆಯನ್ನು ಮತ್ತೆ ಮತ್ತೆ ನೆನಪಿಸುತ್ತಿದ್ದರು. ಕಾವ್ಯವೆಂದರೆ ಜಡವನ್ನು ಚೇತನಗೊಳಿಸುವ ಪ್ರಕ್ರಿಯೆ (ಕುವೆಂಪು) ಮೆಲುಕು ಹಾಕುತ್ತಿದ್ದರು.
ಕಣ್ಣಿದುರಿನ ಲೋಕದ ಬಗ್ಗೆ ಮೊದಲ ನಿಷ್ಠೆ. ಅದೇ “ಕೊಟ್ಟ ಕುದುರೆ’. ಕವಿತೆ ಈ ಲೋಕವನ್ನು ದೇವರು ಎಂದು ಭಾವಿಸಬೇಕು. ಕವಿತೆಯ ಹೆಚ್ಚುಗಾರಿಕೆ ಎಂದರೆ ಅದು ಲೋಕಾನುಭವವನ್ನು ಮೀರಿದ ಪರಿಣಾಮವಾದರೂ ರೂಪ, ರಸ, ಸ್ಪರ್ಶ, ಗಂಧಗಳಲ್ಲಿ ತಂಗುವುದು. ಕವಿತೆಯಲ್ಲಿ ಅಸಾಧಾರಣವಾದಕ್ಕಿಂತಲೂ ಸಾಮಾನ್ಯವಾದ ಅನುಭವ ಉದ್ರೇಕಕ್ಕಿಂತಲೂ ಸಮಾಧಾನ, ಲಂಬವಾದದಕ್ಕಿಂತಲೂ ಸಮವಾದ್ದು, ತಾರಕಕ್ಕಿಂತಲೂ ಮಂದ್ರ, ವೇಗಕ್ಕಿಂತಲೂ ನಿಧಾನ, ದೇವರ ಅತೀತತೆಗಳಿಗಿಂತಲೂ ಸರ್ವಾಂತರ್ಯಾಮಿತನ ನೆಲೆಗೊಂಡಿದೆ ಎಂದು ನಂಬಿದ್ದರು. ಲೋಕದ ನಮ್ಮ ಯಾವ ತಾಪತ್ರಯವನ್ನೂ ಕವಿತೆ ಬಗೆಹರಿಸಲಾರದು. ಅದು ನಿಶ್ಚಿತ ಜ್ಞಾನವನ್ನು ಪಲ್ಲಟಗೊಳಿಸುವ, ಅಹಂಕಾರವನ್ನು ಮೃದುಗೊಳಿಸುವ ಸಾಧನ ಎಂದು ತಿಳಿದಿದ್ದರು.
“ಏನೆಲ್ಲ ಅಂದುಕೊಂಡ ಮೇಲೂ ಇದನ್ನು ಮಾತ್ರ ಎಂದಿಗೂ ಮರೆಯಲಾಗದು. ಬದುಕಿನ ಕಾವ್ಯ ಗುಣವೆಂದರೆ ಅದು ಎಲ್ಲ ತೀರ್ಮಾನಗಳನ್ನು ಭಂಗಗೊಳಿಸುವಂಥದ್ದು. ಅದೊಂದು ವಿಧಿವಿಲಾಸ! ಅದೇ ಅದರ ಜೀವಂತಿಕೆ ಮತ್ತು ಸೃಜನಶೀಲತೆ’ (ನೆಲದ ಬೇರು ನಭಾದ ಬಿಳಲು-ಮುನ್ನುಡಿ) ಎಂದು ನಂಬಿದ್ದರು.
ಕವಿತೆ ಎಂದರೆ ಏನು ಎಂದು ದಿನಗಟ್ಟಲೆ ಚರ್ಚಿಸಬಹುದು, ಪುಟಗಟ್ಟಲೆ ಬರೆಯಬಹುದು. ಆದರೆ, ಕವಿ ಅದನ್ನು ತನ್ನ ಕವಿತೆಯಲ್ಲಿ ಸಾಧಿಸುವುದು ಸವಾಲೇ ಸರಿ. ಆದಾಗ್ಯೂ ಮಂಜುನಾಥ್ ಅವರು ಅವರ ಹತ್ತುಹಲವು ಕವಿತೆಗಳಲ್ಲಿ ಸಾಧಿಸುವುದಕ್ಕೆ ಒಂದೆರಡು ಪುಟ್ಟ ಕವಿತೆಗಳನ್ನು ಉದಾಹರಿಸುವುದಾದರೆ:
ರಾಟವಾಳ
ಇಡೀ ದಿನ ಸುತ್ತಿದ ಚಕ್ರ ಇರುಳಲ್ಲಿ ನಿಂದಿದೆ
ಬೆಳಕ ಸುರಿಯುತ್ತಿದೆ ದೀಪಗಳು ಮಣ್ಣಿಗೆ
ತುಸುವೇ ತುಯ್ದಂತೆ ರಾಟವಾಳ
ರಾಟವಾಳ ಈಗ ತನಗಾಗಿ ತುಸುವೇ
(ನಂದಬಟ್ಟಲು)
ಜಿಂಕೆ
ಯಾಕಷ್ಟು ವೇಗ ಜಿಂಕೆಗೆ
ಅದಕ್ಕೆ ಪ್ರಕೃತಿ ಕಾರಣ
ಜಿಂಕೆಯನು ಹುಲಿಯ ಆಹಾರ ಮಾಡಿದೆ
ಓಡಲು ನೀಳ ಕಾಲುಗಳ ನೀಡಿದೆ
ಕಂಗಳ ಒದ್ದೆ ಹೊಳಪು ಕೋಡು ತೊಗಲಿನ ಚೆಲುವು?
ಅದು ದೇವರ ಉದ್ದೇಶ
ಹುಲಿ ಜಿಂಕೆಯನು ಹಿಡಿವಾಗ
ಕರಗಲೆಂದು ಮನುಜ ಹೃದಯ
(ನಂದಬಟ್ಟಲು)
ರಕ್ತ-ಮಾಂಸ ತುಂಬಿದ ಜೀವಿಯಾಗಿ ನಮ್ಮೊಂದಿಗೆ ಕವಿತೆಯನ್ನು ಚರ್ಚಿಸುತ್ತಿದ್ದ. ಈ ಹೊತ್ತೂ ಕಣ್ಣೆದುರಲ್ಲಿ ಇರುವಂತೆ ತೋರುತ್ತಿರುವ ಮಂಜುನಾಥ್ ಬಗ್ಗೆ ಹೀಗೆಲ್ಲ ಬರೆಯಲು ವೇದನೆಯಾಗುತ್ತಿದೆ.
ಸಣ್ಣಪುಟ್ಟ ಆಸೆ-ಆಮಿಷ-ಅವಕಾಶಗಳಿಗೆ ತಮ್ಮ ಆತ್ಮದ ತುಣುಕೇ ಆಗಿರುವ ಕವಿತೆಯನ್ನು ಬಲಿಗೊಡದೆ ಸದಾ ಕವಿತೆಯನ್ನೇ ಉಸಿರಾಡಿದ ಮಂಜುನಾಥ್ ನನ್ನ ಮಟ್ಟಿಗಾದರೋ ಘನತೆವೆತ್ತ ಕವಿಜೀವ! ಎಂಟು ಕವನ ಸಂಕಲನಗಳಲ್ಲಿನ ಮುನ್ನೂರಕ್ಕೂ ಹೆಚ್ಚು ಕವಿತೆಗಳು ಅವರು ಕನ್ನಡ ಕಾವ್ಯಪ್ರೇಮಿಗಳಿಗೆ ನೀಡಿರುವ ಬೆಲೆಬಾಳುವ ಉಡುಗೊರೆ. ದೊಡ್ಡ ದೊಡ್ಡ ಸರಕಾರಿ ಉತ್ಸವ-ಕವಿಗೋಷ್ಠಿ-ಜಾತ್ರೆಗಳಲ್ಲಿ ನಾನವರನ್ನು ಕಂಡಿಲ್ಲ! ಹೊಟೇಲಿನ ಮಾಣಿಯ ಮುಂದೆಯೋ, ಪಾನ್‌ಬೀಡಾವಾಲನ ಮುಂದೆಯೋ, ಸಂತೆಯಲ್ಲಿ ತರಕಾರಿ ಮಾರುವ ಹೆಂಗಸಿನ ಮುಂದೆಯೋ ಕವನ ಓದಿದ್ದು… ಅದು ಅವರ ರೀತಿ… ಅಪೂರ್ವ ಕಾವ್ಯಪ್ರೀತಿ!
– ಸವಿತಾ ನಾಗಭೂಷಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.