ಚಿನ್ನಮ್ಮಗೆ ನಾಳೆ ಮುಖ್ಯಮಂತ್ರಿ ಪಟ್ಟ?
Team Udayavani, Feb 5, 2017, 3:45 AM IST
ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ತಿರುವೊಂದು ಸಿಕ್ಕಿದ್ದು, “ಚಿನ್ನಮ್ಮ’ ಎಂದೇ ಖ್ಯಾತಿ ಗಳಿಸಿರುವ ಶಶಿಕಲಾ ನಟರಾಜನ್, ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.
ಭಾನುವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಎಡಿಎಂಕೆ ಶಾಸಕರ ಸಭೆ ಕರೆಯಲಾಗಿದೆ. ಆದರೆ ಇದುವರೆಗೂ ಸಭೆಯ ಅಜೆಂಡಾ ಏನು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಕೊಟ್ಟಿಲ್ಲ. ಒಂದು ಮೂಲಗಳ ಪ್ರಕಾರ, ಈ ಸಭೆಯಲ್ಲಿ ಶಶಿಕಲಾ ನಟರಾಜನ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡುವ ಸಂಭವಗಳಿವೆ. ಅಲ್ಲದೆ ಹಾಲಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ರಾಜಿನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಪರಮಾಪ್ತರಾಗಿದ್ದ ಶಶಿಕಲಾ ನಟರಾಜನ್, ಜಯಾ ನಿಧನದ ನಂತರದ ಎಐಎಡಿಎಂಕೆಯ ಚುಕ್ಕಾಣಿ ಹಿಡಿದಿದ್ದರು. ಪಕ್ಷದ ಸಂಪ್ರದಾಯದ ಪ್ರಕಾರ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗುವವರೇ ಮುಖ್ಯಮಂತ್ರಿ ಸ್ಥಾನವನ್ನೂ ನಿಭಾಯಿಸುತ್ತಾರೆ. ಇಲ್ಲಿ ಯಾವುದೇ ಕಾರಣಕ್ಕೂ ದ್ವಿ ಅಧಿಕಾರ ಸ್ಥಾನ ಇರಬಾರದು ಎಂಬುದು ಎಐಎಡಿಎಂಕೆಯಲ್ಲಿನ ನಿಯಮ. ಹೀಗಾಗಿ ಭಾನುವಾರದ ಸಭೆಯಲ್ಲಿ ಶಾಸಕರೆಲ್ಲರೂ ಸೇರಿ ಚಿನ್ನಮ್ಮ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗಿದೆ. ಕೆಲ ಆಂಗ್ಲ ಮಾಧ್ಯಮಗಳ ಪ್ರಕಾರ, ಸೋಮವಾರವೇ ಚಿನ್ನಮ್ಮ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಮುನ್ನ ಶಶಿಕಲಾ ನಟರಾಜನ್ ಪಕ್ಷದ ಯಾವುದೇ ಹುದ್ದೆಯಲ್ಲಾಗಲಿ ಅಥವಾ ಸಕ್ರಿಯವಾಗಿ ರಾಜಕಾರಣಕ್ಕೆ ಇಳಿದಿರಲೇ ಇಲ್ಲ. ಅಲ್ಲದೆ ಸದ್ಯ ಅವರು ವಿಧಾನಸಭೆಯ ಸದಸ್ಯರೂ ಅಲ್ಲ. ಆದರೆ ಇದೀಗ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಜಯಲಲಿತಾ ಸಾವಿನಿಂದ ತೆರವಾಗಿರುವ ಅವರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆಗೆ ಪ್ರವೇಶಿಸುವಂತೆ ಮಾಡುವ ಚಿಂತನೆ ಪಕ್ಷಕ್ಕಿದೆ ಎಂದು ಹೇಳಲಾಗಿದೆ.
ಇದಷ್ಟೇ ಅಲ್ಲ, ಎಐಎಡಿಎಂಕೆ ಪಕ್ಷದ ಪ್ರಮುಖ ನಾಯಕರೂ ಶಶಿಕಲಾ ನಟರಾಜನ್ ಅವರೇ ಮುಖ್ಯಮಂತ್ರಿ ಹುದ್ದೆ ಸ್ವೀಕಾರ ಮಾಡಬೇಕು ಎಂದೂ ಆಗ್ರಹಿಸುತ್ತಿದ್ದಾರೆ. ಹೀಗಾಗಿಯೇ ಚೆನ್ನೈನಲ್ಲಿ ಈ ಪ್ರಮಾಣದ ಬೆಳವಣಿಗೆಗಳು ಶುರುವಾಗಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಪಕ್ಷದ ವಕ್ತಾರರಾದ ಸರಸ್ವತಿ ಅವರು ಈ ಬಗ್ಗೆ ಖಚಿತ ಪಡಿಸಿದ್ದು, ಶಶಿಕಲಾ ಅವರಿಗೆ ಸಿಎಂ ಹುದ್ದೆ ನೀಡುವ ಸಲುವಾಗಿಯೇ ಭಾನುವಾರದ ಸಭೆ ಕರೆಯಲಾಗಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.
ಶಶಿಕಲಾ ನಟರಾಜನ್ ಅವರು, ಜನವರಿ ಅಂತ್ಯದಲ್ಲೇ ಸಿಎಂ ಗಾದಿಗೆ ಕುಳಿತುಕೊಳ್ಳಬೇಕಿತ್ತು. ಆದರೆ ಜಲ್ಲಿಕಟ್ಟು ಕ್ರೀಡೆ ವಿವಾದ ಸಂಬಂಧ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆಗಳು ಶುರುವಾದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನೆನಗುದಿಗೆ ಬಿದ್ದಿತ್ತು.
ಜಯಾ ಆಪ್ತರಿಗೆ ಗೇಟ್‌ಪಾಸ್: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸಿಎಂ ಕಚೇರಿಯಲ್ಲಿ ಆಪ್ತರಾಗಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಸಿಎಂ ಅವರ ಸಲಹೆಗಾರರಾದ ಶೀಲಾ ಬಾಲಕೃಷ್ಣನ್, ಕೆ ಎನ್ ವೆಂಕಟರಾಮನ್ ಅವರನ್ನು ತೆಗೆದುಹಾಕಲಾಗಿದ್ದು, ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿ ರಾಮಲಿಂಗಂ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಇದರ ಜತೆಗೆ ಜಯಲಲಿತಾ ಅವರ ಕಾಲದಲ್ಲಿ ನೇಪಥ್ಯಕ್ಕೆ ಸರಿದಿದ್ದ ನಾಯಕರಾದ ಕೆ ಎ ಸೆಂಗೋಟ್ಟಿಯನ್ ಮತ್ತು ಸಾಯಿದಾಯಿ ಎಸ್ ದೊರೆಸ್ವಾಮಿ ಅವರನ್ನು ಸಂಘಟನಾ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಎಂಜಿಆರ್ ಯೂಥ್ ವಿಂಗ್‌ನ ಕಾರ್ಯದರ್ಶಿ ಅಲೆಕ್ಸಾಂಡರ್ ಅವರನ್ನು ಹೊರಗೆ ಹಾಕಲಾಗಿದೆ.
ಜಲ್ಲಿಕಟ್ಟು ಗಲಾಟೆಯಲ್ಲಿ ಮೌನ: ವಿಶೇಷವೆಂದರೆ ಚೆನ್ನೈನ ಮರೀನಾ ಬೀಚ್‌ನಲ್ಲಿ ಜಲ್ಲಿಕಟ್ಟು ಬೆಂಬಲಿಸಿ ನಡೆದ ಪ್ರತಿಭಟನೆ ವೇಳೆ ಶಶಿಕಲಾ ನಟರಾಜನ್ ಅವರು ತುಟಿ ಬಿಚ್ಚಿರಲಿಲ್ಲ. ಆದರೆ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ದೆಹಲಿಗೆ ಹೋಗಿ ಕೇಂದ್ರದ ಜತೆ ಮಾತನಾಡಿ, ವಿವಾದ ಬಗೆಹರಿಸಿಕೊಳ್ಳುವ ಮುನ್ಸೂಚನೆ ದೊರೆಯುತ್ತಿದ್ದಂತೆ, ಹೇಳಿಕೆ ಹೊರಡಿಸಿದ್ದರು. ಇದರಲ್ಲಿ ಜಲ್ಲಿಕಟ್ಟು ವಿವಾದ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಪಕ್ಷದ ಸಂಸದರನ್ನು ಕಳುಹಿಸಲಾಗಿದೆ ಎಂದು ಹೇಳಿದ್ದರು. ಈ ಮೂಲಕ ಜಲ್ಲಿಕಟ್ಟು ಕ್ರೀಡೆ ವಿಚಾರದಲ್ಲಿ ಪನ್ನೀರ್‌ಸೆಲ್ವಂ ಅವರಷ್ಟೇ ಹೆಸರು ಪಡೆಯಬಾರದು ಎಂಬ ಉದ್ದೇಶದಿಂದಲೇ ಈ ರೀತಿ ಮಾಡಿದ್ದರು ಎಂದು ಹೇಳಲಾಗಿದೆ.
ದೂರಿಗೆ ಪ್ರತಿಕ್ರಿಯೆ ಕೊಡಿ ಎಂದ ಆಯೋಗ
ಮತ್ತೂಂದು ಬೆಳವಣಿಗೆಯಲ್ಲಿ ಎಐಎಡಿಎಂಕೆಯಿಂದ ಉಚ್ಚಾಟಿತರಾಗಿರುವ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದನ್ನು ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಸ್ವೀಕರಿಸಿರುವ ಆಯೋಗ ನೇಮಕ ಬಗ್ಗೆ ಸ್ಪಷ್ಟನೆ ನೀಡಿ ಎಂದು ತಿಳಿಸಿದೆ. ಶಶಿಕಲಾ ಪುಷ್ಪ ಅವರ ದೂರಿನ ವಿವರವನ್ನು ಆಯೋಗ ಬಹಿರಂಗಮಾಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.