ಕನಸಲ್ಲೂ ಮುಖ್ಯಮಂತ್ರಿ ಆಗೋ ಯೋಚನೆ ಇಲ್ಲ
Team Udayavani, Feb 9, 2017, 2:35 AM IST
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಯಲ್ಲಿ ರಾಯಣ್ಣ ಬ್ರಿಗೇಡ್ ಒಂದಷ್ಟು ಸಮಯ ಆಂತರಿಕ ಕಲಹವನ್ನೇ ಸೃಷ್ಟಿ ಮಾಡಿತ್ತು. ಪಂಚರಾಜ್ಯಗಳ ಚುನಾವಣೆ ಅನಂತರ ಕರ್ನಾಟಕದ ಬೆಳವಣಿಗೆ ಬಗ್ಗೆ ನೋಡೋಣ ಎಂದುಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹೀಗೆ ಬಿಟ್ಟರೆ ಕಷ್ಟ ಎಂದು ದಿಢೀರ್ ದಿಲ್ಲಿಯಲ್ಲಿ ಸಭೆ ಕರೆದು ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ನಡುವೆ ಸಂಧಾನ ನಡೆಸಿ ತಾತ್ಕಾಲಿಕ ಶಮನ ಪ್ರಯತ್ನ ನಡೆಸಿದರು. ಅದಾದ ನಂತರ ಪಕ್ಷದ ವಲಯದಲ್ಲಿ ಬಿಕ್ಕಟ್ಟಿನ ಪರ್ವ ಮುಗಿಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಭಿನ್ನಮತ ಶಮನ ಆದರೂ ಬೆಂಬಲಿಗರ ನಡುವಿನ ವೈಮನಸ್ಯ, ಗುದ್ದಾಟ ಹಾಗೇ ಇದೆ. ಇದು ಸರಿ ಹೋಗಬೇಕಾದರೆ ಈ ಇಬ್ಬರೂ ನಾಯಕರೂ ಮನಃಪೂರ್ವಕವಾಗಿ ಒಂದಾಗಬೇಕು. ಆ ಮೂಲಕ ಎರಡೂ ಕಡೆಯ ಬೆಂಬಲಿಗರಿಗೆ ಸ್ಪಷ್ಟ ಸಂದೇಶ ರವಾನೆಯಾಗಬೇಕು. ಈ ಕೆಲಸ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ‘ಉದಯವಾಣಿ’ ‘ನೇರಾ-ನೇರ’ ಮಾತಿಗಿಳಿದಾಗ.
ಈಗ ಬಿಜೆಪಿಯಲ್ಲಿ ಯಡಿಯೂರಪ್ಪ ಅನಂತರ ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾರೆ. ಅವರಷ್ಟೇ ಹಿರಿಯರಾದ ನಿಮಗೆ ಮುಖ್ಯಮಂತ್ರಿಯಾಗೋ ಆಸೆ ಇಲ್ಲವೇ ಇಲ್ವಾ?
– ಪಕ್ಷವು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಅನಂತರ ನಾನು ಮುಖ್ಯಮಂತ್ರಿ ಆಗುವ ಯೋಚನೆ ಸಹ ಮಾಡುವುದು ಪಕ್ಷ ದ್ರೋಹದ ಕೆಲಸ. ನಾನು ಕನಸು-ಮನಸ್ಸಿನಲ್ಲಿಯೂ ಮುಖ್ಯಮಂತ್ರಿಯಾಗುವ ಯೋಚನೆ ಮಾಡುತ್ತಿಲ್ಲ.
ನಿಮ್ಮ ಪಕ್ಷವನ್ನು ಕಿತ್ತು ತಿನ್ನುತ್ತಿದ್ದ ರಾಯಣ್ಣ ಬ್ರಿಗೇಡ್ ಸಮಸ್ಯೆ ಬಗೆ ಹರಿಯಿತಾ?
– ಸಮಸ್ಯೆ ಏನಿರಲಿಲ್ಲ, ಈಗಲೂ ಇಲ್ಲ. ಕೆಲವರು ಗೊಂದಲ ಸೃಷ್ಟಿಸಿ ಅಪಾರ್ಥ ಮಾಡಿಕೊಂಡಿದ್ದರಷ್ಟೇ.
ಹಾಗಾದ್ರೆ ನೀವು ಹೇಳುವುದು, ಈಗ ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ ಅಂತಾನಾ?
– ರಾಜ್ಯ ಬಿಜೆಪಿಯಲ್ಲಿ ಈಗ ಯಾವುದೇ ರೀತಿಯ ಬಿಕ್ಕಟ್ಟು ಇಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ನನ್ನ ನಡುವೆ, ಪಕ್ಷ ಸಂಘಟನೆ ಕುರಿತಂತೆ ಕೆಲವೊಂದು ಭಿನ್ನಾಭಿಪ್ರಾಯಗಳು ಇದ್ದಿದ್ದು ನಿಜ. ದೆಹಲಿಯಲ್ಲಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿದ ಬಳಿಕ ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಒಂದೊಂದಾಗಿ ಬಗೆಹರಿಯುವ ಭರವಸೆ ಸಿಕ್ಕಿದೆ.
ಈವರೆಗೆ ಯಾವೆಲ್ಲ ಭರವಸೆಗಳು ಬಗೆಹರಿದಿವೆ?
– ಪಕ್ಷದೊಳಗೆ ಹಲವಾರು ಭಿನ್ನಾಭಿಪ್ರಾಯಗಳು ಅಮಿತ್ ಶಾ ಅವರು ನಡೆಸಿದ್ದ ಮೂರು ತಾಸುಗಳ ಸುದೀರ್ಘ ಸಂಧಾನ ಸಭೆ ಯಲ್ಲಿಯೇ ಬಗೆಹರಿದಿವೆ. ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಬದಲಾವಣೆ ಸೇರಿದಂತೆ ಕೆಲವು ಭಿನ್ನಾಭಿಪ್ರಾಯಗಳ ಇತ್ಯರ್ಥಕ್ಕೆ ಬಿಜೆಪಿ ವರಿಷ್ಠರು ಹಿರಿಯರ ಸಮಿತಿ ರಚಿಸಿದ್ದು, ಸಮಿತಿ ಸಭೆ ನಂತರ ಎಲ್ಲ ಗೊಂದಲಗಳು ಬಗೆಹರಿಯುವ ಭರವಸೆಯಿದೆ.
ನೀವು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬದಲಾವಣೆಗಾಗಿಯೇ ಇಷ್ಟೆಲ್ಲಾ ಮಾಡಿದಿರಿ ಎನ್ನುತ್ತಾರಲ್ಲವೇ?
– ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರುದ್ರೇಶ್ ಗೌಡ ಅವರನ್ನು ನನ್ನ ಜತೆ ಸಮಾಲೋಚನೆ ಮಾಡದೆ ನೇಮಕ ಮಾಡಿರುವುದಕ್ಕೆ ನನ್ನ ಅಪಸ್ವರವಿತ್ತು. ಆದರೆ, ಈಗ ನಾನು ಶಿವಮೊಗ್ಗ ಜಿಲ್ಲಾಧ್ಯಕ್ಷರು ಬದಲಾವಣೆ ಆಗಬೇಕೆಂದು ಬಯಸುವುದಿಲ್ಲ. ರುದ್ರೇಶ್ ಗೌಡರು ಕೂಡ ನನ್ನ ಸ್ನೇಹಿತರು. ಹೀಗಿರುವಾಗ, ಅವರ ಬದಲಾವಣೆಗೆ ನಾನು ಪಟ್ಟು ಹಿಡಿದರೆ, ಅದು ಅಪಾರ್ಥ ಆಗುತ್ತದೆ. ಶಿವಮೊಗ್ಗ ಜಿಲ್ಲಾಧ್ಯಕ್ಷರ ನೇಮಕ ರದ್ದುಪಡಿಸುವ ಸಲುವಾಗಿಯೇ ನಾನು ಹೋರಾಟ ಮಾಡಿದೆ ಎಂದು ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ, ಶಿವಮೊಗ್ಗ ಜಿಲ್ಲಾಧ್ಯಕ್ಷರ ಬದಲಾವಣೆಗೆ ನಾನು ಒತ್ತಾಯಿಸುವುದಿಲ್ಲ.
ಇನ್ಮುಂದೆ ಬಿಜೆಪಿಯಲ್ಲಿ ಏಕವ್ಯಕ್ತಿ ತೀರ್ಮಾನಗಳು ಆಗಲ್ಲ ಎಂಬ ಭರವಸೆ ನಿಮಗೆ ಇದೆಯಾ?
– ಪಕ್ಷದೊಳಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ಸಾಮೂಹಿಕವಾದ ತೀರ್ಮಾನಗಳನ್ನು ಚರ್ಚಿಸಿ ತೆಗೆದುಕೊಳ್ಳಲಾಗುವುದು. ಹೀಗಿರುವಾಗ, ಪಕ್ಷದ ತೀರ್ಮಾನದ ಸಾಧಕ- ಬಾಧಕಗಳಿಗೆ ಎಲ್ಲರೂ ಜವಾಬ್ದಾರರಾಗಿರುತ್ತೇವೆ.
ನಿಮ್ಮ ಪ್ರಕಾರ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂಧಾನದ ಫಲಶೃತಿ ಏನು?
– ರಾಜ್ಯದಲ್ಲಿ ಇಬ್ಬರು ಮುಖಂಡರು ಒಟ್ಟಾಗಿ ಪಕ್ಷ ಸಂಘಟನೆ ಮಾಡಬೇಕು. ವಿವಾದಿತ ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಡಬೇಕು. ಹಾಗೆಯೇ, ನಾನು ಕೂಡ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವುದನ್ನು ಸ್ಥಗಿತಗೊಳಿಸಬೇಕು.
ಅಂದ್ರೆ, ನೀವು ಇನ್ಮುಂದೆ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಡೆಸುವುದಿಲ್ಲ ಅಂತಾನಾ?
– ಅದು ಹಾಗಲ್ಲ. ನೀವೆಲ್ಲರೂ ಭಾವಿಸಿಕೊಂಡಂತೆ ರಾಯಣ್ಣ ಬ್ರಿಗೇಡ್ ಕಾರ್ಯಚಟುವಟಿಕೆಗಳಿಗೆ ಯಾವುದೇ ರೀತಿಯ ಬ್ರೇಕ್ ಬಿದ್ದಿಲ್ಲ. ರಾಯಣ್ಣ ಬ್ರಿಗೇಡ್ ನಡೆಸುವ ರಾಜಕೀಯ ಸಂಬಂಧಿತ ಚಟುವಟಿಕೆಗಳಲ್ಲಿ ಮಾತ್ರ ನಾನು ಭಾಗವಹಿಸುವುದಿಲ್ಲ. ಆದರೆ, ರಾಯಣ್ಣ ಬ್ರಿಗೇಡ್ ನಡೆಸುವ ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ನನಗೆ ಭಾಗವಹಿಸಲು ಯಾವುದೇ ಅಡಚಣೆಗಳು ಇಲ್ಲ. ಅಮಿತ್ ಶಾ ಅವರು ಕೂಡ ಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಾನು ರಾಯಣ್ಣ ಬ್ರಿಗೇಡ್‌ನ ರಾಜಕೀಯ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದಾಕ್ಷಣ ಬ್ರಿಗೇಡ್ ಚಟುವಟಿಕೆ ಸ್ಥಗಿತಗೊಳ್ಳುವುದೂ ಇಲ್ಲ. ಬ್ರಿಗೇಡ್‌ನ ಹಿರಿಯರು ಮಾಜಿ ಸಂಸದ ವಿರೂಪಾಕ್ಷಪ್ಪ, ಹಿಂದುಳಿದ ವರ್ಗಗಳ ಮುಖಂಡರಾದ ಮುಕುಡಪ್ಪ, ರಾಯಣ್ಣ ಟ್ರಸ್ಟ್ ಮೂಲಕ ಬ್ರಿಗೇಡ್ ಚಟುವಟಿಕೆ ಮುನ್ನಡೆಸುತ್ತಾರೆ. ಹಿಂದುಳಿದವರಿಗೆ ದಲಿತರಿಗೆ ಒಗ್ಗೂಡಿಸುವ, ಅವರಿಗೆ ಶಿಕ್ಷಣ ನೀಡುವ, ಅವರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ, ಸರ್ಕಾರದ ಸವಲತ್ತುಗಳ ಬಗ್ಗೆ ಆರಿವು ಮೂಡಿಸುವ ಹಾಗೂ ಸಮಾಜದ ಮುಖ್ಯವಾಹಿನಿಗೆ ಕರೆತರುವ ಎಲ್ಲ ಆಪ್ರಯತ್ನಗಳು ಮಠಾಧೀಶರು ಮತ್ತುಹಿರಿಯರ ಮಾರ್ಗದರ್ಶನದಲ್ಲಿ ನಡೆಯಲಿವೆ.
ನಿಮಗೆ ಓಬಿಸಿ ಉಸ್ತುವಾರಿ ಮಾಡಿದ್ದಾರಲ್ಲವೇ? ಏನದು?
– ಬಿಜೆಪಿಯಲ್ಲಿ ಓಬಿಸಿ ಮೋರ್ಚಾದ ಉಸ್ತುವಾರಿಯನ್ನು ನನಗೆ ಅಮಿತ್ ಶಾ ಅವರು ವಹಿಸಿದ್ದಾರೆ. ಇದಕ್ಕೆ ಯಡಿಯೂರಪ್ಪನವರ ಸಹಮತ ಕೂಡ ಇದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗಳು ಇನ್ನುಮುಂದೆ ಪ್ರತಿ ಜಿಲ್ಲೆಗಳಲ್ಲಿಯೂ ಬಿಜೆಪಿ ಓಬಿಸಿ ಮೋರ್ಚಾ ಬ್ಯಾನರ್‌ನಡಿ ನಡೆಯುತ್ತದೆ. ಅದಕ್ಕಾಗಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದ್ದೇನೆ.
ಇದ್ರಿಂದ ಪಕ್ಷಕ್ಕೆ ಏನು ಪ್ರಯೋಜನ?
– ಸಂಗೊಳ್ಳಿ ರಾಯಣ್ಣ ಜಿಲ್ಲಾ ಸಮಾವೇಶ ಕೇವಲ ಸಮಾವೇಶವಲ್ಲ. ಬಿಜೆಪಿಗೆ ಅಗತ್ಯವಿರುವ ದಲಿತರು, ಹಿಂದುಳಿದ ವರ್ಗಗಳ ಮತದಾರರನ್ನು ಪಕ್ಷಕ್ಕೆ ಸೆಳೆಯುವ ಹಾಗೂ ಸಂಘಟಿಸುವ ಪರಿಣಾಮಕಾರಿ ಕಾರ್ಯಕ್ರಮ.
ಇಲ್ಲಿ ತನಕ ಬಿಜೆಪಿಗೆ ದಲಿತರು, ಹಿಂದುಳಿದ ವರ್ಗದವರ ಬೆಂಬಲ ಇದ್ದಿಲ್ಲವೇ?
– ನಮ್ಮ ಪಕ್ಷಕ್ಕೆ ದಲಿತರು-ಹಿಂದುಳಿದವರ ಬೆಂಬಲ ಇತ್ತು. ಬಿಜೆಪಿಗೆ ಬ್ರಾಹ್ಮಣರು ಮತ್ತು ಲಿಂಗಾಯತ ಸಮುದಾಯದ ಸಾಂಪ್ರದಾಯಿಕ ಮತಗಳಿವೆ. ಬಿಜೆಪಿ ಅಧಿಕಾರಕ್ಕೆ ಬರಲು ಇದಿಷ್ಟೇ ಸಾಲದು. ಮುಂದಿನ ಚುನಾವಣೆಯಲ್ಲಿ ಈಗಿರುವ ಶಾಸಕರ ಸಂಖ್ಯೆಯನ್ನು 44ರಿಂದ 150ಕ್ಕೆ ಹೆಚ್ಚಿಸಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮತ್ತಷ್ಟು ದಲಿತರ ಹಾಗೂ ಹಿಂದುಳಿದವರ ಬೆಂಬಲ ಬಿಜೆಪಿಗೆ ಅತ್ಯಗತ್ಯವಾಗಿದೆ. ಹಾಗಾಗಿ, ಈ ಸರ್ಕಸ್.
ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದಕ್ಕೆ ನಿಮ್ಮ ಸಹಮತ ಇದೆಯೇ?
– ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಪಕ್ಷಕ್ಕೆ ಕರೆತಂದು ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ತೀರ್ಮಾನವನ್ನು ನಾವು ಯಾರೂ ಪ್ರಶ್ನಿಸುವಂತಿಲ್ಲ. ಪಕ್ಷದ ನಿರ್ಧಾರವನ್ನು ಯಶಸ್ವಿಗೊಳಿಸುವುದಕ್ಕೆ ನಾವೆಲ್ಲ ಶಕ್ತಿಮೀರಿ ಪ್ರಯತ್ನಿಸಬೇಕಿದೆ.
ಹಾಗಾದ್ರೆ ಇಷ್ಟೆಲ್ಲಾ ಸರ್ಕಸ್ ಯಾಕೆ?
– ನಾನು ಪಕ್ಷದ ಶಿಸ್ತಿನ ಸಿಪಾಯಿ. ಶಾಸಕನಿಂದ ಉಪಮುಖ್ಯಮಂತ್ರಿ ಹುದ್ದೆಯವರೆಗೆ ಪಕ್ಷ ನನಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದು, ಅದನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಪಕ್ಷ ನನಗೆ ಯಾವ ಸಂದರ್ಭದಲ್ಲಿ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ.
ಪಕ್ಷವೇ ನಿಮಗೆ ಮುಖ್ಯಮಂತ್ರಿ ಅಭ್ಯರ್ಥಿಯ ಜವಾಬ್ದಾರಿ ನೀಡಿದರೆ?
– ರೆ.. ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಪಕ್ಷ ತೀರ್ಮಾನಿಸಿ ನೀಡುವ ಯಾವುದೇ ಜವಾಬ್ದಾರಿಗಳನ್ನು ನಿರ್ವಹಿಸುವುದಷ್ಟೇ ನನ್ನ ಕೆಲಸ. ಈಗ ಪಕ್ಷವು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅವರು ಮುಖ್ಯಮಂತ್ರಿಯಾಗಲು ನಾನು ಶ್ರಮಿಸುತ್ತೇನೆ.
ರಾಜ್ಯದಲ್ಲಿ ಬಿಜೆಪಿ ನಿಜವಾಗಿಯೂ ಅಧಿಕಾರಕ್ಕೆ ಬರುತ್ತಾ?
– ನಮ್ಮನ್ನು ಬಿಟ್ಟು ಬೇರೆ ಯಾರು ಅಧಿಕಾರಕ್ಕೆ ಬರಲು ಸಾಧ್ಯ? ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಬೇಕೆಂಬುದು ಬಿಜೆಪಿ ಗುರಿಯಾಗಿತ್ತು. ಆದರೆ, ಇದೀಗ ಕಾಂಗ್ರೆಸ್ ಪಕ್ಷದ ಮುಖಂಡರೇ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ತೊಡಗಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಎಸ್.ಎಂ. ಕೃಷ್ಣ, ಜಾಫರ್ ಷರೀಫ್, ಎಚ್. ವಿಶ್ವನಾಥ್, ಜನಾರ್ದನ ಪೂಜಾರಿ, ಮುಖ್ಯ ಮಂತ್ರಿಗಳ ಆಪ್ತರಾದ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿ ಟೀಕಿಸುತ್ತಿರುವುದನ್ನು ನೋಡಿದರೆ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಶತಸಿದ್ಧ. ಇನ್ನು ಜೆಡಿಎಸ್ ಪಕ್ಷದಲ್ಲಿಯೂ ಎಲ್ಲವೂ ಸರಿಯಿಲ್ಲ. ಹೀಗಾಗಿ, ಬಿಜೆಪಿ ಪಕ್ಷ ಮಾತ್ರ ಈಗ ಜನರ ಮುಂದಿರುವ ಉತ್ತಮ ಆಯ್ಕೆ.
ಅಧಿಕಾರಕ್ಕೆ ಬರ್ತೀವಿ ಅಂತೀರಿ. ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಗೆಲ್ಲೋಕೆ ಆಗಲಿಲ್ಲವಲ್ಲಾ?
– ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಒಕ್ಕಲಿಗರು ಈ ಚುನಾವಣೆಯಲ್ಲಿ ಒಂದಾಗಿ ಮತ ಚಲಾವಣೆ ಮಾಡಿದ್ದು, ಜೆಡಿಎಸ್‌ನ ಬಂಡಾಯ ಅಭ್ಯರ್ಥಿ ಎಚ್.ಎಸ್. ಅರವಿಂದ್ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಪಡೆದಿರುವುದು ಮೇಲ್ನೋಟಕ್ಕೆ ನಮ್ಮ ಪಕ್ಷದ ಸೋಲಿಗೆ ಕಾರಣವಾಗಿದೆ. ಆದರೂ, ಬಿಜೆಪಿ ಪಕ್ಷ ಪೈಪೋಟಿ ನೀಡಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿರುವುದನ್ನು ಗಮನಿಸಿದರೆ, ಬಿಜೆಪಿ ಸಾಧನೆ ಉತ್ತಮ.
ನಿಮ್ಮದೇ ವಶದಲ್ಲಿದ್ದ ಕ್ಷೇತ್ರವದು. ಅಭ್ಯರ್ಥಿ ಆಯ್ಕೆಯಲ್ಲಿ ಏನಾದರೂ ತಪ್ಪು ಆಗಿತ್ತೇ?
– ಖಂಡಿತಾ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ನಾವೆಲ್ಲರೂ ಸೇರಿ ಒಮ್ಮತದಿಂದ ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದೆವು. ಆಗ್ನೇಯ ಶಿಕ್ಷಕ ಕ್ಷೇತ್ರವನ್ನು ಕಳೆದ 12 ವರ್ಷಗಳಿಂದ ಪ್ರತಿನಿಧಿಸಿದ್ದ ಶಾಸಕ ನಾರಾಯಣಸ್ವಾಮಿ ಅವರಿಗೆ ಅಭ್ಯರ್ಥಿ ಗೆಲುವಿನ ಜವಾಬ್ದಾರಿ ನೀಡಲಾಗಿತ್ತು. ಚುನಾವಣಾ ಸೋಲಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಆತ್ಮಾವಲೋಕನ ಮಾಡಿ ತಪ್ಪುಗಳನ್ನು ಸರಿಪಡಿಸಲಾಗುತ್ತದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ?
– ರಾಜ್ಯ ಬಿಜೆಪಿ ಮುಖಂಡರ ಸಾಮೂಹಿಕ ಅಭಿಪ್ರಾಯದೊಂದಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಾವ ಅಭ್ಯರ್ಥಿ ಆಯ್ಕೆ ಉತ್ತಮ ಎಂದು ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿಯೂ ಪಕ್ಷದ ವತಿಯಿಂದ ಆಂತರಿಕ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭ ಪಕ್ಷದಲ್ಲಿನ ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ, ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ.
– ಕೆ.ಎಸ್. ಈಶ್ವರಪ್ಪ ; ವಿಧಾನ ಪರಿಷತ್ ವಿಪಕ್ಷ ನಾಯಕ
– ಸಂದರ್ಶನ : ಸೋಮಶೇಖರ ಕವಚೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
MUST WATCH
ಹೊಸ ಸೇರ್ಪಡೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.