ಈ ಆಟ ಚೆಲುನೋಟ
Team Udayavani, Feb 10, 2017, 3:45 AM IST
ಉಡುಪಿ ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ಸದಸ್ಯರು ಈಚೆಗೆ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಪ್ರದರ್ಶಿಸಿದ “ತಾಮ್ರಧ್ವಜ ಕಾಳಗ’ ಯಕ್ಷಗಾನ ಪ್ರದರ್ಶನವನ್ನು ನೋಡಿ ಮನಃಪಟಲದಲ್ಲಿ ಮೂಡಿದ ಕೆಲವೊಂದು ಅನಿಸಿಕೆಗಳು ಹೀಗಿವೆ. ಸುಮಾರು 1957-58ನೇ ಇಸವಿಯಲ್ಲಿ ಅದಮಾರು ಹೈಸ್ಕೂಲಿನ ವಿದ್ಯಾರ್ಥಿ ಹಾಗೂ ಹಳೆ ವಿದ್ಯಾರ್ಥಿಗಳು ನಡೆಸಿಕೊಟ್ಟ “ಅಭಿಮನ್ಯು ಕಾಳಗ’ ನಾನು ನೋಡಿದ ಪ್ರಥಮ ಪ್ರದರ್ಶನ. ಅಂದು ಹೃನ್ಮನಗಳನ್ನು ಪ್ರವೇಶಿಸಿದ ಈ ಭಾಗದ ಬಡಗುತಿಟ್ಟಿನ ಯಕ್ಷಗಾನೀಯ ಗತ್ತು ಗೈರತ್ತುಗಳು, 2017ನೇ ಇಸವಿ ಯಲ್ಲಿ ಮಗದೊಮ್ಮೆ ಹವ್ಯಾಸಿ ಕಲಾವಿದರ ಪ್ರದರ್ಶನದ ಬಗ್ಗೆ ಲೇಖನಿಯನ್ನು ಕೈಗೆತ್ತಿಕೊಳ್ಳಲು ಪ್ರೇರೇಪಿಸಿದುವು ಎಂದರೆ ಅತ್ಯುಕ್ತಿಯಾಗಲಾರದು.
ಮೊದಲನೇ ವೇಷಧಾರಿ ಭಾಗವತರಿಂದಲೇ ಪ್ರಾರಂಭಿಸೋಣ. ಕಾಳಗದ ಸಂದರ್ಭದಲ್ಲಿ ಏರುಸ್ವರದಲ್ಲಿ ಮತ್ತು ತ್ವರಿತವಾಗಿ ಹಾಡಬೇಕಾದುದರಿಂದ ಹಾಗೂ ಪಕ್ಕವಾದ್ಯಗಳ ನುಡಿತವೂ ತೀವ್ರವಾಗಿರುವುದರಿಂದ ಭಾಗವತರು ಏನು ಹೇಳುತ್ತಾರೆ ಎಂದು ತಿಳಿಯದಿರುವುದು ಸರ್ವೇಸಾಮಾನ್ಯ. ಇದು ಎಲ್ಲ ಭಾಗವತರಿಗೂ ಅನ್ವಯಿಸುವಂಥದ್ದು. ಅಂಬಲಪಾಡಿಯಲ್ಲಿ ಉಚ್ಚಾರದ ಸ್ಪಷ್ಟತೆ ಎದ್ದು ಕಾಣುವ ಅಂಶವಾಗಿತ್ತು. ಕಿವಿಗೆ ಇಂಪಾದ, ಭಾವಪೂರ್ಣವಾದ ಅನಗತ್ಯ ಆಲಾಪನೆಗಳಿಂದ ಹೊರತಾದ ಹಾಡುಗಾರಿಕೆಯು ಮನಸ್ಸಿಗೆ ಮುದಕೊಡುವಂತಿತ್ತು. 1980ರ ದಶಕದ ಬಳಿಕದ ಆಕರ್ಷಣೆಗೆ ಒಳಗಾಗದೆ ಗುರುಮುಖೇನ ತಾವು ಕಲಿತುದನ್ನು ಉಳಿಸಿ ಬೆಳೆಸಿ, ತಮ್ಮ ಅನುಭವದ ಮೂಸೆಯಲ್ಲಿ ಪರಿಪಕ್ವಗೊಳಿಸಿದ ಕೆ. ಜೆ. ಗಣೇಶರ ಭಾಗವತಿಕೆಗೆ ಶಹಭಾಸ್ ಎನ್ನಲೇಬೇಕು. 1960-70ರ ದಶಕದಲ್ಲಿ ಅದಮಾರು ಹೈಸ್ಕೂಲಿನಲ್ಲಿ ಅಧ್ಯಾಪಕರೂ ಹವ್ಯಾಸಿ ಭಾಗವತರೂ ಆಗಿದ್ದ ಶಿವರಾಮ ಶೆಟ್ಟಿಯವರ ಹಾಡುಗಾರಿಕೆಯನ್ನು ನೆನಪಿಸುವಂತಿತ್ತು.
ತೆರೆಕುಣಿತದೊಂದಿಗೆ ಅರ್ಜುನ, ಅನಿರುದ್ಧ, ವೃಷಕೇತು ಇವರ ಒಡ್ಡೋಲಗ ಅಪರೂಪದ ಕಲಾಕುಸುಮ. ಕಟ್ಟು ಮೀಸೆಯ ಬಡಗುತಿಟ್ಟಿನ ಅಪ್ಪಟ ವೇಷಗಾರಿಕೆ. ಕಟ್ಟುಮೀಸೆಯ ಬಗ್ಗೆ ಎರಡು ಮಾತು ಹೇಳಲೇಬೇಕು. ಚಿತ್ರಕಲೆಯ ಒಳಮರ್ಮವನ್ನು ಅರಿತ ನಮ್ಮ ಹಿರಿಯರು ಯಕ್ಷಗಾನದಲ್ಲಿ ಕಟ್ಟು ಮೀಸೆಯನ್ನು ಬಳಸಿದ್ದರು ಎಂದು ಹೇಳಬಹುದು. ಕೇದಗೆ ಮುಂದಲೆ, ಮುಂಡಾಸುಗಳಲ್ಲಿ ಅಳವಡಿಸುವ ಸರಳರೇಖೆಯಲ್ಲಿರುವ ವರ್ಣರಂಜಿತ ಆಲಂಕಾರಿಕ ಪಟ್ಟಿಗಳು, ಕಸೆಗೆ ಉಪಯೋಗಿಸುವ ಬಟ್ಟೆಯಲ್ಲಿಯೂ ಇರುವ ಸರಳರೇಖಾಬದ್ಧ ವಿನ್ಯಾಸ, ನಕ್ಷತ್ರಾಕಾರದ ಅಥವಾ ಕತ್ತರಿಯಾಕಾರದ ಎದೆಕಟ್ಟು ಇವುಗಳೊಡನೆ ಸರಳರೇಖಾಬದ್ಧ ಮೀಸೆ ಹೊಂದಿಕೊಳ್ಳುತ್ತದೆ, ವೇಷದ ಗಂಭೀರತೆಯನ್ನು ಹೆಚ್ಚಿಸುತ್ತದೆ. ಮೇಲೆ ಹೇಳಿದ ಕಟ್ಟುಮೀಸೆಯ ಅರ್ಜುನ, ವೃಷಕೇತು, ಅನಿರುದ್ಧರೊಡನೆ ಪೊಗದಸ್ತಾದ ಹೊಂತಕಾರಿ ಮೀಸೆ ಅಥವಾ ಕೆಲವು ಸಂದರ್ಭಗಳಲ್ಲಿ ಹಾಸ್ಯ ಗಾರರು ಉಪಯೋಗಿಸುವ ಸಪೂರವಾದ ಮೀಸೆಯುಳ್ಳ ವೇಷವನ್ನು ನಿಲ್ಲಿಸಿ ಹೋಲಿಸಿ ನೋಡಿದರೆ ವ್ಯತ್ಯಾಸ ತಿಳಿಯುತ್ತದೆ. ಕಟ್ಟು ಮೀಸೆಯು ಮುಖವು ಅಗಲವಾಗಿ ಕಾಣಲು ಅಥವಾ ಪ್ರಾಯದ ದೆಸೆಯಿಂದ ಮುಖವು ಸುಕ್ಕುಗಟ್ಟಿದ್ದರೆ ಆ ನ್ಯೂನತೆಯನ್ನು ಮರೆಮಾಚಲು ಸಹಕಾರಿ. ಅಂದಿನ ಪ್ರದರ್ಶನದಲ್ಲಿ ಎಲ್ಲ ಪುರುಷ ವೇಷಧಾರಿಗಳು (ಶ್ರೀಕೃಷ್ಣನ ವೇಷವನ್ನುಳಿದು) ಕಟ್ಟು ಮೀಸೆಯಲ್ಲಿ ವಿಜೃಂಭಿಸಿದುದು ಆಪ್ಯಾಯಮಾನವಾಗಿತ್ತು.
ಸರಿಯಾಗಿ ಕರಗತ ಮಾಡಿಕೊಂಡರೆ ಬಡಗುತಿಟ್ಟಿನ ಹೆಜ್ಜೆಗಾರಿಕೆಯಲ್ಲಿನ ವೈವಿಧ್ಯ ಸಾಟಿಯಿಲ್ಲದ್ದು. ಚೆಂಡೆ ಬಾರಿಸುವವರಿಗೂ ಕಷ್ಟ ಕೊಡುವ ಚುರುಕುತನ ಹೊಂದಿ ಎಲ್ಲ ಕಲಾವಿದರೂ ಕುಣಿತದಲ್ಲಿ ತಮ್ಮ ನೈಪುಣ್ಯವನ್ನು ತೋರ್ಪಡಿಸಿದರು. ವೇಷಧಾರಿಗಳು ಹಿಂದಣ ಪ್ರಸಿದ್ಧ ಕಲಾವಿದರಾದ ಸುರಗಿಕಟ್ಟೆ ಹಿರಿಯ, ಹಿರಿಯಡಕ ಗೋಪಾಲ ರಾವ್, ಪೆರ್ಡೂರು ರಾಮ ಮುಂತಾದವರು ಹೇಳಿಕೊಟ್ಟುದನ್ನು ಸರಿಯಾಗಿ ಕಲಿತು ಮನನ ಮಾಡಿ ಕುಣಿತದಲ್ಲಿ ಪ್ರಬುದ್ಧತೆಯನ್ನು ತೋರ್ಪಡಿಸಿದ್ದಾರೆ ಎಂದು ಹೇಳಬಹುದು. ಬಡಗುತಿಟ್ಟಿನ ಅತ್ಯಂತ ಆಕರ್ಷಕ ಅಂಶವೆಂದರೆ ವೇಷಧಾರಿಯು ಕುಣಿತದ ಮುಕ್ತಾಯದಲ್ಲಿ ಇರಿಸುವ ಹೆಜ್ಜೆ, ಚೆಂಡೆ ಮದ್ದಳೆ ಮತ್ತು ತಾಳಗಳಿಗೆ “ರಿಮೋಟ್ ಕಂಟ್ರೋಲ್’ ಇದ್ದಂತೆ. ಎಲ್ಲವೂ ಒಂದೇ ಬಾರಿಗೆ ಸ್ತಬ್ಧವಾಗುತ್ತವೆ. ಅರ್ಜುನ, ತಾಮ್ರಧ್ವಜರು (ಮುರಳಿ ಕಡೆಕಾರ್) ಈ ದಿಸೆಯಲ್ಲಿ ಹಿಡಿತವನ್ನು ಸಾಧಿಸಿದ್ದಾರೆ ಎಂದು ಹೇಳಬಹುದು. ಹಿತಮಿತವಾದ ಮಾತುಗಾರಿಕೆಯು ಪ್ರದರ್ಶನದ ಇನ್ನೊಂದು ವೈಶಿಷ್ಟé. ಬಲು ಅಪರೂಪದ ಪ್ರಯಾಣದ ಕುಣಿತ, ಯುದ್ಧದ ಕುಣಿತ, ರಥದ ಮೇಲೆ ನಿಂತು ರಣ ಕಹಳೆಯಂತೆ ಅಬ್ಬರಿಸಿ ಕೈಗೊಂಡ ಯುದ್ಧ ಕುಣಿತ ಇತ್ಯಾದಿ ಆಹ್ಲಾದಕರವಾಗಿದ್ದುವು.
ಅಂದು ಕೆರೆಮನೆ ಬಂಧುಗಳು, ಶಿರಿಯಾರ ಮಂಜು ನಾಯ್ಕರು, ಅರಾಟೆ ಮಂಜುನಾಥರು ಸೇರಿ ನೀಡಿದ ಕಲಾಪ್ರದರ್ಶನದಲ್ಲಿ ವರಕವಿ ಕುವೆಂಪು ಅವರಂದಂತೆ “ಬೈಗಿನಿಂದ ಬೆಳಗಾಗುವವರೆಗೆ’ ತದೇಕಚಿತ್ತದಿಂದ ಆಟ ನೋಡಿದುದಿದೆ. ಇತ್ತೀಚೆಗಿನ ದಿನಗಳಲ್ಲಿ ಆದಿಯಿಂದ ಅಂತ್ಯದವರೆಗೆ ಆಸನದಿಂದ ಏಳದಂತೆ ಹಿಡಿದಿರಿಸಿದ ಕಲಾ ಪ್ರದರ್ಶನ ಈ ತಾಮ್ರಧ್ವಜ ಕಾಳಗ ಎನ್ನಬಹುದು. ಇಂಥ ಇನ್ನಷ್ಟು ಪ್ರದರ್ಶನಗಳನ್ನು ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯು ಮುಂದಿನ ದಿನಗಳಲ್ಲಿ ನೀಡುತ್ತಾ ಬರಲಿ.
ಎ.ಜೆ. ಡಿ’ಸೋಜಾ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.