ತೀವ್ರ ತರಹದ ಪರಿದಂತ ಅಥವಾ ಹಲ್ಲು ಸುತ್ತುಪರೆ ರೋಗ
Team Udayavani, Feb 12, 2017, 3:45 AM IST
ಶಾಂತಮ್ಮ ತನ್ನ ಮಗಳನ್ನು ಬಾಯಿಯ/ಹಲ್ಲಿನ ಪರೀಕ್ಷೆಗೆ ಹಲ್ಲು ವೈದ್ಯರಲ್ಲಿಗೆ ಬಂದಿದ್ದರು. ಸ್ವಲ್ಪ ಆತಂಕದಿಂದ ಇದ್ದ ಹಾಗೆ ಕಾಣುತ್ತಿದ್ದರು. ಏನಾಯಿತು ಶಾಂತಮ್ಮ ಎಂದು ಕೇಳಿದೆ. ಇಲ್ಲ ಡಾಕ್ಟ್ರೇ, ನನ್ನ ಮಗನಿಗೆ ಚಿಕ್ಕ ಪ್ರಾಯದಲ್ಲಿ ಎದುರಿನ ಎರಡು ಹಲ್ಲು ಮತ್ತು ಮೊದಲು ಹುಟ್ಟಿದ ಎರಡು ದವಡೆ ಹಲ್ಲುಗಳು ಬೇಗ ಉದುರಿ ಹೋದವು. ಈಗ ನನ್ನ ಮಗಳಿಗೆ ಹದಿಮೂರು ವರ್ಷ, ಮಗಳಿಗೆ ಆ ತರಹ ಹಲ್ಲು ಉದುರಬಾರದೆಂದು ಅವಳ ಹಲ್ಲು/ವಸಡು ಪರೀಕ್ಷೆ ಮಾಡಿಸಿಕೊಂಡು ಹೋಗುವ ಎಂದು ಬಂದೆ ಎಂದರು. ಶಾಂತಮ್ಮನ ಹಲ್ಲಿನ ಬಗ್ಗೆ ಕಾಳಜಿ ಕಂಡು ಖುಷಿಯಾಯಿತು, ಅವರ ಮಗಳನ್ನು ಕುಳಿತುಕೊಳ್ಳಲು ಹೇಳಿ, ಹಲ್ಲು /ವಸಡನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಮತ್ತೆ ಶಾಂತಮ್ಮನಿಗೆ ಏನೂ ಹೆದರುವ ಅಗತ್ಯವಿಲ್ಲ. ನಿಮ್ಮ ಮಗಳ ಹಲ್ಲು/ವಸಡು ಆರೋಗ್ಯಕರವಾಗಿದೆ, ನಿರಾಳವಾಗಿರಿ ಎಂದೆ. ಆದರೂ ಸಮಾಧಾನವಾಗದ ಶಾಂತಮ್ಮ ಹಾಗಾದರೆ ನನ್ನ ಮಗನಿಗೆ ಚಿಕ್ಕ ವಯಸ್ಸಿನಲ್ಲಿ ಹಲ್ಲು ಕಳೆದುಕೊಳ್ಳಲು ಕಾರಣಗಳೇನು? ಅವನನ್ನು ನಾನು ಆವಾಗಾವಾಗ ದಂತ ಪರೀಕ್ಷೆಗೆ ಕರೆದು ತಂದಲ್ಲಿ, ಅವನ ಹಲ್ಲನ್ನು ಉಳಿಸಬಹುದಿತ್ತೇ? ನನ್ನ ಮಗಳಿಗೆ ಆ ತರಹ ಮುಂದೆ ಆಗುವ ಸಾಧ್ಯತೆಗಳಿವೆಯೆ? ಇದಕ್ಕೆ ಚಿಕಿತ್ಸೆಯಿಲ್ಲವೆ? ಎಂದೆಲ್ಲ ಕೇಳಿದರು. ಶಾಂತಮ್ಮನ ಎಲ್ಲ ಪ್ರಶ್ನೆಗಳು ನಿಮ್ಮ ಪ್ರಶ್ನೆಗಳು ಕೂಡ ಎಂದು ನಮಗೆ ಗೊತ್ತು.
ತೀವ್ರ ತರಹದ ಹಲ್ಲು ಸುತ್ತುಪರೆ ರೋಗ ಸಾಧಾರಣ ನೂರರಲ್ಲಿ ಒಬ್ಬರಿಗೆ ಬರುವುದು. ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ಪರಿದಂತ ಅಥವಾ ಹಲ್ಲು ಸುತ್ತು ಪರೆ ರೋಗಕ್ಕಿಂತ, ರೋಗ ಚಿಹ್ನೆ ಮತ್ತು ಲಕ್ಷಣಗಳಲ್ಲಿ ಭಿನ್ನವಾಗಿರುತ್ತದೆ.ಸಾಮಾನ್ಯವಾಗಿ ಕಂಡುಬರುವ ಹಲ್ಲು ಸುತ್ತು ಪರೆ ರೋಗವನ್ನು ದೀರ್ಘಕಾಲದ ಹಲ್ಲು ಸುತ್ತುಪರೆ ರೋಗ ಎಂದು ಹೇಳುತ್ತೇವೆ. ಇದು ಸಾಮಾನ್ಯವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕಂಡುಬರುತ್ತದೆ. ಇಂತಹವರಲ್ಲಿ ಹಲ್ಲಿನ ಮೇಲೆ ತುಂಬ ಹಲ್ಲು ಪಾಚಿ ಮತ್ತು ಟಾರ್ಟರ್ ಗಟ್ಟಿಯಾದ ಹಲ್ಲು ಪಾಚಿ ತುಂಬಿಕೊಂಡಿರುತ್ತದೆ.
ವಸಡು ಸಾಧಾರಣ ಕೆಂಪಾಗಿ, ಮೃದುವಾಗಿ, ಉರಿಯೂತದಿಂದ ಕೂಡಿದ್ದು, ಬ್ರಶ್ ಮಾಡುವಾಗ ರಕ್ತ ಒಸರುವುದು, ಇದಲ್ಲದೇ ಕೆಲವೊಮ್ಮೆ ಕೆಲವು ಹಲ್ಲುಗಳ ವಸಡಿನಿಂದ ಕೀವು ಬರುತ್ತದೆ. ಈ ವಸಡಿನ ಉರಿಯೂತದಿಂದ ವಸಡಿನ ಸುತ್ತಲಿರುವ ಎಲುಬು ಸ್ವಲ್ಪ ನಾಶವಾಗಿರುತ್ತದೆ. ಇಂತಹವರಲ್ಲಿ ತೆಗೆದರೆ, ಹಲ್ಲಿನ ಸುತ್ತಲೂ, ಒಂದೇ ಸಮನಾಗಿ ಎಲುಬು ಹೋಗಿರುವುದು ನೋಡಸಿಗುವುದು. ಹಲ್ಲು ಅಲುಗಾಡಿದರೂ ತೀವ್ರಗತಿಯಲ್ಲಿ ರೋಗವು ಪಸರಿಸುವುದಿಲ್ಲ. ಇಂತಹವರು ದಂತ ವೈದ್ಯರಲ್ಲಿ ಬಂದು ಹಲ್ಲು ಸ್ವತ್ಛಗೊಳಿಸಿಕೊಂಡರೆ, ಪುನಃ ಎಲುಬು ನಾಶವಾಗುವುದನ್ನು ವಸಡಿನ ಉರಿಯೂತವನ್ನು ನಿಲ್ಲಿಸಬಹುದು. ಕೆಲವೊಮ್ಮೆ ನಾಶವಾದ ಎಲುಬನ್ನು ಮತ್ತು ಸುತ್ತ ಇರುವ ವಸಡನ್ನು ಪುನಃ ಪಡೆಯಲು, ವಸಡಿನ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಬಹುದು ಕೂಡ. ತೀವ್ರ ತರಹದ ಹಲ್ಲು ಸುತ್ತು ಪರೆ ರೋಗ ಎರಡು ತರಹ. ಒಂದು, ಕೇವಲ ಕೆಲವು ಹಲ್ಲುಗಳಿಗೆ ಸೀಮಿತವಾಗಿರುವುದು ಮತ್ತೂಂದು ಸಾಧಾರಣ ಎಲ್ಲ ಹಲ್ಲುಗಳಿಗೂ ಪಸರಿಸಿರುವುದು ಕೆಲವು ಹಲ್ಲುಗಳಿಗೆ ಸೀಮಿತ ತೀವ್ರತರಹದ ಹಲ್ಲು ಸುತ್ತು ಪರೆ ರೋಗಗಳಲ್ಲಿ ಎದುರಿನ, ಮೇಲಿನ, ಕೆಳಗಿನ ಬಾಚಿ ಹಲ್ಲುಗಳು ಮತ್ತು ಮೊದಲು ಹುಟ್ಟುವ ದವಡೆ ಹಲ್ಲುಗಳ ಸುತ್ತ ಮಾತ್ರ ಎಲುಬು ನಾಶವಾಗಿರುತ್ತದೆ. ಇಂತಹವರಲ್ಲಿ ಹಲ್ಲಿನ ಮೇಲೆ ಪಾಚಿ ಅಥವಾ ಕಿಟ್ಟವು ಕಾಣಸಿಗುವುದಿಲ್ಲ. ಅಥವಾ ತುಂಬ ಕಡಿಮೆಯಿರುತ್ತದೆ. ಇದಲ್ಲದೇ ವಸಡು ಮೇಲಿನಿಂದ ನೋಡಲು ಆರೋಗ್ಯಕರವಾಗಿಯೂ, ಯಾವುದೇ ರೋಗ ಚಿಹ್ನೆ ಇಲ್ಲದ ಹಾಗೆ ಇರುವುದು, ಆದರೆ, ದಂತ ವೈದ್ಯರು ಉಪಯೋಗಿಸುವ, ಹಲ್ಲು ಸುತ್ತು ಪರೆ ರೋಗ ನಿರ್ಧಾರ ಮಾಡಲು ಅವಶ್ಯವಿರುವ ಉಪಕರಣವಾದ ಸಪೂರವಾದ ದಂತ ಪ್ರೋಬ್ ಹಲ್ಲು ಮತ್ತು ವಸಡಿನ ಮಧ್ಯೆ ಇಟ್ಟಲ್ಲಿ ಅದು ಸೀದಾ ವಸಡಿನ ಒಳಗೆ ಹೋಗುವುದು. ಇದರಿಂದಾಗಿ ಎಲುಬು ನಾಶವಾಗಿದೆಯೆಂದು ತಿಳಿಯುವುದು ಕೂಡ. ಇಂತಹವರಲ್ಲಿ ತೆಗೆದಲ್ಲಿ , ಕೇವಲ ಮೊದಲು ಹುಟ್ಟಿದ ದವಡೆ ಮತ್ತು ಎದುರಿನ ಬಾಚಿ ಹಲ್ಲುಗಳ ಸುತ್ತ ಉದ್ದವಾಗಿ ಎಲುಬು ನಾಶವಾಗಿರುವುದು ಕಾಣುವುದು. ನೀವು ಕೇಳಬಹುದು; ಹಲ್ಲಿನ ಮೇಲೆ ಪಾಚಿ ಅಥವಾ ಕಿಟ್ಟವು ಇಲ್ಲದೇ , ಎಲುಬು ನಾಶ ಹೇಗೆ ಆಯಿತು ಎಂದು? ಇಂತಹವರಲ್ಲಿ ಹಲ್ಲಿನ ಮೇಲಿರುವ ಪಾಚಿ ಕಡಿದು ಆದರೆ, ಬ್ಯಾಕ್ಟೀರಿಯಾಗಳು ವಸಡಿನೊಳಗೆ ಸೀದಾ ಪ್ರವೇಶಿಸಿರುತ್ತವೆ. ಮತ್ತು ಎಲುಬು ತೀವ್ರತರವಾಗಿ ನಾಶವಾಗಲು ಕಾರಣವಾಗಿರುತ್ತದೆ.
ಇಂತಹವರು, ಸರಿಯಾದ ಸಮಯಕ್ಕೆ ದಂತ ವೈದ್ಯರಲ್ಲಿ ಬರುವುದು ಕಡಿಮೆ, ಏಕೆಂದರೆ, ರೋಗಿಗೆ, ಹೊರಗಿನಿಂದ ವಸಡು ರೋಗದ ಯಾವುದೇ ಚಿಹ್ನೆ/ಲಕ್ಷಣಗಳು ಕಾಣುವುದಿಲ್ಲ. ಕೇವಲ ಎಲುಬು ನಾಶದಿಂದ ಹಲ್ಲು ಅಲುಗಾಡಲು ಪ್ರಾರಂಭವಾದಾಗ, ಹಲ್ಲು ಏಕೆ ಅಲುಗಾಡುತ್ತಿದೆಯೆಂದು ದಂತ ವೈದ್ಯರನ್ನು ಸಂದರ್ಶಿಸುವರು.
ಹಲ್ಲು ಅಲುಗಾಡುವ ಮೊದಲು ಸೂಚನೆಯಲ್ಲೇ ಬಂದರೆ ವಸಡು ಚಿಕಿತ್ಸೆ ಶಸ್ತ್ರ ಚಿಕಿತ್ಸೆ/ಶಸ್ತ್ರಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು, ಆದರೆ ಕೆಲವರು ಹಲ್ಲು ಅಲುಗಾಡುವ ಮೊದಲ ಚಿಹ್ನೆಯನ್ನು ನಿರ್ಲಕ್ಷಿಸಿ ಅದು ಸಂಪೂರ್ಣವಾಗಿ ಹಲ್ಲು ಅಲುಗಾಡಿ, ಹಲ್ಲು ತನ್ನಷ್ಟಕ್ಕೆ ಉದುರಿ ಹೋಗುವ ತನಕ / ಅಥವಾ ಹಲ್ಲು ತೀವ್ರ ಅಲುಗಾಡುವ ತನಕ ದಂತ ವೈದ್ಯರನ್ನು ಸಂದರ್ಶಿಸದೇ, ದಂತ ವೈದ್ಯರಿಗೆ ಯಾವುದೇ ಚಿಕಿತ್ಸೆ ಮಾಡಲು ಇರದೇ ಹಲ್ಲನ್ನು ಕಳೆದುಕೊಳ್ಳುತ್ತಾರೆ.
ದೀರ್ಘಕಾಲದ ಹಲ್ಲು ಸುತ್ತು ಪರೆ ರೋಗಕ್ಕೆ ವಿಭಿನ್ನವಾಗಿ, ಈ ತರಹದ ಹಲ್ಲು ಸುತ್ತು ಪರೆ ರೋಗವು ಸಾಧಾರಣ 12 ವರ್ಷ, ಪ್ರಾಯದವರಲ್ಲಿ ಕಂಡು ಬರುತ್ತದೆ. 12ರಿಂದ 18 ವರ್ಷಗಳ ತನಕ ಮೊದಲ ದವಡೆ ಮತ್ತು ಎದುರಿನ ಬಾಚಿ ಹಲ್ಲುಗಳ ಸುತ್ತ ರೋಗವು ಕಂಡು ಬರುತ್ತದೆ.
– ಮುಂದಿನ ವಾರಕ್ಕೆ
– ಡಾ| ಜಿ. ಸುಬ್ರಾಯ ಭಟ್,
ಅಸೋಸಿಯೇಟ್ ಡೀನ್ ಮತ್ತು ಪ್ರೊಫೆಸರ್,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.