ಜೀವಯಾನ ಕವಿಗೆ ನುಡಿ-ನಮನ
Team Udayavani, Feb 13, 2017, 12:57 PM IST
ಕೆ.ಆರ್.ನಗರ: ಇತ್ತೀಚೆಗೆ ಅಗಲಿದ ಜೀವಯಾನ ಕವಿ ಎಸ್.ಮಂಜುನಾಥ್‌ಗೆ ಅವರ ಗೆಳೆಯರು, ಅಭಿಮಾನಿಗಳು ಒಡನಾಟದ ದಿನಗಳನ್ನು ಮೆಲುಕು ಹಾಕುವ ಮೂಲಕ ನುಡಿನಮನ ಸಲ್ಲಿಸಿದರು. ಕಾಲೇಜು ಆವರಣದಲ್ಲಿನ ಅನಿಕೇತನ ಬಯಲು ರಂಗಮಂದಿರದಲ್ಲಿ ಜನ ವೇದಿಕೆ ವತಿಯಿಂದ ಮಂಜುನಾಥ್ ನೆನಪು ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಸಂಸದ ಎಚ್.ವಿಶ್ವನಾಥ್ ಸೇರಿದಂತೆ ಅನೇಕ ಗಣ್ಯರು ದಿವಂಗತ ಎಸ್.ಮಂಜುನಾಥ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ, ಮಂಜುನಾಥ್ ಕನ್ನಡ ಸಾಹಿತ್ಯ ಕ್ಷೇತ್ರದ ಶಕ್ತಿ ಎನಿಸಿದ್ದರು. ಕನ್ನಡ ಸಾಹಿತ್ಯ ತನಗೆ ಎಲ್ಲವನ್ನು ಕೊಟ್ಟಿದೆ ಎನ್ನುವ ಧನ್ಯತಾ ಭಾವ, ಸಂತೃಪ್ತಿ ಅವರದಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ, ಮೈಸೂರಿನಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದು ಕೆ.ಆರ್.ನಗರದಲ್ಲಿ ನೌಕರಿ ಹಿಡಿದು ಕಾವ್ಯ ಕಾಯಕ ಮಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದ ಅವರ ಸಾಧನೆ ಅವಿಸ್ಮರಣೀಯ.
ನಗರದಲ್ಲಿ ಅವರ ನೆನಪು ಸದಾ ಉಳಿಯುವಂತೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ಪುರಸಭೆ ಮತ್ತು ಶಾಸಕ ಸಾ.ರಾ.ಮಹೇಶ್ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಉಪನ್ಯಾಸಕ ಶಿವಶಂಕರ್ ಮಾತನಾಡಿ, ಎಸ್.ಮಂಜುನಾಥ್, ಲಂಕೇಶ್ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ದ.ರಾ.ಬೇಂದ್ರೆ,ಪುತಿನ ಅವರ ನೆಚ್ಚಿನ ಸಾಹಿತಿಗಳಾಗಿದ್ದರು. ಅನಂತಮೂರ್ತಿ, ಜಯಂತ್ ಕಾಯ್ಕಿಣಿ, ದೇವನೂರು ಮಹದೇವ, ರಂಗಕರ್ಮಿ ಪ್ರಸನ್ನ,ನಾಗರಾಜ… ಭೂತಾಳ್ ಮೊದಲಾದ ಸಾಹಿತ್ಯ ದಿಗ್ಗಜರನ್ನು ಇಲ್ಲಿಗೆ ಕರೆಸಿ ವೇದಿಕೆಯನ್ನು ಅರ್ಥಪೂರ್ಣಗೊಳಿಸಿದ್ದರು.
ವಿಶ್ವ ಸಾಹಿತ್ಯದ ಮೇರು ಕೃತಿಗಳು ಅವರ ಬಾಯಲ್ಲಿತ್ತು. ಅವರ ನೆನಪಿನ ಶಕ್ತಿ ಅಗಾಧವಾಗಿತ್ತು, ಅಪ್ಪಟ ಕಾವ್ಯ ಪ್ರೇಮಿಯಾಗಿದ್ದ ಅವರಲ್ಲಿ ಗುಂಪುಗಾರಿಕೆ ಇರಲಿಲ್ಲ. ಪ್ರಶಸ್ತಿ, ಸನ್ಮಾನ ಎಂದೂ ನಿರೀಕ್ಷಿಸಿದವರಲ್ಲ. ಕಾವ್ಯದಿಂದ ಸಿಗಬೇಕಾದ ಸಂತೋಷ ಮಂಜುನಾಥ್‌ಗೆ ಸಿಕ್ಕಿತ್ತು. ಎಲ್ಲರೊಂದಿಗೆ ನಿಷ್ಕಲ್ಮಷ ಮನಸ್ಸಿನಿಂದ ಸ್ಪಂದಿಸುತಿದ್ದರು ಎಂದರು.
ಸಾಹಿತಿ ತೇ.ಸಿ.ವಿಶ್ವೇಶ್ವರಯ್ಯ ಮಾತನಾಡಿ, ಮಂಜುನಾಥ್ ಕಾವ್ಯ ಅನ್ನುವುದನ್ನು ತಪಸ್ಸಿನಂತೆ ದುಡಿಸಿಕೊಂಡವರು. ತಮಗೆ ಅನಿಸಿದ್ದನ್ನು ಹಿಂಜರಿಕೆ ಇಲ್ಲದೆ ಹೇಳುತಿದ್ದರು. ಕಾವ್ಯವನ್ನು ಬದುಕಾಗಿಸಿ ಕೊಂಡಿದ್ದರು. ಅವರ ಸಮಕಾಲೀನ ಸಾಹಿತಿಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು. ಮುಂದಿನ ವಾರ ನಗರದಲ್ಲಿ ನಡೆಯಲಿರುವ ಜಿÇÉಾ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಅವರ ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಗೆಳೆಯ ಅಕ್ಕಿಮನಿ, ನಿವೃತ್ತ ಕನ್ನಡ ಉಪನ್ಯಾಸಕ ಲಕ್ಕೇಗೌಡ, ಉಪನ್ಯಾಸಕರಾದ ಈಶ ಕುಮಾರ್, ಚಂದ್ರಕಲಾ, ನಿಕಟಪೂರ್ವ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಕೆ.ರಾಜು, ಹೆಗ್ಗಂದೂರು ಪ್ರಕಾಶ್ ಮೊದಲಾದವರು ಮಾತನಾಡಿದರು. ಪ್ರಾರಂಭದಲ್ಲಿ ಸ್ಥಳದಲ್ಲೇ ಮೋಹನ್ ಆಳ್ವಾ ಚಿತ್ರಿಸಿದ ಮಂಜುನಾಥ್ ಭಾವಚಿತ್ರವನ್ನು ಎಚ್.ವಿಶ್ವನಾಥ್ ವೇದಿಕೆಯಲ್ಲಿ ಅನಾವರಣಗೊಳಿಸಿದರು.
ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸಂತ್, ಡಾ.ಬ್ರಿಜ್ ಮೋಹನ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಕೃಷ್ಣೇ ಅರಸ್, ಎ.ಎಸ್.ಚನ್ನಬಸಪ್ಪ, ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಕೆ.ಜಗದೀಶ್, ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿಂ.ಡಿಂ.ಶಂಕರ್, ಉಪ ತಹಶೀಲ್ದಾರ್ ಯದುಗಿರೀಶ್, ಡಾ.ನಟರಾಜ್, ವೇಣು, ಉಪನ್ಯಾಸಕರಾದ ಪ್ರಕಾಶ್, ರಾಘು, ಲೋಕೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.