ಇವತ್ತು ತಿಂಡಿ ಏನು ಮಾಡಲಿ?
Team Udayavani, Feb 17, 2017, 3:45 AM IST
ತಿಂಡಿಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಹೊಟೇಲ್‌ನ ತಿಂಡಿ ಎಂದರೆ ಕೇಳುವುದೇ ಬೇಡ. ಬಿಸಿಬಿಸಿ ಅಂಬೊಡೆ, ಮಸಾಲೆದೋಸೆ, ವಡಾ ಸಾಂಬಾರ್, ಕೇಸರಿಭಾತ್ ಎಂದರೆ ಆಹಾ…! ನಾಲಗೆಯಲ್ಲಿ ನೀರೂರುತ್ತದೆ! ನಾನಂತೂ ಮೊದಲಿನಿಂದಲೂ ತಿಂಡಿಪ್ರಿಯೆ. ಹಾಗೆ ನೋಡಿದರೆ, ಗೆಳತಿಯರೊಂದಿಗೆ, ಸಹೋದ್ಯೋಗಿಗಳೊಂದಿಗೆ ಹೊಟೇಲ್‌ಗಳಿಗೆ ಭೇಟಿ ನೀಡಿ ತೃಪ್ತಿಯಾಗುವಷ್ಟು ತಿಂದದ್ದು ಎಷ್ಟು ಭಾರಿ ಇರಲಿಕ್ಕಿಲ್ಲ? ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ತಾವು ಭೇಟಿ ನೀಡಿದ ಹೊಟೇಲ್‌ಗಳ ಬಗ್ಗೆ ಹೇಳುತ್ತಾ, ಅಲ್ಲಿ ಸಿಗುವ ತಿಂಡಿಗಳ ಬಗ್ಗೆ ವೈವಿಧ್ಯಮಯವಾಗಿ ವರ್ಣಿಸುವಾಗಲಂತೂ ಮನಸ್ಸಿನ ಚಪಲ ಹೆಚ್ಚುತ್ತದೆ. ಮನೆಯಲ್ಲಿ ಹೊಟೇಲ್ ವಿಷಯ ಎತ್ತಿದರೆ ಸಾಕು, “ಹೊರಗಿನ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ ; ಮೊದಲೇ ದಪ್ಪಗಿದ್ದೀಯಾ, ಇನ್ನೂ ದಪ್ಪಗಾಗುತ್ತಿ ನೋಡು’ ಅನ್ನುತ್ತಾರೆ. ಆದರೆ, ಅವರ ಎಚ್ಚರಿಕೆಯ ಮಾತುಗಳು ನನ್ನ ಕಿವಿಗೆ ಎಲ್ಲಿ ಕೇಳಿಸುತ್ತವೆ ಹೇಳಿ!
ಉದ್ಯೋಗಕ್ಕೆ ಹೋಗುವ ನಾನಾದರೆ ಆಗಾಗ ಸಹೋದ್ಯೋಗಿಗಳೊಂದಿಗೆ ಕ್ಯಾಂಟೀನ್, ಹೊಟೇಲ್‌ಗಳಿಗೆೆ ನುಗ್ಗಿ ನನ್ನಿಷ್ಟದ ತಿಂಡಿ-ತಿನಿಸುಗಳನ್ನು ತಿಂದು ಬಯಕೆ ತೀರಿಸಿಕೊಳ್ಳುತ್ತೇನೆ. ಆದರೆ ಮನೆಯಲ್ಲಿ ಮಕ್ಕಳಿಗೆ, ಮನೆಯ ಇತರ ಸದಸ್ಯರಿಗೆ? ಪಾಪ, ಅವರಿಗೆಲ್ಲಿ ಹೀಗೆ ಹೊರಗೆ ಹೋಗಿ ತಿನ್ನುವ ಅವಕಾಶ ಉಂಟು? ಮಕ್ಕಳು ಅಷ್ಟೇ, ಸ್ಕೂಲ್ ಬಿಟ್ಟರೆ ಮನೆಗೆ, ಮನೆಯಿಂದ ಸ್ಕೂಲ್‌ಗೆ. ಬೆಳಗ್ಗೆ ಬಾಕ್ಸ್‌ನಲ್ಲಿ ಕೊಂಡುಹೋದದ್ದಷ್ಟೇ. ಹಾಗಾಗಿ ಸಂಜೆಯಾಗುತ್ತಿದ್ದಂತೆ “ಅಮ್ಮ ಯಾವಾಗ ಬರುತ್ತಾಳೆ, ಏನು ತಿಂಡಿ ತರುತ್ತಾಳೆ’ ಅಂತ ದಾರಿ ಕಾಯುತ್ತಾ ನಿಲ್ಲುತ್ತವೆ.
ಈ “ತಿಂಡಿ’ ಎಂದಾಕ್ಷಣ ನನ್ನ ತಲೆಯಲ್ಲಿ ಓಡುವುದು “ಇವತ್ತೇನು ತಿಂಡಿ ಮಾಡುವುದು?’ ಎನ್ನುವ ವಿಚಾರ. ದಿನಬೆಳಗಾದರೆ ಸಾಕು ಊಟ-ತಿಂಡಿಯದ್ದೇ ಒಂದು ದೊಡ್ಡ ತಲೆನೋವು. ಹಾಗೆ ನೋಡಿದರೆ, ಇದು ನನ್ನೊಬ್ಬಳ ಸಮಸ್ಯೆಯಲ್ಲ; ಪ್ರತಿಯೊಬ್ಬ ಮನೆಯ ಮಹಿಳೆಯದ್ದೂ ಇದೇ ಪಾಡು. ಪ್ರತಿ ಮನೆಯ ಗೃಹಿಣಿಯೂ “ಇವತ್ತೇನು ತಿಂಡಿ ಮಾಡಲಿ? ಊಟಕ್ಕೇನು ತಯಾರಿಸಲಿ?’ ಎನ್ನುವ ಗುಂಗಿನಲ್ಲೇ ಹಾಸಿಗೆ ಬಿಟ್ಟು ಎಳುವುದು. “ತಿಂಡಿ’ ಎಂದಾಕ್ಷಣ, ಬೆಳಗ್ಗೆದ್ದು ಏನಾದರೂ ಒಂದು ಆಹಾರ ತಯಾರಿಸುವುದು ಅಲ್ಲ , ಅಂದರೆ ಏನಾದರೂ ಒಂದು ತಿಂಡಿ ಮಾಡುವುದಲ್ಲ. ಯಾಕೆಂದರೆ, ಒಂದು ಮನೆ ಎಂದ ಮೇಲೆ ಅಲ್ಲಿ ಎಲ್ಲ ರೀತಿಯ ಸದಸ್ಯರು ಇರುತ್ತಾರೆ.
ಮಕ್ಕಳು, ಹಿರಿಯರು, ಕಿರಿಯರು, ವಯಸ್ಸಾದವರೂ. ಮನೆಯಲ್ಲಿ ಬೆಳೆಯುವ ಮಕ್ಕಳಿರುವಾಗ ಅವರ ಬೆಳವಣಿಗೆಗೆ ಬೇಕಾಗಿರುವ ಉತ್ತಮ ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ ತಯಾರಿಸಬೇಕು, ಅಡುಗೆ ಮನೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು, ಆಹಾರ ಸಂರಕ್ಷಣೆ ಮಾಡಬೇಕು, ಹಿರಿಯರ ಸ್ವಾಸ್ಥ್ಯದ ಕಡೆಗೆ ಗಮನ ನೀಡಬೇಕು. ಅಂತೆಯೇ ಎಲ್ಲರಿಗೂ ಆಗುವಂತೆ ಆರೋಗ್ಯಕರ ಅಡುಗೆ ತಯಾರಿಸಬೇಕು, ಅದು ರುಚಿ-ಶುಚಿಯಾಗಿಯೂ, ಸ್ವಾದಿಷ್ಟವೂ ಆಗಿರಬೇಕು. ಮುಖ್ಯವಾಗಿ ಅದು ಮನೆಯಲ್ಲಿನ ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೆ ಹಿಡಿಸಬೇಕು. ಆದ್ದರಿಂದಲೇ ತಿಂಡಿ ತಯಾರಿಸುವಾಗ “ಏನು ತಿಂಡಿ ಮಾಡಲಿ?’ ಎನ್ನುವ ಗೊಂದಲ ಮಹಿಳೆಗೆ ಎದುರಾಗದೇ ಇರದು!
ಮನೆಯ ಹಿರಿಯ ಸದಸ್ಯರಿಗಾದರೆ ಅಕ್ಕಿ ತಿಂಡಿ ಮಾಡಿದರೆ ಇಷ್ಟ ಆಗುತ್ತದೆ. ಆದರೆ, ಮಕ್ಕಳಿಗೆ ಇಷ್ಟವಾಗಬೇಕಲ್ಲ. ಇಡ್ಲಿ-ದೋಸೆ ಮಾಡಿದರೆ, “ದಿನಾ ಇದೇ ತಿಂಡಿನಾ?’ ಅಂತ ಮುಖ ಸಿಂಡರಿಸುತ್ತಾರೆ. ಹಾಗಾಗಿ, ಎಲ್ಲರಿಗೂ ಹಿಡಿಸುವ, ಇಷ್ಟವಾಗುವ ತಿಂಡಿ ತಯಾರಿಸಬೇಕು. ಹಾಗಂತ ಇಡೀ ದಿನ ಊಟ-ತಿಂಡಿ ತಯಾರಿಸುತ್ತಾ ಕುಳಿತರೆ ಸಮಯದ ಅಭಾವದಿಂದ ಉದ್ಯೋಗಕ್ಕೆ ತೆರಳಲು ತಡವಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಸರಿಯಾದ ಸಮಯಕ್ಕೆ ಊಟ-ತಿಂಡಿ ತಯಾರಿಸಿ ಡಬ್ಬಿಗೆ ತುಂಬಿ ಕೊಡಬೇಕು. ಹಾಗಾಗಿ ದಿನಾಲು ತಯಾರಿಸುವ ತಿಂಡಿಯಲ್ಲೇ ಸ್ವಲ್ಪ ವೈವಿಧ್ಯತೆಯನ್ನು ರೂಪಿಸಿಕೊಂಡರೆ ಹೇಗೆ? ಎಂದು ಯೋಚಿಸಿ ಊಟ-ತಿಂಡಿಯಲ್ಲಿ ಹೆಚ್ಚೆಚ್ಚು ಬೇಳೆಕಾಳುಗಳು, ತರಕಾರಿಗಳು ಇರುವಂತೆ ಗಮನ ನೀಡಿ, ಮಕ್ಕಳಿಗೂ ಹಿಡಿಸುವ ಹಾಗೆ ತರಕಾರಿಯಲ್ಲೂ ವೈವಿಧ್ಯತೆ ಇರುವಂತೆ ನೋಡಿಕೊಂಡು ತರಕಾರಿ ಆಯ್ಕೆಯಲ್ಲಿ ಬಣ್ಣ ಬಣ್ಣದ ತರಕಾರಿಗಳನ್ನು ಆಯ್ದು ವೈವಿಧ್ಯಮಯ ದೋಸೆಗೆ ಟ್ರೈ ಮಾಡಿದೆ. ದಿನಕ್ಕೊಂದು ನಮೂನೆಯ ಗರಿಗರಿ ದೋಸೆ. ಒಂದಿನ ರಾಗಿ ಹಿಟ್ಟಿನ ದೋಸೆಯಾದರೆ ಮತ್ತೂಂದು ದಿನ ಮೆಂತೆ ಸೊಪ್ಪಿನ ದೋಸೆ, ಮರುದಿನ ಬಾಳೆಹಣ್ಣಿನ ದೋಸೆ, ಕ್ಯಾರೆಟ್ ದೋಸೆ, ಈರುಳ್ಳಿ ದೋಸೆ, ಕ್ಯಾಬೇಜ್ ದೋಸೆ ಆಹಾ…! ನನ್ನದು ದಿನಕ್ಕೊಂದು ರೀತಿಯ ದೋಸೆಗಳು. ಈ ಕಲರ್‌ಫುಲ್ ದೋಸೆಗಳನ್ನು ತಟ್ಟೆಗೆ ಹಾಕಿ ಕೊಟ್ಟರೆ ಮನೆಯಲ್ಲಿ ಎಲ್ಲರ ತಟ್ಟೆಯೂ ಸದ್ದಿಲ್ಲದೆ ಖಾಲಿ ಖಾಲಿ. ಅವರೆಕಾಳು, ಕ್ಯಾರೆಟ್, ಬಟಾಣಿ, ರಾಗಿಯಿಂದ ಇಡ್ಲಿ ತಯಾರಿಸಿದರಂತೂ ಗಮಕ್ ಗಿಮಕ್ ಎನ್ನದೆ ಒಳಗಿಳಿಯುತ್ತದೆ!
ಮೊನ್ನೆ ನನ್ನ ಪಕ್ಕದ ಟೇಬಲ್‌ನ ಸಹೋದ್ಯೋಗಿ ಟಿಫಿನ್ ಬಾಕ್ಸ್ ತೆರೆಯುವಾಗ ಘಮ್ ಎನ್ನುವ ಪರಿಮಳ ಬಂತು. “”ಭಾರಿ ಸೆ¾ಲ್ ಹೊಡೀತಿದೆೆ, ಏನು ತಿಂಡಿ” ಅಂದೆ. ಅದಕ್ಕವಳು, “”ಪುಳಿಯೋಗರೆ” ಅಂದಳು. ಪುಳಿಯೋಗರೆ ಎಂದಾಕ್ಷಣ ಒಮ್ಮೆ ನನ್ನ ನಾಲಗೆಯಲ್ಲಿ ನೀರೂರಿ, ತತ್‌ಕ್ಷಣ ನನ್ನ ಮೈಸೂರಿನ ಚಿಕ್ಕಮ್ಮ ತಾನೇ ತನ್ನ ಕೈಯಾರೆ ಕುಟ್ಟಿ ಪುಡಿ ಮಾಡಿ ತಯಾರಿಸುವ ಪುಳಿಯೋಗರೆಯ ನೆನಪು ಬಂತು. “”ಪುಳಿಯೋಗರೆನಾ? ಅದಕ್ಕೆ ಏನೇನೆಲ್ಲ ಹಾಕುತ್ತಿ? ಬೆಳಿಗ್ಗೆ ಇದಕ್ಕೆ ರೆಡಿ ಮಾಡಲು ಟೈಮ್ ಸಿಗುತ್ತದಾ?” ಅಂದೆ, ಅದಕ್ಕವಳು, “”ಬೆಳಗ್ಗೆದ್ದು ಮಸಾಲೆ ಸಾಮಾನುಗಳನ್ನು ಜೋಡಿಸಿ ಪುಡಿ ಮಾಡಲು ನನಗೆಲ್ಲಿ ಪುರುಸೊತ್ತು ಉಂಟೇ? ಅಂಗಡಿಯಲ್ಲಿ ಪುಳಿಯೋಗರೆ ಪುಡಿ ಸಿಗುತ್ತದೆ, ನೀನೂ ಬೇಕಾದರೆ ಟ್ರೈ ಮಾಡಿ ನೋಡು” ಎಂದು ತನ್ನ ಘಮ್ಮೆನ್ನುವ ತಿಂಡಿಯ ರಹಸ್ಯ ತೆರೆದಿಟ್ಟಳು.
ಸರಿ, ಒಮ್ಮೆ ಟ್ರೈ ಮಾಡಿ ನೋಡೋಣ ಅಂತ ನಾನೂ ಪುಳಿಯೋಗರೆ ಪುಡಿ ಕೊಳ್ಳಲು ಹೋದೆ. ಅಂಗಡಿಗೆ ಕಾಲಿಟ್ಟೊಡನೆ “ಇದು ದಿನಸಿ ಅಂಗಡಿಯೋ ಅಥವಾ ಫ್ಯಾನ್ಸಿ ಸ್ಟೋರೋ’ ಅನ್ನುವ ಅನುಮಾನ ಬಂತು. ಯಾಕೆಂದರೆ, ಅಂಗಡಿ ಎದುರುಗಡೆ ಬಣ್ಣ ಬಣ್ಣದ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಲ್ಲಿ ತೂಗುತ್ತಿದ್ದ ತರಹೇವಾರಿ ಪುಡಿಗಳು ಒಳ್ಳೆ ಫ್ಯಾನ್ಸಿ ಐಟಮ್‌ಗಳನ್ನು ತೂಗು ಹಾಕಿದಂತೆ ಕಾಣಿಸುತ್ತಿದ್ದವು. ಎಲ್ಲವನ್ನೂ ಒಮ್ಮೆ ತಡಕಾಡಿದರೆ, ಎಷ್ಟೊಂದು ನಮೂನೆಯ ಮಸಾಲೆ ಪುಡಿಗಳು- ವೆಜಿಟೇಬಲ್ ಪುಲಾವ್, ಪುಳಿಯೋಗರೆ ಪುಡಿ, ವಾಂಗಿಭಾತ್ ಪುಡಿ, ಬಿಸಿಬೇಳೆ ಭಾತ್ ಪುಡಿ, ಟೊಮೆಟೊ ರೈಸ್ ಅಬ್ಬಬ್ಟಾ…!
ಮರುದಿನ ಬೆಳಗ್ಗೆ ಪುಳಿಯೋಗರೆ ಟ್ರೈ ಮಾಡಿದೆ. ಪೊಟ್ಟಣದಲ್ಲಿ “ತಯಾರಿಸುವ ವಿಧಾನ’ವೂ ಇತ್ತು. ಎರಡೆರಡು ಸಲ ಓದಿಕೊಂಡೆ. ಒಗ್ಗರಣೆಗೆ ಸ್ವಲ್ಪ ಉದ್ದಿನಬೇಳೆ, ನೆಲಗಡಲೆ, ಕರಿಬೇವು, ಒಣಮೆಣಸನ್ನು ಎಕ್ಸ್‌ಟ್ರಾ ಸೇರಿಸಿ, ಪ್ಯಾಕೆಟ್ ಪುಡಿಯನ್ನು ಮಿಶ್ರಣ ಮಾಡಿ ಅನ್ನ ಬೆರೆಸಿದೆ. ಹತ್ತೇ ನಿಮಿಷದಲ್ಲಿ ಪುಳಿಯೋಗರೆ ರೆಡಿ. ಆಹಾ…! ಎಂಥಾ ಪರಿಮಳ, ಎಂಥಾ ಸ್ವಾದ. ಮಕ್ಕಳ ಮುಖವರಳಿತು. “”ಅಮ್ಮಾ, ತಿಂಡಿ ತುಂಬಾ ಚೆನ್ನಾಗಿದೆ, ಮಧ್ಯಾಹ್ನ ಟಿಫಿನ್‌ಗೆ ಇದನ್ನೇ ಕೊಡು” ಎನ್ನುವ ರಾಗ ಬೇರೆ. ನನಗೆ ಬೇಕಾದದ್ದು ಅಷ್ಟೇ, ಮನೆಯಲ್ಲಿ ಎಲ್ಲರಿಗೂ ಇಷ್ಟ ಆದರೆ ಸಾಕು ಅಷ್ಟೇ. ನಂತರ ಒಂದೊಂದು ದಿನ ಒಂದೊಂದು ನಮೂನೆಯ ಮಸಾಲೆ ಪುಡಿಗಳನ್ನು ಟ್ರೈ ಮಾಡಿ ನೋಡಿದೆ. ತರಕಾರಿ, ಬಟಾಣಿ ಕಾಳು ಹಾಕಿ ವೆಜಿಟೇಬಲ್ ಪುಲಾವ್, ಒಂದಿನ ಬಿಸಿಬೇಳೆ ಭಾತ್, ಒಂದು ದಿನ ವಾಂಗಿ ಭಾತ್… ಹೀಗೆ ನಾನಾ ರೀತಿಯ ಭಾತ್‌ಗಳು.
ಹಾಗೆ ನೋಡಿದರೆ, ಇಡ್ಲಿ-ದೋಸೆ-ಉಪ್ಪಿಟ್ಟಿನ ಹಾಗೆ ಈ ರೈಸ್‌ಭಾತ್‌ಗಳನ್ನು ರೆಡಿ ಮಾಡುವುದೂ ಕೊಂಚ ಸುಲಭವೇ ಎನ್ನಿ. ಭಾತ್‌ಗೆ ಮೊದಲು ಅನ್ನ ಮಾಡಿಕೊಂಡರಾಯಿತು. ಬಳಿಕ ಪುಲಾವೋ, ಪುಳಿಯೋಗರೇನೋ, ಚಿತ್ರಾನ್ನವೋ, ಟೊಮೆಟೋ ರೈಸೋ ಯಾವುದು ಬೇಕೋ ಅದನ್ನು ತಯಾರು ಮಾಡಬಹುದು. ಭಾತ್‌ಗೆ ಬಳಸಿ ಮಿಕ್ಕುಳಿದ ಅನ್ನ ಮಧ್ಯಾಹ್ನದ ಊಟಕ್ಕೂ ಆಗುತ್ತದೆ. ಒಂದು ಸಾರೋ, ಸಾಂಬಾರೋ ಮಾಡಿದರಾಯಿತು. ಇಡ್ಲಿ-ದೋಸೆಯಾದರೂ ಅಷ್ಟೇ ರಾತ್ರಿ ರುಬ್ಬಿಟ್ಟುಕೊಂಡು ಬೆಳಗ್ಗೆ ಬೇಯಿಸಿದರಾಯಿತು.
ಬೇಯುವಷ್ಟರಲ್ಲಿ ಚಹಾ ತಯಾರಿಸುವುದು, ಹಾಲು ಬಿಸಿ ಮಾಡುವುದು, ಚಟ್ನಿ ತಯಾರಿಸುವುದು, ಮಸಾಲೆ ರುಬ್ಬುವುದು ಹೀಗೆ ಬೇರೆ ಕೆಲಸಗಳನ್ನು ಮಾಡಿಕೊಳ್ಳಲು ಬರುತ್ತದೆ. ಬೆಳಗ್ಗೆ ಏಳುವಾಗ ಒಂದರ್ಧ ಗಂಟೆ ತಡವಾದರೂ ಅಂತಹ ಗಡಿಬಿಡಿಯೇನಿಲ್ಲ!
ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಮನೆಯವರು, ಮಕ್ಕಳೊಂದಿಗೆ ಔಟಿಂಗ್ ಹೋಗುವುದು ಸಾಮಾನ್ಯ. ಹಾಗೆ ರಜಾ ದಿನಗಳಲ್ಲಿ ಹೊರಗಡೆ ಹೋದಾಗ ಹೊಟೇಲ್‌ಗಳಿಗೆ ಭೇಟಿ ನೀಡುವುದು ಇದ್ದೇ ಇರುತ್ತದೆ. ಮಕ್ಕಳಿಗೆ ಇಷ್ಟವಾದ ತಿಂಡಿ ಆರ್ಡರ್ ಮಾಡಿದಾಗ ವೈಟರ್ ಚೆಂದ ಚೆಂದದ ಪ್ಲೇಟುಗಳಲ್ಲಿ ತಿಂಡಿಗಳನ್ನು ಅಲಂಕರಿಸಿ ಟೇಬಲ್‌ನ ಮೇಲೆ ತಂದಿಟ್ಟಾಗ ಮಕ್ಕಳಿಗಾಗುವ ಖುಷಿ ಅಷ್ಟಿಷ್ಟಲ್ಲ. ಅವರ ಮುಖದಲ್ಲಿ ಅರಳುವ ನಗು ಕಂಡಾಗ ವಾರವಿಡೀ ಆಫೀಸು-ಮನೆಗಳ ನಡುವಿನ ಜಂಜಾಟದಿಂದ ಆದ ಸುಸ್ತು ಮಾಯವಾಗಿ ಬಿಡುತ್ತದೆ.
– ಪಾಂಚಾಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.