ಐಪಿಎಲ್ ಹರಾಜಿನಲ್ಲಿ ಹೊಸಬರ ಮೇಳ
Team Udayavani, Feb 17, 2017, 3:45 AM IST
ಬೆಂಗಳೂರು: ಐಪಿಎಲ್ ಹರಾಜಿಗೆ ಇನ್ನುಳಿದಿರುವುದು ಮೂರೇ ದಿನ. ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲಾಗುತ್ತಾನೆ ಎಂಬ ಕ್ರಿಕೆಟ್ ಅಭಿಮಾನಿಗಳ ಕೌತುಕ ಈಗಾಗಲೇ ಗರಿಗೆದರಿದೆ.
ಐಪಿಎಲ್ ಹರಾಜಿನ ಈ ಸಲದ ವಿಶೇಷವೆಂದರೆ ಪ್ರತಿಭಾನ್ವಿತ ಹೊಸಬರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು. ಜತೆಗೆ ಸ್ಟಾರ್ ಆಟಗಾರರೂ ಮೊದಲ ಬಾರಿಗೆ ಐಪಿಎಲ್ ಬಾಗಿಲು ಬಡಿಯುತ್ತಿದ್ದಾರೆ. ಇವರಲ್ಲಿ ಇಂಗ್ಲೆಂಡಿನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪ್ರಮುಖರು. ಇನ್‌ಸ್ಟಂಟ್ ಕ್ರಿಕೆಟ್‌ನಲ್ಲಿ 134.03ರಷ್ಟು ಸ್ಟ್ರೈಕ್‌ರೇಟ್ ಹೊಂದಿರುವ ಸ್ಟೋಕ್ಸ್ ಯಾವ ತಂಡಕ್ಕೂ ಬಹೂಪಯೋಗಿ ಆಗಬಲ್ಲರು. 6-7ನೇ ಕ್ರಮಾಂಕದಲ್ಲಿ ಬಂದು ಉತ್ತಮ ಫಿನಿಶರ್ ಪಾತ್ರವನ್ನು ನಿಭಾಯಿಸುವ ಛಾತಿ ಇವರದು. ಸಹಜವಾಗಿಯೇ ಸ್ಟೋಕ್ಸ್‌ಗೆ ಬಲೆ ಬೀಸಲು ಬಹುತೇಕ ಎಲ್ಲ ತಂಡಗಳೂ ಪೈಪೋಟಿಗೆ ಬೀಳುವ ಸಾಧ್ಯತೆ ಇದೆ. ಮುಖ್ಯವಾಗಿ ಕೆಕೆಆರ್, ಪುಣೆ, ಮುಂಬಯಿ ಹಾಗೂ ಡೆಲ್ಲಿ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿವೆ.
ಸ್ಟೋಕ್ಸ್ ಮೂಲ ಬೆಲೆ 2 ಕೋಟಿ ರೂ.
ರಾಯ್, ಮಿಲ್ಸ್, ರಬಾಡ…
ಇಂಗ್ಲೆಂಡ್ ಆರಂಭಕಾರ, ಟಿ-20 ಸ್ಪೆಷಲಿಸ್ಟ್ ಜಾಸನ್ ರಾಯ್ ಕೂಡ ಬಹಳಷ್ಟು ಫ್ರಾಂಚೈಸಿಗಳ ಕಣ್ಣು ಕುಕ್ಕಿಸಿದ್ದಾರೆ. ಒಂದು ಕೋ.ರೂ. ಮೂಲಬೆಲೆಯನ್ನು ಇವರಿಗೆ ನಿಗದಿಗೊಳಿಸಲಾಗಿದೆ.
ಇಂಗ್ಲೆಂಡಿನ ಶರವೇಗಿ ಟೈಮಲ್ ಮಿಲ್ಸ್ ಬೆಲೆ 50 ಲಕ್ಷ ರೂ. ಅತ್ಯಧಿಕ ಡಾಟ್‌ಬಾಲ್, ಅತೀ ಕಡಿಮೆ ಬೌಂಡರಿ ನೀಡುವ ಹೆಗ್ಗಳಿಕೆ ಮಿಲ್ಸ್ ಅವರದು. ಇವರನ್ನು ಪಡೆಯುವ ತಂಡದ ಬೌಲಿಂಗ್ ವಿಭಾಗ ಹೆಚ್ಚು ಬಲಿಷ್ಠವಾಗಿರುವುದರಲ್ಲಿ ಅನುಮಾನವಿಲ್ಲ.
ದಕ್ಷಿಣ ಆಫ್ರಿಕಾದ ಘಾತಕ ವೇಗಿ ಕ್ಯಾಗಿಸೊ ರಬಾಡ ಈ ಐಪಿಎಲ್‌ನ ಸ್ಟಾರ್ ಆಕರ್ಷಣೆ ಆಗಬಲ್ಲರು. ಇವರ ಮೂಲಬೆಲೆ ಭರ್ತಿ ಒಂದು ಕೋಟಿ ರೂ.
ನ್ಯೂಜಿಲ್ಯಾಂಡಿನ ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಕೂಡ ಈ ಸಲದ ಐಪಿಎಲ್ ರೇಸ್‌ನಲ್ಲಿದ್ದಾರೆ. ಮೂಲಬೆಲೆ 30 ಲಕ್ಷ ರೂ. 136.36ರಷ್ಟು ಸೆಟ್ರೈಕ್‌ರೇಟ್ ಹೊಂದಿರುವ ಗ್ರ್ಯಾಂಡ್‌ಹೋಮ್ 38 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. ಅಫ್ಘಾನಿಸ್ಥಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಕೂಡ 30 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ. 2016ರ ಟಿ-20 ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಹೆಗ್ಗಳಿಕೆ ನಬಿ ಅವರದು.
ಪವರ್-ಪ್ಲೇ ಹಂತದಲ್ಲಿ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಬಲ್ಲ ವಿಂಡೀಸ್ ವೇಗಿ ಕೆಸ್ರಿಕ್ ವಿಲಿಯಮ್ಸ್ 30 ಲಕ್ಷ ರೂ. ಮೂಲಬೆಲೆ ನಿಗದಿಗೊಳಿಸಲಾಗಿದೆ. ಕೆರಿಬಿಯನ್ ನಾಡಿನ ವಿಕೆಟ್ ಕೀಪರ್ ನಿಕೋಲಸ್ ಪೂರಣ್ (30 ಲ.ರೂ.), ಆರಂಭಕಾರ ವಿನ್ ಲೂಯಿಸ್ (50 ಲ.ರೂ.) ಕೂಡ ಕಣದಲ್ಲಿದ್ದಾರೆ.
ಎ. 5ರಿಂದ ಐಪಿಎಲ್
10ನೇ ಐಪಿಎಲ್ ಪಂದ್ಯಾವಳಿ ಎ. 5ರಿಂದ ಮೇ 21ರ ತನಕ ಒಟ್ಟು 47 ದಿನಗಳ ಕಾಲ ಸಾಗಲಿದೆ. 8 ತಂಡಗಳು ಪಾಲ್ಗೊಳ್ಳಲಿದ್ದು, 10 ಸ್ಥಳಗಳಲ್ಲಿ ಪಂದ್ಯಗಳು ನಡೆಯುತ್ತವೆ.
ಉದ್ಘಾಟನಾ ಮತ್ತು ಫೈನಲ್ ಪಂದ್ಯಗಳೆರಡರ ಆತಿಥ್ಯವೂ ಹೈದರಾಬಾದ್ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಪಂಜಾಬ್ ತಂಡ ಮೊಹಾಲಿ ಮತ್ತು ಇಂದೋರನ್ನು “ಹೋಮ್ ಗ್ರೌಂಡ್’ ಆಗಿ ಆರಿಸಿಕೊಂಡಿದೆ. ಗುಜರಾತ್ ಲಯನ್ಸ್ ತಂಡದ ತವರಿನ ಅಂಗಳಗಳೆಂದರೆ ರಾಜ್‌ಕೋಟ್ ಮತ್ತು ಕಾನ್ಪುರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.