ಎಲ್ಲ ಅಕ್ರಮ ಕಟ್ಟಡಗಳ ತೆರವಿಗೆ ಸಾರ್ವಜನಿಕರ ಆಗ್ರಹ
Team Udayavani, Feb 22, 2017, 4:43 PM IST
ಕೋಟ: ಸಾಸ್ತಾನದ ಗುಂಡ್ಮಿ ಟೋಲ್‌ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸಂದರ್ಭದಲ್ಲಿ ವಶಕ್ಕೆ ಪಡೆಯಲಾದ ಜಾಗದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಮೂರು ಗೂಡಂಗಡಿಗಳನ್ನು ಕುಂದಾಪುರ ಸಹಾಯಕ ಕಮಿಷನರ್ ಅವರ ಆದೇಶದ ಮೇರೆಗೆ, ಬ್ರಹ್ಮಾವರ ವಿಶೇಷ ತಹಶೀಲ್ದಾರರ ಉಪಸ್ಥಿತಿಯಲ್ಲಿ ಫೆ. 21ರಂದು ತೆರವುಗೊಳಿಸಲಾಯಿತು.
ಇಲ್ಲಿನ ಸ್ಥಳೀಯ ನಿವಾಸಿಗಳಾದ ಗೋಪಾಲ ಶ್ರೀಯಾನ್, ಸೋಮಶೇಖರ, ಮಾಲಿಂಗ ಅವರು ಹತ್ತಾರು ವರ್ಷಗಳಿಂದ ಈ ಜಾಗದಲ್ಲಿ ಗೂಡಂಗಡಿ ನಡೆಸುತ್ತಿದ್ದು, ಪ್ರಸ್ತುತ ಈ ಸ್ಥಳ ರಾಷ್ಟ್ರೀಯ ಹೆದ್ದಾರಿಗೆ ಸೇರಿದೆ ಹಾಗೂ ಜಾಗದ ನಿಜವಾದ ಮಾಲಕರಿಗೆ ಪರಿಹಾರಧನ ನೀಡಲಾಗಿದೆ. ಆದ್ದರಿಂದ ಜಾಗದ ಮಾಲಕರು ಕುಂದಾಪುರ ಸಹಾಯಕ ಕಮಿಷನರ್ ಅವರಿಗೆ ಸಲ್ಲಿಸಿದ ಮನವಿಯ ಮೇರೆಗೆ ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವಂತೆ ಕುಂದಾಪುರ ಸಹಾಯಕ ಕಮಿಷನರ್ ಅವರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅನಂತರ ಎರಡು ಬಾರಿ ಸಂಬಂಧಪಟ್ಟ ಅಂಗಡಿ ಮಾಲಕರಿಗೆ ಈ ಕುರಿತು ಸೂಚನೆ ನೀಡಲಾಗಿತ್ತು. ಆದರೆ ಇದುವರೆಗೆ ಅಂಗಡಿಗಳನ್ನು ತೆರವುಗೊಳಿಸದ ಕಾರಣ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಬ್ರಹ್ಮಾವರ ವಿಶೇಷ ತಹಶೀಲ್ದಾರ ಪ್ರದೀಪ್ ಕುರುಡೇಕರ್ ಅವರು ಪತ್ರಿಕೆಗೆ ತಿಳಿಸಿದರು.
ಸೂಚನೆ ನೀಡಿಲ್ಲ ಎಂದು
ತೆರವಿಗೆ ಪ್ರತಿರೋಧ
ನಾನು ಹತ್ತಾರು ವರ್ಷಗಳಿಂದ ಇಲ್ಲಿ ವ್ಯವಹಾರ ನಡೆಸ್ತುತ್ತಿದ್ದೇನೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಿಂದ ಬೀದಿ ವ್ಯಾಪಾರಿ ಎನ್ನುವ ಕಾರ್ಡ್ ಕೂಡ ಪಡೆದಿದ್ದೇನೆ. ಇದುವರೆಗೆ ಅಂಗಡಿ ತೆರವುಗೊಳಿಸುವಂತೆ ನನಗೆ ಯಾವುದೇ ನೊಟೀಸು ನೀಡಿಲ್ಲ. ಈಗ ಏಕಾ-ಏಕಿ ಕ್ರಮಕ್ಕೆ ಮುಂದಾಗಿರುವುದು ಅನ್ಯಾಯ, ಬಡಪಾಯಿಯಾದ ನನಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಅಂಗಡಿ ಮಾಲಕ ಗೋಪಾಲ ಶ್ರೀಯಾನ್ ತೆರವು ಸಂದರ್ಭ ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ಅಕ್ರಮ ಕಟ್ಟಡಗಳ ತೆರವಿಗೆ ನೊಟೀಸು ನೀಡುವ ಕ್ರಮವಿಲ್ಲ, ಮೌಖೀಕವಾಗಿ ಹಲವು ಬಾರಿ ತಿಳಿಸಲಾಗಿದೆ ಎಂದು ವಿಶೇಷ ತಹಶೀಲ್ದಾರರು ತಿಳಿಸಿ ಅಂಗಡಿ ತೆರವು ನಡೆಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್‌ಸದಸ್ಯೆ ಸುಲತಾ ಹೆಗ್ಡೆ, ರಾಜು ಪೂಜಾರಿ, ದಿನೇಶ ಬಂಗೇರ, ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಟuಲ ಪೂಜಾರಿ ಮುಂತಾದವರು ತೆರವು ಕಾರ್ಯದ ಕುರಿತು ತಹಶೀಲ್ದಾರರಿಂದ ಮಾಹಿತಿ ಪಡೆದರು.
ಕೋಟದ ಕಂದಾಯ ಅಧಿಕಾರಿ ಚಂದ್ರಹಾಸ್ ಬಂಗೇರ, ವಿ.ಎ. ಶರತ್ ಶೆಟ್ಟಿ, ಅವಿನಾಶ್, ಸರ್ವೆ ಅಧಿಕಾರಿ ಸತೀಶ್ ಹಾಗೂ ಕೋಟ ಪೊಲೀಸರು ಉಪಸ್ಥಿತರಿದ್ದರು.
ಎಲ್ಲರಿಗೂ ಒಂದೇ ಕಾನೂನು ಇರಲಿ
ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಸಂದರ್ಭ ಜಿಲ್ಲೆಯಲ್ಲಿ ಅನೇಕ ಸ್ಥಳವನ್ನು ಪರಿಹಾರ ನೀಡಿ ವಶಕ್ಕೆ ಪಡೆಯಲಾಗಿದೆ. ಆದರೆ ಚತುಷ್ಪಥ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ವಶಪಡಿಸಿಕೊಂಡ ಜಾಗದಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆ ಇದುವರೆಗೆ ಮುಂದಾಗಿಲ್ಲ. ಹೀಗಾಗಿ ಹಲವು ಕಡೆ ಸಾರ್ವಜನಿಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ.
ದೊಡ್ಡ-ದೊಡ್ಡ ಕಟ್ಟಡಗಳ ಮೇಲೆ ಕ್ರಮಕೈಗೊಳ್ಳದೆ, ಸಾಸ್ತಾನದಲ್ಲಿ ಮೂರು ಮಂದಿ ಬಡ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವುದು ಸರಿಯಲ್ಲ. ಸಹಾಯಕ ಕಮಿಷನರ್ ಅವರು ಕಾನೂನು ಪ್ರಕಾರವೇ ಈ ಕ್ರಮಕೈಗೊಂಡಿದಲ್ಲಿ ಶೀಘ್ರ ಹೆದ್ದಾರಿ ಪಕ್ಕದಲ್ಲಿರುವ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವಿಗೆ ಆದೇಶ ನೀಡಬೇಕು ಎಂದು ಸಾಲಿಗ್ರಾಮ ಪ.ಪಂ.ಸದಸ್ಯೆ ಸುಲತಾ ಹೆಗ್ಡೆ ಮತ್ತು ಐರೋಡಿ ಗ್ರಾ.ಪಂ. ಅಧ್ಯಕ್ಷ ಮೊಸೆಸ್ ರೋಡಿಗ್ರಸ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.