ವೃತ್ತಿಯಲ್ಲಿ ಸೆಂಟ್ರಿಂಗ್ ಕಾರ್ಮಿಕ, ಛಲಬಿಡದೆ ಆದ ಕ್ರೀಡಾ ಸಾಧಕ
Team Udayavani, Feb 22, 2017, 5:11 PM IST
ಕೋಟ: ಸಾಧಿಸುವ ಛಲವಿದ್ದರೆ ಸಾಧಕನಿಗೆ ಅಸಾಧ್ಯ ಯಾವುದೂ ಇಲ್ಲ ಎನ್ನುವ ಮಾತಿದೆ. ಇದಕ್ಕೊಂದು ಉತ್ತಮ ಉದಾಹರಣೆ ಉಡುಪಿ ತಾಲೂಕಿನ ಸಾಸ್ತಾನದ ನಿವಾಸಿ ಪಾಂಡೇಶ್ವರ ಗಣೇಶ ಕುಮಾರ್. ಈತ ಕಡು ಬಡತನದಲ್ಲಿ ಹುಟ್ಟಿ ಬೆಳೆದು, ಕೂಲಿ ಕೆಲಸ ಮಾಡುತ್ತ ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲದೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಬೆಳೆದು ನಿಂತಿದ್ದಾನೆ. ಇದೇ ಫೆ. 21ರಿಂದ ಫೆ. 26ರ ವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಮಾಸ್ಟರ್ ಆ್ಯತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ವನ್ನು ಪ್ರತಿನಿಧಿಸಲಿದ್ದಾರೆ.
ಹಳ್ಳಿಯೊಂದರಲ್ಲಿ ಬಡತನದಲ್ಲಿ ಹುಟ್ಟಿ ಬೆಳೆದ ಈ ಯುವಕ ರಾಷ್ಟ್ರಮಟ್ಟಕ್ಕೆ ತನ್ನನ್ನು ಪರಿಚಯಿಸಿಕೊಂಡ ಬಗೆ ಎಲ್ಲರಿಗೂ ಮಾದರಿಯಾದದ್ದು.
ಬಾಲ್ಯದಿಂದ ಕ್ರೀಡೆ ಈತನ ಹವ್ಯಾಸ
ಗಣೇಶ ಅವರಿಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡ ಬೇಕು ಎನ್ನುವ ಹಂಬಲವಿತ್ತು. ಹೀಗಾಗಿ ಪಾಂಡೇಶ್ವರ ಹಿ.ಪ್ರಾ. ಶಾಲೆ, ಮಾಬು ಕಳದ ಚೇತನಾ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಓಟ, ಹೈಜಂಪ್, ಲಾಂಗ್ ಜಂಪ್ ಹೀಗೆ ಎಲ್ಲ ವಿಧದ ಕ್ರೀಡೆಯಲ್ಲೂ ಜಿಲ್ಲಾಮಟ್ಟ, ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದರು. ಆದರೆ ಬಡತನದ ಕಾರಣದಿಂದ ಎಸೆಸೆಲ್ಸಿಯ ಅನಂತರ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ಸಂಸಾರವನ್ನು ನೋಡಿಕೊಳ್ಳುವ ಸಲುವಾಗಿ ಶಾಲೆ ತ್ಯಜಿಸಿ ಸೆಂಟ್ರಿಂಗ್ ಕೆಲಸಕ್ಕೆ ಸೇರಿಕೊಂಡ. ಇದರಿಂದಾಗಿ ಕ್ರೀಡೆಯಲ್ಲಿ ಏನಾದರು ಸಾಧಿಸಬೇಕೆನ್ನುವ ಕನಸು ಕೂಡ ಅರ್ಧಕ್ಕೆ ನಿಂತಿತು.
ಶಿಕ್ಷಣದ ಕನಸು ಕಮರಿದರೂ
ಸಾಧನೆಯ ಆಸೆ ಬಾಡಲಿಲ್ಲ
ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸೆಟ್ರಿಂಗ್ ಕೆಲಸಕ್ಕೆ ಸೇರಿದ ಈತನಿಗೆ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಬಯಕೆ ಸದಾ ಹಸಿರಾಗಿತ್ತು. ಹೀಗಾಗಿ ಅವಕಾಶ ಸಿಕ್ಕಾಗ ದಸರಾ ಇನ್ನಿತರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದರು. ಈತನ ಪ್ರತಿಭೆ ಗಮನಿಸಿದ ಸ್ನೇಹಿತರು ಹಾಗೂ ಊರಿನವರು ಪ್ರೋತ್ಸಾಹದ ಮಾತನಾಡಿ ಹುರಿದುಂಬಿಸಿದರು.
ಆ್ಯತ್ಲೆಟಿಕ್ಸ್‌ನಲ್ಲಿ ಮೊದಲ
ಪ್ರಯತ್ನದಲ್ಲೇ ಚಿನ್ನದ ಸಾಧನೆ
ಸ್ನೇಹಿತರ ಸಲಹೆ ಮೇರೆಗೆ ಈ ಬಾರಿ ಡಿಸೆಂಬರ್ 2016ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಆ್ಯತ್ಲೆಟಿಕ್ಸ್ ಕ್ರೀಡೆಯಲ್ಲಿ ಭಾಗವಹಿಸಿದ ಇವರು ಮೊದಲ ಪ್ರಯತ್ನದಲ್ಲೇ ನೂರು, ಇನ್ನೂರು, 400 ಮೀ. ಓಟದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಹಾಗೂ ಫೆ. 21ರಿಂದ ಫೆ. 26ರ ವರೆಗೆ ಹೈದರಬಾದ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಮಾಸ್ಟರ್ ಆ್ಯತ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಏಕಲವ್ಯನಂಥ ಸಾಧಕ
ಇಂತಹ ಸಾಧನೆ ಮಾಡಿದ ಗಣೇಶಗೆ ಯಾರೂ ಗುರುಗಳಿಲ್ಲ. ಯೂಟ್ಯೂಬ್, ಗೂಗಲ್ ಮುಂತಾದ ಸಾಮಾಜಿಕ ತಾಣಗಳಲ್ಲಿ ವಿಶ್ವಮಟ್ಟದ ಸಾಧಕರ ಚಲನವಲನಗಳನ್ನು ಗಮನಿಸಿ ಅವರನ್ನು ಅನುಕರಿಸುತ್ತ ತರಬೇತಿ ಪಡೆದು ಈ ಸ್ಥಾನಕ್ಕೆ ತಲುಪಿದ್ದಾನೆ.
ಬೇಕಿದೆ ಸಾಧಕನಿಗೆ ಸಹಕಾರದ ಶ್ರೀರಕ್ಷೆ
ಗಣೇಶರ ಕ್ರೀಡಾ ಜೀವನದ ಮುಂದಿನ ಹಂತ ಸ್ವಲ್ಪ ಮಟ್ಟಿಗೆ ಕಷ್ಟಕರವಾಗಿದೆ. ಯಾಕೆಂದರೆ ರಾಷ್ಟ್ರ, ಅಂತರ್ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ತರಬೇತಿ, ತರಬೇತುದಾರರ ಅಗತ್ಯವಿರುತ್ತದೆ ಹಾಗೂ ಫಿಟ್‌ನೆಸ್ ಕಾಪಾಡಿಕೊಳ್ಳುವುದು, ಉತ್ತಮ ಆಹಾರ ಸೇವಿಸುವುದು ಅವಶ್ಯವಿರುತ್ತದೆ. ಇದುವರೆಗೆ ತನ್ನದೇ ಹಣದಲ್ಲಿ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದ ಇವರಿಗೆ ಹೆಚ್ಚಿನ ಹಣಕಾಸು ಕೂಡ ಅಗತ್ಯ. ಹೀಗಾಗಿ ಪ್ರೋತ್ಸಾಹವಿಲ್ಲ ಎನ್ನುವ ಕಾರಣಕ್ಕೆ ಇಂತಹ ಕ್ರೀಡಾಪ್ರತಿಭೆ ಬಾಡಬಾರದು. ಈ ಕ್ರೀಡಾಪಟುವಿಗೆ ಕ್ರೀಡಾಭಿಮಾನಿಗಳ ಸಹಕಾರ ಅಗತ್ಯವಿದೆ. ಸಹಕಾರ ನೀಡುವವರು 9945413990 ಸಂಪರ್ಕಿಸಬಹುದು.
ಮಾಸ್ಟರ್ ಆ್ಯತ್ಲೆಟಿಕ್ಸ್‌ಗಳಿಗೆ ಯಾಕಿಲ್ಲ ಸರಕಾರದ ನೆರವು?
ನಮ್ಮ ಆಡಳಿತ ವ್ಯವಸ್ಥೆ ಕ್ರೀಡೆಗೆ ಸೂಕ್ತ ಪ್ರೋತ್ಸಾಹ ನೀಡುತ್ತಿಲ್ಲ ಎನ್ನುವ ಮಾತು ಟೀಕಾಕಾರರಿಂದ ಆಗಾಗ ಕೇಳಿಬರುತ್ತಿರುತ್ತದೆ. ಮಾಸ್ಟರ್ ಆ್ಯತ್ಲೆಟಿಕ್ಸ್ ಮಟ್ಟಿಗೆ ಈ ಮಾತು ಸತ್ಯ ಕೂಡ. ಯಾಕೆಂದರೆ ರಾಜ್ಯ, ರಾಷ್ಟ್ರ, ಅಂತರ್ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ತೆರಳುವ ಕ್ರೀಡಾಪಟುಗಳಿಗೆ ಸರಕಾರದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ, ಕಡೇ ಪಕ್ಷ ಮೂಲಸೌಕರ್ಯ ನೀಡುವಲ್ಲಿ ಕೂಡ ಗಮನಹರಿಸುತ್ತಿಲ್ಲ ಎನ್ನುವುದು ಕ್ರೀಡಾಪಟುಗಳ ನೋವಿನ ನುಡಿಯಾಗಿದೆ. ಈ ಕುರಿತು ನಮ್ಮ ಕ್ರೀಡಾಸಚಿವರು ಗಮನಹರಿಸಿ ಆ್ಯತ್ಲೆಟಿಕ್ ಕ್ರೀಡಾಪಟುಗಳಿಗೆ ಸರಕಾರದಿಂದ ಸೂಕ್ತ ಸಹಕಾರ ನೀಡುವ ಅಗತ್ಯವಿದೆ.
ವಿಶ್ವಮಟ್ಟದ ಸಾಧನೆ ನನ್ನ ಆಸೆ
ಕ್ರೀಡೆಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬೇಕು ಎನ್ನುವುದು ನನ್ನ ಬಾಲ್ಯದ ಕನಸು. ಆದರೆ ಬಡತನದಿಂದ ಶಾಲಾ ಅವಧಿಯಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ಮಾಸ್ಟರ್ ಆ್ಯತ್ಲೆಟಿಕ್ಸ್ ಮೂಲಕ ಆ ಸಾಧನೆ ಮಾಡುವ ಹಂಬಲದಲ್ಲಿದ್ದೇನೆ. ಮೊದಲ ಪ್ರಯತ್ನದಲ್ಲೇ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಕ್ರೀಡಾಭಿಮಾನಿಗಳು ಸಹಕಾರ ನೀಡಿದರೆ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸುತ್ತೇನೆ ಎನ್ನುವ ಭರವಸೆ ಇದೆ.
– ಗಣೇಶ ಪಾಂಡೇಶ್ವರ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟು
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.