ಈ ಜಗವೇ ನಾಟಕರಂಗ
Team Udayavani, Feb 24, 2017, 3:50 AM IST
ಕಾಲೇಜು ಜೀವನದಲ್ಲಿ ಏನು ಮಾಡಿದಿರೆಂದು ಯಾರಾದರೂ ನಾಲ್ಕು ಯುವಜನರನ್ನು ಹಿಡಿದು ಕೇಳಿ. ಉತ್ತರ ನಿರೀಕ್ಷಿತ. “ಫ್ರೆಂಡ್ಸ್, ಗಮ್ಮತ್ತು, ಕ್ಲಾಸ್ ಬಂಕ್, ಕೆಫೆಗಳಿಗೆ ಸುತ್ತಾಟ, ಸಿನೆಮಾ’ ಇತ್ಯಾದಿ. ಇವೆಲ್ಲ ಇಲ್ಲದೆ ಕಾಲೇಜು ಜೀವನವನ್ನು ಯೋಚಿಸಲೂ ಸಾಧ್ಯವಿಲ್ಲ. ಇದೇ ಪ್ರಶ್ನೆಯನ್ನು ನನ್ನಲ್ಲಿ ನೀವು ಕೇಳಿದರೆ ನಾನು ಇದೇ ಪಟ್ಟಿಯಲ್ಲಿ ಬಾಯಿಪಾಠ ಹೊಡೆದವರಂತೆ ಹೇಳಿ, ಮತ್ತೂಂದನ್ನು ಸೇರಿಸುತ್ತೇನೆ. “ನಾಟಕ ನೋಡುವುದು’. ನಾಟಕ ನೋಡುವವರು, ಮಾಡುವವರನ್ನು ಕೀಳಾಗಿ ನೋಡುವ ಒಂದು ವರ್ಗವೇ ಇದೆ. “ಜೀವನವನ್ನು ಹಗುರವಾಗಿ ತೆಗೆದುಕೊಂಡವರು’, “ಕೆಲಸ ಇಲ್ಲದವರು’, “ಗೊತ್ತುಗುರಿ ಇಲ್ಲದವರು’ ಅಂತೆಲ್ಲ ಬಿರುದುಗಳಿವೆ. ಇರಲಿ ಒಪ್ಪಿಕೊಳ್ಳೋಣ. ಅಂಥದ್ದೇನಿದ್ದರೂ ಅವರೆಲ್ಲಾ ಮನುಷ್ಯರೆ ತಾನೆ? ಅದು ಮುಖ್ಯ.
ನನ್ನನ್ನು ಸೇರಿಸಿ, ನನ್ನ “ನಾಟಕ ನೋಡುವ’ ತಂಡದಲ್ಲಿ ಒಟ್ಟು ಮೂರು ಜನ ಸದಸ್ಯರು. ಮೈಯೆಲ್ಲಾ ಕಣ್ಣಾಗಿ ನ್ಯೂಸ್ ಪೇಪರ್, ಸೋಶಿಯಲ್ ಮೀಡಿಯಾ ನೋಡುತ್ತಾ ಇರುವುದು. ಯಾವುದಾದರೊಂದು ನಾಟಕ ಇದೆಯೆಂದು ಗೊತ್ತಾಯಿತೊ… ಸರಿ… ಒಂದು ಬ್ಯಾಗ್ ಹೆಗಲಿಗೇರಿಸಿಕೊಂಡು, ಹೊತ್ತಾದರೆ ರಿಕ್ಷಾಗೆ ಇರಲಿ ಅಂತ ನೂರು ರೂಪಾಯಿ ಹಿಡಿದುಕೊಂಡು ಹೊರಡುವುದು. ತುಂಬಾ ಮುಂದೆಯೂ ಅಲ್ಲದ, ಹಿಂದೆಯೂ ಅಲ್ಲದ ಸೀಟುಗಳಲ್ಲಿ ಕುಳಿತು ಒಡ್ಡೋಲಗ ಕೊಟ್ಟೆವೆಂದರೆ ಯಾವ ಬ್ರಹ್ಮನಿಗೂ ನಮ್ಮನ್ನು ಎಬ್ಬಿಸಲು ಸಾಧ್ಯವಿಲ್ಲ. ಎಷ್ಟೇ ದೊಡ್ಡ ವಿಐಪಿ ಬಂದರೂ ನಮ್ಮ ಮುಖದ ರಾಜಗಾಂಭೀರ್ಯ ಮಾಸುವುದಿಲ್ಲ. ಆದರೆ ಅದೇ ಯಾವತ್ತೋ ನೋಡಿ ಇಷ್ಟವಾದ ನಟ-ನಟಿ ಬಂದರೆ, ಎನರ್ಜಿ ಸಿಕ್ಕರೂ ಚಲಿಸಲಾಗದೆ ಚಡಪಡಿಸುತ್ತಿರುವ ಎಲೆಕ್ಟ್ರಾನುಗಳಂತೆ ನಮ್ಮ ನಮ್ಮ ಕಕ್ಷೆಯಲ್ಲಿಯೇ ಕೂತು ಕಕಮಕ ಗುಟ್ಟುತ್ತೇವೆ.
ನಾಟಕ ಅಂದ್ರೆ ಆರು ಗಂಟೆಗೆ ಸರಿಯಾಗಿ ಒಂಭತ್ತು ಗಂಟೆಗೆ ಮುಗಿದರೂ, ಸಿಕ್ಕ ಬಸ್ಸು ಹತ್ತಿ ಮನೆಗೆ ಬರುವಾಗ ಹೃದಯದಲ್ಲಿ ಒಂದಿನಿತೂ ಭಯವಿಲ್ಲ, ಯಾಕೆ ಹೇಳಿ? ನೋಡಿದ ನಾಟಕದ ಗುಂಗಿನಲ್ಲಿಯೇ ಇರುವುದರಿಂದ ದಾರಿಯಲ್ಲಿ ಏನು ಆಯಿತು, ಏನು ಹೋಯಿತು ಎಂಬುವುದೇ ಗೊತ್ತಾಗುವುದಿಲ್ಲ.
ಮೊದಮೊದಲು ಮಾಡಿದ ನಾಟಕಗಳನ್ನೊಮ್ಮೆ ನೆನಪಿಸಿಕೊಳ್ಳಿ. ಒಟ್ಟಾರೆ ಅಂಗಿ ಹಾಕಿಕೊಂಡು, ವಿಚಿತ್ರ ವೇಷ ಕಟ್ಟಿಕೊಂಡು, ತೀರಾ ಇತ್ತೀಚಿನ ಹಾಡಿ ಕುಣಿಯುತ್ತಾ, ಪಂಚಿಂಗ್ ಡೈಲಾಗ್ ಹೇಳುತ್ತಾ, ಸೇರಿರುವವರನ್ನೆಲ್ಲಾ ನಗಿಸಿ, ಮರುದಿವಸ ಎಲ್ಲರ ಬಾಯಿಂದ ಹೊಗಳಿಸಿಕೊಂಡರೆ ಆಯಿತು, ಜನ್ಮ ಸಾರ್ಥಕ. ನಾಟಕ ಅಂದ್ರೆ ಹೀಗೇನೆ, ಇಷ್ಟೇನೆ ಅಂತಂದುಕೊಂಡಿದ್ದ ಕಾಲ. ಒಮ್ಮೆಲೆ ಕಣ್ಣು ತೆರೆಸಿದ್ದು ಆಧುನಿಕ ರಂಗಭೂಮಿ. “”ನಾಟಕ ಅಂದ್ರೆ ಹೀಗೆಲ್ಲ ಉಂಟಾ? ಇಷ್ಟೆಲ್ಲಾ ಉಂಟಾ?” ಅಂತ ಆಶ್ಚರ್ಯ ಪಡುವಂತೆ ಮಾಡಿತು. ನಾಟಕ ಅಂದ್ರೆ, “ನಾಲ್ಕು ಕಾಮಿಡಿ ಡೈಲಾಗ್, ಕೊನೆಗೊಂದು ಸಂದೇಶ, ಎರಡನ್ನು ಜೋಡಿಸಲಿಕ್ಕೆ ಒಂದು ಕಥೆ’ ಅಂತನ್ನುವ ಕಲ್ಪನೆ ಕಿತ್ತೂಗೆದು, “ಕಥೆಯ ಹಂಗಲ್ಲಿ ನಾಟಕ ಸಾಗೋದಲ್ಲ, ನಾಟಕ ನದಿ ಹರಿದಂತೆ. ಸಿಕ್ಕಷ್ಟನ್ನು ಬಾಚಿಕೊಳ್ಳಬೇಕು. ಎಷ್ಟು ಸಿಕ್ಕಿತೋ ಅಷ್ಟೇ ಕತೆ. ಒಬ್ಬೊಬ್ಬರಿಗೆ ಒಂದೊಂದು ಕಥೆ ಸಿಕ್ಕಿದರೂ ಸಿಕ್ಕೀತು. ಎಲ್ಲರಿಗೂ ಒಂದೇ ಕಥೆ ಸಿಕ್ಕಿದರೂ ಆದೀತು. ಏನೂ ಸಿಗದಿದ್ದರೂ ಪರವಾಗಿಲ್ಲ. ನದಿಯ ಹತ್ತಿರ ಹೋದ ನೆನಪಾದರೂ ಉಳಿದುಕೊಳ್ಳುತ್ತಲ್ವ ಕೊನೆಗೆ, ಹಾಗೆಯೇ ನಾಟಕ’ ಅನ್ನೋ ಪಾಠ ಕಲಿಸಿದ್ದು ಆಧುನಿಕ ರಂಗಭೂಮಿ. ನಾಟಕ ನೋಡ್ಬೇಕು ಮಾಡ್ಬೇಕು ಅನ್ನುವ ತುಡಿತ ಹುಟ್ಟಿದ್ದು ಅಲ್ಲಿಂದ.
ಡಿಗ್ರಿಗೆ ಬಂದ ಮೊದಲ ವರ್ಷದಲ್ಲಿ ನೋಡಿದ್ದು ಮಂಜುಳಾ ಸುಬ್ರಹ್ಮಣ್ಯರ ಊರ್ಮಿಳೆ. “ಆಹಾ! ಏಕವ್ಯಕ್ತಿ ನಾಟಕ ಅಂದ್ರೆ ಹೇಗಿರಬೇಕು’ ಅಂತ ಸಿಕ್ಕಸಿಕ್ಕವರಿಗೆ, ಅವರಿಗೆ ಕೇಳಲು ಮನಸ್ಸಿಲ್ಲದಿದ್ದರೂ ಹೇಳಿದ್ದೇ ಹೇಳಿದ್ದು. ಅದೇ ಉತ್ಸಾಹದಲ್ಲಿ ಕಾಲೇಜಿನಲ್ಲಿಯೂ ಕೆಲವು ಪ್ರಯೋಗ, ಕಸರತ್ತು ನಡೆಸಿದ್ದು ಉಂಟು. ನಂತರ ಶುರುವಾಯಿತು ಹುಚ್ಚು. ಮೊಬೈಲಿನಲ್ಲಿ ನೀನಾಸಂ, ರಂಗಾಯಣಗಳನ್ನು ಗೂಗಲಿಸುತ್ತಾ ಕೂರುವುದು. “ರಂಗಶಂಕರ’ವೆಂದರೆ ಇನ್ನು ಕೈಗೆ ಸಿಗದ ಕ್ರಿಸ್‌ಮಸ್ ಉಡುಗೊರೆಯ ಬೆರಗು. ಪೇಪರ್‌ನಲ್ಲಿ ಬರುವ ನಾಟಕದ ವಿಮರ್ಶೆಗಳನ್ನು ಓದುವುದು, ಚಿತ್ರಗಳನ್ನು ಕತ್ತರಿಸಿಡುವುದು, ಸಂಚಿ ಫೌಂಡೇಶನ್‌ನಲ್ಲಿ ಡೇಟಾ ಮುಗಿಯುವ ಭಯದಲ್ಲೇ ನೀನಾಸಂ ನಾಟಕಗಳನ್ನು ನೋಡುವುದು, ಯೂಟ್ಯೂಬ್‌ನಲ್ಲಿ ಅಕ್ಷಯಾಂಬರ ಟ್ರೇಲರ್ ನೋಡಿ ನಾಟಕ ಹೇಗಿರುವುದೋ ಅಂತ ಊಹಿಸುವುದು ಇತ್ಯಾದಿ. ಎಲ್ಲೆಲ್ಲ ನಾಟಕ ಇದೆ ಅಂತ ಮೈಯೆಲ್ಲಾ ಕಣ್ಣಾಗಿ ನ್ಯೂಸ್‌ಪೇಪರ್‌ನಲ್ಲಿ ನೋಡುವುದು, ಸುದ್ದಿ ಸಿಕ್ಕಿದ ಕೂಡಲೇ “ಯಾರಾದ್ರೂ ಬರ್ತೀರಾ?’ ಅಂತ ಫ್ರೆಂಡ್ಸ್ ಸರ್ಕಲ್‌ನಲ್ಲಿ ಕೇಳುವುದು, ಯಥಾಪ್ರಕಾರ ಅವರ ಗೃಹಖಾತೆಯಿಂದ ವಿಘ್ನ ಬಂದು, ನಾವು ಮೂವರೇ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಡುವುದು. ಒಮ್ಮೆ ರಂಗಾಯಣದ ಒಂದು ನಾಟಕಕ್ಕೆ ನಮ್ಮ ಗಣಿತದ ಶಿಕ್ಷಕಿಯನ್ನು ಪುಸಲಾಯಿಸಿ, ಕರೆದುಕೊಂಡು ಹೋದದ್ದೊಂದು ಅದ್ಭುತ ನೆನಪು.
ನಾಟಕ ನೋಡಿದ್ದಷ್ಟಕ್ಕೇ ಮುಗಿಯಲಿಲ್ಲ. ದಾರಿಯುದ್ದಕ್ಕೂ ಬಸ್ಸಿನಗಲಕ್ಕೂ ನಾಟಕದ ಬಗ್ಗೆ ಚರ್ಚೆ. ಬಸ್ಸಿನಿಂದ ಇಳಿಯುವಾಗಲೂ, ಕೊನೆಯ ಮೆಟ್ಟಿಲಲ್ಲಿ ನಿಂತು ಸಾಧ್ಯವಾದಷ್ಟು ಹೇಳಿ, ನಾಳೆ ಮುಂದುವರಿಸಲಿಕ್ಕಿದೆ ಅಂತ ಸೂಚನೆ ನೀಡಿ ಇಳಿಯುವುದು. ಮರುದಿನ ತರಗತಿಯಲ್ಲಿ “ಹೇಗಿತ್ತು ನಾಟಕ?’ ಅಂತ ಕೇಳುವ ಒಂದಿಬ್ಬರಾದರೂ ಸಿಗುತ್ತಾರೆ. ಸಿಕ್ಕಿದರೊ? “ಸಿಕ್ಕಿದರು’ ಅಂತ ಒಂದೇ ಹಿಡಿತಕ್ಕೆ ಅವರ ಕಿವಿ ನಮ್ಮ ಉಪಯೋಗಕ್ಕಿರುವ ಸೊತ್ತು ಅಂತ ಭಾವಿಸಿ ಕೊರೆಯಲಾರಂಭಿಸುತ್ತೇವೆ. ನಾಟಕದ ಮೊದಲನೇ ಬೆಲ್‌ನಿಂದ ಹಿಡಿದು, ಕೊನೆಯ ಹಂತದ ಪಾತ್ರ ಪರಿಚಯ ತನಕ ಸಿಕ್ಕ ಸ್ವಲ್ಪ ಸಮಯದಲ್ಲಿ ಅವರ ತಲೆಗೆ ಹಸ್ತಾಂತರಿಸುತ್ತೇವೆ. ನಾಟಕದ ಬಗೆಗೆ ಹೇಳುವುದರ ಜೊತೆಜೊತೆಗೆ ಒಂಭತ್ತು ಒಂಭತ್ತೂವರೆ ಹೊತ್ತಿಗೆ ಕುಡುಕರು ತುಂಬಿರುವ ಬಸ್ಸು ಹತ್ತಿ ಬಂದ ನಮ್ಮ ಧೈರ್ಯದ ಬಗ್ಗೆ ಮಹಿಳಾ ಸಬಲೀಕರಣದ ಬಗ್ಗೆ ಹೇಳುವುದು ಮತ್ತೂ ಹೆಮ್ಮೆಯ ವಿಷಯ.
ಇತ್ತೀಚೆಗಷ್ಟೇ ರಂಗಾಯಣ ಮಂಗಳೂರಿಗೆ ಬಂದಿದ್ದಾಗ ನಡೆದ ಮೂರೂ ನಾಟಕಗಳನ್ನು ನೋಡಿದೆವು. ಮೊನ್ನೆ ಮೊನ್ನೆ ಅರೆಹೊಳೆ ನಾಟಕೋತ್ಸವದಲ್ಲಿ ನೀನಾಸಂನ ನಾಟಕಗಳನ್ನು ನೋಡಿದೆವು. ಕಲಾವಿದರ ಹೆಸರಿನ ಜೊತೆ ಸುಳ್ಯ, ಬೆಳ್ತಂಗಡಿ, ಉಡುಪಿ ಅಂತ ಕೇಳಿದಾಗೆಲ್ಲ ಒಂದು ರೀತಿಯ ಖುಷಿ. ನೀನಾಸಂ, ರಂಗಾಯಣದವರು ಪ್ರಸ್ತುತಪಡಿಸುವ ನಾಟಕಗಳನ್ನು ಕುರಿತು ಚರ್ಚೆ ಮಾಡಲಿಕ್ಕೆ ಅಂತ ಒಂದು ತಂಡವೇ ಇದೆ ಕಾಲೇಜ್‌ನಲ್ಲಿ. ಕ್ಲಾಸ್‌ರೂಮ್, ಕ್ಯಾಂಟೀನ್, ಆಟದ ಮೈದಾನ, ಗೇಟ್ ಹೀಗೆ ಎಲ್ಲೆಂದರಲ್ಲಿ ಸ್ಫೂರ್ತಿ ಬಂದಲ್ಲಿ ನಿಂತು ಮಾತಾಡಿ, ಮಾತಾಡಿ, ಮಾತನಾಡುತ್ತಲೇ ಇರುವುದೂ ಒಂದು ಹುಚ್ಚು. ನಾಟಕ ನೋಡಿ ನೋಡಿ ಮರುಳಾದವರು ನಾವು. ನಾಟಕ ಮಾಡಿ ಮರುಳಾಗಲು ಮೈಸೂರಿನ ರಂಗಾಯಣಕ್ಕೆ ಹೋಗಿದ್ದೆವು. “ನಾವೂ ನಾಟಕ ಮಾಡಿದ್ದೇವೆ’ ಅನ್ನೋ ಹೆಚ್ಚುಗಾರಿಕೆಯೇನಲ್ಲ. ಅವಕಾಶ ಸಿಕ್ಕಿದ್ದು ವಿದ್ಯಾರ್ಥಿ ಜೀವನ ಪುಣ್ಯ. ಎಂಥೆಲ್ಲ ಮಹಾನ್ ಕಲಾವಿದರು ಆ ವೇದಿಕೆಯಲ್ಲಿ ಓಡಾಡಿದ್ದಾರೊ… ಅವರಿಟ್ಟ ಹೆಜ್ಜೆಯ ಮೇಲೆ ನಾವು ಅಂಬೆಗಾಲಿಟ್ಟು ನಾಟಕ ಮಾಡಿದ್ದೇವೆ ಅನ್ನೋ ಕಲ್ಪನೆಯೇ ಎಷ್ಟು ಖುಷಿ ಕೊಡುತ್ತೆ ಅಲ್ವ? ಜೀವನವಿಡೀ ಕಾಪಿಟ್ಟುಕೊಳ್ಳೋದಕ್ಕೆ ಇಂತಹ ಬೆಚ್ಚನೆಯ ಒಂದು ನೆನಪು ಸಾಲದೆ? ಬಿ.ವಿ. ಕಾರಂತರ ಕಲ್ಪನೆಯ ಕಿಂದರಿ ಜೋಗಿಯ ಬೃಹತ್ ಪ್ರತಿಮೆಯೆದುರು ನಿಂತು ತೆಗೆದ ಫೋಟೋ ಮೊಬೈಲ್ ಗ್ಯಾಲರಿಗೆ ಗತ್ತು ತಂದುಕೊಟ್ಟಿದೆ. ಅದನ್ನು ನೋಡಿದಾಗೆಲ್ಲ ಮನುಷ್ಯನಿಗಿರುವ ಅತ್ಯದ್ಭುತ ಕಲ್ಪನಾಶಕ್ತಿಯ ನೆನಪಾಗುತ್ತದೆ.
ಬದುಕಿನಲ್ಲಿ ಸಾವಿರ ಕಷ್ಟ , ನೋವು, ದುಃಖದುಮ್ಮಾನ, ಸಂಕಟಗಳಿದ್ದರೂ ಜೀವನ ಸಹ್ಯವಾಗುವುದು ಹೇಗೆ ಹೇಳಿ? ಅತ್ಯದ್ಭುತವಾದ ಕಲ್ಪನಾಶಕ್ತಿಯಿಂದ. ನಾಟಕ ಪರಿಪೂರ್ಣ ಅಂತನ್ನಿಸದೇ ಇರಬಹುದು. ಬೆಳಕು, ಸಂಗೀತ, ಪ್ರಬುದ್ಧತೆ ಅಂತ ವಿಮರ್ಶೆ ಮಾಡಬಹುದು. ಆದರೂ, ಯಾರೋ ಒಬ್ಬ ನಾಟಕಕಾರನ ಕಲ್ಪನೆಯನ್ನು , ನಿರ್ದೇಶನದ ಕಲ್ಪನೆಯ ಮೂಲಕ ತನ್ನದಾಗಿಸಿಕೊಂಡು ನೋಡುವವರ ಕಲ್ಪನೆಗೆ ಒಂದು ರೂಪ ಕೊಡ್ತಾನೆ ಕಲಾವಿದ. ಕೊನೆಗೂ ಕಲ್ಪನೆಯೆನ್ನುವುದೇ ಅತ್ಯದ್ಭುತ ಅಂತಾಯಿತಲ್ಲ.
ಮಂಗಳೂರಿನಲ್ಲಿ ಎಲ್ಲಾದರೂ ನೀನಾಸಂ, ರಂಗಾಯಣ ಅಥವಾ ಇನ್ನಾವುದೇ ರಂಗನಾಟಕ ಇದೆ ಅಂತ ಗೊತ್ತಾದರೆ, ಎಷ್ಟೇ ಆಲಸ್ಯವಾದರೂ, ಮಸ್ಸಿಲ್ಲದಿದ್ದರೂ, ಮನಸ್ಸು ಮಾಡಿಕೊಂಡು ಒಮ್ಮೆ ಬನ್ನಿ. ಯಥಾಪ್ರಕಾರ, ಮುಂದೆಯೂ ಅಲ್ಲದ ಹಿಂದೆಯೂ ಅಲ್ಲದ ಸೀಟುಗಳಲ್ಲಿ ಕುಳಿತು ನಾವು ಮೂವರು ಒಡ್ಡೋಲಗ ಕೊಟ್ಟಿರುತ್ತೇವೆ.
ಯಶಸ್ವಿನಿ, ಸೈಂಟ್ ಆ್ಯಗ್ನೆಸ್ ಕಾಲೇಜ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.