ಮಂಗಳೂರಿನಲ್ಲಿ”ಅಮೃತ ಸಂಗಮ’: ಪ್ರೇಮ ತುಂಬಿದ ಜೀವನದಿಂದ ನೆಮ್ಮದಿ: ಅಮ್ಮ
Team Udayavani, Feb 24, 2017, 11:15 AM IST
ಮಂಗಳೂರು: ಪ್ರೇಮ ತುಂಬಿದ ಜೀವನ ಮತ್ತು ನಿಸ್ವಾರ್ಥ ಮನೋಭಾವದಿಂದ ಶಾಂತಿ-ನೆಮ್ಮದಿ ದೊರೆಯಲು ಸಾಧ್ಯ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ-ಅಮ್ಮ-ಅವರು ನುಡಿದರು.
ಬೋಳೂರಿನ ಅಮೃತ ವಿದ್ಯಾಲಯಮ್‌ನಲ್ಲಿ ಅವರು ಅಮೃತ ಸಂಗಮ-2017 ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.
ಅಮ್ಮನ ಮಕ್ಕಳು ಎಂದರೆ ಸುಂದರವಾದ ವೈವಿಧ್ಯಮಯ ಪುಷ್ಪಗಳಂತೆ. ಪುಷ್ಪಗಳನ್ನು ಸೇರಿಸಿದಾಗ ಅದು ಸುಂದರ ಪುಷ್ಪ ಮಾಲೆಯಾಗಿ ಕಂಗೊಳಿಸುತ್ತದೆ. ಅಂತೆಯೇ, ಎಲ್ಲರೂ ಪ್ರೇಮ ವಿಶ್ವಾಸದಿಂದ ಸೇರಿಕೊಂಡಾಗ ಜಗತ್ತು ಸಂತಸಮಯವಾಗಿ ಪರಿವರ್ತನೆಯಾಗುತ್ತದೆ. ಪರಸ್ಪರ ಸೌಹಾರ್ದ ಈ ಬೆಸುಗೆಯ ಶಕ್ತಿ. ಮಂಗಳೂರು ಬಗ್ಗೆ ತನಗೆ ವಿಶೇಷ ಅಭಿಮಾನವಿದೆ ಎಂದರು.
ಜಗತ್ತು ಬದಲಾಗುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿದೆ. ಹೊಸ ಸಂಗತಿಗಳು ಸೇರ್ಪಡೆಯಾಗುತ್ತವೆ. ಆದರೆ, ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.ಶಾಂತಿಯುತ ಜೀವನಕ್ಕೆ ಬೇಕಾದ ಸಂಗತಿಗಳನ್ನು ಮಾತ್ರ ಆರಿಸಬೇಕು. ಆಧ್ಯಾತ್ಮಿಕ ಚಿಂತನೆ, ದೇವರ ಮೇಲಿನ ನಂಬಿಕೆ, ಗುರುಹಿರಿಯರ ಆಶೀರ್ವಾದಗಳಿಂದ ಈ ಆಯ್ಕೆ ಮಾಡುವ ಶಕ್ತಿ ಲಭಿಸುತ್ತದೆ ಎಂದರು.
ಸೇವಾ ಕೈಂಕರ್ಯ
ಸೇವಾ ಮನೋಭಾವವನ್ನು ಸರ್ವರೂ ರೂಢಿಸಿಕೊಳ್ಳಬೇಕು. ಸೇವಾ ಕೈಂಕರ್ಯ ಬದ್ಧತೆಯಾಗಬೇಕು. ಇದು ಕರ್ತವ್ಯವೂ ಹೌದು. ತನ್ಮೂಲಕ ಸದೃಢ ಸಮಾಜ ನಿರ್ಮಿಸಲು ಸಾಧ್ಯ. ಸಮಾಜ ಸೇವೆ, ದೀನರಿಗೆ ನೆರವು, ಸಂಕಷ್ಟಗಳಿಗೆ ಸ್ಪಂದನೆಯ ಭಾವನೆ ಹೊಂದಿರಬೇಕು. ಶಿಕ್ಷಣ, ಆರೋಗ್ಯ ಮತ್ತು ಪೂರಕ ಕಾರ್ಯಗಳಿಗೆ ಮುಂದಾಗಬೇಕು. ಈ ಅಂಶಗಳ ಬಗ್ಗೆ ಎಳೆಯರಲ್ಲಿ ತಿಳಿವಳಿಕೆ ಮೂಡಿಸಬೇಕು. ಪ್ರೀತಿ ಎಂಬ ಶಕ್ತಿಯನ್ನು ಜಗತ್ತಿನಾದ್ಯಂತ ಸಂಚಯನಗೊಳಿಸುವ ಕಾರ್ಯವನ್ನು ತಮ್ಮ ಮಠದ ಮೂಲಕ ನಡೆಸಲಾಗುತ್ತಿದೆ ಎಂದು ಅಮ್ಮ ಹೇಳಿದರು.
ಆದರ್ಶ: ಶ್ರೀಪಾದ್
ಮಾತಾ ಅಮೃತಾನಂದಮಯಿ ಅವರು ನಡೆಸುತ್ತಿರುವ ಸೇವಾ ಕಾರ್ಯಗಳು ಸಮಗ್ರ ಸಮಾಜಕ್ಕೆ ಆದರ್ಶ ಎಂದು ಪ್ರಧಾನ ಅತಿಥಿ ಭಾರತ ಸರಕಾರದ ಆಯುಷ್ ಇಲಾಖೆ ಸಹಾಯಕ ಸಚಿವ ಶ್ರೀಪಾದ್ ಎಸೊÕà ನಾಯಕ್ ಅವರು ಶ್ಲಾಘಿಸಿದರು.ಅಮ್ಮ ಅವರ ಮಾರ್ಗದರ್ಶನದಲ್ಲಿ ಮಠ ಸಹಿತ ಅವರ ಸಂಸ್ಥೆಗಳ ಸೇವಾ ಕಾರ್ಯಗಳನ್ನು ತಾನು ಸಮೀಪದಿಂದ ನೋಡಿ ತಿಳಿದಿದ್ದೇನೆ. ಈ ಕಾರ್ಯಗಳಿಗೆ ಸರ್ವರೂ ಸಹಕಾರ ನೀಡಬೇಕು. ಶಿಕ್ಷಣದ ಮೂಲಕ ಬಲಿಷ್ಠ ಭಾರತ ನಿರ್ಮಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕೂಡ ಬಹಳ ದೊಡ್ಡ ಕೊಡುಗೆಯನ್ನು ಅಮ್ಮ ನೀಡುತ್ತಿದ್ದಾರೆ. ಅವರ ಬದ್ಧತೆ ಅಪೂರ್ವ ಎಂದರು.
ಅಪೂರ್ವ: ಜ| ಶೆಟ್ಟಿ
ಶ್ರೀ ಅಮೃತಾನಂದಮಯಿ ಅವರು ಮನುಕುಲಕ್ಕೆ ಸಲ್ಲಿಸುತ್ತಿರುವ ಸೇವೆ, ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪೂರ್ವ ಎಂದು ಕರ್ನಾಟಕದ ಲೋಕಾಯುಕ್ತ ಜ| ಪಿ. ವಿಶ್ವನಾಥ ಶೆಟ್ಟಿ ಅಭಿನಂದಿಸಿದರು.
ಅಮ್ಮ ಅವರು ಸರಕಾರ ನಡೆಸಬೇಕಾದ ಕಾರ್ಯ ನಡೆಸುತ್ತಿದ್ದಾರೆ. ಪರಿಪೂರ್ಣವಾದ ಸಮಾಜ ನಿರ್ಮಾಣ ಅವರ ಆಶಯ. ಅಂತೆಯೇ, ಸರಕಾರದ ಕೆಲಸಗಳು ಪ್ರಾಮಾಧಿಣಿಕ, ಜನಪರವಾಗಿರುವಂತೆ ನೋಡಿಕೊಳ್ಳುವುದು ಲೋಕಾಯುಕ್ತರ ಕೆಲಸ. ಆಧ್ಯಾತ್ಮದ ಜತೆಯಲ್ಲಿ ಸಾಮಾಜಿಕ ಸೇವಾ ಕಾರ್ಯಗಳ ಕೊಡುಗೆ ಸಂತಸದಾಯಕ ಎಂದರು.
ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥರಾದ ಶ್ರೀ ಮಂಗಳಾಮೃತ ಚೈತನ್ಯ, ಸಚಿವ ಬಿ. ರಮಾನಾಥ ರೈ, ಮೇಯರ್ ಹರಿನಾಥ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಕ್ಯಾ| ಗಣೇಶ್ ಕಾರ್ಣಿಕ್ ಮತ್ತು ಜೆ.ಆರ್. ಲೋಬೋ, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಕರ್ಣಾಟಕ ಬ್ಯಾಂಕ್‌ನ ಚೀಫ್ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ಎಂ.ಎಸ್., ಎನ್. ಯೋಗೀಶ್ ಭಟ್, ಪ್ರೊ| ರವಿಚಂದ್ರನ್ ಬದ್ರಿನಾಥ್ ಕಾಮತ್, ಆತ್ಮಾರಾಮ್ ರೇವನ್‌ಕರ್, ಎಚ್. ಕುಮಾರ್, ನಿರ್ಮಲಾ ಕಾಮತ್, ಅಶೋಕನ್, ಸುಧಾಕರ ಶೆಟ್ಟಿ ಮುಂಡ್ಕೂರು, ವಾಮನ್ ಕಾಮತ್, ಡಾ| ಜೀವರಾಜ ಸೊರಕೆ, ಮಾಧವ ಸುವರ್ಣ, ಶ್ರೀನಿವಾಸ ದೇಶಪಾಂಡೆ, ಡಾ| ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.
ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷೆ ಶ್ರುತಿ ಸನತ್ ಹೆಗ್ಡೆ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ| ವೈ. ಸನತ್ ಹೆಗ್ಡೆ ವಂದಿಸಿದರು. ಡಾ| ಅಶೋಕ್ ಶೆಣೈ ನಿರ್ವಹಿಸಿದರು.
ಅಧ್ಯಾತ್ಮ-ಸೇವಾ ಸಂಗಮ!
ಮಂಗಳೂರಿನಲ್ಲಿ ಗುರುವಾರ ಜರಗಿದ ಶ್ರೀ ಮಾತಾ ಅಮೃತಾನಂದಮಯಿ ದೇವರ ಅಮೃತ ಸಂಗಮ ಕಾರ್ಯಕ್ರಮ ವಸ್ತುಶಃ ಅವರ ಭಜನೆ-ಸಂಕೀರ್ತನೆ-ಆಶೀರ್ವಚನ-ಭಕ್ತಾಭಿಮಾನಿಗಳಿಗೆ ಅಪ್ಪುಗೆಯ ಆಶೀರ್ವಾದದ ಸಂಗಮವಾಯಿತು. ಇದೇ ವೇಳೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಾದ ಅಂಗವಿಕಲರಿಗೆ ಗಾಲಿ ಕುರ್ಚಿಗಳ ವಿತರಣೆ, ಸ್ವತ್ಛ ಭಾರತ ಅಭಿಯಾನದ ಅಂಗವಾಗಿ ಶಾಲೆಗಳಿಗೆ ಮೂರು ಬಣ್ಣದ ಕಸದ ಬುಟ್ಟಿಗಳ ವಿತರಣೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಿಂಚಣಿ ವಿತರಣೆ, ಆಯುಷ್ ಕಿಟ್‌ಗಳ ವಿತರಣೆ ನಡೆಯಿತು.
ಅಮೃತಶ್ರೀ ಮಹಿಳಾ ಸಶಕ್ತೀಕರಣ ಯೋಜನೆಯಲ್ಲಿ ದೇಶಾದ್ಯಂತ ಮಹಿಳೆಯರಿಗೆ ಸೀರೆ ವಿತರಿಸುವ ಯೋಜನೆಗೆ ಇಲ್ಲಿ ಚಾಲನೆ ನೀಡಲಾಯಿತು.
ಚಿತ್ರಗಳು: ಸತೀಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.