ಮಚ್ಚಿನ ಪ್ರೌಢಶಾಲೆ: ಅರ್ಧದಲ್ಲಿ ನಿಂತ ಕಟ್ಟಡ ಕಾಮಗಾರಿ
Team Udayavani, Feb 25, 2017, 11:32 AM IST
ಮಡಂತ್ಯಾರು: ಇದು ಸರಕಾರಿ ಶಾಲೆ. ಆದರೆ ಉತ್ತಮ ಶಿಕ್ಷಣದ, ವಿದ್ಯಾರ್ಥಿಗಳ ಕೊರತೆ ಇಲ್ಲ. ಈಗ ಇರುವುದು ಕೊಠಡಿಗಳ ಕೊರತೆ !
ಬೆಳ್ತಂಗಡಿ ತಾಲೂಕಿನ ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಕೊಠಡಿ ಸಮಸ್ಯೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಶಾಲೆಯ ಹೊರಗಡೆ ಪಾಠ ಕೇಳುವ ಪರಿಸ್ಥಿತಿ ಉಂಟಾಗಿದೆ. ಕೊಠಡಿ ಕೊರತೆ ನೀಗಿಸುವ ಉದ್ದೇಶದಿಂದ ಎಸ್‌ಡಿಎಂಸಿ ಮತ್ತು ಊರಿನವರು ಕೈಗೆತ್ತಿಕೊಂಡ ಕೊಠಡಿ ನಿರ್ಮಾಣ ಕಾಮಗಾರಿ ಈಗ ಅನುದಾನದ ಕೊರತೆಯಿಂದಾಗಿ ಅರ್ಧದಲ್ಲಿ ನಿಂತಿದೆ. ಮೇಲಂತಸ್ತಿನ ಕೆಲಸ ಮೇಲೇರುತ್ತಿಲ್ಲ.
ವಿದ್ಯಾರ್ಥಿಗಳ ಆಶಾಕಿರಣ
ಮಚ್ಚಿನದಲ್ಲಿ ಮೊದಲು ಪ್ರಾಥಮಿಕ ಶಿಕ್ಷಣ ಮಾತ್ರ ಲಭ್ಯವಿತ್ತು. ಮಚ್ಚಿನ ಗ್ರಾಮ ಅಷ್ಟೇ ಅಲ್ಲದೆ ನೆರೆಹೊರೆಯ ಗ್ರಾಮಗಳ ವಿದ್ಯಾರ್ಥಿಗಳು ಕೂಡ ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಆದರೆ ಪ್ರೌಢಶಾಲಾ ಶಿಕ್ಷಣದ ಬೇಡಿಕೆ ಈಡೇರಲಿಲ್ಲ. ಪ್ರೌಢಶಿಕ್ಷಣಕ್ಕಾಗಿ ಮಡಂತ್ಯಾರು ಅಥವಾ ಪುಂಜಾಲಕಟ್ಟೆ ಶಾಲೆಗೆ ತೆರಳಬೇಕಾಗಿತ್ತು. ಸಂಚಾರ ವ್ಯವಸ್ಥೆ ಮತ್ತು ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಸೀಮಿತಗೊಳಿಸುವ ಅನಿವಾರ್ಯತೆ ಇತ್ತು. ಬಹುಜನರ ಬೇಡಿಕೆಯಂತೆ ಮಚ್ಚಿನ ಗ್ರಾಮಕ್ಕೆ 2007ರಲ್ಲಿ ಪ್ರೌಢಶಾಲೆ ಮಂಜೂರುಗೊಂಡು 2012ರಲ್ಲಿ ನೂತನ ಕಟ್ಟಡದಲ್ಲಿ ಕಾರ್ಯಾರಂಭಿಸಿತು. ಮೂರು ಕೊಠಡಿಗಳನ್ನು ಒಳಗೊಂಡಿದ್ದು 9 ಮತ್ತು 10ನೇ ತರಗತಿಗಳನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು ಒಂದು ಕೊಠಡಿಯಲ್ಲಿ 70 ಮಕ್ಕಳು ಕುಳಿತುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ಗ್ರಂಥಾಲಯ ಕೂಡ ಇಲ್ಲ. ಆಫೀಸು ಕೊಠಡಿಯನ್ನೇ ಎಲ್ಲದಕ್ಕೂ ಬಳಸುವಂತಾಗಿದೆ.
ಕಾಮಗಾರಿ ನಿಂತು 3 ವರ್ಷ
ಸ್ಥಳೀಯರ ಮತ್ತು ಆಸಕ್ತರ ಮುಂದಾಳತ್ವದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಯಿತು. ಎಸ್.ಇ.ಝಡ್.ನಿಂದ 5 ಲ.ರೂ., ತಾ.ಪಂ.ನಿಂದ 2 ಲ.ರೂ., ಧರ್ಮಸ್ಥಳದಿಂದ 50,000ರೂ. ಅನುದಾನ ದೊರಕಿದೆ. ಒಟ್ಟು 7.5 ಲ.ರೂ. ಅನುದಾನದಲ್ಲಿ ಸುಮಾರು 4.90 ಲ.ರೂ.ವೆಚ್ಚದ ಕಾಮಗಾರಿ ನಡೆದಿದೆ ಎಂದು ತಿಳಿದು ಬಂದಿದೆ. ಗೋಡೆ ನಿರ್ಮಾಣವಾಗಿ 2014ರಲ್ಲಿ ಕಾಮಗಾರಿ ನಿಂತಿದೆ. ಸುಮಾರು 3 ಲ. ರೂ. ಹಣ ಖಾತೆಯಲ್ಲಿದ್ದು ಮುಂದಿನ ಕಾಮಗಾರಿಗೆ ಅನುದಾನ ಸಾಕಾಗದೆ ಅರ್ಧದಲ್ಲಿ ನಿಂತಿದೆ. ಕಾಮಗಾರಿ ಪ್ರಾರಂಭದಲ್ಲಿ 15 ಲ.ರೂ. ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿತ್ತು. ಆದರಂತೆ ಇನ್ನೂ 7.5 ಲ.ರೂ. ಹಣ ಬೇಕಾಗಬಹುದು ಎಂಬುದು ಹೆತ್ತವರ ಲೆಕ್ಕಾಚಾರ.
ಕಟ್ಟುವುದೋ ಕೆಡವುದೋ?
ಕಾಮಗಾರಿ ಅರ್ಧದಲ್ಲೇ ನಿಂತಿರುವುದರಿಂದ ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ನಿಲ್ಲುತ್ತದೆ. ಇದರಿಂದ ಕೆಳಗಿನ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತದೆ. ಗೋಡೆಗೆ ನೀರು ಬಿದ್ದು ಅದರ ಗುಣಮಟ್ಟವನ್ನು ಕಳೆದುಕೊಳ್ಳುತ್ತಾ ಬಂದಿದೆ. ಅದೇ ಕಟ್ಟಡದ ಕೆಳಗೆ ವಿದ್ಯಾಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಆತಂಕದಲ್ಲಿರುವಂತಾಗಿದೆ. ಇದನ್ನು ಕೆಡಹುವ ಇಲ್ಲವೇ ಕಾಮಗಾರಿ ಮುಂದುವರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಶೀಘ್ರ ಅನುದಾನ ಒದಗಿಸಿ ಕಟ್ಟಡವನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕಾಗಿದೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಈ ಶಾಲೆ ಮತ್ತಷ್ಟು ಮಂದಿಗೆ ಉತ್ತಮ ಶಿಕ್ಷಣ ಒದಗಿಸುವಂತೆ ಮಾಡಬೇಕಿದೆ.
ಕಂಪ್ಯೂಟರ್ ಇಲ್ಲ
2012ರಿಂದ 2017ರ ಒಳಗೆ ಕಂಪೂಟರ್ ಪರೀಕ್ಷೆ ಪಾಸ್ ಮಾಡಬೇಕು ಎನ್ನುವ ನಿಯಮ ಇದೆ. ಮಚ್ಚಿನ ಪ್ರೌಢಶಾಲೆಗೆ ಕಂಪ್ಯೂಟರ್ ಟೇಬಲ್, ಬ್ಯಾಟರಿ ಇವುಗಳನ್ನು ನೀಡಿದ್ದು ಇದುವರೆಗೆ ಕಂಪ್ಯೂಟರ್ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಲಭಿಸುತ್ತಿಲ್ಲ. ಶಾಲೆಯ ಆನ್‌ಲೈನ್ ಕೆಲಸಕ್ಕೂ ಶಿಕ್ಷಕರು ಸೈಬರ್ ಬಳಸಬೇಕಾಗಿದೆ.
ಕಂಪ್ಯೂಟರ್ ಶೀಘ್ರ ಪೂರೈಕೆ
ಡಿಎಸ್‌ಇಆರ್‌ಟಿಯಿಂದ ಶಾಲೆಗಳನ್ನು ಐಸಿಟಿ 1, 2 ಎಂದು ವಿಭಜನೆ ಮಾಡಿ ಹಂಚಿಕೆ ಮಾಡಲಾಗುತ್ತಿದೆ. ಈ ಶಾಲೆಗೂ ಶೀಘ್ರದಲ್ಲಿ ಕಂಪ್ಯೂಟರ್ ಪೂರೈಕೆ ಆಗಲಿದೆ.
– ಗುರು ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ
ಮುಂದಿನ ಕಾಮಗಾರಿಗೆ ಕ್ರಮ
ಮಚ್ಚಿನ ಪ್ರೌಢಶಾಲೆಯ ಕಟ್ಟಡ ಕಾಮಗಾರಿ ಅರ್ಧದಲ್ಲಿ ನಿಂತಿದ್ದು ಈ ವರೆಗೆ ಆದ ಖರ್ಚುವೆಚ್ಚಗಳ ಬಗ್ಗೆ ಲೆಕ್ಕಾಚಾರ ಮಾಡಿ ಮುಂದಿನ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು.
– ವಸಂತ ಬಂಗೇರ, ಬೆಳ್ತಂಗಡಿ ಶಾಸಕರು
– ಪ್ರಮೋದ್ ಬಳ್ಳಮಂಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.