ಮಜಾ ಕೊಡುತ್ತಲೇ, ಅಳಿಸುವ ಎರಡನೇ ಸಲ
Team Udayavani, Mar 4, 2017, 11:29 AM IST
ಮನೆಯಲ್ಲಿ ವಯಸ್ಸಿಗೆ ಬಂದ ಮಗ ಇದ್ದಾನೆ. ಸ್ನೇಹಿತೆಯ ಮಗಳಿಗೆ ಮನೆಯಲ್ಲಿ ಅವಕಾಶ ನೀಡುವ ಅನಿವಾರ್ಯತೆ ತಾಯಿಗೆ. ವಯಸ್ಸಿಗೆ ಬಂದ ಹುಡುಗ-ಹುಡುಗಿ ಒಂದೇ ಮನೆಯಲ್ಲಿದ್ದರೆ ಮುಂದೆ “ಏನೇನು’ ಆಗಬಹುದೆಂಬ ಮುಂದಾಲೋಚನೆಯಿಂದ ತಾಯಿ, ಮಗನಲ್ಲಿ ಭಾಷೆ ಪಡೆಯುತ್ತಾಳೆ, ಮಗ ಕೂಡಾ ತಾಯಿಗೆ ಭಾಷೆ ಕೊಡುತ್ತಾನೆ – “ಮನೆಗೆ ಬಂದ ಹುಡುಗಿಗೆ ನನ್ನಿಂದ ಯಾವುದೇ ತೊಂದರೆಯಾಗುವುದಿಲ್ಲ …’
– ಮಗ ಭಾಷೆ ಕೊಡುತ್ತಾನೆ. ಮನೆಯೊಳಗೆ ಹರೆಯದ ತರುಣಿಯ ಎಂಟ್ರಿಯಾಗುತ್ತದೆ. ಕಣ್ಣಲ್ಲೇ ಕೊಲ್ಲೋ ಸುಂದರಿ ಆಕೆ. ಗೋಕರ್ಣದಲ್ಲಿ ಬೆಳೆದ ಹುಡುಗಿಗೆ ಬೆಂಗಳೂರು ಹೊಸದು. ಕಾಲೇಜಿಗೆ ಬಿಡುವ ಜವಾಬ್ದಾರಿ ಹುಡುಗನದು. ಮುಂದೆ ಬೆಣ್ಣೆ ಕರಗುತ್ತಾ ಎನ್ನುವ ಕುತೂಹಲವಿದ್ದರೆ ನೀವು “ಎರಡನೇ ಸಲ’ ನೋಡಬೇಕು. ನಿರ್ದೇಶಕ ಗುರುಪ್ರಸಾದ್ “ಎರಡನೇ ಸಲ’ ಚಿತ್ರ ಮಾಡಲು ಮೂರು ವರ್ಷ ತಗೊಂಡರೂ ಒಂದು ಮಜಾವಾದ ಲವ್‌ಸ್ಟೋರಿಯನ್ನು ವಿಭಿನ್ನ ರೀತಿಯಲ್ಲಿ ಹೇಳಿದ್ದಾರೆಂಬುದೇ ಖುಷಿ.
ಹಾಗೆ ನೋಡಿದರೆ “ಎರಡನೇ ಸಲ’ ಚಿತ್ರದ ಕಥೆ ತೀರಾ ಅದ್ಭುತವಾದುದು ಅಥವಾ ಹಿಂದೆಂದು ಕಂಡು ಕೇಳಿರದ ಕಥೆಯಂತೂ ಅಲ್ಲವೇ ಅಲ್ಲ. ತಾಯಿ ಸೆಂಟಿಮೆಂಟ್ ಇರುವ ಒಂದು ನಾರ್ಮಲ್ ಲವ್‌ಸ್ಟೋರಿ. ಆದರೆ ಅದು ಸಿಕ್ಕಿರೋದು ಗುರುಪ್ರಸಾದ್ ಕೈಗೆ ಎಂಬುದಷ್ಟೇ ವಿಶೇಷ. ಗುರುಪ್ರಸಾದ್ ತಮ್ಮದೇ ಶೈಲಿಯಲ್ಲಿ ನಿರೂಪಿಸುತ್ತಾ ಹೋಗಿದ್ದಾರೆ. ಹಾಗೆ ನೋಡಿದರೆ ಈ ಕಥೆಯಲ್ಲಿ ಸೆಂಟಿಮೆಂಟ್‌ಗೆ ಹೆಚ್ಚು ಮಹತ್ವವಿದೆ. ಹಾಗಂತ ಅದನ್ನು ಎಳೆದಾಡಿದ್ದರೆ “ಎರಡನೇ ಸಲ’ ಒಂದು ಗೋಳಿನ ಕಥೆಯಾಗುತ್ತಿತ್ತು.
ಗುರುಪ್ರಸಾದ್ ಮಾತ್ರ “ಎರಡನೇ ಸಲ’ವನ್ನು ಆ ಅಪಾಯದಿಂದ ಪಾರು ಮಾಡಿದ್ದಾರೆ. ಸಿಕ್ಕಾಪಟ್ಟೆ ಫೀಲಿಂಗ್ಸ್ ಇರುವ ಕಥೆಯನ್ನು ಕೂಡಾ ಮಜಾವಾಗಿ ಹೇಳುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ “ಎರಡನೇ ಸಲ’ ಕೂಡಾ ನಿಮಗೆ ಮಜಾ ಕೊಡುತ್ತಲೇ, ಕಣ್ಣಂಚಲ್ಲಿ ಎರಡು ಹನಿ ಜಿನುಗುವಂತೆ ಮಾಡುತ್ತದೆ. ಇಲ್ಲಿ ಏನು ಹೇಳಬೇಕೋ ಅದನ್ನು ನೇರವಾಗಿ ಹೇಳಲಾಗಿದೆ. ಆದರೆ, ಉದ್ದಕ್ಕೆ ಕಥೆ ಹೇಳುತ್ತಾ ಹೋಗುವ ಬದಲು ಬಿಡಿ ಬಿಡಿಯಾಗಿ ಫ್ಲ್ಯಾಶ್‌ಬ್ಯಾಕ್ ಹಿನ್ನೆಲೆಯಲ್ಲಿ ಹೇಳುತ್ತಾ ಪ್ರಸ್ತುತ ಸನ್ನಿವೇಶಕ್ಕೆ ಜೋಡಿಸಿದ್ದಾರೆ.
ಲವಲವಿಕೆಯಿಂದ ಸಾಗುವ ಈ ಸಿನಿಮಾದಲ್ಲಿ ಗುರುಪ್ರಸಾದ್ ಅವರ ಈ ಹಿಂದಿನ ಸಿನಿಮಾಗಳ ಶೈಲಿ ಎದ್ದು ಕಾಣುತ್ತದೆ. ಡಬಲ್ ಮೀನಿಂಗ್ ಡೈಲಾಗ್‌ಗಳು, ನಾಯಕನ ತುಂಟತನ, ಪೋಲಿ ಮಾತುಗಳ ಜೊತೆಗೆ ಈ ಬಾರಿ ಗುರುಪ್ರಸಾದ್ ಗ್ಲಾಮರ್‌ಗೂ ಹೆಚ್ಚು ಒತ್ತುಕೊಟ್ಟಿದ್ದಾರೆ. ಈ ಫನ್ನಿ ಲವ್‌ಸ್ಟೋರಿ ನಡುವೆಯೇ ಕಾಡುವ ಸಾಕಷ್ಟು ಅಂಶಗಳಿವೆ. ಕೆಲವು ಸೂಕ್ಷ್ಮ ಅಂಶಗಳನ್ನು ಸಿನಿಮಾದುದ್ದಕ್ಕೂ ಹೇಳುತ್ತಾ ಬಂದಿರುವ ಗುರುಪ್ರಸಾದ್, ಒಂದು ಹಂತಕ್ಕೆ ಸಿನಿಮಾವನ್ನು ಸಿಕ್ಕಾಪಟ್ಟೆ ಗಂಭೀರವನ್ನಾಗಿಸಿದ್ದಾರೆ.
ಅಲ್ಲಿವರೆಗೆ ನೀವು ನೋಡಿದ “ಮಜಾವಾದ ಲವ್‌ಸ್ಟೋರಿ’ ಮರೆತು ಹೋಗಿ, ತಾಯಿ ಸೆಂಟಿಮೆಂಟ್, ಕೊನೆಗಾಲದಲ್ಲಿನ ಆಕೆಗೆ ಕಾಡುವ ಅಭದ್ರತೆ, ಮಗನಲ್ಲಿ ಆಕೆ ಕೇಳಿಕೊಳ್ಳುವ ಪರಿ, ಮಗನ ಸಂಕಟ, ಆತ ತನ್ನೊಳಗೆ ಅನುಭವಿಸುವ ನೋವು … ಎಲ್ಲವೂ ಥಿಯೇಟರ್ ಅನ್ನು ನಿಶ್ಯಬ್ಧವನ್ನಾಗಿಸುವಲ್ಲಿ ಯಶಸ್ವಿಯಾಗಿದೆ. ಆ ಮಟ್ಟಿಗೆ ಸಿನಿಮಾ ಕಣ್ಣಿಗೆ ಕೈ ಹಾಕುತ್ತದೆ. ಹೀರೋ ಫೈಟ್ ಮಾಡಿದರೇನೇ ಚೆಂದ ನಿಜ.
ಆದರೆ ಈ ಕಥೆಗೆ, ನಿರೂಪಣೆಗೆ ಆ ಫೈಟ್ ಬೇಕಿಲ್ಲ ಎನಿಸುತ್ತದೆ. ಈ ಫನ್ನಿ, ಸೆಂಟಿಮೆಂಟ್‌ಗಳ ಮಧ್ಯೆಯೇ ಪೋಲಿ ಜೋಕುಗಳಿಗಾಗಿಯೇ ಕೆಲವು ದೃಶ್ಯಗಳನ್ನು ಸೃಷ್ಟಿಸಿರೋದು ಕೂಡಾ ಎದ್ದು ಕಾಣುತ್ತದೆ. ನಾಯಕ ಧನಂಜಯ್‌ಗೆ ಒಂದು ವಿಭಿನ್ನ ಪಾತ್ರ ಸಿಕ್ಕಿದೆ. ತುಂಟನಾಗಿ, ತಾಯಿಯ ಮುದ್ದಿನ ಮಗನಾಗಿ ಧನಂಜಯ್ ಇಷ್ಟವಾಗುತ್ತಾರೆ. ತುಂಬಾ ಸೆಟಲ್ಡ್ ಆದ ಅಭಿನಯದ ಮೂಲಕ ಧನಂಜಯ್ ಸಿನಿಮಾದುದ್ದಕ್ಕೂ ನಿಮಗೆ ಹತ್ತಿರವಾಗುತ್ತಾ ಹೋಗುತ್ತಾರೆ.
ನಾಯಕಿ ಸಂಗೀತಾ ಭಟ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್‌ಗೂ ಸೈ, ಕಣ್ಣೀರಿಗೂ ಸೈ ಎಂಬುದನ್ನು ಸಾಬೀತುಮಾಡಲು ಸಂಗೀತಾ ಇಲ್ಲಿ ಪ್ರಯತ್ನಿಸಿದ್ದಾರೆ. ಇನ್ನು ಚಿತ್ರದಲ್ಲಿ ಲಕ್ಷ್ಮೀಯವರ ಅಭಿನಯ ನಿಮ್ಮ ಕಣ್ಣಂಚನ್ನು ಒದ್ದೆ ಮಾಡದೇ ಇರದು. ತಾಯಿಯಾಗಿ, ಭವಿಷ್ಯದ ಬಗ್ಗೆ ಚಿಂತಿಸುವ ಹಿರಿಯ ಜೀವವಾಗಿ ಅವರು ಇಷ್ಟವಾಗುತ್ತಾರೆ. ಅನೂಪ್ ಸೀಳೀನ್ ಸಂಗೀತದ “ಹೂವ ಸುರಿದೆನಾ …’ ಹಾಡು ಇಷ್ಟವಾಗುತ್ತದೆ.
ಚಿತ್ರ: ಎರಡನೇ ಸಲ
ನಿರ್ಮಾಣ: ಯೋಗೇಶ್ ನಾರಾಯಣ್
ನಿರ್ದೇಶನ: ಗುರುಪ್ರಸಾದ್
ತಾರಾಗಣ: ಧನಂಜಯ್, ಸಂಗೀತಾ ಭಟ್, ಲಕ್ಷ್ಮೀ, ಪದ್ಮಜಾ ರಾವ್ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.