ಬಿಸಿ,ಬಿಸಿ ಕಾಫಿಯ ಬೊಂಬಾಟ್ ಕತೆಗಳು…
Team Udayavani, Mar 4, 2017, 4:52 PM IST
ಮೂಡಿಗೆ, ಚಳಿಗೆ, ಬಿಸಿ ಬಿಸಿ ಕಾಫಿ ಇಲ್ಲದೇ ಇದ್ದರೆ ಹೇಗೆ? ಬೆಂಗ್ಳೂರ ಬೆಳಗು ಕಾಫಿ ಇಲ್ಲದೆ ಆಗೋದೇ ಇಲ್ಲ. ಕಾಫಿ ಅಂದರೆ ಸುಮ್ಮನೆ ಕುಡಿಯೋದಲ್ಲ. ಪರಿಮಳ ಇರಬೇಕು. ಹಬೆಯ ಜೊತೆಗೆ ಘಮ್ಮೆನ್ನಬೇಕು. ಲೋಟಕ್ಕೆ ಕಾಫಿ ಇಳಿಯುತ್ತಲೇ ನೊರೆಯ ಜೊತೆ ಮೂಗಿಗೆ ಘಮಲು ಅಡರಿದರೆ ನಿಜವಾದ ಕಾಫಿ. ಇಂಥ ಕಾಫಿ ಎಲ್ಲಿ ಸಿಗುತ್ತೇ ಅಂದಿರಾ? ಇಲ್ಲಿದೆ ಬೆಸ್ಟ್ ಕಾಫಿ ಹೇಗೆ ತಯಾರಾಗುತ್ತದೆ ಎಂಬ ವಿವರ.
ಚಾಮರಾಜಪೇಟೆಯ ಎಸ್‌ಎಲ್‌ವಿ
ಚಾಮರಾಜಪೇಟೆಯ ಎಸ್.ಎಲ್.ವಿ ಕಾಫಿ ಅಂದರೆ ಅದರ ಘಮ್ಮತ್ತೇ ಬೇರೆ. ಗ್ಲಾಸ್ ಲೋಟದ ಕಾಫಿ ಮೀಸೆಯಡಿಗೆ ಇಡುವಷ್ಟರಲ್ಲೇ ಅದರ ಪರಿಮಳ ಘಮ್ಮೆಂದು ಬಿಡುತ್ತದೆ. ನೀವು ಕಾಫಿ ಕುಡಿದು ಎಷ್ಟು ಹೊತ್ತಾದರೂ ನಾಲಿಗೆಯ ಮೇಲೆ ರುಚಿಯ ಪಾಚಿ ಕಟ್ಟದೇ ಇದ್ದರೆ ಕೇಳಿ? ಇಷ್ಟೊಂದು ಸ್ವಾದಿಷ್ಟ ಹೇಗೆ? ಎಂದರೆ ಈ ಹೋಟೆಲಿನ ಮಾಲೀಕ ಗೋಪಾಲ್ ಕಥೆಯನ್ನೇ ಹೇಳುತ್ತಾರೆ ;
“ಕಾಫಿ ನನಗೆ ಇಷ್ಟ. ನನಗೆ ಇಷ್ಟವಾಗಿದ್ದು ಎಲ್ಲರಿಗೂ ಸಿಗಬೇಕು ಅಂತಲೇ- ಕಾಫಿಬೀಜ ತಂದು, ರೋಸ್ಟ್ ಮಾಡಿ, ಬೇಕೆಂದಾಗ ಪುಡಿ ಮಾಡಿ ಕಾಫಿ ಕೊಡ್ತೇವೆ. ನಮ್ಮ ಕಾಫಿಯ ಸ್ವಾದಿಷ್ಟದ ಗುಟ್ಟು ಮುಳ್ಳಯ್ಯನ ಗಿರಿಯಲ್ಲಿದೆ. ಅಲ್ಲಿನ ಹವಾಮಾನ ರುಚಿ ಹೆಚ್ಚಿಸುತ್ತದೆ. ಕಾಫಿ ಮುಗಿಯುತ್ತಿದೆ ಅಂದ ಕೂಡಲೇ ಅಲ್ಲೇ, ಹಾಗೇ, ರೋಸ್ಟ್ ಮಾಡಿ, ಪುಡಿ ಮಾಡಿ ಮತ್ತೆ ಕಾಫಿ ಡಿಕಾಕ್ಷನ್ ಹಾಕುತ್ತೇವೆ. ಎಲ್ಲವೂ ಗ್ರಾಹಕರ ಕಣ್ಣ ಮುಂದೆ ಪ್ರತಿದಿನ ನಡೆಯುತ್ತಲೇ ಇರುತ್ತದೆ ಎನ್ನುತ್ತಾರವರು.
ಇವಿಷ್ಟೇ ಅಲ್ಲ, ಎಸ್‌ಎಲ್‌ವಿ ಕಾಫಿ ಸ್ವಾದಿಷ್ಟದ ಹಿಂದೆ ಪ್ಲಾಂಟೇಷನ್ ಬಿ. ಕಾಫಿಬೀಜದ ಚಮತ್ಕಾರವಿದೆ. ಇದರಲ್ಲಿ ಫ್ಲೇವರ್ ಜಾಸ್ತಿ. ಮುಖ್ಯವಾಗಿ ಇವರು ಶೇ. 95ರಷ್ಟು ಕಾಫಿ ಪುಡಿ ಹಾಕಿ, ಶೇ.5ರಷ್ಟು ಮಾತ್ರ ಚಿಕೋರಿ ಸೇರಿಸುತ್ತಾರೆ. ಎಸ್‌ಎಲ್‌ವಿಯಲ್ಲಿ ಕಾಫಿ ಬೀಜ ತರಿಸಿ ತಿಂಗಳಾನುಗಟ್ಟಲೆ ದಾಸ್ತಾನು ಮಾಡುವ, ಇಲ್ಲವೇ ಪುಡಿ ಮಾಡಿ ದಿನಗಟ್ಟಲೆ ಎತ್ತಿಟ್ಟು ಕಾಫಿ ಮಾಡುವುದಿಲ್ಲ. ಹಾಲು ತಂದು ಫ್ರಿಜ್‌ನಲ್ಲಿ ಇಟ್ಟು, ಬೇಕಾದಾಗ ಕಾಫಿ ಮಾಡುವುದು ಖುಲ್ಲಾಖುಲ್ಲಂ ಇಲ್ಲಿ ಸಾಧ್ಯವೇ ಇಲ್ಲ. ಬೀಜ, ಪುಡಿ, ಹಸುವಿನ ಹಾಲು ಹೀಗೆ ಫ್ರೆಷ್ ಅಂಡ್ ಫ್ರೆಷ್‌ನಿಂದ ತಯಾರಾಗುವುದರಿಂದ ವಿಭಿನ್ನವಾದ ಸ್ವಾದ, ಅನುಭವ.
“ಹಿಂದೆ, ನಮ್ಮಪ್ಪ ಗಲ್ಲಾಪೆಟ್ಟಿಗೆ ಮೇಲೆ ಕೂರೋರು. ನಾನು ಕಾಫಿ ಹಾಕ್ತಾ ಇದ್ದೆ. ಮೊದಲ ಡಿಕಾಕ್ಷನ್ ಹೊಡೆದಾಗಿನ ರುಚಿ, ಕೊನೆ ಬಾರಿಯ ರುಚಿ ಹೇಗಿರುತ್ತದೆ ಅನ್ನೋದು ಚೆನ್ನಾಗಿ ಗೊತ್ತಿತ್ತು. ಹೀಗೆ ರುಚಿಯ ಹಿಂದೆ ಬಿದ್ದು- ನಮ್ಮದೇ ಒಂದು ಸ್ಟೈಲ್ ಮಾಡಿಕೊಂಡೆವು. ಅದು ಏನೆಂದರೆ- ಯಾರೇ ಕಾಫಿ ಕುಡಿದರೂ ಮೊದಲು ಬಾರಿ ಡಿಕಾಕ್ಷನ್‌ನ ಸ್ವಾದ ಅವರಿಗೆ ಸಿಗಬೇಕು ಅನ್ನೋದು. ಅದನ್ನು ಯಶಸ್ವಿಯಾಗಿ ಕೊಡುತ್ತಿದ್ದೇವೆ ‘ ಅಂತಾರೆ ಎಸ್‌ಎಲ್‌ವಿ ಮಾಲೀಕ ಗೋಪಾಲ್.
ಬೈ ಟೂ ಕಾಫಿ
ಬೆಂಗಳೂರಿನ ಐದು ಏರಿಯಾಗಳಲ್ಲಿ ಶಾಖೆಗಳನ್ನು ಹೊಂದಿರುವ ಈ “ಬೈಟು ಕಾಫಿ’ಯಲ್ಲಿ. ಇಲ್ಲಿ ಬಿಸಿ, ಬಿಸಿ ಅರ್ಧ ಕಾಫಿ ದೊರೆಯುತ್ತದೆ. ಇನ್ನೇನು ಮುಗಿಯಿತು ಅನ್ನೋ ಹೊತ್ತಿಗೆ ಫ್ರೆಶ್ ಡಿಕಾಕ್ಷನ್. ಕುಡಿದವರ ಮುಖದಲ್ಲಿ ಬೆವರು ಬರೋದಿಲ್ಲ. ಏಕೆಂದರೆ ಬೆಲೆ 5ರೂ. ಜೇಬಿಗೆ ಬಾರವೂ ಇಲ್ಲ; ರುಚಿಗೆ ಸಾಟಿಯೂ ಇಲ್ಲ. ಬೈಟು ಕಾಫಿ ವಿಶೇಷ ಎಂದರೆ- ರೋಬಾಸ್ಟ್, ಅರೇಬಿಕಾ ಸೀಡ್ಸ್ ಕಾಫಿ ಬಳಸೋದು. ಜೊತೆಗೆ ಶೇ. 80ರಷ್ಟು ಕಾಫಿ, 20ರಷ್ಟು ಚಿಕೋರಿ ಬೆರೆಸುತ್ತಾರೆ.
“ನಾವು ಕಾಫಿಗೆ ಬಳಸೋದು ಬಿಸ್ಲೆರಿ ನೀರು. ಕಾಫಿ ರುಚಿಯಲ್ಲಿ ನೀರ ಪಾತ್ರ ಬಹಳ ಮುಖ್ಯ. ಹಾಗೇನೇ ಡಬಲ್ ರೀಫೈಂಡ್ ಸಕ್ಕರೆ ಬಳಸ್ತೀವಿ. ಅದನ್ನು ಕೈಯಲ್ಲಿ ಮುಟ್ಟೋದಿಲ್ಲ. ನೊಣ ಕೂರಕ್ಕೆ ಬಿಡೋದಿಲ್ಲ’ ಅಂತಾರೆ. ಇವೆರಡರ ಜೊತೆ ಕಾಫಿ ಪುಡಿಯ ಗುಣಮಟ್ಟ ರುಚಿಯ ಗುಟ್ಟಂತೆ. ಕಡಿಮೆ ರೇಟಿಗೆ ಸ್ವಾದ ಕೊಡುವ ಏಕೈಕ ಕಾಫಿ ಮಂದಿರ ಇದು. “ಕಾರಣವಿಷ್ಟೇ. ಬದುಕು ನಡೆಯೋದು ಕಾಫಿಯಿಂದ. ವ್ಯವಹಾರ ಶುರುವಾಗೋದು ಕಾಫಿಯಿಂದ. ಅದಕ್ಕೇ ಕಾಫಿ ದುಬಾರಿಯಾಗಬಾರದು ಅನ್ನೋದು ನಮ್ಮ ಮಂತ್ರ. ಇದಕ್ಕಾಗಿ ಹೆಚ್ಚೆಚ್ಚು (ವಾಲ್ಯೂಮ್ ಸೇಲ್) ಕಾಫಿ ಸೇಲ್ ಮಾಡುವ ಮೂಲಕ ಬೆಲೆ ಇಳಿಸಿದ್ದೇವೆ’ ಅನ್ನೋದು ಬೈಟು ಕಾಫಿಯ ಮಾಲೀಕ ರಾಘವೇಂದ್ರ ಪಡುಕೋಣೆ ಅವರ ಮಾತು.
ಮಯ್ಯಾಸ್
ಚಿಕೋರಿ ಕಾಫಿ ಕುಡಿದರೆ ಹೀಟು, ಬಾಯಲ್ಲಾ ಒಗರು, ಒಗರು- ಇಂಥ ಕಂಪ್ಲೆಂಟು ಇದ್ದರೆ ನೀವು ಮಯ್ನಾಸ್‌ಗೆ ಹೋಗಬೇಕು. ಪರಿಪೂರ್ಣ ಕಾಫಿ ಇಲ್ಲಿ ದೊರೆಯುತ್ತದೆ. ಯಾವುದೇ ಮಿಕ್ಸು ಇಲ್ಲ. ಕಾಫಿ ಅಂದರೆ ಶೇ.100ರಷ್ಟು ಕಾಫಿ ಇಲ್ಲಿನದು. ಸ್ವಾದಿಷ್ಟಕ್ಕೆ ಕೊರತೆ ಇಲ್ಲ. ಕಾಫಿ ಅಂದರೆ ಹೀಗೇ ಇರಬೇಕು ಅನ್ನೋದು ಮಯ್ನಾಸ್ ನಿಯಮ. ಇದಕ್ಕೆ ಕಾರಣವೂ ಇದೆ. ಕಾಫಿ ಬೀಜವನ್ನು ಕ್ಯೂರಿಂಗ್ ಸ್ಟೇಜ್‌ನಲ್ಲಿ ಹೋಗಿ ನೋಡ್ತಾರೆ. ಯಾವ ಲಾಟ್‌ನಲ್ಲಿ ರುಚಿ ಚೆನ್ನಾಗಿದೆ ಅನ್ನೋದನ್ನು ಚೆಕ್ ಮಾಡುತ್ತಾರೆ. ಆವತ್ತೇ ರೋಸ್ಟ್ ಮಾಡಿಸಿ, ಅಲ್ಲೇ ಪೌಡರ್ ಮಾಡಿ. ಕೂತು ಕಾಫಿ ಕುಡಿದು ಫೈನಲ್ ಮಾಡುತ್ತಾರೆ. ಒಂದು ಸಲ ಪರ್ಚೇಸ್ ಮಾಡಿದರೆ ಇಡೀ ವರ್ಷಕ್ಕೆ ಕಾಫಿ ಆಗುತ್ತದೆ. ಅಂದರೆ ಇಡೀ ವರ್ಷ ಒಂದೇ ಟೇಸ್ಟ್. ಮೊದಲು ಬೀಜ ಮಾಯಿಶ್ಚರ್ ತೆಗೀತಾರೆ. ಅದು ಶೇ.12ರಷ್ಟಿರಬೇಕು. ಸಡನ್ನಾಗಿ ಆವಿಯಾಗಬಾರದು. ಹಾಗೇನಾದರೂ ಆದರೆ ಕಾಫಿಯ ಸ್ವಾದ, ಪರಿಮಳ ಹೋಗಿಬಿಡುತ್ತದೆ ಅನ್ನೋ ಎಚ್ಚರಿಕೆ ವಹಿಸುತ್ತಾರೆ. ” ಇದೆಲ್ಲಾ ಏಕೆ ? ಅಂತ ಕೇಳಬಹುದು. ಇಲ್ಲಿನ ಮಣ್ಣು ಒಳ್ಳೇ ಫ್ಲೇವರ್ ಕೊಡುತ್ತದೆ. ಉದಾಹರಣೆಗೆ-ಕೋಲಾರದ ಬೆಲ್ಲದಲ್ಲಿ ಉಪ್ಪಿನಂಶ ಇರುತ್ತದೆ. ಆದರೆ ಮಲೆನಾಡಿನ ಬೆಲ್ಲದಲ್ಲಿ ಉಪ್ಪಿರೋಲ್ಲ. ಹಾಗೆಯೇ ಕಾಫಿ ಕೂಡ. ಪ್ರತಿ ಪ್ರಾಂತ್ಯದ ಆಟ್ಯುಟೂಡ್ ಬದಲಾಗುತ್ತಾ ಹೋಗುತ್ತದೆ. ಅದಕ್ಕೆ ಒಳ್ಳೇ ಫ್ಲೇವರ್ ಕೊಡೋ ಕಾಫಿ ಬೇಕು ಅಂತ ಇಲ್ಲಿಂದ ತರ್ತೀವಿ ಅಂತಾರೆ ಮಯ್ನಾಸ್‌ನ ರಘುಪತಿ ಭಟ್.
ಇದೇ ರೀತಿ ಚಿಕೋರಿ ಬೇಡದ ಕಾಫಿ ಇನ್ನೊಂದು ಕಡೆ ಸಿಗುತ್ತದೆ. ಅದುವೇ ಕಾಫಿ ಹೌಸ್. ಜಿಪಿಓ ಬಳಿ ಇರುವ ಈ ಕಾಫಿ ಹೌಸ್‌ನಲ್ಲಿ ಇಷ್ಟು ನೀರು ಹಾಕಿದರೆ, ಇಷ್ಟೇ ಡಿಕಾಕ್ಷನ್ ಬರಬೇಕು ಅನ್ನೋ ನಿಯಮವಿದೆ. ಚಿಕೋರಿ ಬಳಸದೆಯೇ ಕಾಫಿ ಹೇಗಿರುತ್ತದೆ ಅಂತ ಮೊದಲು ತೋರಿಸಿದ್ದು ಇದೇ ಕಾಫಿ ಹೌಸ್.
ವೈಭವ – ಸುಪ್ರಭಾತ
ಇಡೀ ಬೆಂಗಳೂರು ಹೋಟೆಲ್‌ಗಳಲ್ಲಿ ಮರೆಯಾಗುತ್ತಿರುವ ತಾಮ್ರದ ಫಿಲ್ಟರ್ ಕಾಫಿ ಬೇಕು ಎನ್ನುವವರು ಯಡಿಯೂರ ರಸ್ತೆಯ ಹತ್ತಿರ ಇರುವ ಕನಕಪುರ ಸಿಗ್ನಲ್‌ನ ಬಳಿಯ ವೈಭವ ಹೋಟೆಲ್‌ಗೆ ಹೋಗಬೇಕು. ಇಲ್ಲಿನ ವಿಶಿಷ್ಟತೆ ಎಂದರೆ ಪ್ರತಿ ಅರ್ಧಗಂಟೆಗೊಮ್ಮೆ ಸ್ವಾದಿಷ್ಟ ಬದಲಾಗುತ್ತದೆ. ಕಾರಣ- ಇಲ್ಲೂ ಕೂಡ ಅಲ್ಲೇ ಕಾಫಿ ಪುಡಿ ಹುರಿದು, ಪುಡಿ ಮಾಡಿ ಡಿಕಾಕ್ಷನ್ ಹಾಕುತ್ತದೆ. 10 ಲೋಟಕ್ಕೆ ಆಗುವಷ್ಟು ಕಾಫಿ ಇದೆ ಅಂತ ತಿಳಿಯುತ್ತಲೇ ಹೊಸ ಡಿಕಾಕ್ಷನ್ ತಯಾರಾಗುತ್ತದೆ. ಕಾಫಿ ಏಕೆ ಚೆನ್ನಾಗಿರುತ್ತದೆ ಅನ್ನೋದಕ್ಕೆ ತಾಮ್ರದ ಫಿಲ್ಟರ್ ಮತ್ತು ಕಡಿಮೆ ಚಿಕೋರಿಯೇ ಕಾರಣ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಇದರಂತೆಯೇ ಇನ್ನೊಂದು ವಿವಿ ಪುರಂನಲ್ಲಿರುವ ಸುಪ್ರಭಾತ ಕಾಫಿ ಕೇಂದ್ರ. ಇವರೂ ಕೂಡ ತಾಮ್ರದ ಫಿಲ್ಟರ್ ಅನ್ನೇ ಬಳಸುವುದು. ಗಟ್ಟಿ ಹಾಲನ್ನು ಹಾಕುವುದರಿಂದ ಕಾಫಿಯ ಸ್ವಾದಿಷ್ಟವೇ ಬೇರೆ. ಇಲ್ಲಿ ಇನ್ನೂ ಗಾಜಿನ ಲೋಟದಲ್ಲೇ ಕಾಫಿ ಕೊಡುವುದರಿಂದ ಹಳೇ ಫೀಲ್ ಕೂಡ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.