ಕಡೆಗೂ ಜಿಎಸ್‌ಟಿಗೆ ಓಕೆ: ಜುಲೈ 1 ರಿಂದ ಜಾರಿ ಸಾಧ್ಯತೆ
Team Udayavani, Mar 5, 2017, 3:45 AM IST
ನವದೆಹಲಿ: ಹಲವು ಸುತ್ತಿನ ಸಭೆ, ಮಾತುಕತೆಗಳ ಬಳಿಕ ಕೊನೆಗೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಸಿಜಿಎಸ್‌ಟಿ) ಮತ್ತು ಏಕೀಕೃತ ಸರಕು ಮತ್ತು ಸೇವಾ ತೆರಿಗೆ(ಐಜಿಎಸ್‌ಟಿ)ಗಳಿಗೆ ಜಿಎಸ್‌ಟಿ ಮಂಡಳಿಯ ಒಪ್ಪಿಗೆಯ ಮುದ್ರೆ ಬಿದ್ದಿದೆ. ಈ ಮೂಲಕ ಅತಿದೊಡ್ಡ ತೆರಿಗೆ ಸುಧಾರಣೆಯತ್ತ ಭಾರತವು ಅಡಿಯಿಟ್ಟಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 10 ವರ್ಷಗಳ ಕಾಯುವಿಕೆಯ ನಂತರ ದೇಶವು ಏಕರೂಪದ ತೆರಿಗೆ ವ್ಯವಸ್ಥೆಗೆ ಸಾಕ್ಷಿಯಾಗಲಿದೆ.
ಇದೇ ವೇಳೆ, ವರ್ಷಕ್ಕೆ 50 ಲಕ್ಷ ರೂ.ವರೆಗೆ ವಹಿವಾಟು ಮಾಡುವ ಸಣ್ಣ ಹೋಟೆಲ್‌ಗಳು, ಢಾಬಾಗಳು ಮತ್ತು ರೆಸ್ಟಾರೆಂಟ್‌ಗಳಿಗೆ ಶೇ.5ರ ತೆರಿಗೆ ದರವನ್ನು ಜಿಎಸ್‌ಟಿ ಮಂಡಳಿಯು ನಿಗದಿಪಡಿಸಿದೆ. ಇದರಲ್ಲಿ ಶೇ.2.5 ಕೇಂದ್ರಕ್ಕೆ, ಉಳಿದ ಶೇ.2.5 ರಾಜ್ಯಗಳಿಗೆ ಹೋಗಲಿದೆ. ಒಟ್ಟಿನಲ್ಲಿ ಪ್ರಮುಖ ಕರಡುಗಳಿಗೆ ಒಪ್ಪಿಗೆ ದೊರೆತಿದ್ದು, ಜುಲೈ 1ರಿಂದಲೇ ಇದು ಅನುಷ್ಠಾನವಾಗುವುದು ಬಹುತೇಕ ಖಚಿತ.
“ರಾಜ್ಯಗಳು ಕೇಳಿದ್ದ ಸುಮಾರು 26 ಬದಲಾವಣೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿಗೆ ಸರ್ವಾನುಮತದ ಅಂಗೀಕಾರ ದೊರೆತಿದೆ. ಎಲ್ಲ ರಾಜ್ಯಗಳೂ ಇದಕ್ಕೆ ಬೆಂಬಲ ನೀಡಿವೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಸ್ಪಷ್ಟಪಡಿಸಿದ್ದಾರೆ. ಈ ಎರಡೂ ಪ್ರಮುಖ ಜಿಎಸ್‌ಟಿಗಳಿಗೆ ಇದೇ ತಿಂಗಳ 16 ರಂದು ನಡೆಯುವ ಮತ್ತೂಂದು ಸುತ್ತಿನ ಸಭೆಯಲ್ಲಿ ಅಂತಿಮ ಅಂಗೀಕಾರ ದೊರೆಯಲಿದೆ. ಆದರೆ, ರಾಜ್ಯ ಸರಕು ಮತ್ತು ಸೇವಾ ತೆರಿಗೆ(ಎಸ್‌ಜಿಎಸ್‌ಟಿ) ಕುರಿತು ಶನಿವಾರದ ಸಭೆಯಲ್ಲಿ ಚರ್ಚೆ ನಡೆದಿಲ್ಲ.
ಮುಂದಿನ ವಾರ ಅಂಗೀಕಾರ?:
ರಾಜ್ಯ ಜಿಎಸ್‌ಟಿ ಕುರಿತು ಕೇಳಲಾದ ಪ್ರಶ್ನೆಗೆ, “ಅದು ಕೂಡ ಸಿಜಿಎಸ್‌ಟಿ ಹಾದಿಗೇ ಬರಲಿದೆ,’ ಎನ್ನುವ ಮೂಲಕ ಅಂಗೀಕಾರದ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಜೇಟ್ಲಿ. ಕಾನೂನು ಸಮಿತಿಯು ಕೇಂದ್ರಾಡಳಿತ ಪ್ರದೇಶಗಳ ಜಿಎಸ್‌ಟಿ(ಯುಟಿಜಿಎಸ್‌ಟಿ) ಮತ್ತು ಎಸ್‌ಜಿಎಸ್‌ಟಿಗೆ ಅಂತಿಮ ಸ್ಪರ್ಶ ನೀಡುತ್ತಿದೆ. ಮಾರ್ಚ್ 16 ರಂದು ನಡೆಯುವ 12ನೇ ಸಭೆಯಲ್ಲಿ ಇದರ ಕರಡನ್ನು ಮಂಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಮುಂದಿನ ವಾರ(ಮಾ.9) ಆರಂಭವಾಗಲಿರುವ ಬಜೆಟ್ ಅಧಿವೇಶನದ ಎರಡನೇ ಭಾಗದಲ್ಲಿ ಇವುಗಳನ್ನು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಏ.1ರ ಗಡುವು ತಲುಪಲು ಸಾಧ್ಯವಾಗದ ಕಾರಣ ಜುಲೈ 1ರಿಂದಲಾದರೂ ಜಿಎಸ್‌ಟಿ ಜಾರಿಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಕನಿಷ್ಠ 12 ಜಿಎಸ್‌ಟಿ ಮಂಡಳಿ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಈ ಮಧ್ಯೆ ಕೃಷಿಕರು ಮತ್ತು 20 ಲಕ್ಷಕ್ಕಿಂತ ಕೆಳಗೆ ವ್ಯವಹಾರ ನಡೆಸುವ ಉದ್ಯಮಿಗಳ ಜಿಎಸ್‌ಟಿ ನೋಂದಣಿಯಲ್ಲಿ ವಿನಾಯಿತಿ ನೀಡಲಾಗಿದೆ.
ಎಸ್‌ಜಿಎಸ್‌ಟಿ ಕಥೆ ಏನು?
ಸರಕು ಮತ್ತು ಸೇವೆಗಳಿಗೆ ರಾಜ್ಯಗಳು ತೆರಿಗೆ ವಿಧಿಸುವ ಎಸ್‌ಜಿಎಸ್‌ಟಿಗೆ ಆಯಾ ರಾಜ್ಯ ಸರ್ಕಾರಗಳು ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಬೇಕು. ಜತೆಗೆ, ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರತಿಯೊಂದು ಉತ್ಪನ್ನಗಳ ತೆರಿಗೆ ದರಗಳನ್ನು ಆಯಾ ಸರ್ಕಾರಗಳು ನಿಗದಿಪಡಿಸಬೇಕು.
ಜಿಎಸ್‌ಟಿ ಕಾನೂನಿನಲ್ಲಿ ಶೇ.40ರವರೆಗಿನ ತೆರಿಗೆ(ಕೇಂದ್ರದಿಂದ ಶೇ.20, ರಾಜ್ಯದಿಂದ ಶೇ.20)ಗಾಗಿ ಪ್ರತ್ಯೇಕ ಕಲಂ ರಚಿಸಲಾಗಿದೆ. ವಿವಿಧ ಸರಕುಗಳನ್ನು ಶೇ.5, ಶೇ.12, ಶೇ.18 ಮತ್ತು ಶೇ.28 ಎಂಬ ನಾಲ್ಕು ಸ್ಲಾಬ್‌ಗಳಲ್ಲಿ ವರ್ಗೀಕರಿಸಿ, ಅದಕ್ಕೆ ತೆರಿಗೆ ನಿಗದಿಪಡಿಸಲಾಗುತ್ತದೆ.
ಏನಿದು ಸಿಜಿಎಸ್‌ಟಿ?
ಜಿಎಸ್‌ಟಿಯಲ್ಲಿ ಮೂರು ವಿಭಾಗಗಳಿದ್ದು, ಆ ಪೈಕಿ ಸಿಜಿಎಸ್‌ಟಿ ಕೂಡ ಒಂದು. ಹೀಗಂದರೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ. ಇದು ಜಾರಿಯಾದೊಡನೆ, ಪ್ರಸ್ತುತ ಇರುವ ಕೇಂದ್ರ ಅಬಕಾರಿ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಹೆಚ್ಚುವರಿ ಅಬಕಾರಿ ತೆರಿಗೆ, ಹೆಚ್ಚುವರಿ ಸೀಮಾ ಸುಂಕಗಳು ಸಿಜಿಎಸ್‌ಟಿಯೊಂದಿಗೆ ಸೇರಿಕೊಳ್ಳುತ್ತವೆ. ಸಿಜಿಎಸ್‌ಟಿ ಅನ್ವಯ ಸಂಗ್ರಹಿಸಲಾದ ಎಲ್ಲ ಆದಾಯವೂ ಕೇಂದ್ರ ಸರ್ಕಾರಕ್ಕೆ ಸೇರುತ್ತದೆ.
ಏನಿದು ಐಜಿಎಸ್‌ಟಿ?
ಐಜಿಎಸ್‌ಟಿ ಎಂದರೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆ. ಸರಕು ಮತ್ತು ಸೇವೆಗಳು ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಚಲಿಸಿದಾಗ ವಿಧಿಸಲಾಗುವ ತೆರಿಗೆಯಿದು. ಉದಾ- ಕರ್ನಾಟಕದಿಂದ ತಮಿಳುನಾಡಿಗೆ ಸರಕು ರವಾನೆಯಾದಾಗ, ಅಂಥ ಸರಕಿಗೆ ವಿಧಿಸಲಾಗುವ ತೆರಿಗೆ. ಐಜಿಎಸ್‌ಟಿಯಿಂದ ಬರುವ ಆದಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ.
ಎಸ್‌ಜಿಎಸ್‌ಟಿ ಎಂದರೇನು?
ಹೀಗೆಂದರೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ. ಇದರಿಂದ ಬರುವ ಆದಾಯವು ಆಯಾ ರಾಜ್ಯ ಸರ್ಕಾರಗಳಿಗೆ ಸೇರುತ್ತವೆ. ಇದು ಜಾರಿಯಾದೊಡನೆ, ಮೌಲ್ಯವರ್ಧಿತ ತೆರಿಗೆ, ಮನರಂಜನಾ ತೆರಿಗೆ, ಲಕ್ಸುರಿ ತೆರಿಗೆ, ಪ್ರವೇಶ ತೆರಿಗೆ ಮತ್ತಿತರ ರಾಜ್ಯ ತೆರಿಗೆಗಳು ಎಸ್‌ಜಿಎಸ್‌ಟಿಯೊಂದಿಗೆ ವಿಲೀನಗೊಳ್ಳುತ್ತವೆ. ಉದಾ- ಕರ್ನಾಟಕದೊಳಗೇ ಆಗುವ ಸರಕು ಮತ್ತು ಸೇವೆಗಳ ಸಂಚಾರಕ್ಕೆ ಈ ತೆರಿಗೆ ವಿಧಿಸಲಾಗುತ್ತದೆ.
ಜನಸಾಮಾನ್ಯರ ಮೇಲೆ ಜಿಎಸ್‌ಟಿ ಪರಿಣಾಮ?
– ಹೋಟೆಲ್‌ಗಳು, ರೆಸ್ಟಾರೆಂಟ್‌ಗಳಲ್ಲಿ ಆಹಾರ ಸೇವನೆ ತುಟ್ಟಿಯಾಗಲಿದೆ.
– ಸೇವಾ ತೆರಿಗೆ ಶೇ.18ಕ್ಕೆ ನಿಗದಿಯಾದರೆ ದೂರವಾಣಿ ಬಿಲ್ ಮೊತ್ತ ಹೆಚ್ಚಲಿದೆ
– ಆಮದು ಮಾಡಿದ ಫೋನ್ ಖರೀದಿಸುವುದಿದ್ದರೆ, ಅದು ದುಬಾರಿಯಾಗಲಿದೆ
– ಆಭರಣಗಳ ಖರೀದಿ ಮೇಲೂ ತೆರಿಗೆ ಹೆಚ್ಚು ಬೀಳುವ ಕಾರಣ, ಚಿನ್ನದ ದರ ಏರಲಿದೆ
– ಇ-ಕಾಮರ್ಸ್ ಕೂಡ ಜಿಎಸ್‌ಟಿ ವ್ಯಾಪ್ತಿಗೆ ಬರುವ ಕಾರಣ ಆನ್‌ಲೈನ್‌ನಲ್ಲಿ ಖರೀದಿಸುವ ವಸ್ತುಗಳು ತುಟ್ಟಿಯಾಗಲಿವೆ
– ಜಿಎಸ್‌ಟಿಯೊಳಗೇ ಎಕ್ಸೆ„ಸ್ ಮತ್ತು ವ್ಯಾಟ್ ವಿಲೀನಗೊಳ್ಳುವ ಕಾರಣ ಸಿದ್ಧ ಉಡುಪುಗಳ ದರ ಇಳಿಕೆಯಾಗಲಿದೆ
– ತೆರಿಗೆ ದರ ಇಂತಿಷ್ಟೇ ಎಂದು ನಿಗದಿಯಾಗುವ ಕಾರಣ ಕಾರುಗಳ ಬೆಲೆ ಇಳಿಯಲಿವೆ
– ಎಲ್‌ಇಡಿ ಟಿವಿಗಳು ಅಗ್ಗವಾಗಿ ದೊರೆಯಲಿವೆ
ರಾಜ್ಯಗಳು ಕೇಳಿದ್ದ ಸುಮಾರು 26 ಬದಲಾವಣೆಗಳಿಗೆ ಕೇಂದ್ರ ಸರ್ಕಾರ ಒಪ್ಪಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ಗುಣವಿಶೇಷಕ್ಕೆ ಹಿಡಿದ ಕನ್ನಡಿ. ಮಾರ್ಚ್ ಮಧ್ಯೆ ನಡೆಯುವ ಮತ್ತೂಂದು ಸಭೆಯಲ್ಲಿ ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಕುರಿತು ಇನ್ನಷ್ಟು ಚರ್ಚೆ ನಡೆಸಲಿದ್ದೇವೆ.
– ಅಮಿತ್ ಮಿತ್ರಾ, ಪಶ್ಚಿಮ ಬಂಗಾಳ ಹಣಕಾಸು ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: ಹುಸಿ ಬಾಂಬ್ ಕರೆ ಪತ್ತೆಗೆ ಇಂಟರ್‌ಪೋಲ್ ಮೊರೆ!
Chandigarh: ಕೋಟೆ ಕಟ್ಟಿದ ಗುತ್ತಿಗೆದಾರನಿಗೆ ರೋಲೆಕ್ಸ್ ವಾಚ್ ಉಡುಗೊರೆ
Pune: 300ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿ ಟೆಸ್ಲಾದಲ್ಲಿ ಉದ್ಯೋಗ ಪಡೆದ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Statue Of Unity: ದೇಶ ವಿಭಜಿಸಲು ಕೆಲವು ಶಕ್ತಿಗಳ ಯತ್ನ: ಪ್ರಧಾನಿ ನರೇಂದ್ರ ಮೋದಿ
MUST WATCH
ಹೊಸ ಸೇರ್ಪಡೆ
Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ
Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ
ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು
Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು
New Delhi: ಹುಸಿ ಬಾಂಬ್ ಕರೆ ಪತ್ತೆಗೆ ಇಂಟರ್‌ಪೋಲ್ ಮೊರೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.