ಮಕ್ಕಳಿಗಷ್ಟೇ ಅಲ್ಲ, ಸಚಿವ ಸೇಠ್‌ಗೂ ಪಿಯು ಪರೀಕ್ಷೆ
Team Udayavani, Mar 6, 2017, 3:45 AM IST
ಬೆಂಗಳೂರು: ಇದೇ ಗುರುವಾರದಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸ್ವತಃ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೂ ಪಾಸಾಗುವ ಅನಿವಾರ್ಯತೆಗೆ ಸಿಲುಕಿದ್ದಾರೆ!
ಕಳೆದ ವರ್ಷದ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಇನ್ನೂ ಹಸಿರಾಗಿಯೇ ಇದ್ದು ಇದನ್ನು ಮಟ್ಟ ಹಾಕುವುದೇ ಸರ್ಕಾರದ ಪಾಲಿಗೆ ಸವಾಲಿನದ್ದಾಗಿದೆ. ಪ್ರತಿ ವರ್ಷದಂತೆ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗುವುದು ಸಾಮಾನ್ಯ ಪ್ರಕ್ರಿಯೆಯಾದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊಣೆ ಹೊತ್ತಿರುವ ತನ್ವೀರ್ ಸೇಠ್ ಅವರಿಗೆ ಇದು ಮೊದಲ ವಾರ್ಷಿಕ ಪರೀಕ್ಷೆ.
ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಕಾನೂನು ಬಲಿಷ್ಠಗೊಳಿಸುವ ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ 2017ಕ್ಕೆ ಇನೂ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ, ಹಾಲಿ ಇರುವ ಕಾನೂನು ವ್ಯಾಪ್ತಿಯಲ್ಲೇ ಕಟ್ಟು ನಿಟ್ಟಾಗಿ ಪರೀಕ್ಷೆ ನಡೆಸುವ ಹೊಣೆಗಾರಿಕೆ ಸಚಿವ ತನ್ವೀರ್ ಸೇಠ್ ಅವರ ಮೇಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭದಲ್ಲೇ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನವೂ ನಡೆಯುವುದರಿಂದ ಪರೀಕ್ಷಾ ಪ್ರಕ್ರಿಯೆಯಲ್ಲಿ ಸ್ವಲ್ವ ವ್ಯತ್ಯಾಸವಾದರೂ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳುವ ಎಲ್ಲಾ ಸಾಧ್ಯತೆಗಳಿವೆ.
ಇತ್ತೀಚೆಗೆ ಪರೀಕ್ಷೆ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ತನ್ವೀರ್ ಸೇಠ್ ಪರೀಕ್ಷೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಾಗದಂತೆ ಎಲ್ಲ ರೀತಿಯಲ್ಲೂ ಕಟ್ಟು ನಿಟ್ಟಾದ ಕ್ರಮಗಳನ್ನು ಕೈಗೊಳ್ಳಿ. ಪಿಯು ಪರೀಕ್ಷೆ ವಿಚಾರದಲ್ಲಿ ಮತ್ತೆ ಸರ್ಕಾರಕ್ಕೆ ಕೆಟ್ಟ ಹೆಸರು ಬರದಂತೆ ಪರೀಕ್ಷೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಕೊಂಚ ಏರುಪೇರಾದರೂ ಅಧಿಕಾರಿಗಳೇ ಹೊಣೆ
ಈ ಬಾರಿಯ ಪರೀಕ್ಷೆ ಸಂದರ್ಭದಲ್ಲೇ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಸಹ ನಡೆಯುವುದರಿಂದ ಪರೀಕ್ಷಾ ಕ್ರಮದಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಾದರೂ ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗಾœಳಿ ನಡೆಸಬಹುದು. ಒಂದು ರೀತಿಯಲ್ಲಿ ಪರೀಕ್ಷೆ ನಮಗೆ ಅಗ್ನಿ ಪರೀಕ್ಷೆ. ಪರೀಕ್ಷಾ ವ್ಯವಸ್ಥೆಯಲ್ಲಿ ಏನೇ ಗೊಂದಲಗಳಾದರೂ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪರೀಕ್ಷೆ ಪ್ರಶ್ನೆ ಪತ್ರಿಕೆ ರವಾನೆ, ಪರೀಕ್ಷಾ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಎಲ್ಲೂ ಲೋಪವಾಗದಂತೆ ಹಿರಿಯ ಅಧಿಕಾರಿಗಳಿಂದ ಕೆಳಗಿನ ಹಂತದ ಸಿಬ್ಬಂದಿವರೆಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದಿನಿಂದ ಸಹಾಯವಾಣಿ
ಪರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರದಿಂದ ಸಹಾಯವಾಣಿ ಕೇಂದ್ರ ಪ್ರಾರಂಭವಾಗಲಿದೆ. ಪ್ರವೇಶ ಪತ್ರ ದೊರೆಯದಿದ್ದರೆ ಅಥವಾ ಕಳೆದುಹೋಗಿದ್ದರೆ, ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ವಿಷಯಗಳು, ತಂದೆ-ತಾಯಿ ಹೆಸರು, ಭಾವಚಿತ್ರ ತಪ್ಪಾಗಿ ನಮೂದಾಗಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಅಲ್ಲದೆ, ಪರೀಕ್ಷಾ ಸಿದ್ಧತೆ, ಅಧ್ಯಯನ ಕೌಶಲ್ಯ, ಪರೀಕ್ಷೆಯ ಭಯ, ಸಮಯ ನಿರ್ವಹಣೆ, ನೆನಪಿನ ಶಕ್ತಿ ಕಡಿಮೆ ಇದೆ ಎಂಬ ಆತಂಕ, ಹಿರಿಯರು – ಸ್ನೇಹಿತರ ಒತ್ತಡ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಮುಕ್ತವಾಗಿ ವಿಷಯ ತಜ್ಞರ ಜೊತೆ ಸಮಾಲೋಚನೆ ನಡೆಸಬಹುದಾಗಿರುತ್ತದೆ ಎಂದು ಇಲಾಖೆಯ ಜಂಟಿ ನಿರ್ದೇಶಕ (ಪರೀಕ್ಷೆ) ವೈ.ಎಚ್.ಇಳಾಲ್ ಹೇಳಿದ್ದಾರೆ.
ಸಹಾಯವಾಣಿ ಸಂಖ್ಯೆ- 080-23083900
ಕಾರ್ಯ ನಿರ್ವಹಣೆ – ವಾರದ ಎಲ್ಲಾ ದಿನ
ಎಲ್ಲಿಯವರೆಗೆ – ಪರೀಕ್ಷೆಯ ಕಡೆ ದಿನ
ಸಮಯ – ಬೆ. 8 ರಿಂದ ರಾ. 8 ರವರೆಗೆ
ಯಾರು ಸಿಗುತ್ತಾರೆ? – ಇಲಾಖೆ ಅಧಿಕಾರಿಗಳು, ವಿಷಯ ತಜ್ಞರು
ನಿಷೇಧಾಜ್ಞೆ
ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರದ 147 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ 200 ಮೀ.ಸುತ್ತಲಿನ ಪ್ರದೇಶದಲ್ಲಿ ನಿಷೇದಾಜ್ಞೆ ಹಾಗೂ ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಎಲ್ಲಾ ಜೆರಾಕ್ಸ್ ಕೇಂದ್ರಗಳನ್ನು ಮುಚ್ಚುವಂತೆ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.